ಕರ್ನಾಟಕದೊಂದಿಗಿನ ಜೈನ ಧರ್ಮದ ಐತಿಹಾಸಿಕ ಕ್ರಿ.ಪೂ. 3ನೇ ಶತಮಾನಕ್ಕಿಂತ ಹಿಂದಿನದು. ಜೈನರ ಕಾಲದ ಬಸದಿಗಳು, ದೇವಾಲಯಗಳು ಮತ್ತು ಭವ್ಯವಾದ ಪ್ರತಿಮೆಗಳೆಲ್ಲವೂ ಇಂದು ಪ್ರವಾಸಿ ತಾಣ, ಪವಿತ್ರ ಕ್ಷೇತ್ರಗಳಾಗಿ ಹೆಸರಾಗಿವೆ. ಅಂಥ ಒಂದೊಂದು ಕ್ಷೇತ್ರವೂ ವಿಶೇಷ ಇತಿಹಾಸ ಹೊಂದಿವೆ.

ಅಂಥದ್ದೇ ರೋಚಕ ಇತಿಹಾಸ ಇರುವ ಜೈನರ ನೆಲೆಯೊಂದು ಪಶ್ಚಿಮ ಘಟ್ಟ ಸಾಲಿನಲ್ಲಿ ಅವಿತುಕೊಂಡಿದೆ. ಪ್ರಚಾರ, ನಿರ್ವಹಣೆ ಇಲ್ಲದೆ ಅರಣ್ಯದೊಳಗೆ ಕಳೆದುಹೋಗುತ್ತಿವೆ. ಆ ಸ್ಥಳದ ಪುಟ್ಟ ಅಧ್ಯಯನ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ 30 ಕಿ.ಮೀ. ದೂರದ ಪಶ್ಚಿಮ ಘಟ್ಟ ಸಾಲಿನ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾವಿನಬೀಳು ಗ್ರಾಮದಲ್ಲಿ ಜೈನರ ಇರುವಿಕೆಗೆ ಸಂಬಂಧಿಸಿದಂತೆ ಅನೇಕ ಕುರುಹುಗಳು ಇವೆ. ಜೈನರ ಮೂರ್ತಿಗಳು, ಮನೆ ಕಟ್ಟಿದ ಸ್ಥಳ (ಮಂದ್ಯಾಳ), ಶಿಲಾ ಚಿತ್ರಗಳು ಮತ್ತು ಅನೇಕ ವಿಶೇಷ ಕುರುಹುಗಳು ಕಾಣುತ್ತವೆ.

ಅಸಲಿಗೆ 16 ಕಿ.ಮೀ. ದೂರದ ಬಿಳಗಿಯಲ್ಲಿ ಕ್ರಿ.ಶ. 1470 ರಿಂದ ಕ್ರಿ.ಶ. 1923ರ ವರೆಗೆ ‘ಬಿಳಗಿ ಸಂಸ್ಥಾನ’ ಅಥವಾ ‘ಶ್ವೇತಪುರ’ದಲ್ಲಿ ರಾಜರ ಆಳ್ವಿಕೆ ಇತ್ತು. ವಿಜಯನಗರದವರ ಪಾಳೆಗಾರರಾಗಿ ಪ್ರಾರಂಭಕ್ಕೆ ಜೈನ ಮನೆತನದವರಾಗಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂದಾಜು 16ನೇ ಶತಮಾನದವರೆಗೂ ಬಿಳಗಿ ಸೀಮೆಯ ವ್ಯಾಪ್ತಿಯಲ್ಲಿ ಜೈನರ ಅಸ್ತಿತ್ವ ಬಹುಮಟ್ಟಿಗಿತ್ತು ಎಂದು ಇತಿಹಾಸ ಹೇಳುತ್ತದೆ.

ಅದಕ್ಕೆ ಸಾಕ್ಷಿ ಎನ್ನುವಂತೆ ಹಾವಿನಬೀಳು ಸಮೀಪದ ಹೆಮಜೆನಿಯಲ್ಲಿ ಜೈನರ ಕಾಲದ ‘ನಾಗಬನ’, ಹುಟ್ಲೆ ಗ್ರಾಮದಲ್ಲಿ ಜೈನರ ಮನೆಯ ಅಡಿಪಾಯ, ಕಸಗೆ, ಉಳ್ಳಾಣಿಜಡ್ಡಿ ಊರಿನಲ್ಲಿ ಮನೆ (ಮಂದ್ಯಾಳ) ನಿರ್ಮಿಸಿದ ಬಗ್ಗೆ ಅಂದಾಜು 200 ಅಡಿ ಉದ್ದ ಹಾಗೂ 100 ಅಡಿ ಅಗಲದ ಸಮತಟ್ಟು ಸ್ಥಳವಿದೆ. ಅದರಲ್ಲಿ ಒಕ್ಕೋಟಿ ಎನ್ನುವ ಗ್ರಾಮ ಜೈನರ ನೆಲೆಯ ಪ್ರಮುಖ ಕೇಂದ್ರ.

ಒಕ್ಕೋಟಿಯಲ್ಲಿರುವ ಜೈನರ ಶಿಲಾ ಚಿತ್ರ (ವೀರಗಲ್ಲು)

ಹುಲ್ಕುತ್ರಿಯ ಒಕ್ಕೋಟಿ :
ಹುಲ್ಕುತ್ರಿಯಿಂದ ಪೂರ್ವಕ್ಕೆ 1.5ಕಿ.ಮೀ. ದೂರದಲ್ಲಿ ಒಕ್ಕೋಟಿ ಇದೆ. ಒಕ್ಕೋಟಿಯನ್ನು ಹುಲ್ಕುತ್ರಿಯ ಗ್ರಾಮ ಒಕ್ಕಲು ಸಮುದಾಯದವರ ‘ಶಕ್ತಿ ಕೇಂದ್ರ’ ಎಂದೇ ಹೇಳಬಹುದು. ಒಂದು ಬದಿಯಲ್ಲಿ ವಿಶಾಲವಾದ ಬಯಲು, ಇನ್ನೊಂದು ಪಕ್ಕದಲ್ಲಿ ಸೋಮನದಿಯು ಪ್ರಶಾಂತವಾಗಿ ಹರಿಯುತ್ತಿದೆ. ಎತ್ತರದಿಂದ ಈ ಸ್ಥಳ ರಮಣೀಯವಾಗಿ ಕಾಣುತ್ತದೆ.

ಇಲ್ಲಿ ಜೈನರ ಕಾಲದ ಶಿಲಾ ಮೂರ್ತಿಗಳು, ವೀರಗಲ್ಲು, ಮಾಸ್ತಿಮನೆ, ಗ್ರಾಮದ ಮನೆ, ಹಳೆಬಾವಿ ಇವೆ. ವರ್ಷಕ್ಕೊಮ್ಮೆ ಜೈನರು ಇಲ್ಲಿನ ದೇವರುಗಳಿಗೆ ಭತ್ತ ಕುಟ್ಟಿ ಪ್ರಸಾದ ತಯಾರಿಸಿ ಪೂಜೆ ಸಲ್ಲಿಸುತ್ತಿದ್ದರಂತೆ ಎಂದು ಹುಲ್ಕುತ್ರಿಯ ಬಂಗಾರು ಜಟ್ಟು ಗೌಡ ಅವರು ಹಿರಿಯರಿಂದ ತಿಳಿದ ವಿಷಯವನ್ನು ಪ್ರಸ್ತಾಪಿಸುತ್ತಾರೆ.

ಜೈನರ ಕಾಲದ ಭತ್ತ ಕುಟ್ಟು ಒರಳು

ಪದ್ಮಾವತಿ ದೇವರ ಪಕ್ಕದಲ್ಲಿ ಭತ್ತ ಕುಟ್ಟುವ ಒರಳು ಸಹ ಇದೆ. ಇಲ್ಲಿರುವ ನಾಗರ ಕಲ್ಲು ಕೂಡ ಜೈನರ ಕಾಲದ್ದಾಗಿದೆ. ಇದರ ಪಕ್ಕದಲ್ಲೇ ಜೈನರು ವಾಸವಿದ್ದ ಮನೆಯ ಅಡಿಪಾಯಗಳು, ಪಾಳು ಬಿದ್ದ ಗೋಡೆಗಳನ್ನು ಅಂದಾಜು 70 ವರ್ಷಗಳ ಹಿಂದಿನಿಂದಲೂ ಕಂಡಿದ್ದೇವೆ ಎನ್ನುತ್ತಾರೆ ಹುಲ್ಕುತ್ರಿಯ ನರಹರಿ ಗಣಪ ಗೌಡ.

ಜೈನರ ಕಾಲದ ಬಳಕೆಯಲ್ಲಿದ್ದ “ಕೊಟ್ಟ”ವನ್ನು ಇಲ್ಲಿ ಕಾಣಬಹುದು. “ಕೊಟ್ಟ” ಎಂದರೆ, ಇದು ಮಡಕೆ ಆಕೃತಿಯಲ್ಲಿದ್ದು, ಅದರ ಕಂಠ ಭೂಮಿಯ ಮೇಲ್ಮಟ್ಟಕ್ಕೆ ಮತ್ತು ಉಳಿದ (ಅಂದಾಜು 5 ಅಡಿ) ಭಾಗ ಭೂಮಿಯ ಒಳಭಾಗದಲ್ಲಿರುತ್ತದೆ. ಇದರಲ್ಲಿ ಜೈನರು ದವಸ, ಧಾನ್ಯಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಇಟ್ಟುಕೊಳ್ಳುತ್ತಿದ್ದರೆಂದು ಸ್ಥಳೀಯ ಅಣ್ಣಪ್ಪ ಭೈರ್ಯ ಗೌಡರು ಹೇಳುತ್ತಾರೆ.

ಸದ್ಯ ‘ಕೊಟ್ಟ’ದಲ್ಲಿ ಮಣ್ಣು ತುಂಬಿದ್ದರಿಂದ ಇದನ್ನು ಗುರುತಿಸುವುದು ಕಷ್ಟ. ದನಕರುಗಳು ಇದರಲ್ಲಿ ಬೀಳುವ ಅಪಾಯವಿರುವುದರಿಂದ ಸ್ಥಳೀಯರು ಕಲ್ಲು-ಮಣ್ಣುಗಳಿಂದ ಮುಚ್ಚಿದ್ದಾರೆ. ಇಂತಹ ‘ಕೊಟ್ಟ’ವು ಹೆಮಜೆನಿ ಗ್ರಾಮದಲ್ಲೂ ಇದೆ.

ಕಸಗೆಯಲ್ಲಿರುವ ಜೈನರ ಶಿಲಾ ಚಿತ್ರ

ಕಶಿಗೆ (ಕಸಗೆ) :
ಇಲ್ಲಿಯ ರಾಮಚಂದ್ರ ಹೆಗಡೆ ಎನ್ನುವವರ ಅಡಿಕೆ ತೋಟದ ರಸ್ತೆಯ ಪಕ್ಕದಲ್ಲಿ ಕೆಲವು ವರ್ಷಗಳ ಹಿಂದೆ ನೆಲ ಅಗೆಯುವ ವೇಳೆ ಚಿತ್ರವಿರುವ ಒಂದು ಶಿಲಾ ಫಲಕ ಸಿಕ್ಕಿತ್ತು. ಅದರಲ್ಲಿ ಒಬ್ಬ ಮುನಿಯು ಬಲಗೈಯಲ್ಲಿ ಕಮಂಡಲ ಹಿಡಿದು, ಇನ್ನೊಂದು ಕೈಯಲ್ಲಿ ಕೊಡೆ (ಛತ್ರಿ) ಹಿಡಿದಿರುವಂತೆ ತೋರುತ್ತದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಚಿತ್ರ ಕೊರೆಯಲಾಗಿದೆ. ಬಿಳಗಿಯ ಇತಿಹಾಸಕಾರ ಪದ್ಮಾಕರ ಮಡಗಾಂವಕರ ಅವರ ಪ್ರಕಾರ ಜೈನ ಯೋಗಿಗಳು ಅಥವಾ ತಪಸ್ವಿಗಳು ಮರಣ ಹೊಂದಿದಾಗ ಈ ರೀತಿಯಾಗಿ ಕೊರೆಯಿಸುತ್ತಿದ್ದರಂತೆ.

ಸಾಮಾನ್ಯವಾಗಿ ಯೋಗಿಗಳು, ತಪಸ್ವಿಗಳು ತೀರಿಕೊಂಡಾಗ ಅವರನ್ನು ಅಗ್ನಿ ಸ್ಫರ್ಶ ಮಾಡದೇ ಹೂಳುವುದು ಪದ್ಧತಿ. ಕಮಂಡಲವು ತಪಸ್ವಿಗಳನ್ನು ಸೂಚಿಸುವ ಸಂಕೇತವಾಗಿದೆ. ಅಲ್ಲದೇ ಚಿತ್ರದಲ್ಲಿರುವ ವ್ಯಕ್ತಿ ಯಾವುದೇ ಬಟ್ಟೆ ಅಥವಾ ಆಭರಣ ತೊಟ್ಟಿಲ್ಲ. ಹಾಗಾಗಿ ಚಿತ್ರದಲ್ಲಿರುವ ಯೋಗಿ ದಿಗಂಬರ ಪಂಥದವರಾಗಿರಬೇಕು ಎನ್ನುತ್ತಾರೆ ಅವರು. ಈ ಶಿಲಾ ಫಲಕದ ಸ್ವಲ್ಪ ದೂರದಲ್ಲೇ ಜೈನರು ವಾಸವಾಗಿದ್ದರು ಎಂಬುದಕ್ಕೆ ಮನೆ ನಿರ್ಮಿಸಿದ (ಮಂದ್ಯಾಳ) ಸ್ಥಳವನ್ನು ಕಾಣಬಹುದು.

ತಲುಪುವುದು ಹೇಗೆ ?
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ ಬಿಳಗಿ ಮಾರ್ಗವಾಗಿ ಸೋವಿನಕೊಪ್ಪದಿಂದ ಬರಬಹುದು ಅಥವಾ ಸಿದ್ದಾಪುರದಿಂದ ಹಾರ್ಸಿಕಟ್ಟಾ ಮಾರ್ಗವಾಗಿ ಚಿಟ್ಟಟ್ಟೆಮನೆ ಮಾರ್ಗವಾಗಿಯೂ ಬರಬಹುದು. ಹುಲ್ಕುತ್ರಿಯಿಂದ 1.5 ಕಿ.ಮೀ. ಕಿರಿದಾದ ರಸ್ತೆಯ ಮೂಲಕ ಸಾಗಿದರೆ ಒಕ್ಕೋಟಿ ತಲುಪಬಹುದು.

ಚಿತ್ರ, ವಿಡಿಯೊ, ಲೇಖನ:
ದರ್ಶನ ಹರಿಕಾಂತ, ಸಿದ್ದಾಪುರ.