ಕಾರವಾರ: ಇತ್ತೀಚೆಗೆ ನಿಧನರಾದ ಡಾ. ಅವಿನಾಶ ತಿನೈಕರ್ ಅವರ ಹೆಸರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಳದವರೇ ಇಲ್ಲ. ಅಂಕೋಲಾ ಜನರ ಪಾಲಿಗಂತೂ ಆಪ್ತರಕ್ಷಕರಾಗಿದ್ದರು. ಏನೇ ಆರೋಗ್ಯ ಸಮಸ್ಯೆ ಬಂದರೂ ಡಾ. ಅವಿನಾಶ ಅವರು ಬದುಕಿಸುತ್ತಾರೆ ಎನ್ನುವ ಅತೀವ ವಿಶ್ವಾಸ ಜನರಲ್ಲಿತ್ತು.

ವಿಚಿತ್ರ ಎನ್ನುವಂತೆ ದಿಢೀರನೆ ಅವರು ಮರೆಯಾದರು. ಅದೆಷ್ಟೋ ಕುಟುಂಬಗಳು ಅವರನ್ನು ಮತ್ತೆ ಮತ್ತೆ ನೆನೆಸುತ್ತಿವೆ. ಅಂಕೋಲಾದ ವಿಶೇಷವೇ ಎನ್ನುವಂತಿದ್ದ ಡಾ. ಅವಿನಾಶ ಅವರ ಜೀವನ ಹಿನ್ನೆಲೆಯೂ ಅಷ್ಟೇ ರೋಚಕವಾಗಿದೆ.

ಮೂಲತಃ ಖಾನಾಪುರ ಜಿಲ್ಲೆಯ ಮರಾಠಿ ಕುಟುಂಬದ ಡಾ. ಅವಿನಾಶ ಅವರು ಕನ್ನಡ ನೆಲದಲ್ಲಿ ಕನ್ನಡಿಗರಿಗಾಗಿ ತಮ್ಮ ಜೀವನ ಕಳೆದಿದ್ದು ವಿಶೇಷ. ಇಲ್ಲಿಯವರೆಗೆ ಡಾ. ಅವಿನಾಶ ಅವರನ್ನು ಒಬ್ಬ ವೈದ್ಯರಾಗಿ ಅಷ್ಟೇ ನೋಡಿದ್ದೇವೆ. ಅವರ ಬದುಕಿನ ಹಿನ್ನೆಲೆ, ಖಾಸಗಿ ಬದುಕು, ಕನಸುಗಳು ಕೇಳಿದರೆ ಕಣ್ಣುಗಳ ಒದ್ದೆಯಾಗದೆ ಇರದು.

ಡಾ. ಅವಿನಾಶ ಅವರು ಹೇಗಿದ್ದರು, ಅವರ ಕನಸುಗಳ ಹೇಗಿದ್ದವು, ಆರ್ಯಮೆಡಿಕಲ್ ಆಸ್ಪತ್ರೆಯನ್ನು ಮುಂದೆ ಯಾರು ನಡೆಸುತ್ತಾರೆ ಇಂಥ ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿದೆ. ಇದೆಲ್ಲದರ ಬಗ್ಗೆ ಡಾ. ಅವಿನಾಶ ಅವರ ಪತ್ನಿ ಡಾ. ಶ್ರೀದೇವಿ ಅವರು ದಿ ಸ್ಟೇಟ್ ನೆಟ್ವರ್ಕ್ ನೊಂದಿಗೆ ಮಾತನಾಡಿದ್ದಾರೆ.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕನಸು

ಅಂಕೋಲಾದಲ್ಲಿರುವ ಆರ್ಯಮೆಡಿಕಲ್ ಅನ್ನು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ಡಾ. ಅವಿನಾಶ ಅವರ ಕನಸಾಗಿತ್ತು. ಸದ್ಯ ಆಸ್ಪತ್ರೆ 22 ಬೆಡ್ ಗಳ ಸಾಮರ್ಥ್ಯ ಹೊಂದಿದೆ. ಅದನ್ನು ಹೆಚ್ಚಿಸಬೇಕು. ಅಂಕೋಲಾದಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಬೇಕು ಎಂದು ಕನಸು ಹೊತ್ತಿದ್ದರು.

ರಕ್ತ ಬರದ ಹಾಗೆ ಆಪರೇಷನ್ ಮಾಡುವ ವ್ಯವಸ್ಥೆ ಆರಂಭಿಸಲು ಯೋಜನೆ ರೂಪಿಸಿಕೊಂಡಿದ್ದರು. ಎಲ್ಲ ರೀತಿಯ ಹೈಟೆಕ್ ಆರೋಗ್ಯ ಸೇವೆ ಅಂಕೋಲಾದಲ್ಲಿ ಸಿಗುವಂತಾಗಬೇಕು. ಜಿಲ್ಲೆಯ ಜನರು ಗೋವಾ, ಮಣಿಪಾಲ ಅಲೆಯುವ ಸಂಕಷ್ಟ ತಪ್ಪಬೇಕು ಎಂದು ಅವರು ಬಯಸಿದ್ದರು.

ಡಾ. ಅವಿನಾಶ ಅವರು ಅಂಕೋಲಾದಲ್ಲಿಯೇ ಇರುವ ಸಲುವಾಗಿ ಅನೇಕ ಅವಕಾಶಗಳನ್ನು ತಿರಸ್ಕರಿಸಿದ್ದಾರೆ. ದೆಹಲಿ, ಮುಂಬಯಿ ಸೇರಿ ಪ್ರಸಿದ್ಧ ಆಸ್ಪತ್ರೆಗಳಿಂದ ಆಹ್ವಾನ ಬಂದಿತ್ತು. ಆದರೆ, ಅಂಕೋಲಾ ಬಿಟ್ಟು ಹೋಗಲು ಅವರು ಇಷ್ಟಪಡಲಿಲ್ಲ.

ಡಾ. ಅವಿನಾಶ ಅವರು ಸಂಗ್ರಹಿಸಿದ ಅಪರೂಪದ ಸ್ಟಾಂಪ್ ಗಳು

ಹಾಡು ಹೇಳುತ್ತಿದ್ದರು

ಡಾ. ಅವಿನಾಶ ಅವರು ಹೆಚ್ಚು ಸಮಯ ಆಸ್ಪತ್ರೆಯಲ್ಲಿಯೇ ಕಳೆಯುತ್ತಿದ್ದರು. ರೋಗಿಗಳಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿ ಯಾವತ್ತಿಗೂ ನಿರ್ಲಕ್ಷ್ಯ ತೋರುತ್ತಿರಲಿಲ್ಲ. ಬಿಡುವಿನ ವೇಳೆಯಲ್ಲಿ ಹಾಡು ಹೇಳುತ್ತಿದ್ದರು. ಸಂಗೀತವನ್ನು ಅವರು ಹೆಚ್ಚು ಇಷ್ಟು ಪಡುತ್ತಿದ್ದರಂತೆ.

ಜತೆಗೆ ದೇಶದಲ್ಲಿರುವ ಸ್ಟಾಂಪ್ ಗಳನ್ನು ಸಂಗ್ರಹಿಸುವುದು ಅವರ ಹವ್ಯಾಸವಾಗಿತ್ತು. ನೂರಾರು ಸ್ಟಾಂಪ್ ಗಳ ಸಂಗ್ರಹ ಅವರ ಬಳಿ ಇದೆ. ವಿದೇಶದಿಂದ ಬಂದಾಗಲೆಲ್ಲ ಅಂಚೆ ಕಚೇರಿಯಿಂದ ಸ್ಟಾಂಪ್ ಗಳನ್ನು ತರುತ್ತಿದ್ದರು. ತೀರಾ ಅಪರೂಪದ ಸ್ಟಾಂಪ್ ಗಳನ್ನೂ ಡಾ. ಅವಿನಾಶ ಸಂಗ್ರಹಿಸಿದ್ದರು.

ಖಾನಾಪುರದಿಂದ ಅಂಕೋಲಾಕ್ಕೆ

ಡಾ. ಅವಿನಾಶ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನವರು. 11 ಆಗಸ್ಟ್ 1956 ರಲ್ಲಿ ಜನಿಸಿದ ಡಾ. ಅವಿನಾಶ ಅವರು ಶಿಕ್ಷಣ ಆರಂಭಿಸಿದ್ದು ಮರಾಠಿ ಭಾಷೆಯಲ್ಲಿ. 1974-78ರಲ್ಲಿ ಬೆಳಗಾವಿಯ ಜೆಎನ್ಎಂಸಿ ಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಅವರು ಆವಾಗಲೇ ಕರ್ನಾಟಕ ವಿಶ್ವವಿದ್ಯಾಲಯದಿಂದ 6 ಚಿನ್ನದ ಪದಕ ಪಡೆದಿದ್ದರು.

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಎಸ್ ಮುಗಿಸಿ ನಂತರ ದೆಹಲಿಯ ಡಾ. ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿದ್ದಾರೆ. 1981-82 ರಲ್ಲಿ ಬೆಂಗಳೂರಿನ ಚಿನ್ಮಯ ಮಿಷನ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದರು. ಜತೆಯಲ್ಲಿಯೇ ಬೆಂಗಳೂರು ಕಿಡ್ನಿ ಫೌಂಡೇಶನ್ ನಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟ್ ಸರ್ಜನ್ ಆಗಿದ್ದರು.

ಡಾ. ಅವಿನಾಶ ಅವರ ಬಾಲ್ಯದ ಫೋಟೊ

ಅಲ್ಲಿಂದ 1987ಕ್ಕೆ ಅಂಕೋಲಾಕ್ಕೆ ಬಂದ ಅವರು ಕಮಲಾ ಮೆಡಿಕಲ್ ಆಸ್ಪತ್ರೆಯಲ್ಲಿ ವೈದ್ಯರಾದರು. 1991ರಲ್ಲಿ ಅದೇ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿಯೂ ಕೆಲಸ ಮಾಡಿದರು.

ಅಂಕೋಲಾದಲ್ಲಿಯೇ 1992ರಲ್ಲಿ ಆರ್ಯ ಮೆಡಿಕಲ್ ಹೆಸರಿನಲ್ಲಿ ಸ್ವಂತ ಆಸ್ಪತ್ರೆ ಆರಂಭಿಸಿದರು. 1992 ಜೂನ್ 16 ರಂದು ಆಸ್ಪತ್ರೆ ಉದ್ಘಾಟನೆ ನಡೆದಿತ್ತು. ಜನರಲ್ ಸರ್ಜನ್ ಆಗಿದ್ದರೂ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೊಡುವಷ್ಟು ನಿಪುಣರಾಗಿದ್ದರು. ಯೂರಾಲಜಿಸ್ಟ್ ನಲ್ಲಿ ಸ್ಪೆಷಲಿಸ್ಟ್ ಆಗಿದದರು.

ಆರ್ಯಮೆಡಿಕಲ್ ಮುಂದೇನು?

ಡಾ. ಅವಿನಾಶ ಅವರ ಕನಸಿನಂತೆಯೇ ಆರ್ಯಮೆಡಿಕಲ್ ಅನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಅವರ ಪತ್ನಿ ಡಾ. ಶ್ರೀದೇವಿ ತಿಳಿಸಿದ್ದಾರೆ. ಅವರ ಮಗಳು ಐಶ್ವರ್ಯ ಜೋದಪುರದಲ್ಲಿ ಎಂಎಸ್ ಸರ್ಜರಿ ಪ್ರಥಮ ವರ್ಷ ಓದುತ್ತಿದ್ದಾರೆ. ಮುಂದೆ ಅವರೂ ಇದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಾರೆ. ಅಲ್ಲಿಯವರೆಗೆ ಉತ್ತಮ ವೈದ್ಯರನ್ನು ಕರೆಯಿಸಿ ಆಸ್ಪತ್ರೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಆಸ್ಪತ್ರೆ ಮುಚ್ಚುವುದಿಲ್ಲ ಎಂದು ಡಾ. ಶ್ರೀದೇವಿ ಅವರು ತಿಳಿಸಿದ್ದಾರೆ.

ತೆರೆಮರೆಯಲ್ಲೇ ನೆರವು
ಡಾ. ಅವಿನಾಶ ಅವರು ಸಾಕಷ್ಟು ವೈದ್ಯಕೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ರೋಟಿಕ್ಲಬ್ ಸದಸ್ಯರು ಕೂಡ ಆಗಿದ್ದರು. ಒಂದಷ್ಟು ಕುಟುಂಬಗಳಿಗೆ ಉಚಿತ ಚಿಕಿತ್ಸೆಯನ್ನೂ ನೀಡಿ ನೆರವಾಗಿದ್ದಾರೆ. ಇವುಗಳ ಬಗ್ಗೆ ಒಮ್ಮೆಯೂ ಪ್ರಚಾರ ಪಡೆದಿರಲಿಲ್ಲ ಎಂದು ಡಾ. ಶ್ರೀದೇವಿ ಅವರು ಸ್ಮರಿಸಿದರು.

ಒಟ್ಟಿನಲ್ಲಿ ಅಂಕೋಲಾ ಜನರ ಆರೋಗ್ಯಕ್ಕೆ ಶ್ರೀರಕ್ಷೆಯಂತಿದ್ದ ಡಾ. ಅವಿನಾಶ ಅವರು ಸದಾ ಕಾಲ ಜನರು ನೆನೆಸುವಂಥ ವ್ಯಕ್ತಿಯಾಗಿ ಬೆಳೆದಿದ್ದು ಅದ್ಬುತ. ಎಂಬಿಬಿಎಸ್ ಆದರೆ ಸಾಕು ವಿದೇಶಕ್ಕೆ ಹೋಗುವ ವೈದ್ಯರುಗಳ ಮಧ್ಯೆ ಸಣ್ಣ ಪಟ್ಟಣದಲ್ಲಿಯೇ ಇದ್ದುಕೊಂಡು ಜನರ ಸೇವೆ ಮಾಡಿದ ಡಾ. ಅವಿನಾಶ ಅವರಿಗೆ ಅವರೇ ಸಾಟಿ.

ಡಾ. ಅವಿನಾಶ ಅವರ ಜೀವನದ ವಿಡಿಯೊ ಮಾಹಿತಿ