
ಭತ್ತದ ಇಳುವರಿ ಹಾಳು ಮಾಡುತ್ತಿವೆ ಕೊಳವೆ ಹುಳುಗಳು; ತಕ್ಷಣ ಈ ಕೆಲಸ ಮಾಡಿ

ಭತ್ತದ ಬೆಳೆಯು ಬೆಳವಣಿಗೆ ಹಂತದಲ್ಲಿದ್ದು, ಅಲ್ಲಲ್ಲಿ ಹಾಗೂ ತಡವಾಗಿ ನಾಟಿಯಾದ ಭತ್ತದ ಬೆಳೆಯಲ್ಲಿ ಕೆಲವು ಕಡೆಗಳಲ್ಲಿ ಕೊಳವೆ ಹುಳುವಿನ ಬಾಧೆ ಕಂಡುಬಂದಿವೆ. ಈ ಹುಳುಗಳು ಭತ್ತದ ಇಳುವರಿಯನ್ನೇ ಹಾಳು ಮಾಡುತ್ತವೆ.
ಕೊಳವೆ ಹುಳುವಿನ ಬಾಧೆಯನ್ನು ಗುರುತಿಸುವುದು ಬಹಳ ಸುಲಭ. ಇದು ಎಲೆಗಳನ್ನು ಮಡಿಚಿ ಒಳಗೆ ಸೇರಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಕೆರೆದು ತಿಂದ ಭಾಗವು ಏಣಿಯಾಕಾರವನ್ನು ಹೋಲುತ್ತದೆ.
ಹಾಗೂ ಎಲೆಗಳಿಂದ ಮಡಿಚಿಕೊಂಡ ಕೊಳವೆಗಳು ನೀರಿನಲ್ಲಿ ತೇಲುತ್ತಿರುತ್ತವೆ. ಕೊಳವೆ ಹುಳುಗಳು ಎಲೆಗಳ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಮೇಲೆ ಪರಿಣಾಮ ಬೀರುತ್ತದೆ.
ಕೊಳವೆ ಹುಳುಗಳನ್ನು ನಿಯಂತ್ರಿಸಲು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗೊಬ್ಬರಗಳನ್ನು ಬಳಸಬೇಕು. ಬೆಳೆದು ನಿಂತ ಬೆಳೆಯ ಮೇಲೆ ಹಗ್ಗ ಆಡಿಸಿ, ಕೊಳವೆಗಳನ್ನು ಕೆಳಗೆ ಬೀಳುವಂತೆ ಮಾಡಿ, ಗದ್ದೆಯ ನೀರಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸೀಮೆ ಎಣ್ಣೆ ಹಾಕುವುದರಿಂದ ಹುಳುಗಳನ್ನು ನಿರ್ವಹಣೆ ಮಾಡಬಹುದು.
ಉಪಕಾರಿ ಜೀವಿಗಳಾದ ಜೇಡ, ಡ್ರ್ಯಾಗನ್ ಫ್ಲೈ(ಹೆಲಿಕಾಫ್ಟರ್ ಹುಳು), ಪಕ್ಷಿಗಳು ಪರಿಸರದಲ್ಲಿ ಇದ್ದಲ್ಲಿ ಈ ಹುಳುವಿನ ಬಾಧೆಯನ್ನು ನಿರ್ವಹಣೆ ಮಾಡಬಹುದು. ಪರಿಸರ ಪೂರಕ ಈ ವಿಧಾನಗಳನ್ನು ಅನುಸರಿಸಿದಲ್ಲಿ ಕೊಳವೆ ಹುಳುವಿನ ಬಾಧೆ ನಿಯಂತ್ರಿಸಬಹುದು. ನಿರ್ವಹಣಾ ಕ್ರಮಗಳನ್ನು ಸಾಮೂಹಿಕವಾಗಿ ಕೈಗೊಂಡಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತದೆ.
ಕೃಷಿ ಜಮೀನು ಖರೀದಿಗೆ ಶೇ. 50 ರಷ್ಟು ಸಬ್ಸಿಡಿ ಸಾಲ
ಈ ವಿಧಾನಗಳನ್ನು ಅನುಸರಿಸುವುದರಿಂದ ಹುಳುವಿನ ಬಾಧೆ ನಿಯಂತ್ರಣಕ್ಕೆ ಬಾರದಿದ್ದರೆ 2 ಮಿ.ಲೀ. ಕ್ಲೋರೋಪೈರಿಫಾಸ್ 20 ಇಸಿ ಅಥವಾ 2 ಮಿ.ಲೀ. ಕ್ವಿನಾಲ್‍ಫಾಸ್ 25 ಇಸಿ ಇವುಗಳಲ್ಲಿ ಯಾವುದಾದರೊಂದು ರಾಸಾಯನಿಕವನ್ನು 1 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎಕರೆಗೆ 225 ರಿಂದ 230 ಲೀ. ಸಿಂಪರಣಾ ದ್ರಾವಣ ಬೇಕಾಗುವುದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ.