ಚಕ್ರಾಸನ ಎಂದರೆ ಚಕ್ರದ ರೀತಿ ಬಾಗಿ ಮಾಡುವ ಆಸನವಾಗಿದೆ. ಇದು ಬೆನ್ನೆಲುಬನ್ನು ಗಟ್ಟಿಯಾಗಿಸುತ್ತದೆ ಮತ್ತು ಹೊಟ್ಟೆಯ ದೋಷ ನಿವಾರಣೆ ಮಾಡಿ ದೇಹವನ್ನು ಹಗುರವಾಗಿಸುತ್ತದೆ. ಇದರ ಜತೆಗೆ ಅನೇಕ ಉಪಯೋಗಗಳನ್ನು ಈ ಆಸನದಿಂದ ಪಡೆಯಬಹುದು.

ಮಾಡುವ ವಿಧಾನ:

ಮೊದಲು ಆರಾಮವಾಗಿ ಬೆನ್ನಿನ ಮೇಲೆ ಮಲಗಿಕೊಳ್ಳಿ. ನಂತರ ನಿಮ್ಮ ಎರಡು ಕಾಲುಗಳನ್ನು ಮಡಚಿ ಪಾದಗಳನ್ನು ಪ್ರಷ್ಠದ ಮುಂಭಾಗದಲ್ಲಿ ಇಡಿ. ಕೈಗಳನ್ನು ಮಡಚಿ ಹಸ್ತವನ್ನು ಭುಜದ ಪಕ್ಕ ನೆಲದಮೇಲೆ ಇಡುತ್ತಾ ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಅಂಗೈ ಮತ್ತು ಪಾದಗಳ ಸಹಾಯದಿಂದ ಸೊಂಟ ಮತ್ತು ಎದೆಯ ಬಾಗವನ್ನು ನಿಧಾನವಾಗಿ ಮೇಲಕ್ಕೆತ್ತಿ.

ನಿಮಗೆ ಎಷ್ಟು ಸಾಧ್ಯ ಅಷ್ಟನ್ನು ಮಾತ್ರ ದೇಹವನ್ನು ಮೇಲಕ್ಕೆತ್ತಿ. ಈಗ ದೇಹವನ್ನು ವೃತ್ತಾಕಾರದ ಸ್ಥಿತಿಗೆ ತರಲು ಪ್ರಯತ್ನಿಸಿ. ಇದೇ ಸ್ಥಿತಿಯಲ್ಲಿ 30 ಸೆಕೆಂಡುಗಳ ಕಾಲ ಇರಿ. (ಅಭ್ಯಾಸ ಮಾಡುತ್ತಾ ಹೋದಹಾಗೆ ಸಮಯದ ಮಿತಿಯನ್ನು ಹೆಚ್ಚಿಸುತ್ತಾ ಬನ್ನಿ) ಈಗ ಉಸಿರನ್ನು ಹೊರ ಹಾಕುತ್ತಾ (ರೇಚಕ) ಮೊಣಕೈ ಮಡಚಿ ಮೊದಲು ಬೆನ್ನಿನ ಭಾಗ ಹಾಗೆ ಪ್ರಷ್ಠದ ಭಾಗವನ್ನು ನಿಧಾನವಾಗಿ ಕೆಳಗಿಳಿಸಿ. ಶವಾಸನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಉಪಯೋಗಗಳು:

1) ಬೆನ್ನೆಲುಬು ಗಟ್ಟಿಯಾಗಿ, ಹೊಟ್ಟೆಯ ದೋಷಗಳು ನಿವಾರಣೆಯಾಗುವುದು.

2) ಅಜೀರ್ಣ ದೂರವಾಗಿ, ಕತ್ತು ಮತ್ತು ಮೊಣಕಾಲಿನ ದೋಷ ನಿವಾರಣೆಯಾಗುವುದು.

3) ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು.

4) ಆಸ್ತಮಾ ಮತ್ತು ಬಂಜೆತನದ ಸಮಸ್ಯೆ ಕಡಿಮೆ ಮಾಡುತ್ತದೆ.

5) ಭುಜಗಳು, ತೋಳು, ಕೈಗಳು, ಮೊಣಕೈ ಮತ್ತು ಕಾಲುಗಳನ್ನು ಬಲಪಡಿಸುತ್ತದೆ.

6) ರಕ್ತ ಪರಿಚಲನೆ ಉತ್ತಮಗೊಳ್ಳುವುದು.

7) ಖಿನ್ನತೆಯನ್ನು ದೂರಮಾಡುತ್ತದೆ.

8) ಥೈರಾಯ್ಡ್ ಗ್ರಂಥಿ ಉತ್ತೇಜನಗೊಳ್ಳುತ್ತದೆ.

ಸೂಚನೆಗಳು:

ಬೆನ್ನುನೋವು, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ತಲೆನೋವು, ಆಮಶಂಕೆ, ಕೈಮಣಿಕಟ್ಟಿನ ಸಮಸ್ಯೆ ಇದ್ದರೆ ಈ ಆಸನ ಮಾಡಬಾರದು.