2020 , ಹೊಸ ವರುಷ , ಹೊಸ ಸಂತೋಷವನ್ನು ಹೊತ್ತು ತರುವುದನ್ನು ಅಪೇಕ್ಷಿಸಿ ಇಡೀ ಜಗತ್ತೇ ಕಾಯುತ್ತಿರುವಾಗ ಕೊರೋನವೆಂಬ ಈ ಮಹಾಮಾರಿ , ಇಡೀ ಪ್ರಪಂಚವನ್ನೇ ಭಯಭೀತಗೊಳಿಸಿದೆ. ಮೂರ್ನಾಲ್ಕು ತಿಂಗಳಿಂದ , ಒಂದೊಂದೇ ದೇಶವನ್ನು ಕಬಳಿಸುತ್ತ ಬರುತ್ತಿದೆ. ಜಗತ್ತಿನಾದ್ಯಂತ ಜನರು ಬಹಳಷ್ಟು ನೋವನ್ನು ಅನುಭವಿಸುತ್ತಿರುವುದನ್ನು ನಾವೆಲ್ಲ ಕಂಡಿದ್ದೇವೆ. ಅಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಬರಬಾರದು ಎನ್ನುವುದಾದರೆ ನಾವೆಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ನಮ್ಮ ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿರಬೇಕು.

ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಜನರು ಆತಂಕಗೊಳ್ಳುವುದು ಸಹಜ. ಆದರೆ ಈ ಆತಂಕವು ನಮ್ಮಲ್ಲಿ ಭಯ , ಅಭದ್ರತೆಯನ್ನು ಮೂಡಿಸದಿರುವ ರೀತಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬೇಕಾಗುತ್ತದೆ. ಸಮಸ್ಯೆಯ ಬಗ್ಗೆ ನಾವು ಚಿಂತೆ ಮಾಡಿದಷ್ಟು , ಆ ಚಿಂತೆಯು ನಮ್ಮನ್ನೇ ಆಕ್ರಮಿಸುತ್ತ ಬರುತ್ತದೆ. ಈ ವೈರಾಣುವಿನ ವಿರುದ್ಧ ನಡೆದಿರುವ ಯುದ್ಧದಲ್ಲಿ ಜಯಶಾಲಿಗಳಾಗಲು ನಮಗೆ ಬೇಕಿರುವುದು ಈ ಮೂರೇ ಅಸ್ತ್ರಗಳು – ಕೊಂಚ ತಿಳುವಳಿಕೆ , ಜನರ ನಡುವೆ ಸಹಕಾರ (ಸಾಮಾಜಿಕ ಅಂತರ) ಹಾಗೂ ಸಕಾರಾತ್ಮಕ ಮನೋಭಾವ.

ನಮ್ಮ ದಿನನಿತ್ಯದ ಬಿರುಸಿನ ನಿರಂತರ ಚಟುವಟಿಕೆಗಳಿಂದ ಈಗ ಒಂದು ಚಿಕ್ಕ ವಿರಾಮ ಸಿಕ್ಕಂತಿದೆ. ಈ ಅಮೂಲ್ಯವಾದ ಸಮಯವನ್ನು ಹೇಗೆ ಉಪಯುಕ್ತವಾಗಿ ಬಳಸಬಹುದು ಎಂಬುದನ್ನು ನೋಡೋಣ ಬನ್ನಿ .

1. ಧ್ಯಾನ – ಇದರಿಂದ , ನಮ್ಮ ದೇಹದ ನರಗಳು ಶಾಂತವಾಗುತ್ತದೆ, ಆತಂಕ ದೂರವಾಗುತ್ತದೆ , ನಿಮ್ಮ ಯೋಚನೆಗಳಿಗೆ, ಸ್ಪಷ್ಟತೆ ದೊರಕುತ್ತದೆ. ಪ್ರಾಣಾಯಾಮವನ್ನು ದಿನನಿತ್ಯ ಮಾಡಬೇಕು.

2. ಟಿವಿ ವೀಕ್ಷಣೆಯನ್ನು ಆದಷ್ಟು ಕಡಿಮೆ ಮಾಡಿ. ಇದು ನಿಮ್ಮನ್ನು ಇನ್ನೂ ಹೆಚ್ಚು ಗಾಬರಿಗೊಳಿಸಬಹುದು. ಕೊಂಚ ಸಮಯವನ್ನು ಪುಸ್ತಕ ಓದಲು ಮೀಸಲಿಡಿ.

3. ಹಳೆಯ ಹವ್ಯಾಸಗಳನ್ನು ಮತ್ತೆ ರೂಢಿಸಿಕೊಳ್ಳಿ.

4. ನಿಮ್ಮನ್ನು ಚಿಂತಗ್ರಸ್ತಾರನ್ನಾಗಿ ಮಾಡುವ ವಿಷಯಗಳಿಂದ ಆದಷ್ಟು ದೂರವಿರಿ  ಅಥವಾ ಅಂತಹ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸಲು ಪ್ರಯತ್ನಿಸಿ.

5. ನಿಮ್ಮ ದೈನಂದಿನ ಚಟುವಟಿಕೆಗಳನ್ನು ಪ್ಲಾನ್ ಮಾಡಿ , ಉಪಯುಕ್ತವಾದಂತಹ ಚಟುವಟಿಕೆಗಳ ಕಡೆ ಗಮನ ಕೊಡಿ.

6. ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಇಷ್ಟವಾಗುವಂಥಹ ಅಡುಗೆಯನ್ನು ಮಾಡಿ ಸವಿಯಿರಿ. ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳುವುದರ ಬಗ್ಗೆ ತಿಳಿದುಕೊಳ್ಳಿ.

7. ಮನೆಯ ಸದಸ್ಯರೆಲ್ಲ , ಕೆಲಸಗಳನ್ನು ಹಂಚಿಕೊಂಡು ಮಾಡಿದಲ್ಲಿ , ಮನೆಯಲ್ಲಿ ಸಾಮರಸ್ಯ ಹೆಚ್ಚುತ್ತದೆ.

8. ಮಕ್ಕಳ ಕಡೆ ಹೆಚ್ಚಿನ ಗಮನ ಕೊಡಿ. ಅವರು ಮಾಡುವುದಕ್ಕೆ ಆಗುವಂತಹ ಸಣ್ಣ ಪುಟ್ಟ ಕೆಲಸಗಳನ್ನು ಹೇಳಿಕೊಡಿ , ಅವರೇ ಮಾಡಲು ಬಿಡಿ. ಹಾಗೆಯೇ ಅವರ ಸೃಜನಶೀಲತೆಯನ್ನು ಹೆಚ್ಚಿಸುವ ಚಟುವಟಿಕೆಗಳನ್ನು ನೀಡಿ.

9. ನಿಮ್ಮ ಹಳೆಯ ಸ್ನೇಹಿತರೊಂದಿಗೆ ಮಾತನಾಡಿ.

10. ಮನೆಯ ಸುತ್ತಮುತ್ತಲಿರುವ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು ನೀಡಿ.

ಮನೆಯಿಂದ ಹೊರಹೋಗದಿದ್ದರು ಪರವಾಗಿಲ್ಲ , ಆದರೆ ಮನೆಗೆ ಯಾರಾದರು ಹಸಿವೆಯಿಂದ ಬಂದರೆ, ಅವರಿಗೆ ಸಹಾಯ ಮಾಡಿ.

ಈಗಿನ ಪರಿಸ್ಥಿತಿ , ನಮ್ಮೆಲರಿಗೂ ಬಹಳಷ್ಟು ಪಾಠಗಳನ್ನು ಕಳಿಸಿದೆ. ನಮ್ಮಲ್ಲಿ ಸಾಕಷ್ಟು ಅರಿವನ್ನು ಮೂಡಿಸಿದೆ. ತಿಂಗಳಿಗೊಮ್ಮೆ ಹೊಸ ಬಟ್ಟೆಯನ್ನು ಖರೀದಿಸದೆಯೇ ಕೂಡ , ಕೇವಲ ನಾಲ್ಕೈದು ಜೋಡಿ ಬಟ್ಟೆಯೊಂದಿಗೂ ಜೀವನ ನಡೆಸಬಹುದು. ಕನಿಷ್ಠ ಆಹಾರ ಸಾಮಗ್ರಿಗಳೊಂದಿಗೂ ಕೂಡ ಬದುಕಬಹುದು. ವಿನಾಕಾರಣ ಸುತ್ತಾಡದೆ , ಪರಿಸರಕ್ಕೆ , ಪ್ರಾಣಿ ಪಕ್ಷಿಗಳಿಗೆ ಉಸಿರಾಡಲು ಕೊಂಚ ಜಾಗ ನೀಡಬಹುದು.

ಶೋಕಿ ಜೀವನಶೈಲಿ ನಮಗೆ ತಾತ್ಕಾಲಿಕ ಸಂತೋಷ ನೀಡಬಹುದಷ್ಟೇ. ಆದರೆ ನಮ್ಮ ಜೀವನಕ್ಕೆ ಅದರದೆ ಆದ ಆಳವಾದ ಅರ್ಥವಿದೆ. ಅದನ್ನು ಅರಿಯಲು ನಮಗೆ ದೊರೆತಿರುವ ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳೋಣ. ಎಲ್ಲರೂ ಒಟ್ಟಾಗಿ ಈ ಜಗತ್ತನ್ನು ಇನ್ನೂ ಸುಂದರವಾಗುವಂತೆ ಪರಿವರ್ತಿಸೋಣ.

ಲೇಖನ: ಡಾ. ರಮ್ಯಾ ಎಚ್.ಪಿ.
ಬೆಂಗಳೂರು.