ಕೇವಲ ಎರಡು ಗುಂಟೆ ಕೃಷಿಯಲ್ಲಿ ಪ್ರತಿ ತಿಂಗಳು 15ರಿಂದ 20 ಸಾವಿರ ರೂ. ಆದಾಯ ಬರುವಂತಿದ್ದರೆ ಹೇಗೆ. ಈ ಹೂವು ಬೆಳೆದರೆ ಪ್ರತಿ ತಿಂಗಳೂ ನೌಕರಿಯ ಸಂಬಳದಂತೆ ವೇತನ ಪಡೆಯಬಹುದು. ಅದು ಹೇಗೆ ಎಂಬುದಕ್ಕೆ ಈ ವರದಿ ಪೂರ್ತಿ ಓದಿ.
ಹಾಲೆಂಡ್ ಮೂಲದ ಆಂಥೋರಿಯಂ ಎಂಬ ಹೂ ಒಂದು ವರ್ಷ ಸಾಕಿದರೆ ಸಾಕು. ಮುಂದಿನ 12 ವರ್ಷಗಳು ನಿರಂತರವಾಗಿ ಹೂ ಕೊಡುತ್ತಲೇ ಇರುತ್ತದೆ. ಆಂಥೋರಿಯಂ ಹೂವಿಗೆ ದೇಶ, ವಿದೇಶದ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇವೆ.
ಸದ್ಯ ಈಶಾನ್ಯ ರಾಜ್ಯಗಳಲ್ಲಿ ಎಂಥೋರಿಯಂ ಅನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಈ ಹೂವು ದೊಡ್ಡ ಹೋಟೆಲ್, ಸ್ಯಾಂಡಲ್ ವುಡ್, ಬಾಲಿವುಡ್, ಹಾಲಿವುಡ್ ಕಾರ್ಯಕ್ರಮಗಳು, ಮದುವೆ ಮತ್ತಿತರ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತಿದೆ. ಒಂದು ಹೂವಿಗೆ 50ರಿಂದ 80 ರೂ.ವರೆಗೆ ಬೆಲೆ ಇದೆ. ಪ್ಲಿಪ್ ಕಾರ್ಟ್ ಒಂಬತ್ತು ಹೂವಿನ ಕಡ್ಡಿಗೆ ಒಂದು ಸಾವಿರ ರೂ.ವರೆಗೆ ಮಾರಾಟ ಮಾಡುತ್ತಿದೆ.
ಕೊಡಗು ಜಿಲ್ಲೆಯೊಂದರಲ್ಲಿಯೇ ವರ್ಷಕ್ಕೆ 70 ಲಕ್ಷಕ್ಕೂ ಹೆಚ್ಚು ಆಂಥೋರಿಯಂ ಹೂವು ಮಾರುಕಟ್ಟೆ ಸೇರುತ್ತಿದೆ. ಆ ಒಂದು ಜಿಲ್ಲೆಯಲ್ಲಿಯೇ ವಾರ್ಷಿಕ ವಹಿವಾಟು 25 ಕೋಟಿ ರೂ.ಗಿಂತ ಹೆಚ್ಚಿದೆ. ಈ ಹೂವಿಗೆ ರೋಗದ ಭಯ ಇಲ್ಲ. ಗಿಡದಲ್ಲಿದ್ದರೆ ಎರಡು ತಿಂಗಳಾದರೂ ಬಾಡುವುದಿಲ್ಲ.

ಎರಡು ಗುಂಟೆಯಲ್ಲಿ ಬೆಳೆಯುವುದು ಹೇಗೆ?
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ ಆಂಥೋರಿಯಂ ಅನ್ನು ಎರಡುವರೆ ಗುಂಟೆಯಲ್ಲಿ ಬೆಳೆದು ಲಕ್ಷ ರೂ. ಆದಾಯ ಗಳಿಸುವ ಪ್ರಯೋಗ ನಡೆಸಿದೆ.
ಹೂವು ಬೆಳೆಯಲು 2.5 ಗುಂಟೆಯಲ್ಲಿ ಪಾಲಿಹೌಸ್ ನಿರ್ಮಿಸಬೇಕು. ಅದಕ್ಕೆ 8 ಲಕ್ಷ ರೂ. ತಗಲುತ್ತದೆ. ತೋಟಗಾರಿಕೆ ಇಲಾಖೆಯಿಂದ ಪಾಲಿಹೌಸ್ ನಿರ್ಮಿಸಲು ಶೇ.70 ರಷ್ಟು ಸಬ್ಸಿಡಿ ಇದೆ. ಹಾಗಾಗಿ ರೈತರು ಕೇವಲ ಎರಡು ಲಕ್ಷ ರೂ. ಹೂಡಿಕೆ ಮಾಡಿದರೂ ಸಾಕು.
ಹೂವನ್ನು ಸಾಮಾನ್ಯ ನೆಲದಲ್ಲಿ ಬೆಳೆಯಲು ಸಾಧ್ಯವಿಲ್ಲ. ತೆಂಗಿನ ಚಿಪ್ಪು, ಇಟ್ಟಂಗಿ ಹೀಗೆ ಒಂದಿಷ್ಟು ತಾಂತ್ರಿಕ ವ್ಯವಸ್ಥೆ ಮಾಡಬೇಕು. ಅದಕ್ಕೆ ಎರಡು ಲಕ್ಷ ಖರ್ಚು ಮಾಡಬೇಕು. ಒಟ್ಟಾರೆ ನಾಲ್ಕು ಲಕ್ಷ ರೂ. ಹೂಡಿಕೆ ಮಾಡಿದರೆ ಆಂಥೋರಿಯಂ ಹೂ ಬೆಳೆಯಬಹುದು. ತಾಂತ್ರಿಕ ಮಾಹಿತಿಯನ್ನು ತೋಟಗಾರಿಕೆ ಇಲಾಖೆಯಿಂದ ಪಡೆಯಬಹುದು.

ಎರಡೂವರೆ ಗುಂಟೆಯಲ್ಲಿ 1400 ಗಿಡ ಬೆಳೆಯಬಹುದು. ಒಂದು ವರ್ಷದಿಂದಲೇ ಹೂವು ಬಿಡಲು ಆರಂಭಿಸುತ್ತದೆ. ಒಂದು ವಾರದಿಂದ 15 ದಿನಗಳಿಗೊಮ್ಮೆ ಹೂವು ಕಟಾವು ಮಾಡಬಹುದು. ಎರಡುವರೆ ಗುಂಟೆಯಲ್ಲಿ ತಿಂಗಳಿಗೆ 700 ರಿಂದ 800 ಹೂ ಪಡೆಯಬಹುದು. ಒಂದು ಹೂವಿಗೆ 20 ರೂ. ಅಂದರೂ 16 ಸಾವಿರ ರೂ. ಆದಾಯ ಬರುತ್ತದೆ.
ಸರಿಯಾಗಿ ನಿರ್ವಹಣೆ ಮಾಡಿದರೆ 12 ವರ್ಷ ನಿರಂತರ ಆದಾಯ ಪಡೆಯಬಹುದು ಎನ್ನುತ್ತಾರೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಫೀಲ್ಡ್ ಅಸಿಸ್ಟಂಟ್ ಸುರೇಶ ಚೌಗುಲಾ.

ಕನಿಷ್ಠ ನಿರ್ವಹಣೆ
ಹೂವಿಗೆ ನಿತ್ಯ ಎರಡು ಬಾರಿ ಕನಿಷ್ಠ 10 ನಿಮಿಷ ನೀರು ಹಾಯಿಸಬೇಕು. ವಾರಕ್ಕೆ ಎರಡು ದಿನ ಔಷಧ ಸಿಂಪಡಿಸಿದರೆ ಸಾಕು. ಇದರ ನಿರ್ವಹಣೆ ವೆಚ್ಚ ವರ್ಷಕ್ಕೆ 8 ಸಾವಿರ ರೂ. ಮಾತ್ರ. ಹಾಗಾಗಿ ಇದು ಅತ್ಯಂತ ಲಾಭದಾಯಕ ಕೃಷಿ ಎನಿಸಿದೆ ಎಂದು ಸುರೇಶ ಚೌಗುಲಾ ಲೆಕ್ಕ ವಿವರಿಸಿದರು.

ಬಾಡಲ್ಲ,ಬಾಳಿಕೆ ಹೆಚ್ಚು
ಆಂಥೋರಿಯಂ ಗಟ್ಟಿಯಾಗಿರುವುದರಿಂದ ಗಿಡದಿಂದ ಕಿತ್ತ ನಂತರ 15ದಿನ ಬಾಳಿಕೆ ಬರುತ್ತದೆ. ಬಣ್ಣ ಬಣ್ಣ ಕಾರಣ ಆಕರ್ಷಕ. ವಿಪರೀತ ಬಿಸಿ ವಾತಾವರಣದಲ್ಲೂ ಬಾಡುವುದಿಲ್ಲ. ಗುಲಾಬಿ ಮತ್ತಿತರ ಹೂವುಗಳು ಎರಡೇ ದಿನಕ್ಕೆ ಒಣಗುತ್ತವೆ. ಆದ್ದರಿಂದ ಸಭಾಂಗಣವನ್ನು ಶೃಂಗರಿಸಲು ಆಂಥೋರಿಯಂ ಅನ್ನು ಹೆಚ್ಚು ಬಳಸುತ್ತಾರೆ. ಒಮ್ಮೆ ಶೃಂಗರಿಸಿದರೆ ಕನಿಷ್ಠ 2 ವಾರ ಬಾಳಿಕೆ ಬರುತ್ತದೆ.

ಆಂಥೋರಿಯಂ ಗಿಡ ಬೆಳೆಯಲು ಒಮ್ಮೆ ಹೂಡಿಕೆ ಮಾಡಿದರೆ ಸಾಕು. 12 ವರ್ಷಗಳ ವರೆಗೆ ನಿರಂತರ ಆದಾಯ ಕೊಡುತ್ತದೆ. ಕಡಿಮೆ ಜಾಗದಲ್ಲಿಯೂ ಹೆಚ್ಚು ಲಾಭ ಪಡೆಯುವ ಬೆಳೆ ಇದು. ತಂಪು ಹವಾಗುಣ ಇದಕ್ಕೆ ಹೆಚ್ಚು ಸೂಕ್ತ.
-ಸುರೇಶ ಚೌಗುಲಾ, ಬಾಗಲಕೋಟೆ ತೋಟಗಾರಿಕೆ ವಿವಿ ಫೀಲ್ಡ್ ಅಸಿಸ್ಟಂಟ್.

ಚಿತ್ರ, ವಿಡಿಯೊ, ಲೇಖನ:
ವಿಷ್ಣು ಎಸ್. ಇಂಗಳಿ