ಇವತ್ತೋ ನಾಳೇನೋ ಬೀಳೊ ರೀತಿ ಇದ್ದ ಬಸವಣ್ಣನ ಗುಡಿ. ಅದುವೇ ನಮ್ಮ ಅಂಗನವಾಡಿ. ಮಡಿಕೆ ಕಾಳು ಉಸುಳಿ, ಉಂಡಿಪುಡಿ ಉಂಡಿ. ವರ್ಷ ಪೂರ್ತಿ ಇರುವ ಆಹಾರ. ಈಗಿನ ರೀತಿ ವಾರಕ್ಕೊಂದು ತಿಂಡಿ ಇರಲೇ ಇಲ್ಲ. ಈಗ ಪಾಲಕರ ಸ್ಥಾನದಲ್ಲಿರುವ ಬಹುತೇಕರ ಜೀವನ ಆರಂಭವಾಗಿದ್ದು ಹೀಗೆಯೇ ಅಂದುಕೊಳ್ತೀನಿ.

ಆ ಬಾಲ್ಯದ ಜೀವನಗಳನ್ನು ನೆನೆಸಿಕೊಂಡರೆ ದೊಡ್ಡವರಾಗಿದ್ದೇ ಶಾಪ ಅನಿಸುವಷ್ಟು ಬೇಜಾರಾಗುತ್ತದೆ. ಅಂಗನವಾಡಿಗೆ ಹೋದಾಗ ಅರ್ಧದಲ್ಲೇ ಮನೆಗೆ ಓಡಿ ಬರುವುದು. ಆಯಾ (ಅಂಗನವಾಡಿ ಟೀಚರ್) ಕರಿಯೋಕೆ ಬಂದಾಗ ಸಂದಕದ ಕೆಳಗೆ ಬಚ್ಚಿಟ್ಟುಕೊಂಡ ದಿನ ಇವತ್ತಿಗೂ ನಗು ತರಿಸುತ್ತದೆ. ನಿಜ ಹೇಳಬೇಕು ಎಂದರೆ ನಾನು ಆರು ವರ್ಷ ಆದರೂ ಅಂಗನವಾಡಿಗೆ ಹೋಗ್ತಿದ್ದೆ. ನಮ್ಮ ಸೊಟ್ಟ ಟೀಚರ್ ಗೋಡೆ ಹಿಡಕೊಂಡು ಬಂದು ಕ್ಲಾಸಲ್ಲಿ ಕೂತು ಹೋಗ್ತಿದ್ದರೂ ಆ ಟೀಚರ್ ಕಂಡ್ರೆ ಏನೋ ಗೌರವ. ನಮ್ಮ ಟೀಚರ್ ದೊಡ್ಡ ಶಾಲೆಗೆ ಹೋಗು ಅಂತ ಕಳಿಸ್ತಿದ್ರು. ಆದ್ರೂ ಕೂಡ ಹೋಗ್ತಿರ್ಲಿಲ್ಲಾ. ಯಾಕಂದ್ರೆ ದೊಡ್ಡ ಶಾಲೆ (ಈಗಿನ ಪ್ರೈಮರಿ ಸ್ಕೂಲ್) ಲಿ ಉಂಡಿ, ಉಸುಳಿ ಕೊಡ್ತಿರ್ಲಿಲ್ಲಾರಿ.

ಅಂತೂ ಸ್ನೇಹಿತೆಯರು ಎಲ್ಲರೂ ಸೇರಿ ಜೋರ್ ಜುಲುಮೆಗೆ ಕನ್ನಡ ಶಾಲೆಗೆ ಹೋದ್ವಿ. ಅಲ್ಲಿ ಆರು ವರ್ಷ ವಯಸ್ಸಾಗ್ಲಿ ಬಿಡ್ಲಿ ತಲೆಯ ಮೇಲಿಂದ ಕೈ ಕಿವಿ ಮುಟ್ಟಿದ್ರೆ ಸಾಕು ನಾವು ಒಂದನೇ ಕ್ಲಾಸ್ ಸೇರ್ದಂಗೆ. ಮೂರನೇ ಕ್ಲಾಸ್‍ವರೆಗೂ ಮಾತ್ರ ನಾನು ಶಾಲೆಗೆ ಹೋಗ್ತೆನೆ ಅಂತಾ ಅಮ್ಮನಿಗೆ ಪದೇ ಪದೇ ಹೇಳ್ತಿದ್ದೆ. ಜಾಸ್ತಿ ಬುಕ್ ಆದ್ರೆ ನಂಗೆ ಓದೋಕಾಗಲ್ಲ ಅಂತ ಅಳ್ತಿದ್ದೆ.

ಅವಾಗೆಲ್ಲ ಶಾಲೆಗಳ ಕೋಣೆ ವ್ಯವಸ್ಥೆ ಅಷ್ಟೇನೂ ಚೆನ್ನಾಗಿ ಇರ್ಲಿಲ್ಲ. ಒಂದನೇ ಕ್ಲಾಸ್‍ವರೆಗೆ ಬೇವಿನ ಮರದ ಕೆಳಗೆ ಕೂರಿಸಿ ಪಾಠ ಮಾಡ್ತಿದ್ರು. ದಿನವೆಲ್ಲ ಪಾಠ ಕೇಳಿ ಸಂಜೆ ಶಾಲೆ ಬಿಡುವುದೇ ಒಂದು ಸಂತಸದ ಕ್ಷಣವಾಗಿತ್ತು. ಶಾಲೆ ಯಾವಾಗ ಬಿಡ್ತಾರೋ, ಆಟ ಯಾವಾಗ ಆಡ್ತಿವೋ ಅನ್ನೋ ತುಡಿತ.

ಮಧ್ಯಾಹ್ನದ ಊಟದ ಘಂಟೆ ಹೊಡೆಯುವುದನ್ನೆ ಕಾಯುತ್ತಿರುವ ನಾವು ತಕ್ಷಣ ಗುರುಗಳಿಗೆ ಮತ್ತು ಉಳಿದ ಸ್ನೇಹಿತರಿಗೆ ಮರೆಮಾಚಿ ಕಿಡಕಿಯಿಂದ ಬ್ಯಾಗ್‍ಗಳನ್ನು ಒಗೆದು ಕೆರೆಯ ಕಡೆ ಅಥವಾ ಸ್ನೇಹಿತರ ಹೊಲದ ಕಡೆ ಓಡುತ್ತಿದ್ದೆವು. ಹೊಲದಲ್ಲಿ ತೊಗರಿಯ ಗಿಡಗಳು ಕೆಲವೇ ನಿಮಿಷಗಳಲ್ಲಿ ಕುರಿ ತಿಂದಂತೆ ಬೋಳಾಗುತ್ತಿದ್ದವು.

ಶನಿವಾರ ಬಂತೆಂದ್ರೆ ಸಾಕು ಎಲ್ಲರಲ್ಲಿಯೂ ಹಬ್ಬವೋ ಹಬ್ಬ. 11-30ಕ್ಕೆ ಬಿಡುವ ಶಾಲೆಯ ಬೆಲ್ ಹೊಡೆಯುವುದು ಸ್ವಲ್ಪ ತಡವಾದರೂ ನಾವ್ಯಾರೂ ಕ್ಲಾಸಲ್ಲಿ ಕೂರುತ್ತಾ ಇರ್ಲಿಲ್ಲ. ಕಿಡಕಿ ಆಚೆ ಬ್ಯಾಗ್ ಒಗೆದು ಓಡಿದ್ದೆ. ಎಲ್ಲ ಸ್ನೇಹತರು ಊಟ ಕಟ್ಟಿಕೊಂಡು ತೋಟಕ್ಕೆ ಹೋಗುತ್ತಿದ್ದೆವು. ತೋಟದಲ್ಲಿ ತೆಂಗಿನ ಬುರುಡಿ ಮತ್ತು ಕೆರೆಯ ಅಂಗಳದಲ್ಲಿ ಕಾಕೂಳು (ದನಕರುಗಳು ಹಾಕಿದ ಶಗಣಿ ಒಣಗಿರುವುದು) ಆರಿಸಿಕೊಂಡು ನಡುರಸ್ತೆಯಲ್ಲಿ ಇಟ್ಟು ಕೆರೆಯಲ್ಲಿ ಸ್ನಾನ ಮಾಡುತ್ತಿದ್ದೆವು.

ಒಂದು ದಿನ ರಸ್ತೆಯಲ್ಲಿ ಕಾಕೂಳು, ಬುರುಡಿ ಇಟ್ಟು ಕೆರೆಯಲ್ಲಿ ಈಜುತ್ತಿದ್ದಾಗ ಲಾರಿ ಅವುಗಳ ಮೇಲೆ ಹೋಗಿ ಎಲ್ಲವೂ ಪುಡಪುಡಿಯಾದವು. ನಾವು ಡ್ರೈವರ್‍ಗೆ ಬೈದ ಬೈಗುಳ ಹೇಳಲಾಗದು. ಕೆರೆಯ ದಡದಲ್ಲಿ ಪರಂಗಿ ಹಣ್ಣಿನ ಗಿಡ ಆಕಾಶದೆತ್ತರಕ್ಕೆ ಬೆಳೆದಿತ್ತು. ಯಾವುದಾದರೂ ವಾಹನ ಬಂತೆಂದರೆ ಸಾಕು ಕಳ್ಳರೇ ಬಂದರೆಂಬ ಭಯದಿಂದ ಆ ಗಿಡದ ಮರೆಯಲ್ಲಿ ನಿಲ್ಲಲು ಹೋಗಿ ಜಾರಿ ಬಿದ್ದು ಗಾಯದ ಗುರುತು ಇನ್ನೂ ಅಚ್ಚಳಿಯದೇ ಉಳಿದಿವೆ.

ರವಿವಾರ ಬಂತೆಂದರೆ ಸಾಕು ಪ್ರತಿಯೊಬ್ಬ ಸ್ನೇಹಿತರೂ ಒಂದೊಂದು ಸಾಮಗ್ರಿ ತಂದು ಶಾಲೆಯಲ್ಲಿ ಚಿಲಕ ಸಡಿಲಿರುವ ಒಂದು ರೂಮ್‍ನ ಒಳಗೆ ಹೋಗಿ ಹುಣಸೆ ಹಣ್ಣಿನ ಚಿಗುಳಿ ಕುಟ್ಟಿ ತಿಂದು ಹೊಟ್ಟೆ ನೋಯಿಸಿಕೊಂಡ ನೆನಪು ಮರುಕಳಿಸುತ್ತದೆ. ಹುಣಸೆಕಾಯಿ ಹರಿಯಲು ಒಬ್ಬರ ಮೇಲೊಬ್ಬರು ನಿಂತಿರುವುದು ನಂತರ ಗುರುಗಳ ಛಾಟಿ ಏಟು ಮರೆಯಲು ಸಾಧ್ಯವೇ?
ಗೊಂಬೆ ಆಟ, ಡೊಂಕುಮುರಿ ಆಟ, ಬಳಿಚುಕ್ಕಾದ ಆಟ, ಕುಂಟಾಪಲ್ಲಿ, ಅಡುಗೆ ಚಿಟ್ಟ, ಕಣ್ಣಾಮುಚ್ಚಾಲೆ, ಲಗೋರಿ, ಆಣಿಕಲ್ಲು, ಚಿನ್ನಿಕೋಲು, ಮುಟ್ಟಾಟ, ಮಣಿಕಂಠನ ಆಟ, ಕೋಲು ನಡಿಗೆ ಆಟ, ಬಿಸಿಲಲ್ಲಿ ಕುಳಿತು, ಕಡ್ಡಿ ಆಟ, ಗಾಳಿಪಟದಾಟ, ಮರಮಂಗನ ಆಟ ಹೀಗೆ ಹಲವಾರು ಆಟಗಳನ್ನು ಆಡುವಾಗ ಗೆಳತಿಯರ ಜೊತೆ ಜಗಳ ಮಾಡಿ ಹೊಡೆದಾಡಿ ಆ ಕ್ಷಣವೇ ಹೆಗಲ ಮೇಲೆ ಕೈ ಹಾಕಿ ನಡೆದಾಡಿದ ಆ ಸಮಯ ಈಗ ಮತ್ತೆ ಮತ್ತೆ ಗೆಳೆಯರನ್ನೆಲ್ಲ ನೆನಪಿಸುತ್ತದೆ.

ಆ ತುಂಟಾಟ, ಚಲ್ಲಾಟ, ಜಗಳಾಟ ಹೊಡೆದಾಟಗಳು ಈಗ ಕಾಣುತ್ತಲೇ ಇಲ್ಲ. ಈಗಿನ ಮಕ್ಕಳಲ್ಲಿ ಬಾಲ್ಯದ ಭಾವನೆಗಳೇ ಮರೆಯಾಗುತ್ತಿವೆ. ಕಾರ್ತಿಕ ಬಂತೆಂದರೆ ಸಾಕಿತ್ತು, ಊರ ತುಂಬೆಲ್ಲ ನಮಗೆ ಕೋಲಾಟದ ಸುಗ್ಗಿಯೇ ಸುಗ್ಗಿ. ಈಗ ಕೋಲಾಟ ಎಂದರೇನು? ಎಂಬುದು ಮಕ್ಕಳಿಗೆ ಗೊತ್ತೇ ಇಲ್ಲ. ವಾಟ್ಸಾಪ್, ಫೇಸ್ ಬುಕ್ ಬಗ್ಗೆ ಬೇಗನೆ ಹೇಳುತ್ತಾರೆ. ಹಿಂದಿನ ಪಾಲಕರು ಮಕ್ಕಳು ಕೈ ಬಿಟ್ಟು ಆಡಿ ಖುಷಿಯಾಗಿದ್ದರೆ ಸಾಕು ಎನ್ನುತ್ತಿದ್ದರು. ಈಗ ಹಾಗಿಲ್ಲ, ಸಣ್ಣ ಗಾಯ ಆದರೂ ಇನ್ಫೆಕ್ಸನ್, ಮಾಕ್ರ್ಸ್ ಎಂದೆಲ್ಲ ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದೇವೆ. ಮಕ್ಕಳ ಬಾಲ್ಯವನ್ನೇ ಕಿತ್ತುಕೊಂಡಿದ್ದೇವೆ.

ಕಲ್ಮಷವಿಲ್ಲದ ಬಾಲ್ಯದ ಬೆಳಕು, ಮುಗ್ಧ ಸ್ವಭಾವ, ತುಂಟಾಟದ ಮನೋಭಾವನೆ ಏನೇ ಕೊಟ್ಟರೂ ತಿರುಗಿ ಬಾರದು. ಮಕ್ಕಳನ್ನು ಮನೆಯೆಂಬ ಸೆರೆಮನೆಯಲ್ಲಿ ಹಾಕಿ ರ್ಯಾಂಕ್, ಮಾಕ್ರ್ಸ ಎಂದು ಒತ್ತಡ ಹೇರುವ ಬದಲು ಚಿಟ್ಟೆಗಳಂತಿರುವ ಮಕ್ಕಳನ್ನು ಸ್ವತಂತ್ರವಾಗಿ ಹಾರಾಡಲು ಬಿಡೋಣ. ನಮ್ಮಂತೆ ಮಕ್ಕಳಲ್ಲಿ ಸಂತೋಷದ ಕ್ಷಣ ಕಾಣೋಣ.

ಲೇಖನ: ಪವಿತ್ರಾ ಮೂಲಿಮನಿ, ಶಿರಸಿ.