ಈಚೆಗೆ ಈರುಳ್ಳಿ ದರ ಒಂದು ಕೆ.ಜಿ.ಗೆ 400 ರೂ. ಆದಾಗ ಅನೇಕ ತಮಾಷೆಯ ಸಂಗತಿಗಳು ಹರಿದಾಡಿದ್ದವು. ಈರುಳ್ಳಿ ಇಟ್ಟು ಪೂಜೆ ಮಾಡುವುದು. ಈರುಳ್ಳಿ ಕೊಟ್ಟು ಆ್ಯಪಲ್ ಮೊಬೈಲ್ ಖರೀದಿ ಮಾಡುವುದು. ಈರುಳ್ಳಿ ಮಾರಾಟಗಾರನಿಗೆ ಗನ್ ಮ್ಯಾನ್ ಭದ್ರತೆ. ಹೀಗೆ ಹಲವು ವಿಡಿಯೊಗಳು ವೈರಲ್ ಆಗಿದ್ದವು.
ಆದರೆ, ಬಹಳಷ್ಟು ಜನರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಈರುಳ್ಳಿಯನ್ನು ಅದೇ ರೀತಿಯಾಗಿಯೇ ಬಳಸುತ್ತಿದ್ದು. ಬಾಡಿಗೆ, ಉಡುಗೊರೆ ರೂಪದಲ್ಲಿ ಈರುಳ್ಳಿಯನ್ನೇ ಕೊಡುತ್ತಿದ್ದರು. ದೇವರು ಎಂದೂ ಆರಾಧಿಸುತ್ತಿದ್ದು. ಅದು ಹೇಗೆ, ಈರುಳ್ಳಿಯ ಅಸಲಿ ಇತಿಹಾಸ ಏನು ಅಂತೀರಾ… ಈ ಲೇಖನ ಪೂರ್ತಿ ಓದಿ.
ಮನುಷ್ಯ ಪ್ರಾಚೀನ ಕಾಲದಿಂದಲೂ ಬೆಟ್ಟ, ಕಾಡುಗಳಿಂದ ಹಲವು ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಳಸುತ್ತಿದ್ದ. ಆದರೆ ಸ್ವತಃ ಬೆಳೆಸಿ, ಬಳಸತೊಡಗಿದ ಮೊದಲ ಗಿಡಮೂಲಿಕೆಗಳ ಪೈಕಿ ಈರುಳ್ಳಿಯೂ ಒಂದು. ಐದು ಸಾವಿರ ವರ್ಷಗಳಿಗೂ ಹಿಂದಿನ ಮಾನವ ಸಂಸ್ಕ್ರತಿಯ ಪಳೆಯುಳಿಕೆಗಳಲ್ಲಿ ಈರುಳ್ಳಿಯ ಕುರುಹು ಸಿಕ್ಕಿವೆ.

ಕ್ರಿ.ಪೂ.430ರ ಕಾಲದಲ್ಲಿದ್ದ ಹಿಪೋಕ್ರೇಟಸ್ ಈರುಳ್ಳಿಯ ಬಗ್ಗೆ ಉಲ್ಲೇಖಿಸಿದ್ದಾನೆ. ಪ್ರಾಚೀನ ಈಜಿಪ್ತಿಯನ್ನರು ಆಹಾರವಾಗಿ, ಔಷಧವಾಗಿ ಮೊದಲ ಬಾರಿಗೆ ಬಳಸಿದ ವಸ್ತುವೆಂದರೆ ಈರುಳ್ಳಿಯಂತೆ. ಈಜಿಪ್ತಿನ ಅನೇಕ ಸ್ಮಾರಕಗಳಲ್ಲಿ ಇರುವ ಚಿತ್ರಗಳ ಆಧಾರದಿಂದ ಅಲ್ಲಿ 4800 ವರ್ಷಗಳಷ್ಟು ಹಿಂದೆಯೇ ಈರುಳ್ಳಿಯನ್ನು ಬೆಳೆಸುತ್ತಿದ್ದರು ಎಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ.

ದೈತ್ಯಗಾತ್ರದ ಪಿರಮಿಡ್ ಗಳನ್ನು ಕಟ್ಟಲು ನೂರಾರು ಜನ ಕಾರ್ಮಿಕರು ದುಡಿಯಬೇಕಿತ್ತು. ಅವರಿಗೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ ದೇಹದ ಬಲವನ್ನು ಹೆಚ್ಚಿಸಲು ಈರುಳ್ಳಿ ಮತ್ತು  ಬೆಳ್ಳುಳ್ಳಿಯನ್ನು ನಿಯಮಿತವಾಗಿ ಕೊಡುತ್ತಿದ್ದರು. ಪ್ರಾಚೀನ ಈಜಿಪ್ತಿನ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶವಸಂಸ್ಕಾರ ಕಾರ್ಯದಲ್ಲಿ ಈರುಳ್ಳಿಯನ್ನು ಬಳಸುತ್ತಿದ್ದರು. ಅನೇಕ ಮಮ್ಮಿಗಳಲ್ಲೂಈರುಳ್ಳಿ ಇರುವುದು ಪತ್ತೆಯಾಗಿದೆ.

  ಎಳನೀರ ಬಗ್ಗೆ ನಿಮಗೆಷ್ಟು ಗೊತ್ತು. ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

ಈರುಳ್ಳಿಯೇ ದೇವರಾಗಿತ್ತು
ಈರುಳ್ಳಿಯನ್ನು ಪ್ರಾಚೀನ ಈಜಿಪ್ತಿಯನ್ನರು ಆರಾಧಿಸುತ್ತಿದ್ದರು. ಈರುಳ್ಳಿಯ ಒಂದು ಪದರವನ್ನು ಬಿಡಿಸಿದರೆ ಮತ್ತೊಂದು ಪದರ ಕಂಡುಬರುತ್ತದೆ. ಹೀಗೆ ಪದರ ಪದರಗಳಾಚೆ ಹುದುಗಿರುವ ಸರ್ವಶಕ್ತನ ಸಂಕೇತವಾಗಿ ಈರುಳ್ಳಿಯನ್ನು ಭಾವಿಸುತ್ತಿದ್ದರು. ಅದು ಜೀವದ ನಿರಂತರತೆಯ ಸಂಕೇತವೂ ಆಗಿತ್ತು. ಪ್ರಾಚೀನ ಈಜಿಪ್ತ್ ನಲ್ಲಿ ಅಧಿಕಾರ ಗ್ರಹಣ ಮಾಡುವವರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಾಕ್ಷಿಯಾಗಿ ಇಟ್ಟುಕೊಳ್ಳುತ್ತಿದ್ದರಂತೆ.
ಇಸ್ರೇಲಿಯರು ಈಜಿಪ್ತಿನಿಂದ ಕೈಗೊಂಡ ಮಹಾಯಾನದ ಸಂದರ್ಭದಲ್ಲಿ ಈರುಳ್ಳಿಯನ್ನು ಸೇವಿಸಿದ್ದ ಬಗ್ಗೆ ಬೈಬಲ್ ನಲ್ಲಿ ಉಲ್ಲೇಖವಿದೆ.

ಯಹೂದಿಯರು ಈರುಳ್ಳಿಯನ್ನು ಬಹಳ ಇಷ್ತಪಡುತ್ತಿದ್ದರು. ಸೂಯಝ್ ಕೊಲ್ಲಿಯ ಹತ್ತಿರ ಕ್ರಿ.ಪೂ.173ರಲ್ಲಿಆನಿಯನ್ ಎಂಬ ಹೆಸರಿನ ಎಂದು ನಗರವನ್ನೇ ಅವರು ಕಟ್ಟಿದರು. ಈ ಕಟ್ಟಡವನ್ನು ಕಟ್ಟಿಸಿದವನ ಹೆಸರು ಸಹ ಆನಿಯನ್. ಈ ನಗರವು 343 ವರ್ಷಗಳವರೆಗೆ ಇದ್ದಿತು ಎಂದು ದಾಖಲೆ ಹೇಳುತ್ತವೆ.

ಈರುಳ್ಳಿ ಬಾಡಿಗೆ
ಪ್ರಾಚೀನ ಗ್ರೀಸ್ ನಲ್ಲೂ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದರು. ಮಧ್ಯಯುಗದಲ್ಲಿ ಬಾಡಿಗೆಯನ್ನು ಈರುಳ್ಳಿಯ ರೂಪದಲ್ಲಿ ಪಾವತಿಸುತ್ತಿದ್ದರು. ಎಷ್ಟೋ ಬಾರಿ ಉಡುಗೊರೆಯಾಗಿ ಕೊಡಲು ಈರುಳ್ಳಿಯನ್ನು ಬಳಸುತ್ತಿದ್ದರು. ವೈದ್ಯರೂ ಸಹ ಈರುಳ್ಳಿಯನ್ನು ಒಂದು ಔಷಧ ವಸ್ತುವಾಗಿ ಭಾವಿಸಿದ್ದರು. ಆಹಾರವು ಸರಿಯಾಗಿ ಜೇರ್ಣವಾಗಲು, ಲೈಂಗಿಕ ದೌರ್ಬಲ್ಯವನ್ನು ನಿವಾರಿಸಲು, ತಲೆನೋವು, ಕೆಮ್ಮು, ಹಾವಿನ ಕಡಿತ, ಕೂದಲು ಉದುರುವ ಸಮಸ್ಯೆ ಮುಂತಾದ ಸಂದರ್ಭಗಳಲ್ಲಿ ಈರುಳ್ಳಿಯನ್ನು ಮದ್ದಾಗಿ ಬಳಸುತ್ತಿದ್ದರು.

1912 ರಲ್ಲಿ ಡಾ .ದಲಾಚಿ ಎಂಬುವವರು ಎಷ್ಟೆಲ್ಲ ಕಾಯಿಲೆಗಲಿಗೆ ‘ಈರುಳ್ಳಿ ಚಿಕಿತ್ಸೆ’ ಎಂಬ ಹೊಸ ಚಿಕಿತ್ಸಾ ಕ್ರಮವನ್ನೇ ಹುಟ್ಟುಹಾಕಿದರು. ಈರುಳ್ಳಿಯ ರೋಗನಿರೋಧಕ ಗುಣ ಬಹಳ ಹಿಂದೆಯೇ ದೃಢಪಟ್ಟಿದೆ. ಲಂಡನ್ನಿನ ಮಹಾಪ್ಲೇಗ್ ಸಂದರ್ಭದಲ್ಲಿ ಊರಿಗೆ ಊರೇ ಸ್ಮಶಾನ ಸದೃಶವಾಗಿದ್ದಾಗ ಅಲ್ಲಲ್ಲಿ ಒಂದೆರಡು ಕಡೆಗಳಲ್ಲಿ ಪ್ಲೇಗಿನ ಸೋಂಕು ಇರಲಿಲ್ಲ. ಏಕೆಂದರೆ ಈ ಜಾಗಗಳು ಈರುಳ್ಳಿ ಮಾರಾಟದ ಅಂಗಡಿಗಳಾಗಿದ್ದವಂತೆ.
ಪೋಲ್ಯಾಂಡಿನಲ್ಲಿ ಶಿಶುವನ್ನು ಹೆರಲಿರುವ ತುಂಬು ಗರ್ಭಿಣಿಯನ್ನು ಬಿಸಿ ಈರುಳ್ಳಿ ತುಂಬಿಸಿರುವ ಕಡಾಯಿಯ ಮೇಲೆ ಕೂರಿಸಿದರೆ ಮಗು ಹೆರುವುದು ಬಹಳ ಸುಲಭವಾಗುತ್ತದೆ ಎಂಬ ನಂಬಿಕೆ ಇದೆ!

ಎಳನೀರ ಬಗ್ಗೆ ನಿಮಗೆಷ್ಟು ಗೊತ್ತು. ತೆಂಗು ಕೃಷಿಯಲ್ಲಿದೆ ಆದಾಯದ ಗುಟ್ಟು

ಸಕ್ಕರೆ ಕಾಯಿಲೆ, ಕ್ಯಾನ್ಸರ್ ಗೂ ಮದ್ದು
ಕೆಂಪು ಈರುಳ್ಳಿಯ ಸೇವನೆಯು ಕ್ಯಾನ್ಸರ್‌ ತಡೆಗಟ್ಟಲು ನೆರವಾಗಲಿದೆ ಎಂಬುದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಕೆಂಪು ಈರುಳ್ಳಿಯಲ್ಲಿರುವ ಔಷಧೀಯ ಅಂಶಗಳು ಟ್ಯೂಮರ್‌ ಅನ್ನು ನಾಶಪಡಿಸುವಂಥ ಸಾಮರ್ಥ್ಯ ಹೊಂದಿವೆ ಎಂದು ಕೆನಡಾದ ಗುಲೆಫ್ ವಿಶ್ವವಿದ್ಯಾಲಯದ ಸಂಶೋಧಕ ಅಬ್ದುಲ್‌ಮೊನೆಮ್ ಮುರಯ್ಯನ್ ತಿಳಿಸಿದ್ದಾರೆ. ಕೆಂಪು ಈರುಳ್ಳಿ ಮಾತ್ರವಲ್ಲದೆ ಇತರ ತಳಿಯ ಈರುಳ್ಳಿಯಲ್ಲಿಯೂ ಕ್ಯಾನ್ಸರ್‌ ಕೋಶಗಳನ್ನು ನಾಶಪಡಿಸುವ ಶಕ್ತಿ ಇದೆ ಎಂದು ಅವರು ತಿಳಿಸಿದ್ದಾರೆ.

ಈರುಳ್ಳಿಯನ್ನು ಹೇರಳವಾಗಿ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್ ಅನ್ನು ಕಡಿಮೆ ಮಾಡಿ,ಇನ್ಸುಲಿನ್ ಅನ್ನು ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.
ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ. ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

ಈರುಳ್ಳಿ ಬೆಳೆಯುವುದು ಹೇಗೆ?
ಈರುಳ್ಳಿಯನ್ನು ವರ್ಷದ ಎಲ್ಲ ಕಾಲಗಳಲ್ಲಿಯೂ ಬೆಳೆಯಬಹುದು. ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ್ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಉತ್ತಮ. ಚಳಿಗಾಲದಲ್ಲಿ ಬೆಳೆದ ಗೆಡ್ಡೆಗಳು ಉತ್ತಮವಾಗಿರುತ್ತವೆ.

ನಿರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡುಮಣ್ಣು ಈರುಳ್ಳಿ ಬೆಳೆಯಲು ಸೂಕ್ತ. ಮಣ್ಣಿನ ರಸಸಾರ 5.8 ರಿಂದ 6.5 ವರೆಗೆ ಇರಬೇಕು. ಹೆಚ್ಚು ಕ್ಷಾರ, ಜೌಗು ಪ್ರದೇಶ ಸೂಕ್ತವಲ್ಲ.

ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ, ನಂತರ 1.2×1.2 ಮೀ. ಅಂತರದ ಮಡಿಗಳನ್ನು ಮಾಡಿ ತೆಳ್ಳಗೆ ಬೀಜವನ್ನು ಕೈಯಿಂದ ಬಿತ್ತಿ 4 ವಾರಗಳ ನಂತರ 5 ಸೆಂ.ಮೀ.ಗೆ ಒಂದು ಸಸಿಯನ್ನುಳಿಸಿ ಉಳಿದವುಗಳನ್ನು ತೆಗೆಯಿರಿ.

ಹವಾಮಾನ ಮತ್ತು ಮಣ್ಣಿನ ಗುಣಧರ್ಮಕ್ಕನುಸಾರವಾಗಿ 4 ರಿಂದ 6 ದಿವಸಗಳಿಗೊಮ್ಮೆ ನೀರು ಉಣಿಸಬೇಕು. ಕೊಯ್ಲಿಗೆ 15 ದಿವಸ ಮುಂಚೆ ನೀರು ಕೊಡುವುದನ್ನು ನಿಲ್ಲಿಸಬೇಕು.

ಕೃಪೆ: ವಿಕಾಸ್ ಪೀಡಿಯಾ, ವಿಕಿಪೀಡಿಯಾ ಇತ್ಯಾದಿ ಗ್ರಂಥಗಳು.