ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ, ಹಾಗೂ ಇತರೆ ಹವಾಮಾನ ವೈಪರಿತ್ಯಗಳಿಂದ ಸಂರಕ್ಷಿಸಿ ಆಹಾರ ಧಾನ್ಯಗಳ ಮತ್ತು ಕೃಷಿ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ (ತಾಡಪತ್ರಿ) ವಿತರಿಸಲಾಗುತ್ತಿದೆ. ಅದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕ ಸುನೀಲ ಕುಮಾರ ಅವರು ತಿಳಿಸಿದ್ದಾರೆ.

ಸಾಮಾನ್ಯ ರೈತರಿಗೆ ಶೇ. 50 ರ ಸಹಾಯಧನದಲ್ಲಿ ಹಾಗೂ ಪರಿಶಿಷ್ಟ ಜಾತಿ (ವಿಶೇಷ ಘಟಕ) SಅP ಹಾಗೂ ಪರಿಶಿಷ್ಟ ಪಂಗಡ (ಗಿರಿಜನ ಉಪ ಯೋಜನೆ) ಟಿಎಸ್‍ಪಿ ರೈತರಿಗೆ ಶೇ 90 ರ ಸಹಾಯಧನದಲ್ಲಿ ಟಾರ್ಪಾಲಿನ (ತಾಡಪತ್ರಿ) ವಿತರಿಸಲಾಗುತ್ತಿದೆ. ಫಲಾನುಭವಿಗಳ ಆಯ್ಕೆಗಾಗಿ ತಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ರೈತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಎಫ್.ಐ.ಡಿ. ಸಂಖ್ಯೆ, ಪಹಣಿ, ಪಾಸ್‍ಪೋರ್ಟ್ ಫೋಟೋ, ಆಧಾರ ಕಾರ್ಡ್, ಬ್ಯಾಂಕಪಾಸ್ ಪುಸ್ತಕ ಮತ್ತು ಜಾತಿ ಪ್ರಮಾಣಪತ್ರ ಸ್ವಯಂ ದೃಡೀಕರಣ ದಾಖಲೆ ಲಗತ್ತಿಸಿ 2020ರ ಜುಲೈ 27 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬೇಕು. ಈಗಾಗಲೇ ಇಲಾಖೆಯಿಂದ ಕಳೆದ 3 ವರ್ಷಗಳಲ್ಲಿ ತಾಡಪತ್ರಿ ಪಡೆದ ರೈತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.