ರಾಗಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಮೈಸೂರು ಭಾಗದಲ್ಲಿ ರಾಗಿ ಮುದ್ದೆ ಬಲು ಶ್ರೇಷ್ಠವಾದ ಊಟ. ಎಲ್ಲ ವಯಸ್ಸಿನವರಿಗೂ ಒಗ್ಗುವ ರಾಗಿಯ ಇತಿಹಾಸ ಕೇಳಿದರೆ ಆಶ್ಚರ್ಯವಾಗುತ್ತದೆ. ನಾವು ಇಷ್ಟೊಂದು ಮೆಚ್ಚಿಕೊಂಡಿರುವ ರಾಗಿ ಅಸಲಿಗೆ ನಮ್ಮದ ದೇಶದ ಬೆಳೆ ಅಲ್ಲವೇ ಅಲ್ಲ!

ಹೌದು. ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯುವ ಆಹಾರ ಧಾನ್ಯ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯು ಸುಮಾರು ನಾಲ್ಕು ಸಾವಿರ (4000) ವರ್ಷಗಳ ಹಿಂದೆ ಭಾರತಕ್ಕೆ ತರಲಾಗಿದೆ. ಈಗ ಈ ಬೆಳೆ ನಮ್ಮದೇ ಎನ್ನುವಷ್ಟು ಆಪ್ತವಾಗಿದೆ.

ರಾಗಿ ಬೆಳೆ, ದಕ್ಷಿಣ ಭಾರತದಲ್ಲಿ ಹೆಸರುವಾಸಿ. ಕರ್ನಾಟಕ ಬಿಟ್ಟರೆ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ. ಇದನ್ನು’ಫಿಂಗರ್ ಮಿಲೆಟ್’ ಎಂದೂ ಕರೆಯುತ್ತಾರೆ. ಪುಷ್ಕಳ ಪೋಶಕಾಂಶವಿರುವ ಈ ಧಾನ್ಯವು ವಿಶ್ವದ ತೃಣಧಾನ್ಯ ಬೆಳೆಗಳಲ್ಲಿ ಸಜ್ಜೆ, ನವಣೆ, ಬರಗು ಬೆಳೆಗಳ ನಂತರದ ಸ್ಥಾನ ಪಡೆದಿದೆ.

ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಪ್ರತಿ ವರ್ಷ ಸುಮಾರು 22 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ರಾಗಿ ಬೆಳೆದು 26 ರಿಂದ 28 ಲಕ್ಷ ಟನ್ ರಾಗಿಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯ ಕ್ಕಾಲುಪಾಲು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳೇ ಉತ್ಪಾದಿಸುತ್ತವೆ.

ರಾಗಿಯಿಂದ ಮಾಡುವ ಮುದ್ದೆ ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧಿ. ಮಾಜಿ ಪ್ರಧಾನಿ ದೇವೇಗೌಡರಿಂದಾಗಿ ರಾಗಿ ಮುದ್ದೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಬಂದಿದೆ. ಅವರು ರಾಗಿ-ಮುದ್ದೆ ಊಟವನ್ನು ಪ್ರತಿದಿನ ಮಾಡುತ್ತಾರೆ. ವಿದೇಶಕ್ಕೆ ಹೋದಾಗಲು ತಮ್ಮ ಅಡುಗೆಯವರನ್ನು ಜೊತೆಗೇ ಕರೆದುಕೊಂಡು ಹೋಗಿ ಅಲ್ಲಿಯೂ ರಾಗಿ ಮುದ್ದೆ ಊಟ ಮಾಡಿದ್ದರಂತೆ.

ಚಿತ್ರನಟ, ಡಾ. ರಾಜಕುಮಾರ್ ಅವರಿಗೂ ರಾಗಿ ಮುದ್ದೆ, ನಾಟಿಕೋಳಿ ಸಾರು ಬಹುಪ್ರಿಯವಾದ ಆಹಾರವಾಗಿತ್ತು. ರಾಗಿಮುದ್ದೆ ಜೊತೆ ಮೆಂತ್ಯದ್ ಸೊಪ್ಪಿನ್ ಹುಳಿ, ಮೆಂತ್ಯದ್ ಹಿಟ್ಟು, ಮಸ್ಸೊಪ್ಪಿನ ಸಾರು, ಉಪ್ಪುಸಾರು, ಮೊಳಕೆಕಾಳಿನ ಸಾರು ಇಲ್ಲವೆ ಹಾಗಲಕಾಯಿ ಗೊಜ್ಜು.. ಆಹಾ ಒಳ್ಳೆಯ ನಂಟು.

1913ರಿಂದ ತಳಿ ಅಭಿವೃದ್ಧಿ
ರಾಗಿ ತಳಿ ಅಭಿವೃದ್ಧಿ 1913ಕ್ಕಿಂತ ಹಿಂದೆಯೇ ಪ್ರಾರಂಭವಾಗಿತ್ತು. 1951 ರಿಂದ 1964 ರ ಹೊತ್ತಿಗೆ ರಾಜ್ಯದ ವಿವಿಧ ಹವಾಗುಣಗಳಿಗೆ ಒಗ್ಗುವಂತಹ ‘ಅರುಣ’, ‘ಉದಯ’, ‘ಪೂರ್ಣ’, ‘ಅನ್ನಪೂರ್ಣ’, ‘ಕಾವೇರಿ’ ಮತ್ತು ‘ಶಕ್ತಿ’ ತಳಿಗಳು ತಯಾರಾದವು. ಭಾರತ ಮತ್ತು ಆಫ್ರಿಕಾ ದೇಶದ ತಳಿಗಳ ಸಮ್ಮಿಳನದಿಂದ ತಯಾರಾದ ತಳಿಗಳನ್ನು ‘ಇಂಡಾಫ್’ ಎನ್ನುತ್ತಾರೆ.

ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು, ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂವು

ಮಧುಮೇಹ (ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ಸು ಪಡೆದ ಪೇಯ. ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ, ಸೇವಿಸಿದರೆ ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.

ಎಳನೀರ ಬಗ್ಗೆ ನಿಮಗೇನು ಗೊತ್ತು? ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು