ಬೆಂಗಳೂರು: ರಾಜ್ಯದಲ್ಲಿನ ಗಾರ್ಮೆಂಟ್ಸ್‌, ನೂಲುವ ಗಿರಣಿ, ರೇಷ್ಮೆಬಟ್ಟೆ ಹಾಗೂ ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಿಸಿದ ಬಳಿಕ ‌‌ಶೇ.14ರಷ್ಟು ಹೆಚ್ಚಳ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಕನಿಷ್ಠ ವೇತನ ಪರಿಷ್ಕರಿಸಬೇಕು ಎಂಬ ಕಾರ್ಮಿಕರ ಮನವಿಗೆ ಸ್ಪಂದಿಸಿ ಕಾರ್ಮಿಕ ಇಲಾಖೆಯು 2017ರಲ್ಲಿ ಸಭೆ ನಡೆಸಿ, ಪರಿಷ್ಕೃತ ಕನಿಷ್ಠ ವೇತನ ದರ ನಿಗದಿಪಡಿಸಿತ್ತು. ಆದ್ರೆ, 2019 ರಲ್ಲಿ ನಡೆದಿದ್ದ ಸಭೆಯಲ್ಲಿ ಕಾರ್ಖಾನೆಗಳ ಮಾಲೀಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ವೇತನ ಪರಿಷ್ಕರಿಸಿ ಶೇ.14ರಷ್ಟು ಹೆಚ್ಚಳ ಮಾಡಿತ್ತು.

ಈ 2 ಸಭೆಗಳಲ್ಲಿ ನಿಗದಿಯಾಗಿದ್ದ ಕನಿಷ್ಠ ವೇತನದಲ್ಲಿ ಯಾವುದನ್ನು ಜಾರಿ ಮಾಡಬೇಕೆಂಬ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇತ್ತೀಚೆಗೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರಿಂದ, 2019ರಲ್ಲಿ ವಿವಿಧ ಕೆಲಸಗಳಿಗೆ ನಿಗದಿಯಾಗಿದ್ದ ಪರಿಷ್ಕೃತ ಕನಿಷ್ಠ ವೇತನವನ್ನು ಶೇ.14 ರಷ್ಟು ಹೆಚ್ಚಿಸಿ ಜಾರಿ ಮಾಡಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

ಯಾರ್ ಯಾರಿಗೆ ಎಷ್ಟೆಷ್ಟು ಕನಿಷ್ಠ ವೇತನ..?

ಬಟ್ಟೆಗಳ ತಯಾರಿಕೆ, ಟೈಲರಿಂಗ್‌, ‌‌‌‌‌‌‌ಡಿಸೈನರ್, ಮಾರ್ಕರ್ ಅಂಡ್‌ ಕಟ್ಟರ್ ಹಾಗೂ ಇತರೆ ಉದ್ದಿಮೆಗಳಲ್ಲಿನ ಕುಶಲ ಕಾರ್ಮಿಕರಿಗೆ ₹ 10,990,1ನೇ ದರ್ಜೆ- ಮುಖ್ಯ ಅಡಿಗೆಯವರು, ಚಾಲಕರು, ಕತ್ತರಿಸುವ ಯಂತ್ರ ಚಾಲಕ, ಪರೀಕ್ಷಕರಿಗೆ ₹ 10,659, 2ನೇ ದರ್ಜೆ- ಖಾಜಾ ಮಿಷನ್‌ ಆಪರೇಟರ್‌, ಇಸ್ತ್ರಿ ಮಾಡುವವರು ಹಾಗೂ ಇತರರು ₹ 10,397, ಕೌಶಲ್ಯವಿಲ್ಲದ ಸಿಬ್ಬಂದಿ ಅಂದ್ರೆ ಪ್ಯಾಕಿಂಗ್, ವಿತರಣೆ, ಬಟ್ಟೆ ಹರಡುವವ, ಟ್ರಿಮ್ಮಿಂಗ್, ಮಾಲಿ, ವಾಚ್‌ ಮತ್ತು ವಾರ್ಡ್‌ ಕೆಲಸ ಮಾಡುವವರಿಗೆ ₹ 10,130 ಕನಿಷ್ಠ ವೇತನ ನಿಗದಿಪಡಿಸಲಾಗಿದೆ.

ಇನ್ನು ಸ್ಪಿನ್ನಿಂಗ್‌ ಮಿಲ್ಸ್‌ ಉದ್ದಿಮೆಗಳಲ್ಲಿ ಉದ್ಯೋಗ ಮಾಡುವ ಕುಶಲ ಕಾರ್ಮಿಕರಿಗೆ ತಿಂಗಳಿಗೆ ₹ 9,679, ಕುಶಲ ಕಾರ್ಮಿಕರಿಗೆ ₹ 9,434, ಅರೆ ಕುಶಲ ಕಾರ್ಮಿಕರಿಗೆ ₹ 8,962, ಕೌಶಲ್ಯವಿಲ್ಲದ ಕಾರ್ಮಿಕರಿಗೆ ₹ 8,715, ಕಚೇರಿ ಸಿಬ್ಬಂದಿಗಳಿಗೆ ಜವಾಬ್ದಾರಿಗಳ ಆಧಾರದ ಮೇಲೆ ₹ 8,883 ರಿಂದ ₹ 11,050 ರ ವರೆಗೆ ಕನಿಷ್ಠ ವೇತನ ನಿಗದಿಪಡಿಸಲಾಗಿದೆ.

ರೇಷ್ಮೆ ಬಟ್ಟೆಗಳ ಉದ್ದಿಮೆಗಳಲ್ಲಿ ಉದ್ಯೋಗ ಮಾಡುವ ಕುಶಲ ಕಾರ್ಮಿಕರಿಗೆ ₹ 11,236, ಅತಿ ಕುಶಲ ಕಾರ್ಮಿಕ ವಿಭಾಗದಲ್ಲಿ ಹೆಡ್‌ ಡಿಸೈನರ್‌, ವೀವ​ರ್ ಡಾಬಿ ವಿತ್‌ ಡ್ರಾಪ್‌ ಬಾಕ್ಸ್‌ ಆದ ಬಳಿಕ ಕೆಲಸ ಮಾಡುವವರಿಗೆ ₹ 13,239, ಕುಶಲ ಕಾರ್ಮಿಕರಿಗೆ ₹ 11,056, ಟರ್ನ​ರ್, ಸ್ಪಿನ್ನರ್, ಸಿಲ್ಕ್‌ವೇಸ್ಟ್‌ ಕ್ಲೀನರ್ ಹಾಗೂ ಅರೆ ಕುಶಲ ಕಾರ್ಮಿಕರಿಗೆ ₹ 10,465 ನಿಗದಿ ಪಡಿಸಲಾಗಿದೆ.

ಇನ್ನು ಆದೇಶದಲ್ಲಿ ಮಹಿಳೆಯರು, ಪುರುಷರು ಮತ್ತು ತೃತೀಯ ಲಿಂಗಿಗಳು ಒಂದೇ ರೀತಿಯ ಕೆಲಸ ನಿರ್ವಹಿಸಿದಲ್ಲಿ ಎಲ್ಲರಿಗೂ ಸಮಾನ ವೇತನ ನೀಡಬೇಕು. 1 ದಿನದ ಕೆಲಸ ಅಂದ್ರೆ 8 ಗಂಟೆಗಳ ಕೆಲಸವೆಂದು ಪರಿಗಣಿಸಬೇಕು. ತುಟ್ಟಿಭತ್ಯೆ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಮಾಡಬೇಕು. ಹಿಂದಿನ ಕ್ಯಾಲೆಂಡರ್‌ ವರ್ಷದ 12 ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಂಕಗಳ ಸರಾಸರಿ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳ ಮಾಡಬೇಕೆಂದು ಷರತ್ತು ವಿಧಿಸಲಾಗಿದೆ.