ಲಿಟ್ಲ್ ಮಾಸ್ಟರ್ ಸುನೀಲ ಗವಾಸ್ಕರ್, ಕ್ರಷ್ಣಾಮಚಾರಿ ಶ್ರೀಕಾಂತ ಗೆ ಪೋನ್ ಕರೆ ಮಾಡಿ “ಯೇ ಚೀಕಾ , ವಿಶ್ವಕಪ್ ತಂಡಕ್ಕೆ ಆಯ್ಕೇಯಾಗಿದ್ದಿಯಾ. ಪತ್ನಿ ವಿದ್ಯಾಳ ಟಿಕೇಟ್ ಸಹ ಬುಕ್ ಮಾಡಿ, ಜೊತೆಗೆ ವಿಮಾನವೇರಲು ತಯಾರಾಗು. ಇಂಗ್ಲೇಂಡ್ ಮೂಲಕ ಹಾಗೆ ಯು. ಎಸ್ ಗೆ ತೆರಳಿದರಾಯಿತು ಎನ್ನುತ್ತಾರೆ.

ಮಾಚ೯ 30, 1983 ರಂದು ವಿದ್ಯಾಳ ಜೋತೆ ಸಪ್ತಪದಿ ತುಳಿದ ಶ್ರೀಕಾಂತ ಈಗ ಇಂಗ್ಲೇಂಡಗೆ ಹೋಗುವುದು, ಈ ಮೊದಲಿನಂತೆ ಆರಂಭಿಕ ಹಂತದಲ್ಲೇ ಪಂದ್ಯಾವಳಿಯಿಂದ ಹೊರಬಿದ್ದ ನಂತರ ಅಲ್ಲಿ ಕ್ರಿಕೇಟ್ ನೋಡುವುದು,ಮಜಾ ಮಾಡುವುದು, ಅಲ್ಲಿಂದಲೇ ಅಮೇರಿಕಾಗೆ ತೆರಳುವುದು. ಇದೊಂದು ಪಕ್ಕಾ ಹನಿಮೂನ್ ಟ್ರಿಪ್ ಎಂದು ಪರಿಗಣಿಸಿ, ಜಾಲಿ ಮೂಡ್ ನಲ್ಲಿ ಪತ್ನಿ ವಿದ್ಯಾ ಜೋತೆ ವಿಮಾನವೇರಿದ್ದರು.

ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಎಂದರೇ ಮಜಾ ಮಾಡಲು ಸಿಕ್ಕಿದ ಸವುಡು, jolly time ಎಂದೇ ಪರಿಗಣಿಸಿದ್ದರು ಹಲವು ಆಟಗಾರರು. ಹಾಗೇ ರೋಜರ್ ಬಿನ್ನಿ, ಸೈಯದ್ ಕಿಮಾ೯ನಿ, ಸುನೀಲ್ ಗವಾಸ್ಕರ್, ರವಿಶಾಸ್ತ್ರೀ, ಸಂದೀಪ ಪಾಟೀಲ, ತಂಡದ ಮ್ಯಾನೇಜರ್ ಮಾನ ಸಿಂಗ್ ಕೂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ , ಲೀಗ್ ಹಂತದಲ್ಲಿಯೇ ಹೊರಬಿದ್ದ ನಂತರ ಅಲ್ಲಿಂದ ನೇರವಾಗಿ ಅಮೇರಿಕಾಗೇ ತೆರಳಲು ನಿದ೯ರಿಸಿ ಮುಂಗಡವಾಗಿ ವಿಮಾನದ ಟಿಕೇಟ್ ಕಾಯ್ದಿರಿಸಿದ್ದರು.

ಹಿಂದಿನ ಎರಡು ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪ್ರದಶ೯ನ ತೀರಾ ಕಳಪೆಯಾಗಿತ್ತು. 1975 ರಲ್ಲಿ ಕೇವಲ ಓಂದು ಪಂದ್ಯವನ್ನು ಮಾತ್ರ ಭಾರತ ಜಯಿಸಿತ್ತು, ಅದು ಬಾಲಂಗೋಚಿ ಇಸ್ಟ್ ಆಪ್ರಿಕಾದ ವಿರುದ್ದ. 1979 ರ ವಿಶ್ವಕಪ್ ನಲ್ಲಿ ಆಗ ಟೆಸ್ಟ್ ಮಾನ್ಯತೆಯನ್ನು ಕೂಡ ಪಡೆಯದ , ಹೊಸದಾಗಿ ವಿಶ್ವಕಪ್ ಅಖಾಡಕ್ಕೆ ಕಾಲಿಟ್ಟ ನಮ್ಮ ನೆರೆಯ ಪುಟ್ಟ ರಾಷ್ಟ್ರ ಶ್ರೀಲಂಕಾ ವಿರುದ್ದ ಸಹ ಭಾರತ ಸೋಲನ್ನು ಅನುಭವಿಸಿತು. ಹಾಗೇಯೆ ಭಾರತ ವೇಸ್ಟಇಂಡೀಸ್ ವಿರುದ್ದ 9 ವಿಕೇಟ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸಹ 8 ವಿಕೇಟ್ ಗಳ ಹೀನಾಯ ಸೋಲು ಅನುಭವಿಸಿತ್ತು. ವಿಶ್ವಕಪ್ ಸಾಧನೆ ಕುರಿತು ಹಿಂತಿರುಗಿ ನೋಡಿದರೆ ಕಪ್ ಗೆಲ್ಲುವ ಕಿಂಚಿತ್ತೂ ಬರವಸೆ ಇರಲಿಲ್ಲ.

ವೆಸ್ಟಇಂಡೀಸ್, ಇಂಗ್ಲೇಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಗೆಲ್ಲುವ ಪೇವರಿಟ್ ತಂಡಗಳೆಂದು ಪರಿಗಣಿಸಲ್ಪಟ್ಟಿದ್ದವು. ಭಾರತ ವಿಶ್ವ ಕಪ್ ಗೆಲ್ಲುತ್ತದೇಂಬ ಬರವಸೆ ಖಂಡಿತ ಯಾರೊಬ್ಬರಿಗೂ ಇರಲಿಲ್ಲವೆನೋ. ದಿ. ವಿಸ್ಡನ್ ಪತ್ರಿಕೆಯ ಎಡಿಟರ್ ಡೇವಿಡ್ ಪ್ರೀತ್ ” ಭಾರತ ಆರಂಭಿಕ ಹಂತದಲ್ಲಿಯೇ ಸೋತು ವಿಶ್ವಕಪ್ ಪಂದ್ಯಾವಳಿಯಿಂದ ಹೋರಬಿಳಲಿದೆ “ಎಂದು ಬರೆದಿದ್ದರು. ವಿಶ್ವಕಪ್ ಪಂದ್ಯಾವಳಿ ಮುನ್ನ ನಡೆದ ಮೂರು warm up ಪಂದ್ಯಗಳಲ್ಲೂ ಸಹ ಭಾರತ ಸೋಲು ಅನುಭವಿಸಿತ್ತು.

ಆದರೆ ಎರಡು ಭಾರಿ ವಿಶ್ವ ಕಪ್ ಜಯಿಸಿದ ವೆಸ್ಟ್ ಇಂಡೀಸ್ ವಿರುದ್ದ ಪ್ರಥಮ ಪಂದ್ಯದಲ್ಲೇ 34 ರನ್ ಗಳಿಂದ ಜಯ ಗಳಿಸುವ ಮೂಲಕ ಭಾರಿ ಶಾಕ್ ನೀಡಿತ್ತು. ನಂತರ ಜಿಂಬಾಬ್ವೆ ವಿರುದ್ದ ಸಹ 5 ವಿಕೇಟ್ ಗೆಲುವಿನ ಮೂಲಕ ಭಜ೯ರಿಯಾಗಿಯೆ ಭಾರತ ವಿಶ್ವಕಪ್ ಗೆ ಎಂಟ್ರಿ ಕೊಟ್ಟಿತ್ತು. ಆದರೆ ನಂತರ ಭಾರತ ತನ್ನ ಅದೆ ಹಳೆ ಚಾಳಿಯನ್ನು ಮುಂದುವರಿಸಿತ್ತು.

ಆಸ್ಟ್ರೇಲಿಯಾ ವಿರುದ್ದ 162 ರನ್ ಮತ್ತು ವೆಸ್ಟ್ ಇಂಡೀಸ್ ವಿರುದ್ದ 66 ರನ್ ಗಳ ಅಂತರದಿಂದ ಹೀನಾಯವಾಗಿ ಸೋತು ನಿರಾಸೆ ಅನುಭವಿಸಿತ್ತು. 1975 ಮತ್ತು 1979 ರ ವಿಶ್ವಕಪ್ ನಂತೆಯೆ ಭಾರತ ಪ್ರಾರಂಭಿಕ ಹಂತದಲ್ಲಿಯೆ ಹೊರಬಿಳುವ ಆತಂಕದಲ್ಲಿತ್ತು. ಸೆಮಿಫೈನಲ್ ಪ್ರವೇಶಿಸಬೆಕಾದರೆ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ಉತ್ತಮ ರನ್ ರೇಟ್ ನೊಂದಿಗೆ ಗೆಲ್ಲಬೆಕಾದ ಅನಿವಾಯ೯ತೆಯಲ್ಲಿತ್ತು. ತಂಡ ಭಾರಿ ಓತ್ತಡದ ಸ್ಥಿತಿಯಲ್ಲಿತ್ತು.

ಅಂದು ಜೂನ್ 18, 1983,

ಟನ್೯ಬ್ರಿಡ್ಜ್ ವೇಲ್ಸ್ ನೇವಿಲ್ ಮೈದಾನದಲ್ಲಿ ಜಿಂಬಾಬ್ವೇ ಎದುರಿನ ಪಂದ್ಯ.

ಇದು ಭಾರತಕ್ಕೆ ಮಾಡು ಇಲ್ಲವೆ ಮಡಿ ಪಂದ್ಯ. ಬರಿ ಗೆಲ್ಲುವುದು ಮಾತ್ರವಲ್ಲ. ಉತ್ತಮ ರನ್ ರೇಟ್ ಆದಾರದ ಮೇಲೆ ಗೆಲುವು ಸಾಧಿಸಬೇಕಾದ ಅನಿವಾಯ೯ತೆ ಬೇರೆ. ಆರಂಭಿಕರಾಗಿ ಕಣಕ್ಕಿಳಿದ ಗವಾಸ್ಕರ್ ಮತ್ತು ಶ್ರೀಕಾಂತ ಇಬ್ಬರೂ ಸೋನ್ನೆ ಸುತ್ತಿದ್ದರು. ಅಮರನಾಥ 5, ಸಂದೀಪ ಪಾಟೀಲ 1 ಮತ್ತು ಯಸ್ಪಾಲ್ ಶಮ೯ 9 ರನ್ ಗೆ ಔಟಾಗಿ ಪೆವಿಲಿಯನ್ ಸೇರಿದ್ದರು. 17 ರನ್ ಗೆ 5 ವಿಕೇಟ್ ಕಳೆದುಕೋಂಡು ದಯನೀಯ ಸ್ಥಿತಿಯಲ್ಲಿತ್ತು.

ಭಾರತೀಯ ಡ್ರೆಸಿಂಗ್ ರೂಮನಲ್ಲಿ ಕರಾಳ ಮೌನ. ತಂಡದ ಮೋತ್ತ 50 ರ ಅಂಕಿ ದಾಟುವುದು ಕೂಡ ಅನುಮಾನವಾಗಿತ್ತು. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ ಕಪಿಲ್ ದೇವ್ ನೆಲ ಕಚ್ಚಿ ನಿಂತು ಹೋರಾಟ ನಡೆಸಿದರು. ನಂತರ 78 ರನ್ ಗೇ 7 ವಿಕೇಟ್ ಕಳೆದುಕೋಂಡಿತ್ತು. ಓಂದು ಕಡೆ ಸಾಲು ಸಾಲಾಗಿ ವಿಕೇಟ್ ಬೀಳುತಿದ್ದರೆ, ಇನ್ನೋಂದು ಕಡೆ ಬಂಡೆಗಲ್ಲಿನಂತೆ ನಿಂತು ಸಿಡಿಲಿನಂತ ಬ್ಯಾಟಿಂಗ್ ಪ್ರದಶಿ೯ಸಿದರು. 138 ಎಸೆತಗಳಲ್ಲಿ ಅಮೂಲ್ಯ 175(6 ಸಿಕ್ಸ್ ,16 ಬೌಂಡರಿ)ರನ್ ಬಾರಿಸಿ ತಂಡದ ಮೋತ್ತವನ್ನು 266 / 8 ಕ್ಕೆ ತಂದು ನಿಲ್ಲಿಸಿದರು.

ಸಯದ್ ಕಿಮಾ೯ನಿಯೋಂದಿಗೆ 9 ನೇ ವಿಕೇಟ್ ಗೆ 126 ರನ್ ಸೇರಿಸಿದರು. ಇದರಲ್ಲಿ ಸಯ್ಯದ್ ಕಿಮಾ೯ನಿ ಬ್ಯಾಟ್ ನಿಂದ ಬಂದಿದ್ದು ಕೇವಲ 24 ರನ್ ಮಾತ್ರ . ಬಜ೯ರಿ ಬ್ಯಾಟಿಂಗ್ ಮೂಲಕ ಯಾರೂ ಊಹಿಸದ ರೀತಿಯಲ್ಲಿ ಸೆಮಿಫೈನಲ್ ಗೆ ತೆರಳುವ ಆಸೆಯನ್ನು ಕಪಿಲ್ ಜೀವಂತವಾಗಿರಿಸಿದರು. ಈ ಪಂದ್ಯದಲ್ಲಿ ಭಾರತಕ್ಕೆ 31 ರನ್ ಗಳ ಅಮೋಘ ಗೆಲುವು ದೊರೆಯಿತು. ಈ ಪಂದ್ಯದ ಗೆಲುವು, ಕಪಿಲ್ ಅವರ ಕೆಚ್ಚೇದೆಯ ಆಟ ಭಾರತೀಯ ಪಾಳೆಯದಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟು ಹಾಕಿತು ಎನ್ನಬಹುದು.

ಟಿ. ವಿ ಯಲ್ಲಿ ಈ ಪಂದ್ಯ ಪ್ರಸಾರವಾಗದ ಕಾರಣ ಯಾರಿಗೂ ಕಪಿಲದೇವರವರ ಈ ಆಟವನ್ನು ವೀಕ್ಷಿಸಲು ಸಾಧ್ಯವಾಗಿಲ್ಲ. ಅಂದು ಕ್ರಿಕೇಟ್ ಈಗಿನಷ್ಟು ವಾಣೀಜ್ಯೀಕರಣ ಹೋಂದಿರದ ಕಾರಣ ಕ್ರಿಕೇಟ್ ಪಂದ್ಯಾವಳಿ ಪ್ರಸಾರಕ್ಕೆ ಅಷ್ಟೋಂದು ಪ್ರಾಮುಖ್ಯತೆ ಯಾಗಲಿ, ಪ್ರಸಾರಕ್ಕೆ ಅಗತ್ಯ ಸೌಲಭ್ಯಗಳು ಕೂಡ ಇರಲಿಲ್ಲ. ಆಗ ಕ್ರಿಕೇಟ್ ಪ್ರಸಾರ ಮಾಡುತಿದ್ದುದು ಬಿ. ಬಿ. ಸಿ ಮಾತ್ರ. ಅವರಲ್ಲಿ ಕೇವಲ ಏರಡು TV crew set ಗಳಿದ್ದವು. ಆದರೇ ಅದೇ ದಿನ ಓಟ್ಟು 4 ಪಂದ್ಯಗಳು ನಡೆಯುತಿತ್ತು.

ಓಂದು ವಿಂಡಿಸ್ ಮತ್ತು ಆಸ್ಟ್ರೇಲಿಯಾ ನಡುವೆ. ಆಗ ಇವೆರಡು ತಂಡ ಬಲಿಷ್ಟವಾಗಿರುವುದರಿಂದ ಪ್ರಸಾರ ಮಾಡದೇ ಇರುವಂತಿರಲಿಲ್ಲ. ಇನ್ನೋಂದು ಇಂಗ್ಲೇಂಡ್ ಮತ್ತು ಪಾಕಿಸ್ತಾನದ ನಡುವೆ. ಇಂಗ್ಲೇಂಡ್ ವಿಶ್ವ ಕಪ್ ಪಂದ್ಯಾವಳಿ ಆಯೋಜನೆ ಮಾಡುತ್ತಿರುವುದರಿಂದ ಪ್ರಸಾರವನ್ನು ತಪ್ಪಿಸುವ ಮಾತಿರಲಿಲ್ಲ. ಭಾರತ ವಿಶ್ವ ಕ್ರಿಕೇಟ್ ನಲ್ಲಿ ಜನಪ್ರಿಯವಾಗಿರದ ಕಾರಣ ಪಂದ್ಯ ದಲ್ಲಿ ರೋಚಕತೆಯೆನು ಇರದು ಎಂದು ನಿದ೯ರಿಸಿದ ಬಿ. ಬಿ. ಸಿ ಪಂದ್ಯ ಪ್ರಸಾರಕ್ಕೆ ಕ್ರಮಕೈಗೋಂಡಿರಲಿಲ್ಲ. ಆದರೆ ಕಪಿಲ ಅಂದು ಅದ್ಬತವಾಗಿ ಬ್ಯಾಟಿಂಗ್ ಮಾಡಿ ವಿಶ್ವದ ಗಮನ ಸೆಳೆದಿದ್ದರು.ಇದನ್ನು ಕಣ್ತುಂಬಿಕೋಳ್ಳುವಲ್ಲಿ ಭಾರತೀಯ ಕ್ರಿಕೇಟ್ ಅಭಿಮಾನಿಗಳು ಮಾತ್ರ ವಂಚಿತರಾದರು.

ನಂತರದ ಪಂದ್ಯ ಬಲಿಷ್ಠ ಆಸ್ಟ್ರೇಲಿಯಾದ ಏದುರು…!

ಮೊದಲು ಬ್ಯಾಟಿಂಗ್ ಮಾಡಿದ ಭಾರತ 248 ರನ್ ಗಳ ಗುರಿ ನೀಡಿತು. ನಂತರ ಮದನ ಲಾಲ್ ಮತ್ತು ರೋಜರ್ ಬಿನ್ನಿ ಆಸ್ಟ್ರೇಲಿಯಾದ ಬ್ಯಾಟ್ಸಮನ್ ಗಳ ಮೇಲೆ ಯಾವ ರೀತಿ ಮುರಕೋಂಡು ಬಿದ್ದರು ಎಂದರೆ ಆಸ್ಟ್ರೇಲಿಯಾ ಕೇವಲ 130 ರನ್ ಗೆ ಆಲೌಟ್ ಆಗಿತ್ತು. ಭಾರತಕ್ಕೆ ದೊರಕಿದ್ದು 118 ರನ್ ಗಳ ಅಭೂತಪೂರ್ವ ಗೆಲುವು.

ಸೆಮಿಫೈನಲ್ ಪ್ರವೇಶಿಸಲು ಎನೇನು ದುಸ್ಸಾಹಸ ಮಾಡಬೇಕೋ ಎಲ್ಲವನ್ನು ನಮ್ಮವರು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದರು.

ಸೇಮಿಪೈನಲ್ ನಲ್ಲೂ ಕೂಡ ಇಂಗ್ಲೆಂಡ್ ವಿರುದ್ದ 6 ವಿಕೇಟ ಗಳಲ್ಲಿ ಭಜ೯ರಿ ಜಯ ಗಳಿಸುವ ಮೂಲಕ ಪೈನಲ್ ಗೆ ದಾಂಗುಡಿ ಇಟ್ಟಿತು. ಡೇವಿಡ್ ಗೋವರ್, ಮೈಕ್ ಗ್ಯಾಟಿಂಗ ವಿಕೇಟ ಪಡೆದ ಮೋಹಿಂದರ್ ಅಮರನಾಥ, 46 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1983 ರ ವರೆಗೆ ದೈತ್ಯ ವಿಂಡಿಸ್ ನವರದ್ದೇ ಪಾರುಪತ್ಯವಾಗಿತ್ತು. 1975 ಮತ್ತು 1979 ರಲ್ಲಿ ಸತತ ಎರಡು ಬಾರಿ ವಿಶ್ವಕಪ್ ಗೆಲ್ಲುವ ಮೂಲಕ ದೈತ್ಯ ಶಕ್ತಿಯಾಗಿ ವಿಶ್ವ ಕ್ರಿಕೇಟ್ ಎದುರು ವಿಜ್ರಂಭಿಸುತಿದ್ದರು. 1973 ರ ವಿಶ್ವಕಪ್ ನಲ್ಲಿ ಸಹ ತಮ್ಮದೆ ಗೆಲುವು ಪಕ್ಕಾ ಎಂಬ ಹುಮ್ಮಸ್ಸಿನಲ್ಲಿದ್ದರು ಕೇರೆಬಿಯನ್ನರು. ವಿಂಡಿಸ್ ಎಂಡಿ ರಾಬರ್ಟ್, ಹೋಲ್ಡಿಂಗ್, ಮಾಲ್ಕಂ ಮಾಷ೯ಲ್ ರಂಥಹ ಭಯಾನಕ ವೇಗದ ಬೌಲರ್ ಗಳ ಪಡೆಯನ್ನು ಹೊಂದಿತ್ತು. ಅವರು ಎಷ್ಟು ಭಯಾನಕವಾಗಿ ಚೆಂಡು ಎಸೆಯುತಿದ್ದರು ಎಂದರೆ, ಹಿಂದಿನ ಪಂದ್ಯದಲ್ಲಿ ಮಾಲ್ಕಂ ಮಾಷ೯ಲ್ ರವರ short pitch ಎಸೆತವನ್ನು ದಿಲೀಪ್ ವೆಂಗಸಕಾ೯ರ್ glide ಮಾಡಲು ಹೋಗಿ ಹೋಡೆತ ತಿಂದು ಎಳೆಂಟು ಹೋಲಿಗೆ ಹಾಕಿಸಿಕೋಂಡು ಇಂಗ್ಲೇಂಡಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತಿದ್ದರು.

ಕಪಿಲ ತಂಡದ ಸದಸ್ಯರನ್ನು ಹುರಿದುಂಬಿಸುತ್ತಾ, ” ಈ ಹಿಂದೆ ಓಮ್ಮೇ ವಿಂಡಿಸ್ ಸೋಲಿಸಿದ್ದ ನಮಗೆ ಮತ್ತೇ ಅವರನ್ನು ಸೋಲಿಸುವುದು ಕಷ್ಟವಾಗಲಾರದು ” ಎಂದು ಟೀಮ್ ಮೀಟಿಂಗ್ ನಲ್ಲಿ ಹೇಳಿದರು. ಇದನ್ನು ಕೇಳಿದ ಸಹ ಆಟಗಾರರು ಆ ಸಂದಭ೯ದಲ್ಲಿ ಕಪಿಲ್ ದೇವ ಅವರನ್ನು ಶುದ್ದ ಪಾಗಲ್ ಎಂದೆ ಕರೆದಿದ್ದರು. ವಿಂಡೀಸ್ ನಂತಹ ಬಲಿಷ್ಟ ಬೌಲಿಂಗ್ ಮತ್ತು ಬ್ಯಾಟಿಂಗ್ ಎದುರು ಗೆಲುವು ಎಂಬ ಪದವನ್ನು ಉಹಿಸಿಕೋಳ್ಳುವ ಪರಿಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಇತ್ತ ಭಾರತೀಯ ಕ್ರಿಕೇಟ್ ಅಭಿಮಾನಿಗಳೂ ಸಹ ಹೇಳ ಹೆಸರಿಲ್ಲದ ನಮ್ಮವರು ಪೈನಲ್ ಗೇರಿದ್ದೇ ತಂಡದ ಮಹತ್ಸಾಧನೆ, ಬಲಾಡ್ಯ ವಿಂಡಿಸ್ ವಿರುದ್ದ ಪೈನಲ್ ಗೆಲುವಿನ ಭ್ರಮೆಯಲ್ಲೇನು ಇರಲಿಲ್ಲ.

ಅಂದು ಜೂನ್ 25, 1983

ಕ್ರಿಕೇಟ್ ಕಾಶಿ ಎಂದೇ ಕರೆಯಲ್ಪಡುವ ಲಾಡ್ಸ್ ನಲ್ಲಿ ವಿಂಡೀಸ್ ವಿರುದ್ದ ಪೈನಲ್ ಹಣಾಹಣಿ.

ವಿಂಡಿಸ್ ತಂಡ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೆ ಭಾರತೀಯ ಆಟಗಾರರು ತುಂಬಾ ಒತ್ತಡದಲ್ಲಿದ್ದರು. ಕಪಿಲ್ ದೇವ ಎಷ್ಟೋಂದು ಒತ್ತಡದಲ್ಲಿದ್ದರು ಎಂದರೇ ಕಪಿಲ್ ಪತ್ನಿ ರೋಮಿ ಕಪಿಲ್ ಹೇಳಿದಂತೆ, ಪೈನಲ್ ದಿನ ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ವೆಸ್ಟ್ ಲ್ಯಾಂಡ್ ಹೋಟೇಲ್ ನ ಕಿಟಕಿ ಕಡೆ ಮುಖ ಮಾಡಿ ನಿಂತಿದ್ದರಂತೇ ಕಪಿಲ್. ನಂತರ ಟಾಸ್ ಸೋತು ಬ್ಯಾಟಿಂಗ್ ಗೆ ನೂಕಲ್ಪಟ್ಟ ಭಾರತದ ಬ್ಯಾಟಿಂಗ್ ಮಾತ್ರ ತೀರಾ ನಿರಾಶದಾಯಕವಾಗಿತ್ತು.

ತಂಡದ ಮೊತ್ತ ಕೇವಲ 2 ರನ್ ಆಗಿರುವಾಗ ಸುನಿಲ್ ಗವಾಸ್ಕರ್ ವಿಕೆಟ್ ಉರುಳಿತ್ತು. ಅಂದಿನ ಆಕ್ರಮಣಕಾರಿ ಓಪನಿಂಗ್ ಬ್ಯಾಟ್ಸಮನ್ ಶ್ರೀಕಾಂತ 1 ಸಿಕ್ಸ್ , 7 ಬೌಂಡರಿ ಗಳನ್ನೋಳಗೋಂಡ ಅಮೂಲ್ಯ 38 ರನ್ ಬಾರಿಸಿದ್ದರು. ರಾಬರ್ಟ್ ಬೌಲಿಂಗನಲ್ಲಿ ಸಿಕ್ಸರ್, ಬೌಂಡರಿ ಬಾರಿಸಿ ಪಂದ್ಯದ ಲಯವನ್ನೇ ಬದಲಿಸಿದ್ದರು. ಮೋಹಿಂದರ ಅಮರನಾಥ 26, ಸಂದೀಪ್ ಪಾಟೀಲ್ 27 ರನ್ ಬಾರಿಸಿದ್ದು ಬಿಟ್ಟರೆ ಇನ್ಯಾರ ಬ್ಯಾಟಿನಿಂದಲೂ ಉತ್ತಮ ರನ್ ಬರಲಿಲ್ಲ. ಮಾಷ೯ಲ್ 2/24, ಅ್ಯಾಂಡಿ ರಾಬರ್ಟ್ 3/32, ಜೋಲ್ ಗಾನ೯ರ್ 1/24 ರವರ ಮಾರಕ ದಾಳಿಯಿಂದ ಭಾರತ 54.4 ಓವರ್ ಗಳಲ್ಲಿ ಕೇವಲ 183 ರನ್ ಗೆ ಆಲೌಟ್ ಆಯಿತು.

ಗೋಡ೯ನ್ ಗ್ರೀನಿಜ್, ಡೇಸಮಂಡ್ ಹೇಯ್ನ್ಸ್ , ವಿವಿಯನ್ ರಿಚಡ೯ಸನ್, ಮತ್ತು ಕ್ಲೈವ್ ಲಾಯ್ಡ್ ರಂತವರನ್ನು ಹೊಂದಿದ ವಿಂಡೀಸ್ ಬ್ಯಾಟಿಂಗ್ ಪಡೆ ನೀರು ಕುಡಿದಷ್ಟೇ ಸುಲಭವಾಗಿ ರನ್ ಚಚ್ಚಿ ಸತತ ಮೂರನೆ ಬಾರಿ ವಿಶ್ವಕಪ್ ಗೆದ್ದು ತಮ್ಮ ವಿಶ್ವ ವಿಜಯ ಯಾತ್ರೆ ಯನ್ನು ಮುಂದುವರಿಸಲಿದ್ದಾರೆ ಎಂದೆ ಬಾವಿಸಲಾಗಿತ್ತು.

ಭಾರತೀಯರು ಪಿಲ್ಡಿಂಗ್ ಗೆ ತೆರಳುವ ಪೂವ೯ದಲ್ಲಿ ಕಪೀಲ ದೇವ ತಂಡದ ಸದಸ್ಯರೊಂದಿಗೆ ಮಾತನಾಡುತ್ತಾ ” If this is not a winning total(183) ,its definitely a fighting total ” ಎಂದು ತಂಡದ ಸದಸ್ಯರಲ್ಲಿ ಹೋರಾಟದ ಕಿಚ್ಚು ಹೋತ್ತಿಸಿದ್ದರು.

” If we give our best for three hours, we can live with this memory for the rest of our lives ಎಂಬ ಮಾತಿನ ಮೂಲಕ ” The most inspirational captain” ಎಂದು ಕರೆಯಲ್ಪಡುವ ಕಪಿಲ್ ದೇವ ತಂಡದ ಸದಸ್ಯರನ್ನು ಹುರಿದಂಬಿಸಿದ್ದರು.

ವೆಸ್ಟಇಂಡಿಸ್ ಕೂಡ ಉತ್ತಮ ಆರಂಭ ಕಂಡಿರಲಿಲ್ಲ. ವಿಂಡೀಸ್ ನ ಮೊತ್ತ ಕೇವಲ 5 ರನ್ ಆಗಿರುವಾಗ ಬಲವಿಂದರ್ ಸಂದು, ಗೋಡ೯ನ್ ಗ್ರೀನಿಜ್ ರವರ ಆಪ್ ಸ್ಟಂಪ್ ಎಗರಿಸಿದ್ದರು. ನಂತರ ಡೇಸ್ಮಂಡ್ ಹೇಯ್ನ್ಸ್ ಜೊತೆಗೂಡಿದ ವಿವಿಯನ್ ರಿಚಡ೯ಸನ್ ಅದ್ಬುತವಾಗಿ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 51/1 ಕ್ಕೆ ಎರಿಸಿದರು . 13 ರನ್ ಗಳಿಸಿದ ಡೇಸ್ಮಂಡ್ ಹೇಯ್ನ್ಸ್ , ಮದನ ಲಾಲ್ ಬೌಲಿಂಗ್ ನಲ್ಲಿ ರೋಜರ್ ಬಿನ್ನಿಗೆ ಕ್ಯಾಚ್ ನೀಡಿದರು.

ಬ್ಯಾಟಿಂಗ್ ದಿಗ್ಗಜ ರಿಚಡ೯ಸನ್ 28 ಬಾಲ್ ನಲ್ಲಿ 33 ರನ್ ಬಾರಿಸುವ ಮೂಲಕ ಪಂದ್ಯವನ್ನು ವಿಂಡೀಸ್ ಕಡೆ ತಿರುಗಿಸಿ ನಿಲ್ಲಿಸಿದ್ದರು. ರಿಚಡ೯ಸನ್ ಹಿಗ್ಗಾ ಮುಗ್ಗಾ ಬ್ಯಾಟ್ ಬೀಸಿ ರನ್ ಹೋಡೆಯುತ್ತಿರುವುದನ್ನು ಗಮನಿಸಿದ ಗವಾಸ್ಕರ್ ಪತ್ನಿ ಮಾಷ೯ನೇಲ್, ಭಾರತದ ಸೋಲು ಪಕ್ಕಾ ಎಂದು ತಿಳಿದು ಮ್ಯಾಚ್ ನೋಡುವುದನ್ನು ಬಿಟ್ಟು ನಿರಾಶಳಾಗಿ ಸೀಮಾರೇಖೆಯ ಹತ್ತಿರ ಕ್ಷೇತ್ರ ರಕ್ಷಣೆ ಮಾಡುತಿದ್ದ ಸಂದೀಪ ಪಾಟೀಲ ಹತ್ತಿರ ನಾನು ಶಾಪಿಂಗ್ ಗೆ ಹೋಗುತ್ತಿರುವ ವಿಷಯವನ್ನು ಪತಿ ಗವಾಸ್ಕರ್ ಗೆ ತಿಳಿಸಿ ಎಂದು ಹೇಳಿ ಮೈದಾನದಿಂದ ಹೊರನಡೆದಿದ್ದರು.

ಮದನಲಾಲ ಓವರ್ ನಲ್ಲಿ ಸತತ ಬೌಂಡರಿ ಗಳ ಸುರಿಮಳೆ ಗೈಯ್ಯುತ್ತಿರುವುದನ್ನು ಕಂಡ ಕಪಿಲ್ ” ಮಂದಿ ಪಾ,, ಸ್ವಲ್ಪ ಬ್ರೇಕ್ ತಗೋ, ಕೇಲವು ಓವರ್ ಗಳ ನಂತರ ಮತ್ತೆ ಬಾಲ್ ಎಸೆಯುವಂತೆ ” ಎಂದು ಮದನ ಲಾಲ್ ಗೆ ಹೇಳಿದರು. ಆದರೆ ನಾಯಕನ ಮಾತು ಕೇಳದ ಮದನಲಾಲ ” ಈ ಹಿಂದೆ ರಿಚಡ೯ಸನ್ ಅವರನ್ನು ಔಟ್ ಮಾಡಿದ್ದೇನೆ, ಕೇವಲ ಓಂದು ಓವರ ಕೋಡಿ ಸಾಕು. ರಿಚಡ೯ಸನ್ ರವರನ್ನು ಔಟ್ ಮಾಡುತ್ತೇನೆ ಎಂದು ಬರವಸೆಯ ಮಾತನಾಡುತ್ತಾರೆ. ಇದಕ್ಕೆ ಓಲ್ಲದ ಮನಸ್ಸಿನಿಂದ ಕಪಿಲ ಸಮ್ಮತಿಸುತ್ತಾರೆ ಕೂಡ.

ನಂತರ ನಡೆದದ್ದು ಮಾತ್ರ ಇತಿಹಾಸ.

ಮದನ ಲಾಲ ಏಸೆತವನ್ನು ವಿವಿಯನ್ ರಿಚಡ೯ಸನ್ ಹುಕ್ ಮಾಡಲು ಹೋಗಿ ಎಡವುತ್ತಾರೆ. ಚೆಂಡು ಆಗಸದೆತ್ತರಕ್ಕೇ ಚಿಮ್ಮುತ್ತದೆ. ಹರಿಯಾಣದ ಹರಿಕೇನ್ ಎಂದೇ ಕರೆಯಲ್ಪಡುವ ಕಪಿಲ ದೇವ ಮಿಡ್ ವಿಕೇಟ ನಿಂದ ಹಿಮ್ಮುಖವಾಗಿ ಒಂದೆ ಸಮನೆ ಮೇಲಕ್ಕೇ ನೋಡುತ್ತಾ ಡೀಪ್ ಸ್ಕ್ವೇರ್ ಲೇಗ್ ನತ್ತ ಓಡಲಾರಂಬಿಸುತ್ತಾರೆ . ಇತ್ತ ಸೀಮಾ ರೇಖೆಯ ಹತ್ತಿರ ನಿಂತಿದ್ದ ಯಸಪಾಲ್ ಶಮ೯ ಇದು ನನ್ನದೇ ಕ್ಯಾಚ್ ಎಂದು ತಿಳಿದು ಕಪಿಲದೇವಗೆ ಎದುರಾಗಿ ಇನ್ನೋಂದು ದಿಕ್ಕಿನಿಂದ ಓಡಲಾರಂಬಿಸುತ್ತಾರೆ.

ಇಬ್ಬರು ಎಲ್ಲಿ ಡಿಕ್ಕಿ ಹೊಡೆದು ಕ್ಯಾಚ್ ಕೈ ಚೇಲ್ಲುವರೋ ಎಂದು ಗಾಬರಿಗೊಂಡ ಬೌಲರ್ ಮದನ ಲಾಲ್, ” Yash Rukh,, Rukh… You don’t go for the catch……” ಎಂದು ಜೋರಾಗಿ ಕೂಗುತ್ತಿರುತ್ತಾರೆ. ಅಷ್ಟರಲ್ಲಿಯೇ ಕಪಿಲ ಆಗಸದೇತ್ತರಕ್ಕೇ ನೆಗೆದ ಚೆಂಡಿನ ಕೇಳಗೆ ಕೈವೋಡ್ಡಿ ನಿಂತಿರುತ್ತಾರೆ. ಆಗಲೇ Prudential cup ಭಾರತದ ತೆಕ್ಕೆಗೆ ಬಿದ್ದಿರುತ್ತದೆ ಎಂದರೆ ತಪ್ಪಾಗಲಾರದು.

ಇದು ಎಷ್ಟೋಂದು ಕಠಿಣವಾದ ಕ್ಯಾಚ್ ಆಗಿತ್ತು ಎಂದರೇ, ನಂತರದಲ್ಲಿ ಖುದ್ದು ರಿಚಡ೯ಸನ್ ಅವರೇ, ಕಪೀಲ ಹೊರತಾಗಿ ಇನ್ಯಾರಿಂದಲೂ ಅದನ್ನು ಕ್ಯಾಚ್ ಆಗಿ ಪರಿವತಿ೯ಸಲು ಸಾದ್ಯವಿಲ್ಲ ಎಂದಿದ್ದರು. ಆ ಕ್ಯಾಚ್ ಹಿಡಿದ ಸಂದಭ೯ ಎಷ್ಟು ಪ್ರಮುಖ ಮತ್ತು ಬಾವನಾತ್ಮಕ ಸನ್ನಿವೇಶ ವೆಂದರೆ ದಿಲೀಪ್ ವೇಂಗಸಕಾ೯ರ್ ಇಗಲೂ ವಿಡಿಯೋ ರಿಪ್ಲೇಯಲ್ಲಿ ಕೂಡ ಆ ಮ್ಯಾಚ್ ನೋಡುವುದಿಲ್ಲವಂತೆ. ಎಕೆಂದರೆ ಕಪಿಲ್ ಎಲ್ಲಿ ರಿಚಡ೯ಸನ್ ಕ್ಯಾಚ್ ಬಿಟ್ಟು ಬಿಡುತ್ತಾರೋ ಎಂಬ ವಿಚಿತ್ರ ಪೋಬೀಯಾ ಈಗಲೂ ಅವರನ್ನು ಕಾಡುವುದಂತೆ

ನಂತರ ಓಂದರ ಹಿಂದೊಂದರಂತೆ ಲಾರಿ ಗೋಮ್ಸ್ ಮತ್ತು ಕ್ಲೈವ್ ಲಾಯ್ಡ್ ವಿಕೇಟ್ ಉರುಳಿತು. 16 ರನ್ ಅಂತರದಲ್ಲಿ ವಿಂಡೀಸ್ ನ ಮೂರು ಅಮೂಲ್ಯ ವಿಕೇಟ್ ಪತನಗೋಂಡಿದ್ದವು. 76 ಕ್ಕೆ 6 ವಿಕೇಟ್ ಕಳೆದುಕೋಂಡು ವಿಂಡಿಸ್ ಸೋಲನ್ನು ಮೈಮೇಲೆ ಎಳೆದುಕೋಂಡು ಓದ್ದಾಡುತ್ತಿರುವಾಗ ಪಿ. ಜೆ ಡೂಜನ್ ಮತ್ತು ಮಾಷ೯ಲ್ ಉತ್ತಮವಾಗಿ ಬ್ಯಾಟ್ ಬೀಸುವ ಮೂಲಕ 43 ರನ್ ಸೇರಿಸಿ ತಂಡದ ಮೊತ್ತವನ್ನು 126 ಕ್ಕೆ ತಂದು ನಿಲ್ಲಿಸಿದರು.

ಇವರಿಬ್ಬರು ಭಾರತದ ಗೆಲುವಿಗೆ ಅಡ್ಡಗಾಲಾಗಬಹುದೆಂದು ಅರಿತ ಮೋಹಿಂದರ್ ಅಮರನಾಥ ಪಿ. ಜೆ ಡೂಜನ್ ಮತ್ತು ಮಾಷ೯ಲ್ ವಿಕೆಟ್ ಉರುಳಿಸಿ ಭಾರತವನ್ನು ವಿಜಯದ ಬಾಗಿಲಿಗೆ ತಂದು ನಿಲ್ಲಿಸಿದರು. 4 ರನ್ ಗಳಿಸಿದ ಎಂಡೀ ರಾಬರ್ಟ್ ರನ್ನು ಕಪಿಲ್ ದೇವ ಏಲ್. ಬಿ ಬಲೆಗೆ ಕೆಡವಿದರು. ಜೋಲ್ ಗಾನ೯ರ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಮೋಹಿಂದರ್ ಅಮರನಾಥ ಎಸೆದ ಚೆಂಡು ಮೈಕಲ್ ಹೋಲ್ಡಿಂಗ್ ಪ್ಯಾಡ್ ಗೆ ಬಡಿಯಿತು. ಓಕ್ಕೂರಲಿನಿಂದ ಎಲ್. ಬಿ ಗಾಗಿ ಮನವಿ ಮಾಡಿದರು.

ಅಂಪಾಯರ್ ಔಟ ಎಂದು ಕೈ ಮೇಲಕ್ಕೇ ಎತ್ತುತಿದ್ದಂತಎತ್ತುತಿದ್ದಂತೆ ಭಾರತ ಕ್ರಿಕೇಟ್ ನ ವಿಶ್ವ ಸಾಮ್ರಾಟನಾಗಿ ಹೋರಹುಮ್ಮಿತು. 24609 ಪ್ರೇಕ್ಷಕರಿಂದ ತುಂಬಿದ ಕ್ರೀಡಾಂಗಣದಲ್ಲಿ ಭಾರತದ ವಿಜಯ ಧ್ವಜ ಹಾರಾಡುತಿತ್ತು. 52 ಓವರ್ ಗಳಲ್ಲಿ 140 ರನ್ ಗೆ ವಿಂಡೀಸ್ ಎಲ್ಲ ವಿಕೇಟ್ ಕಳೆದುಕೋಂಡಿತು. ಈ ಮೂಲಕ ಭಾರತಕ್ಕೆ 43 ರನ್ ಗೇಲುವು ದೊರೆಯಿತು. ಭಾರತೀಯ ಕ್ರೀಕೇಟ್ ಅಭಿಮಾನಿಗಳ ಹಷ೯ ಅಂದು ಮುಗಿಲುಮುಟ್ಟಿತ್ತು.

ಉಪನಾಯಕ ಮೋಹಿಂದರ್ ಅಮರನಾಥ 26 ರನ್ ಬಾರಿಸಿದ್ದಲ್ಲದೆ, 7 ಓವರ್ ಎಸೆದು ಕೇವಲ 12 ರನ್ ನೀಡಿ ಡೋಜನ, ಮಾಲ್ಕಂ ಮಾಷ೯ಲ್ ಮತ್ತು ಮೈಕಲ್ ಹೋಲ್ಡಿಂಗ್ ಸೇರಿದಂತೆ ಅಮೂಲ್ಯ ಮೂರು ವಿಕೇಟ್ ಪಡೆದು ಸೇಮಿಪೈನಲ್ ನಂತೆ ಪೈನಲ್ ನಲ್ಲಿ ಕೂಡ ಪಂದ್ಯ ಪುರುಷ ಪ್ರಶಸ್ತಿಗೆ ಪಾತ್ರರಾದರು. ಈ ಅಭೂತಪೂರ್ವ ಗೆಲುವಿನ ನಂತರ ಯು. ಎಸ್ ಟ್ರಿಪ್ ರದ್ದುಗೊಳಿಸಿ ಜುಲೈ 5 ಕ್ಕೇ ದೆಹಲಿ ವಿಮಾನ ನಿಲ್ದಾಣಕ್ಕೆ ಎಲ್ಲ ಆಟಗಾರರು ಆಗಮಿಸುತ್ತಾರೆ. ಎಲ್ಲರಿಗೂ ಅದ್ದೂರಿ ಸ್ವಾಗತ ನೀಡಲಾಗುತ್ತದೆ.

ಅತ್ತ ವೆಸ್ಟಇಂಡೀಸ್ ನ ಈ ಸೋಲು ಎಷ್ಟು ಅಡ್ಡ ಪರಿಣಾಮ ಬೀರಿತು ಅವರ ಮೇಲೆ ಎಂದರೆ, ವಿವಿಯನ್ ರಿಚಡ೯ಸನ್ ಮಾದ್ಯಮವೋಂದರಲ್ಲಿ ಈ ಹಿಂದೆ ಹೇಳಿದಂತೆ ” ಸತತ ಎರಡು ವಿಶ್ವಕಪ್ ಗೆದ್ದ ನಮ್ಮನ್ನು ರಾಜರ ರೀತಿ ಪರಿಗಣಿಸುತಿದ್ದರು, ಎಲ್ಲೇ ಹೋದರು ಕೆಂಪು ಹಾಸಿನ ಸ್ವಾಗತ ನಮಗಾಗಿ ಇರುತಿತ್ತು. ಆದರೆ 1983 ರ ಸೋಲಿನ ನಂತರ 1975 ಮತ್ತು 1979 ರ ಗೆಲುವನ್ನು ಮರೆತು ನಮ್ಮನ್ನು ಎನೋ ದೊಡ್ಡ ತಪ್ಪು ಮಾಡಿದವರಂತೆ ನಮ್ಮನ್ನು ನೋಡುತಿದ್ದರು ” ಎಂದಿದ್ದರು

ಪೈನಲ್ ಸೋಲಿನ ನಂತರ ತಂಡದ ನಾಯಕ ಕ್ಲೈವ್ ಲಾಯ್ಡ್ ನಾಯಕತ್ವಕ್ಕೆ ರಾಜೀನಾಮೆ ನಿದಾ೯ರ ಪ್ರಕಟಿಸಿದರು. ಆಡಳಿತ ಮಂಡಳಿ ಮತ್ತು ಹಿರಿಯ ಆಟಗಾರರು ಮನವೋಲಿಸಿದ ನಂತರವೇ ಅವರು ತಮ್ಮ ನಿದಾ೯ರವನ್ನು ವಾಪಸ್ಸು ಪಡೆದಿದ್ದು.

1983 ರ ಗೆಲುವು ಭಾರತೀಯ ಕ್ರಿಕೇಟ್ ನಲ್ಲಿ ದೊಡ್ಡ ತಿರುವು ಎಂದರೆ ತಪ್ಪಾಗಲಾರದು. ಈ ಗೆಲುವು ಭಾರತೀಯ ಕ್ರಿಕೇಟ್ ನ ದಿಶೆಯನ್ನೇ ಬದಲಿಸಿತು. ಭಾರತಕ್ಕೆ ದೊಡ್ಡ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಗೆಲ್ಲುವ ತಾಕತ್ತು ಇಲ್ಲ ಎಂಬ ಮಾತು ಅಲ್ಲಿಯವರೆಗೆ ಚಾಲ್ತಿಯಲ್ಲಿತ್ತು . ಆ ಸಂದಭ೯ದಲ್ಲಿ ಭಾರತದಲ್ಲಿ ಕ್ರಿಕೇಟ ಕೂಡ ಅಷ್ಟೊಂದು ಜನಪ್ರಿಯ ಕ್ರೀಡೆ ಕೂಡ ಆಗಿರಲಿಲ್ಲ. ಆಗ ಹಾಕಿ ದೇಶದ ಪ್ಯಾಸ್ ನೇಬಲ್ ಸ್ಪೋಟ್ಸ್ ಆಗಿತ್ತು. ಈ ಗೆಲುವು ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು.

ಮುಂಬೈನ ಓಂದು ಚಿಕ್ಕ ಕೋಣೆಯಲ್ಲಿ ಕುಳಿತು ಕಪ್ಪು ಬಿಳುಪು ಟಿವಿಯಲ್ಲಿ ಈ ಐತಿಹಾಸಿಕ ಗೆಲುವನ್ನು ನೋಡಿ ಪ್ರೇರಣೆಗೋಂಡ ಅಂದು 10 ವಷ೯ದ ಪೋರನಾಗಿದ್ದ, ನಾವೆಲ್ಲ ಕ್ರಿಕೇಟ್ ದೇವರು ಎಂದು ಕರೆಯುವ ಸಚಿನ್ ತೆಂಡೂಲ್ಕರ್ ” ಕಪಿಲ್ ದೇವ ಪ್ರುಡೇನ್ಸೀಯಲ್ ಕಪ್ ಎತ್ತಿ ಹಿಡಿದಿರುವುದನ್ನು ನೋಡಿದ ಆ ಕ್ಷಣ ನನ್ನ ಜೀವನದಲ್ಲಿ ಪ್ರಮುಖ ಬದಲಾವಣೆ ತಂದಿತು, ನಾನು ಕೂಡ ಭಾರತಕ್ಕೇ ಮುಂದೆ ಕಪ್ ಗೆದ್ದು ಕೊಡಬೇಕೆಂದು ಅಂದೇ ಅಂದುಕೋಂಡೆ ” ಎಂದಿರುವುದನ್ನು (ಜೂನ್ 25, 2018 ರಂದು ಟ್ವೀಟ್ ಮಾಡುವ ಮೂಲಕ ಇದನ್ನು ನೆನಪಿಸಿಕೋಂಡಿದ್ದರು) ಗಮನಿಸಿದರೆ ಈ ಐತಿಹಾಸಿಕ ಗೆಲುವಿನ ಪರಿಣಾಮದ ಅರಿವಾಗುವುದು.

1983 ರ ಗೆಲುವು ಭಾರತೀಯ ಕ್ರಿಕೇಟ್ ನಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಯಿತು ಎನ್ನಬಹುದು. ಈ ಗೆಲುವಿನ ನಂತರ ಕ್ರಿಕೆಟ್ ನತ್ತ ದೊಡ್ಡ ಮಟ್ಟದಲ್ಲಿ ವಾಣಿಜ್ಯ ಪ್ರಾಯೋಜಕತ್ವ ಹರಿದು ಬಂದು, ಇದು ಕ್ರಿಕೇಟ್ ಬೇಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿತು.1920 ರಿಂದ ನಮ್ಮ ದೇಶದಲ್ಲಿ ಹಾಕಿ ಭಾರಿ ಜನಪ್ರಿಯತೆ ಗಳಿಸಿತ್ತು. ಈ ಐತಿಹಾಸಿಕ ಗೆಲುವಿನಿಂದ ಹಲವು ಯುವಕರು ಕ್ರಿಕೇಟ್ ನತ್ತ ಚಿತ್ತ ಹರಿಸಿದರು. ಈ ಗೇಲುವು ನಂತರದಲ್ಲಿ ಹಲವರು ಕ್ರಿಕೇಟ್ ಹುಚ್ಚಿಗೆ ಬೀಳುವಂತೆ ಮಾಡಿತು.

ಅಂದು ವಿಶ್ವಕಪ್ ಗೆದ್ದ ಸಂದಭ೯ದಲ್ಲಿ BCCI ಇಂದಿನಂತೆ ಶ್ರೀಮಂತ ಸಂಸ್ಥೆ ಯಾಗಿರಲಿಲ್ಲ. ಇಡೀ ವಿಶ್ವಕಪ್ ಆಡಿದ್ದಕ್ಕಾಗಿ ಆಟಗಾರರಿಗೆ ನೀಡಿದ್ದು ಕೇವಲ 7500 ರೂ. ಮಾತ್ರ ಆಗಿತ್ತು. ಕಪ್ ಗೆದ್ದು ಬಂದ ಆಟಗಾರರಿಗೆ ನಗದು ಬಹುಮಾನ ನೀಡಲು ಸಹ ಹಣವಿರಲಿಲ್ಲ. ಅಂದಿನ BCCI ನ ಅಧ್ಯಕ್ಷ NPK ಸಾಳ್ವೆ ದಿಲ್ಲಿಯಲ್ಲಿ ಲತಾ ಮಂಗೇಶ್ಕರ್ ರವರ ಸಂಗೀತ ಕಾಯ೯ಕ್ರಮ ಎಪ೯ಡಿಸಿ 20 ಲಕ್ಷ ರೂ ಸಂಗ್ರಹಿಸಿ ತಂಡದ ಸದಸ್ಯರಿಗೆ ತಲಾ 1 ಲಕ್ಷ ರೂ. ನೀಡಿದರು.

ಅದು ಆ ಸಮಯದಲ್ಲಿ ದೊಡ್ಡ ಮೋತ್ತವೇ ಆಗಿತ್ತು. ಅಂದಿನ ಆಟಗಾರರು ಸಹ ಇಂದಿನಂತೆ ಶ್ರಿಮಂತರಾಗಿರಲಿಲ್ಲ. ಹೋಟೇಲ್ ಬಿಲ್ ಬರಿಸಲು ಸಹ ಕೆಲವೊಮ್ಮೆ ನಮ್ಮಲ್ಲಿ ಹಣವಿರುತ್ತಿರಲಿಲ್ಲ, ಆದರೇ ಪೈನಲ್ ಗೆಲುವಿನ ನಂತರ ಇಂಗ್ಲೇಂಡಿನ ವೆಸ್ಟ್ ಲ್ಯಾಂಡ್ ಹೋಟೇಲ್ ನಲ್ಲಿ ನಡೆದ ಪಾಟಿ೯ಯ ಬಿಲ್ ಅನ್ನು ಯಾರು ಬರಿಸಿದ್ದಾರೆ ಎಂದೂ ಇವರೇಗೂ ನನಗೆ ತಿಳಿದಿಲ್ಲ ಎಂದು ಕಪಿಲ್ ದೇವ ಅವರೇ ಓಮ್ಮೇ ಹೇಳಿದ್ದಾರೆ.

ಈ ಪೈನಲ್ ಪಂದ್ಯದಲ್ಲಿ ನಡೆದ ಹಲವು ಸ್ವಾರಸ್ಯಕರ ಸನ್ನಿವೇಶಗಳಿವೆ. ಬಲವಿಂದರ್ ಸಂದುಗೆ ನಾಯಕ ಕಪಿಲ ದೇವ ಚೆಂಡನ್ನು ನೀಡುತ್ತಾ ಸಂದೀಪ ಪಾಟೀಲ ಕಡೆ ಬ್ಯಾಟ್ಸಮನ್ ಹೋಡೆಯುವಂತೆ ಮಾತ್ರ ಬಾಲ್ ಎಸೇಯಬೇಡ, ಪಾಟೀಲ್ ಪೈನ್ ಲೇಗ್ ಗೆ ನಿಂತರೆ ಔಟ್ ಸ್ವಿಂಗ್ ಬೌಲ ಮಾಡು, ಥಡ್ ೯ ಮೇನ್ ನಲ್ಲಿ ನಿಂತರೆ ಇನ್ ಸ್ವಿಂಗ್ ಬೌಲ ಮಾಡು. ಪಾಟೀಲ ಹತ್ತಿರ ಚೆಂಡು ಹೋದರೆ ನಾವು ಸೋಲುವುದು ಗ್ಯಾರಂಟಿ ಎಂದಿದ್ದರಂತೆ.

ತಂಡದ ಪ್ರತಿಯೊಬ್ಬರು ಸಹ ಈ ಐತಿಹಾಸಿಕ ಗೆಲುವಿಗೆ ಅದ್ಬುತ ಕೊಡುಗೆ ನೀಡಿದ್ದಾರೆ. ಈ ವಿಶ್ವಕಪ್ ನಲ್ಲಿ ಕಪಿಲ ದೇವ ರವರ ಆಲ್ರೌಂಡರ್ ಪ್ರದಶ೯ನವನ್ನು ಮೆಚ್ಚಲೇ ಬೇಕು. 60.6 ರ ಸರಾಸರಿಯಲ್ಲಿ 303ರನ್ ಬಾರಿಸಿ 12 ವಿಕೇಟ್ ಪಡೆದಿದ್ದರು, ಹಾಗೇ 7 ಕ್ಯಾಚ್ ಹಿಡಿದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೋಜರ್ ಬಿನ್ನಿ 8 ಪಂದ್ಯಗಳಲ್ಲಿ 18 ವಿಕೇಟ್ ಪಡೆದು ಗೆಲುವಿನಲ್ಲಿ ಅದ್ಬುತ ಕೊಡುಗೆ ನೀಡಿದ್ದರು.

ಅಂದು ಅಭೂತಪೂವ೯ ನಾಯಕತ್ವ ಪದಶಿ೯ಸಿ ವಿಶ್ವಕಪ್ ಎತ್ತಿ ಹಿಡಿದ ಕಪಿಲ್ ದೇವನದು ಕೇವಲ 24 ವಷ೯ ಮಾತ್ರ. ಹಾಗೇ ತಂಡದಲ್ಲಿದ್ದ 7 ಆಟಗಾರರರು ಕೇವಲ 28 ಕಿಂತ ಕೆಳಗಿನ ವಯಸ್ಸಿನವರಾಗಿದಿದ್ದು ವಿಶೇಷವಾಗಿತ್ತು. ಹೆಚ್ಚಿನ ಅನುಭವಿಗಳು ಇರದ ಯುವಕರ ತಂಡವನ್ನೇ ಹೊಂದಿದ ಇವರು ಹನಿಮೂನ್, ವೇಕೇಶನ್ ಎಂದು ಮಜಾ ಉಡಾಯಿಸಲು ಹೋಗಿ ವಿಶ್ವವನ್ನೇ ಗೆದ್ದು ಬಂದಿದ್ದರು.

ಬರಹ: ಬಾಲಕ್ರಷ್ಣ ನಾಯ್ಕ ಚಿಕ್ಕೋಳ್ಳಿ