ಗುಜರಾತ್: ಹದಿಹರೆಯದ ಹುಡುಗ ಹುಡುಗಿಯರು ಪ್ರೀತಿಪ್ರೇಮ ಅಂತ ಓಡಾಡ್ತಾರೆ ಮದುವೆ ಮಾಡ್ಕೊಳೊಕೆ ಅಂತ ಡಿಸೈಡ್ ಮಾಡಿ ಮನೆಯವರ ಮುಂದೆ ತಮ್ಮ ಪ್ರೀತಿ ವಿಚಾರ ಮುಂದಿಟ್ಟು ಮದುವೆ ಪ್ರಸ್ತಾಪ ಮಾಡ್ತಾರೆ. ಇವರ ಪ್ರೀತಿಗೆ ಪೋಷಕರಿಂದ ವಿರೋಧ ವ್ಯಕ್ತವಾದಾಗ ಸಾವಿನ ಕದ ತಟ್ಟುತ್ತಾರೆ. ಇಂಥ ಪ್ರಕರಣಗಳು ಆಗಾಗ ನಮ್ಮ ಸುತ್ತಮುತ್ತಲೂ ‌ನಡೆಯುತ್ತಲೇ ಇರುತ್ತವೆ. ಆದ್ರೆ ಹೀಗೆ ಪ್ರಾಣ ಕಳೆದುಕೊಂಡ ಬಳಿಕ ಮಕ್ಕಳಿಗಾಗಿ ಪಾಲಕರು ಕಣ್ಣೀರು ಹಾಕುವುದು ಕಾಮನ್.

ಗುಜರಾತ್‌ನಲ್ಲಿಯೂ ‌‌ಇಂತಹದ್ದೊಂದು ಘಟನೆ ನಡೆದಿದೆ. ಆದ್ರೆ ಈ ಘಟನೆಯಲ್ಲಿ ಪೋಷಕರು ಕಣ್ಣೀರು ಹಾಕುತ್ತಾ ಕುಳಿತುಕೊಳ್ಳೋ ಬದಲು ಪ್ರಾಯಶ್ಚಿತಕ್ಕೆ ಮುಂದಾಗಿದ್ದಾರೆ. ಮನೆಯವರ ಒಪ್ಪಿಗೆ ಸಿಗದೆ ಪ್ರಾಣ ಕಳೆದುಕೊಂಡ ದುರಂತ ಪ್ರೇಮಿಗಳ ಪ್ರತಿಮೆಗಳನ್ನು ತಯಾರಿಸಿದ ಮನೆಯವರು, ಆ ಎರಡೂ ಪ್ರತಿಮೆಗಳಿಗೆ ಮದುವೆ ಮಾಡಿಸುವ ಮೂಲಕ ತಾವು ಮಾಡಿದ ಪಾಪದ ಪರಿಹಾರಕ್ಕೆ ಮುಂದಾಗಿದ್ದಾರೆ. ಪ್ರೇಮಿಗಳಿಬ್ಬರೂ ಸತ್ತು ಆರು ತಿಂಗಳ ನಂತರ ಈ ವಿಚಿತ್ರ ಪ್ರಸಂಗ ನಡೆದಿದೆ.

ಹೌದು, ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಇಂಥದೊಂದು ವಿಚಿತ್ರ ಪ್ರಸಂಗ ನಡೆದಿದ್ದು, ತಮ್ಮ ಪ್ರೀತಿಗೆ ಎರಡೂ ಕುಟುಂಬಗಳ ಸದಸ್ಯರು ಒಪ್ಪಿಗೆ ನೀಡದ ಕಾರಣಕ್ಕೆ ಭರವಸೆ ತೊರೆದ ಗಣೇಶ್ ಮತ್ತು ರಂಜನಾ ಕಳೆದ ವರ್ಷ (2022) ಆಗಸ್ಟ್‌ನಲ್ಲಿ ಸಾವಿನ ಮನೆ ಸೇರಿದ್ರು.

ಅವರಿಬ್ಬರ ಮೃತದೇಹಗಳನ್ನು ಕಂಡ ಎರಡೂ ಕುಟುಂಬದವರ ಮಮ್ಮಲ ಮರುಗಿದರು. ಛೇ! ತಾವು ಎಂತಹ ಕೆಟ್ಟ ನಿರ್ಧಾರ ತೆಗೆದುಕೊಂಡೆವು ಎಂದು ಹಲುಬಿದರು. ತಮ್ಮ ಕಾರಣದಿಂದಾಗಿ ಅವರಿಬ್ಬರೂ ಜೀವಂತ ಇದ್ದಾಗ ಒಂದಾಗಲು ಸಾಧ್ಯವಾಗಲಿಲ್ಲ. ಹೀಗೆ ಸಾವಿನಲ್ಲಿ ಸೇರಬೇಕಾಯ್ತಲ್ಲ ಅಂತ ನೊಂದ್ರು. ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ದೈಹಿಕವಾಗಿ ಇಲ್ಲದ ಪ್ರೇಮಿಗಳನ್ನು ಮತ್ತೆ ಬದುಕಿಸಿ ಒಂದು ಮಾಡುವ ಆಲೋಚನೆ ಇಬ್ಬರ ಮನೆಯವ್ರಲ್ಲಿ ಮೂಡಿತು. ಅದರ ಫಲಿತಾಂಶವೇ ಪ್ರತಿಮೆಗಳ ಸೃಷ್ಟಿ.

ಗಣೇಶ್ ಮತ್ತು ರಂಜನಾಳ ಪ್ರತಿಮೆಗಳನ್ನು ತಯಾರಿಸಿದ ಕುಟುಂಬದವರು, ಸಂಪ್ರದಾಯಕ್ಕೆ ಅನುಗುಣವಾಗಿ ಅವುಗಳಿಗೆ ಮದುವೆ ಮಾಡಿಸಿದ್ದಾರೆ. ವಿಗ್ರಹಗಳಿಗೆ ವಧು-ವರರ ಪೋಷಾಕು ತೊಡಿಸಿ, ಅವರಲ್ಲಿ ಜೀವಂತ ಪ್ರೇಮಿಗಳನ್ನು ಕಾಣುವ ಪ್ರಯತ್ನ ಮಾಡಿದ್ದಾರೆ.

“ಆ ಯುವಕ ನಮಗೆ ದೂರದ ಸಂಬಂಧಿ. ಈ ಕಾರಣದಿಂದಲೇ ನಾವು ಅವರ ಮದುವೆಗೆ ಸಿದ್ಧರಾಗಿರಲಿಲ್ಲ. ಆದ್ರೆ, ಅವರಿಬ್ಬರೂ ಪರಸ್ಪರ ಎಷ್ಟು ಪ್ರೀತಿಸುತ್ತಿದ್ದರು ಎಂದು ಅರಿವಾದ ಬಳಿಕ, ನಮ್ಮ ಎರಡೂ ಕುಟುಂಬಗಳಲ್ಲಿ ಈ ಆಲೋಚನೆ ಮೂಡಿತು. ಪ್ರೇಮಿಗಳಿಬ್ಬರ ಬಯಕೆಯನ್ನು ಈ ಮೂಲಕ ಈಡೇರಿಸಿದ್ದೇವೆ. ಹೀಗಾಗಿ ಅವರಿಬ್ಬರ ಆತ್ಮಕ್ಕೂ ಶಾಂತಿ ಸಿಗಬಹುದು” ಎಂದು ಯುವತಿಯ ಅಜ್ಜ ಭೀಮಸಿಂಗ್ ಪಡ್ವಿ ತಿಳಿಸಿದ್ದಾರೆ.

ಕುಟುಂಬಸ್ಥರೆನೋ ಪಶ್ಚಾತ್ತಾಪ ಮಾಡ್ಕೊಂಡ್ರು. ಆದ್ರೆ, ಕ್ಷುಲ್ಲಕ ಕಾರಣಕ್ಕಾಗಿ ತಮ್ಮ ಜೀವವನ್ನೇ ಕಳೆದುಕೊಂಡ ಪ್ರೇಮಿಗಳು ಮತ್ತೆ ಮರಳಲು ಸಾಧ್ಯವೇ? ಸೋ ಇಂಥಹ ಕೆಟ್ಟ ನಿರ್ಧಾರ ಕೈಗೊಳ್ಳುವ ಮೊದಲು ಪೋಷಕರ ಬಗ್ಗೆ ಸಾರಿ ಸಾರಿ ಯೋಚಿಸಿ ನೋಡಿ ಅವರು ನಿಮಗೆ ಸದಾ ಒಳ್ಳೆಯದನ್ನೆ ಬಯಸ್ತಾರೆ ಹೊರತು ಕೆಟ್ಟದ್ದನ್ನಲ್ಲ.