ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ‘ಉದ್ಯೋಗಿನಿ ಯೋಜನೆ’ (ಉದ್ಯೋಗಿನಿ ಸ್ಕೀಮ್) ಅನ್ನು ಜಾರಿಗೆ ತಂದಿದೆ.

‌‌ಈ ಯೋಜನೆ, ಉದ್ಯಮ ಆರಂಭಿಸಿ ಯಶಸ್ಸು ಕಾಣಬೇಕೆಂದು ಹಂಬಲಿಸುವ ಬಡ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವಂತದ್ದು. ‌‌‌‌‌’ಉದ್ಯೋಗಿನಿ ಸ್ಕೀಮ್’ಗೆ ಅರ್ಜಿ ಸಲ್ಲಿಸುವುದು ಹೇಗೆ? ಸಾಲ ಪಡೆಯಲು ಅರ್ಹತೆಗಳೇನು? ಯಾವ ಯಾವ ದಾಖಲೆಗಳು ಬೇಕು ಅನ್ನೋ ಮಾಹಿತಿ ತಿಳಿಯಲು ಮುಂದೆ ಓದಿ.

ಯಾವ್ಯಾವ ಉದ್ಯಮಕ್ಕೆ ಸಿಗುತ್ತೆ ಸಾಲ

ಈ ಯೋಜನೆಯಡಿ ಹೆಣ್ಣು ಮಕ್ಕಳು ಸಣ್ಣ ಉದ್ಯಮ ಆರಂಭಿಸಲು ಬಂಡವಾಳಕ್ಕಾಗಿ ₹ 3 ಲಕ್ಷ ದವರೆಗೆ ಬಡ್ಡಿರಹಿತ ಸಾಲ ಪಡೆಯಬಹುದಾಗಿದೆ. ಸುಮಾರು 88 ವಿವಿಧ ಸಣ್ಣ ಉದ್ಯಮ ಆರಂಭಿಸಲು ಈ ಯೋಜನೆಯಡಿ ಬಡ್ಡಿರಹಿತ ಸಾಲ ದೊರೆಯುತ್ತದೆ.

ಸಮಾಜದ ಎಲ್ಲ ವರ್ಗಗಳ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವುದೆ ಈ ಯೋಜನೆಯ ಉದ್ದೇಶ. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ.

ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಬಹುದಾಗಿದೆ. ಇವುಗಳಲ್ಲಿ ನೇರ ಕೃಷಿ ಚಟುವಟಿಕೆ, ವ್ಯಾಪಾರ ಉದ್ಯಮಗಳು (business enterprises), ‌‌‌‌‌‌‌‌‌‌‌‌‌‌‌‌‌‌ಚಿಲ್ಲರೆ ವ್ಯಾಪಾರ (retail treders), ಹೊಲಿಗೆ, ಮತ್ಸ್ಯೋದ್ಯಮ, ದಿನಸಿ ಮಾರಾಟ, ಗ್ರಂಥಾಲಯ, ಬೇಕರಿ, ಅಗರಬತ್ತಿ ತಯಾರಿಕೆ ಹಾಗೂ ಹಾಲು ಮತ್ತು ಡೈರಿ ಉತ್ಪನ್ನಗಳ ವ್ಯಾಪಾರ ಕೂಡ ಸೇರಿದೆ.

ಎಲ್ಲೆಲ್ಲಿ ಸಿಗುತ್ತೆ ಸಾಲ?

ದೇಶದ ಹಲವು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್​ಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ. ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್​ಗಳು ಹಾಗೂ ಎಲ್ಲ ವಾಣಿಜ್ಯ ಬ್ಯಾಂಕ್​ಗಳು ಜೊತೆಗೆ ಸಹಕಾರಿ ಬ್ಯಾಂಕ್​ಗಳಿಂದಲೂ ಸಾಲ ಪಡೆಯಬಹುದಾಗಿದೆ.

ಅರ್ಹತೆಗಳೇನು?

ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಸಾಲ ನೀಡಲಾಗುವುದು. ಕನಿಷ್ಠ 18 ರಿಂದ ಗರಿಷ್ಠ 55 ವಯಸ್ಸಿನ ಮಹಿಳೆಯರು ಬಡ್ಡಿರಹಿತ ಸಾಲ ಪಡೆಯಲು ಅರ್ಹರಾಗಿದ್ದಾರೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಆದಾಯ ₹ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಾಗಿದ್ದಲ್ಲಿ ಕುಟುಂಬದವರ ಆದಾಯ ₹ 1.5 ಲಕ್ಷಕ್ಕಿಂತ ಹೆಚ್ಚಿಗೆ ಆದಾಯವಿದ್ದರೂ ಸಾಲ ಪಡೆಯಲು ಅರ್ಹರಾಗಿರುತ್ತಾರೆ.

ದಾಖಲೆಗಳೇನು?

  1. ಜನನ ಪ್ರಮಾಣ ಪತ್ರ
  2. ಆಧಾರ್ ಕಾರ್ಡ್
  3. ಬಿಪಿಎಲ್​ ಕಾರ್ಡ್​ನ ಪ್ರತಿ
  4. ಜಾತಿ ಪ್ರಮಾಣ ಪತ್ರ
  5. ಆದಾಯ ಪ್ರಮಾಣ ಪತ್ರ
  6. ಸ್ಥಳೀಯ ಶಾಸಕ ಅಥವಾ ಸಂಸದರ ಲೆಟರ್​ಹೆಡ್ ಇರುವ ಪತ್ರ

ಅರ್ಜಿ ಸಲ್ಲಿಸುವ ವಿಧಾನ

ಬ್ಯಾಂಕ್​ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದರೆ ಸಂಬಂಧಪಟ್ಟ ಬ್ಯಾಂಕ್​ನ ವೆಬ್​ಸೈಟ್​ನಿಂದ ‘ಉದ್ಯೋಗಿನಿ ಸ್ಕೀಮ್’ ನ ಸಾಲದ ಅರ್ಜಿಯ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಬಳಿಕ ಅರ್ಜಿಯಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಬೇಕು. ಬ್ಯಾಂಕ್ ಕೇಳಿರುವ ಎಲ್ಲ ದಾಖಲೆಗಳ ಪ್ರತಿಯನ್ನು ಅರ್ಜಿಯ ಜೊತೆಗೆ ಲಗತ್ತಿಸಬೇಕು. ಹೀಗೆ ಅರ್ಜಿಯನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಿ ಸಲ್ಲಿಸಿದ ನಂತರ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಹೋಗಿ ಸಾಲ ಮಂಜೂರಾಗಿರುವ ಬಗ್ಗೆ ವಿಚಾರಿಸಬೇಕು.