ನೌಕರರ ನಿವೃತ್ತಿ ವಯಸ್ಸು 50 ವರ್ಷಕ್ಕೆ ಇಳಿಕೆ ಸುಳ್ಳು: ಕೇಂದ್ರ ಸರ್ಕಾರ ಹೇಳಿದ್ದೇನು?

ನೌಕರರ ನಿವೃತ್ತಿ ವಯಸ್ಸು 50 ವರ್ಷಕ್ಕೆ ಇಳಿಕೆ ಸುಳ್ಳು: ಕೇಂದ್ರ ಸರ್ಕಾರ ಹೇಳಿದ್ದೇನು?

ಕೊರೊನಾದಿಂದ ಲಾಕ್ ಡೌನ್ ಆದ ಬಳಿಕ ಸರಕಾರಿ ನೌಕರರ ಕುರಿತು ಅನೇಕ ಸುದ್ದಿಗಳು ಹೊರಬೀಳುತ್ತಿವೆ. ಸರಕಾರಿ ನೌಕರರ ವೇತನ ಕಡಿತ ಆಗುತ್ತದೆ. ವೇತನ ಬಡ್ತಿ ಕೊಡುವುದಿಲ್ಲ ಹೀಗೆ ಅನೇಕ ಸುದ್ದಿಗಳು ಹರಿದಾಡುತ್ತಿದ್ದವು. ಅದರ ನಡುವೆಯೇ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕೊರೊನಾ ಕಾರಣಕ್ಕೆ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ಇಳಿಸಲಾಗುತ್ತಿದೆ ಎಂದು ವಾಟ್ಸಾಪ್ ಗಳಲ್ಲಿ ಸಂದೇಶ ಹರಿದಾಡುತ್ತಿದೆ.

ಇದೇ ಸಂದೇಶ ಆಧರಿಸಿ ಕೆಲವು ಸುದ್ದಿ ಸಂಸ್ಥೆಗಳು ವರದಿಯನ್ನೂ ಮಾಡಿವೆ. ಕೊರೊನಾ ವೈರಸ್ ಕಾರಣಕ್ಕೆ ನಿವೃತ್ತಿ ವಯಸ್ಸು 50 ವರ್ಷಕ್ಕೆ ಇಳಿಸಲಾಗುತ್ತಿದೆ. ನಿವೃತ್ತರಾದ ಪ್ರತಿಯೊಬ್ಬರಿಗೂ ಅಂದಿನಿಂದಲೇ ನಿವೃತ್ತಿ ಸೌಲಭ್ಯಗಳು ಜಾರಿಯಾಗಲಿವೆ. ಆದರೆ, ಅದು ಕೊರೊನಾ ಬಿಕ್ಕಟ್ಟು ಮುಗಿದ ಬಳಿಕ ಸೌಲಭ್ಯಗಳು ಸಿಗಲಿವೆ. ಕೊರೊನಾದಿಂದ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸು ಇಳಿಸುವ ಒತ್ತಡಕ್ಕೆ ಸಿಲುಕಿದೆ ಎಂದು ವರದಿ ಮಾಡಿವೆ.

ಅಲ್ಲದೆ, ನಿವೃತ್ತಿ ವಯಸ್ಸು ಇಳಿಸಲು ಸಾಮಾಜಿಕ ಅಂತರ ಕಾಪಾಡುವುದು ಸಹ ಕಾರಣವಾಗಿದೆ ಎಂದು ಹೇಳಿವೆ. ಕೊರೊನಾ 2022ರವರೆಗೆ ಬಾಧಿಸಲಿದೆ. ಅಲ್ಲಿಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹಾರ್ವರ್ಡ್ ಯುನಿವರ್ಸಿಟಿ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಆ ಪ್ರಕಾರ ಕಚೇರಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿ ಒಬ್ಬರ ನಡುವೆ ಸಂಪರ್ಕ ಏರ್ಪಟ್ಟರೆ ಸಮಸ್ಯೆ ಆಗಲಿದೆ. ಹಾಗಾಗಿ ಮೇಲಿನ ನಿರ್ಧಾನ ಕೈಗೊಳ್ಳಲಾಗಿದೆ ಎಂದು ಇಂಗ್ಲಿಷ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೇಂದ್ರ ಸರ್ಕಾರ ಹೇಳಿದ್ದೇನು?
ನಿವೃತ್ತಿ ವಯಸ್ಸು 50ಕ್ಕೆ ಇಳಿಸಲಾಗಿದೆ ಎಂದು ವಾಟ್ಸಾಪ್ ಸಂದೇಶ ಮತ್ತು ಸುದ್ದಿ ಸಂಸ್ಥೆಯ ವರದಿ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ಇಳಿಸುವ ನಿರ್ಧಾರ ಅಥವಾ ಆ ಕುರಿತು ಚರ್ಚೆಯೇ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ. ಅಂಥ ವಿಚಾರವೂ ಪ್ರಸ್ತಾಪವಾಗಿಲ್ಲ ಎಂದು ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಪ್ರೆಸ್ ಇನ್ಫಾರ್ಮೇಷನ್ ಬ್ಯುರೊ ತಿಳಿಸಿದೆ. ತನ್ನ ಫ್ಯಾಕ್ಟ್ ಚೆಕ್ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಸಹ ಮಾಡಿದೆ. ಸದ್ಯ ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಇದೆ.

Leave a reply

Your email address will not be published. Required fields are marked *