ನಮಸ್ಕಾರ,
ನಾನು ಕಾಳಿನದಿ. ಕರ್ನಾಟಕದ ಪಶ್ಚಿಮ ಘಟ್ಟ ನನ್ನ ಹುಟ್ಟೂರು. ಕಪ್ಪಗಿರುವ ಕಾರಣಕ್ಕೆ ಜನ ನನ್ನ ಕಾಳಿ ಎಂದು ಕರೆಯುತ್ತಾರೆ. ಜೋಯಿಡಾದ ಕುಶಾವಳಿ ಎಂಬ ಹಳ್ಳಿಯಿಂದ ನನ್ನ ಇರುವಿಕೆ ಪ್ರಾರಂಭವಾಗುತ್ತದೆ. ಸ್ವತಂತ್ರವಾಗಿ, ಎಲ್ಲರನ್ನೂ ಒಳಗೊಂಡು ಕಾರವಾರದ ಸದಾಶಿವಗಡದಲ್ಲಿ ಅರಬ್ಬಿ ಸಮುದ್ರ ಸೇರುತ್ತಿದ್ದ ನನ್ನ ಮಡಿಲು ಇತ್ತೀಚೆಗೆ ಬರಿದಾಗುತ್ತಿರುವ ಆತಂಕ ಕಾಡುತ್ತಿದೆ. ಮಡಿಲೊಳಗಿದ್ದ ಅದೆಷ್ಟೋ ಜೀವ ಸಂಕುಲಗಳು ಕಣ್ಮರೆಯಾಗುತ್ತಿವೆ. ದಯಮಾಡಿ ನನ್ನ ನೋವನ್ನೊಮ್ಮೆ ಕೇಳಿ. ನನ್ನ ಮಕ್ಕಳನ್ನು ಕಾಪಾಡಿ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಿತ್ಯಹರಿದ್ವರ್ಣ ವನವನ್ನು ಸೃಷ್ಟಿಸಿ ನನ್ನಆವಾಸವನ್ನು ಭದ್ರಮಾಡಿಕೊಂಡಿದ್ದೆ.  ಹಲವು ವನ, ಜನಾಂಗ, ಜಗತ್ತು ಇನ್ನೂ ಕಂಡರಿಯದ ಅದೆಷ್ಟೋ ಜೀವ ವೈವಿದ್ಯವನ್ನು ಹೊಂದಿರುವೆ.  ಹಲವು ವರ್ಷಗಳ ಪರಿಶ್ರಮದಿಂದ ಕಟ್ಟಿದ ಸಾಮ್ರಾಜ್ಯ ಇದು.

ಸಣ್ಣ ಇರುವೆಯಿಂದ ದೈತ್ಯ ಆನೆಯವರೆಗೂ ನನ್ನ ಹಸಿರು ಕೋಟೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ. ಪಕ್ಷಿಗಳು, ಪರಾಗದ ಜೇನು, ಪ್ರಾಣಿಗಳು ನಿತ್ಯ ಆಶ್ರಯ ಕೊಟ್ಟ ಕಾಳಿಗೆ ತಮ್ಮದೆ ಕಾಯಕ ಮಾಡುತ್ತಾ ಸೇವೆಯನ್ನು ಮುಂದುವರೆಸಿವೆ.

ಇಲ್ಲಿರುವ ಎಲ್ಲ ಜೀವಿಗಳನ್ನು ಅವುಗಳಷ್ಟಕ್ಕೆ ಬಿಟ್ಟಿದ್ದರೆ ನಾನು ಒಡಲ ದುಃಖವನ್ನು ಹೇಳುತ್ತಿರಲಿಲ್ಲ. ನಾಗರೀಕ ಸಮಾಜ ಸುಶಿಕ್ಷಿತವಾದೆಂತೆಲ್ಲ ಕಾಳಿಯನ್ನು ವ್ಯಾಪಾರಕ್ಕೆ ಇಳಿಸಿ ಹಣದೋಚಿಕೊಂಡು ನಿತ್ಯ ಪ್ರಹಾರನಡೆಸಿದ್ದಾರೆ.  184 ಕಿ.ಮೀ ಹರಿವನ್ನು ಹೊಂದಿರುವ ನನಗೆ ಮನಬಂದಂತೆ ಹಿಂಸಿಸಿ ಘಾಸಿಗೊಳಿಸಿದ್ದಾರೆ.

ಒಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೀವ ವೈವಿದ್ಯಕ್ಕೆ ಪ್ರಸಿದ್ಧ ನದಿಯಾಗಿದ್ದ ನಾನು ಇಂದು ಕೇವಲ ವಿದ್ಯುತ್ ಉತ್ಪಾದನೆ ಮಾಡುವ ಯಂತ್ರವಾಗಿ ಬಿಟ್ಟಿದ್ದೇನೆ. ಕದ್ರಾ, ಕೊಡಸಳ್ಳಿ, ಸೂಪಾ, ನಾಗಜರಿ ವಿದ್ಯುತ್ ಯೋಜನೆಗಳು ನನ್ನಲ್ಲಿವೆ. ಸುಮಾರು ಒಂದು ಸಾವಿರ ಕ್ಕೂ ಹೆಚ್ಚು ಮೆಗಾ ವ್ಯಾಟ್ ವಿದ್ಯುತ್ ನನ್ನಲ್ಲಿಉತ್ಪತ್ತಿಯಾಗುತ್ತದೆ.

ಅದರ ಜತೆಯಲ್ಲಿಯೇ ನಡೆಯುತ್ತಿರುವ ಅವೈಜ್ಞಾನಿಕ ಅನಧೀಕೃತ ದಾಳಿಗಳು ನನ್ನನ್ನು ದುರ್ಬಲಗೊಳಿಸುತ್ತಿದೆ. ನನ್ನನ್ನೇ ನಂಬಿದ್ದ ಮಲೆನಾಡು, ಕರಾವಳಿಯ ಮಕ್ಕಳಂತೂ ಮೂಲ ಸಂಸ್ಕೃತಿಯನ್ನೇ ಕಳೆದುಕೊಂಡು ಯಾಂತ್ರಿಕ ಬದಲಾವಣೆಯ ಬಲವಂತಕ್ಕೆ ಸಿಲುಕಿದ್ದಾರೆ. ಅವರ ಬದುಕು ದುಸ್ಥರವಾಗಿದೆ.

ದಾಂಡೇಲಿ ನನ್ನ ತವರು ತಾಲೂಕು. ಅಲ್ಲಿಯೇ ಕಾರ್ಖಾನೆಯ ವಿಷ ನೀರು ನನ್ನ ದೇಹ ಸೇರುತ್ತಿದೆ.  ಪಾದರಸದಂತಹ ವಿಷದಿಂದ ನನ್ನೊಡಲಿನ ಜಲಚರ, ಮೊಸಳೆಗಳನ್ನು ನನ್ನಿಂದ ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಅರಣ್ಯದೊಳಗಿನ ಕಾಡು ಪ್ರಾಣಿಗಳು ಅದೇ ನೀರು ಕುಡಿಯುವಾಗ ಸಂಕಟವಾಗುತ್ತಿದೆ.

ನನ್ನ ದೇಹ ಬಿಗಿದಿರುವ ಸೂಫಾ, ಕದ್ರಾ, ಕೊಡಸಳ್ಳಿ ವಿದ್ಯುತ್ ಯೋಜನೆಗಳಿಂದ ನನ್ನ ಕರುನಾಡು ಬೆಳಗುತ್ತಿದೆ ಎನ್ನುವ ಕಾರಣಕ್ಕೆ ಈ ತ್ಯಾಗಕ್ಕೆ ಹೆಮ್ಮೆ ಪಡುತ್ತೇನೆ. ಅದೇ ರೀತಿ ನನ್ನನ್ನು ನಂಬಿದ್ದ ನನ್ನ ಮಕ್ಕಳನ್ನೂ ಅವರ ಪಾಡಿಗೆ ಬಿಡಬೇಕಲ್ಲವೆ.

ಕಾಳಿ ನದಿ ವೀಡಿಯೊ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಒಡಲಿಗೆ ಸಲಿಕೆ ಹಾಕಿ ಬೇಕಾಬಿಟ್ಟಿ ಮರಳು ಬಗೆದರೆ ಜಲಚರಗಳು ಬದುಕುವುದು ಹೇಗೆ. ರಿವರ್ ರಾಪ್ಟಿಂಗ್ ಎಂದು ಆಟ ಆಡುತ್ತೀರಿ. ನಿಮ್ಮನ್ನು ನೋಡಲು ನನಗೂ ಖುಷಿ. ನನ್ನ ನೀರೊಳಗಿನ ಮಕ್ಕಳು, ಕಾಡೊಳಗಿನ ಪ್ರಾಣಿಗಳೂ ನನ್ನ ಮಕ್ಕಳಲ್ಲವೆ. ಅವರ ಖುಷಿಯೂ ಮುಖ್ಯವಲ್ಲವೇ.

ನನ್ನನ್ನು ಆಶ್ರಯಿಸಿ ಮಲೆನಾಡಿನಲ್ಲಿ ನಾಲ್ಕು ಲಕ್ಷ ಕುಟುಂಬಗಳು ಜೀವನ ನಡೆಸುತ್ತಿದ್ದವು. ಕರಾವಳಿಯಲ್ಲಿ 10 ಸಾವಿರ ಮೀನುಗಾರ ಕುಟುಂಬಗಳು ಬದುಕು ನಡೆಸುತ್ತಿದ್ದವು. ಈಗ ಅವರ ಬದುಕಿಗೆ ಆಸರೆಯಾಗುವಷ್ಟು ಶಕ್ತಿ ನನ್ನಲ್ಲಿ ಉಳಿದಿಲ್ಲ. ಅವರಿಗೆಲ್ಲ ನಾನೇನು ಉತ್ತರಿಸುವುದು.

ವನ ಸಂಪತ್ತು ಕ್ಷೀಣಿಸುತ್ತಿದೆ. ನದಿಯೊಳಗಿನ ಜಲಚರಗಳು ಕಾಣೆಯಾಗುತ್ತಿವೆ. ಅಪ್ಪೆ ಮಿಡಿ ಮಾವು, ಹಾರ್ನಬಿಲ್ ಸೌಂದರ್ಯ, ಹುಲಿ ಘರ್ಜನೆ, ಆನೆಗಳ ಗಾಂಭೀರ್ಯ, ಬಿದಿರಿನ ಸೌಂದರ್ಯ ಇವೆಲ್ಲ ಉಳಿಯಬೇಕಲ್ಲವೆ. ನಾನು ಅರಬ್ಬಿ ಸಮುದ್ರ ಸೇರುವ ಕಾರವಾರದ ಅಳಿವೆ ಪ್ರದೇಶದಲ್ಲಿ ಸುಮಾರು 70ಕ್ಕೂ ಹೆಚ್ಚು ಜಾತಿಯ ಮೀನುಗಳು ಬೆಳೆಯುತ್ತಿದ್ದವು. ಚಿಪ್ಪೆಕಲ್ಲು ಹೇರಳವಾಗಿ ನನ್ನ ಮಡಿಲು ತುಂಬುತ್ತಿದ್ದವು.

ಸ್ನೇಹಿತರೆ, ಈಗ ಒಂದೇ ಒಂದು ಚಿಪ್ಪೆಕಲ್ಲು ಸಾಕಲು ನನ್ನಿಂದ ಆಗುತ್ತಿಲ್ಲ. ಮರಳು ಗಣಿಗಾರಿಕೆ ಅಬ್ಬರಕ್ಕೆ ಆ ನನ್ನ ಮಗು (ಚಿಪ್ಪೆಕಲ್ಲು) ಜೀವಾಂಶವನ್ನೇ ಕಳೆದುಕೊಂಡಿದೆ. ಈಗ 20 ಜಾತಿಯ ಮೀನುಗಳು ಸಹ ಅಳಿವೆಯಲ್ಲಿ ಸಿಗುತ್ತಿಲ್ಲ. ಇದನ್ನು ವಿಜ್ಞಾನಿಗಳೇ ದೃಢಪಡಿಸಿದ್ದಾರೆ. ತಾಯಿ ಹೃದಯಕ್ಕೆ ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವೆ.

ನನ್ನ ಮಕ್ಕಳನ್ನು ಕಳೆದುಕೊಂಡ ನಾನು ಪ್ರತಿ ದಿನ ರೋಧಿಸುತ್ತಿದ್ದೇನೆ. ಕಣ್ಣೀರು ನದಿ ನೀರಿನಲ್ಲಿ ಮರೆಯಾಗಿ ಹರಿಯುತ್ತಿದೆ. ತಾಯಿಯ ನೋವು ಯಾರ ಬಳಿ ಹೇಳಲಿ. ನನ್ನಿಂದ ಪಡೆದ ವಿದ್ಯುತ್ ಬೆಳಕಿನಲ್ಲಿ ಓದಿದ ನೀವಾದರೂ ಅರಿತು ಕೊಳ್ಳಿ. ಬಂದು ನನ್ನನ್ನೊಮ್ಮೆ ನೋಡಿ. ನನ್ನನ್ನೊಮ್ಮೆ ನೋಡಿ.  ನಾನು ಇರುವದರೊಳಗೆ ನನ್ನನ್ನೊಮ್ಮೆ ಮಾತನಾಡಿಸಿ.

ಗಮನಿಸಿ
ಲೇಖಕರು ಕಾಳಿ ನದಿ ತೀರದಲ್ಲಿ ಕೈಗೊಂಡ ಪ್ರವಾಸದ ವೇಳೆ ಕಂಡ ಸಂಗತಿಗಳನ್ನು ನದಿಯ ಮಾತಿನಲ್ಲಿಯೇ ಭಾವಿಸಿ ನಮ್ಮ ಮುಂದೆ ಇಟ್ಟಿದ್ದಾರೆ. ಕಾಳಿ ನದಿ ಆಶ್ರಯಿಸಿ ಉತ್ಪಾದನೆಯಾಗುವ ವಿದ್ಯುತ್ ಕರ್ನಾಟಕದ ಬಹುಪಾಲು ವಿದ್ಯುತ್ ಬೇಡಿಕೆಯನ್ನು ಪೂರೈಸುತ್ತದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹರಿಯುವ ಈ ನದಿ ಆಶ್ರಯದಲ್ಲಿ ಕೋಟ್ಯಾನುಕೋಟಿ ಜೀವ ಸಂಕುಲಗಳು ಇವೆ.

ಚಿತ್ರ ಲೇಖನ: ವಿನೋದ ರಾ. ಪಾಟೀಲ, ಚಿಕ್ಕಬಾಗೇವಾಡಿ