ಕುಳಿತುಕೊಂಡೇ ಸೂರ್ಯ ನಮಸ್ಕಾರ ಮಾಡಿ
ಸೂರ್ಯನಿಗೆ ಅಭಿಮುಖವಾಗಿ ನಿಂತು ಅಥವಾ ಕುಳಿತು ನಮಸ್ಕಾರ ಮಾಡುವ ವಿಧಾನವೇ ಸೂರ್ಯ ನಮಸ್ಕಾರ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ರಶ್ಮಿಗೆ ಮೈಯೊಡ್ಡಿ ಸೂರ್ಯ ನಮಸ್ಕಾರ (ಸುರ್ಯಸ್ನಾನ) ಮಾಡುವುದರಿಂದ ಮನಸ್ಸಿನಲ್ಲಿ ಹೊಸ ಚೈತನ್ಯ ಚಿಗುರೊಡೆಯುತ್ತದೆ.
ಸೂರ್ಯನನ್ನು ತದೇಕ ಚಿತ್ತದಿಂದ ನೋಡುವುದರಿಂದ ದೃಷ್ಠಿ ದೋಷ ನಿವಾರಣೆಯಾಗುವುದು. ಚರ್ಮ ರೋಗ ನಿವಾರಣೆಯಾಗುವುದು ಮತ್ತು ಸೂರ್ಯನ ರಶ್ಮಿಯಿಂದ ದೇಹ ಚೈತನ್ಯ ಪಡೆಯುತ್ತದೆ. ಆಸನ ಮಾಡುವ ಸರಿಯಾದ ಕ್ರಮ ಓದಿದ ಬಳಿಕ ಕೆಳಗೆ ನೀಡಲಾಗಿರುವ ವಿಡಿಯೊ ಪ್ರಯಾಕ ಆಸನ ಆರಂಭಿಸಿ.
ಮಾಡುವ ವಿಧಾನ:
1) ಮೊದಲು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ.
2) ಈಗ ಎರಡು ಕಾಲುಗಳನ್ನು ಮಡಚಿ ವಜ್ರಾಸನ ಸ್ಥಿತಿಗೆ ಬನ್ನಿ, ಬೆನ್ನು ಮತ್ತು ಕುತ್ತಿಗೆ ನೇರವಾಗಿರಲಿ.
3) ನಮಸ್ಕಾರಾಸನ: ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ತಲೆಯ ನೇರ ಮೇಲಕ್ಕೆತ್ತಿ ಹಸ್ತಗಳನ್ನು ಕೂಡಿಸಿಕೊಳ್ಳಿ. ಉಸಿರನ್ನು ಹೊರ ಹಾಕುತ್ತಾ ಹಸ್ತವನ್ನು ಎದೆಯ ಹತ್ತಿರ ತೆಗೆದುಕೊಂಡು ಬನ್ನಿ.
4) ಹಸ್ತ ಉತ್ತನಾಸನ:- ಉಸಿರು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಮೇಲಕ್ಕೆತ್ತಿ ಸ್ವಲ್ಪ ಹಿಂದಕ್ಕೆ ಭಾಗಿ.
5) ಶಶಾಂಕಾಸನ:- ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಮುಂದಕ್ಕೆ ಭಾಗಿ ಇಲ್ಲಿ ನಿಮ್ಮ ಹಸ್ತ ಮತ್ತು ಹಣೆಯ ಭಾಗ ನೆಲದಮೇಲೆ ಇರಿಸಿ. ಈಗ ಉಸಿರನ್ನು ತೆಗೆದುಕೊಳ್ಳುತ್ತಾ ತಲೆಯನ್ನು ಮೇಲಕ್ಕೆತ್ತಿ.
6) ಸಾಷ್ಟಾಂಗನಮಸ್ಕಾರ:- ಉಸಿರನ್ನು ಹೊರ ಹಾಕುತ್ತಾ ದೇಹದ ಎಂಟು ಅಂಗ ನೆಲಕ್ಕೆ ತಾಗಿಸಿ. ಎರಡು ಹಸ್ತ, ಎರಡು ಕಾಳುಬೇರಳು, ಎರಡು ಮಂಡಿ, ಹಣೆ ಅಥವಾ ಗದ್ದ ಮತ್ತು ಎದೆ ಈ ಎಂಟು ಅಂಗ ನೆಲಕ್ಕೆ ತಾಗಿಸುವ ಭಂಗಿ.
7) ಭುಜಂಗಾಸನ:- ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ತಲೆ ,ಎದೆಯ ಭಾಗ ಮತ್ತು ಹೊಟ್ಟೆಯ ಭಾಗವನ್ನು ಮೇಲಕ್ಕೆತ್ತಿ.
8) ಪರ್ವತಾಸನ:- ಉಸಿರನ್ನು ಹೊರ ಹಾಕುತ್ತಾ ಪ್ರಷ್ಠ ಭಾಗವನ್ನು ಮೇಲಕ್ಕೆತ್ತಿ. ಹಿಮ್ಮಡಿ ನೆಲಕ್ಕೆ ತಾಗಿರಲಿ, ಮಂಡಿ ಮತ್ತು ಬೆನ್ನು ನೇರವಾಗಿರಲಿ.
9) ಸಾಷ್ಟಾಂಗನಮಸ್ಕಾರ:- ಉಸಿರು ತೆಗೆದುಕೊಂಡು ಹಾಗೆಯೇ ಹೊರಹಾಕುತ್ತ ಮಂಡಿ, ಎದೆಯಭಾಗ ಮತ್ತು ಹಣೆ ಅಥವಾ ಗದ್ದ ನೆಲಕ್ಕೆ ತಾಗಿಸಿ.
10) ಭುಜಂಗಾಸನ:- ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ತಲೆ, ಎದೆಯ ಭಾಗ ಮತ್ತು ಹೊಟ್ಟೆಯ ಭಾಗವನ್ನು ಮೇಲಕ್ಕೆತ್ತಿ.
11) ಶಶಾಂಕಾಸನ:- ಉಸಿರನ್ನು ಹೊರ ಹಾಕುತ್ತಾ ನಿಧಾನವಾಗಿ ಪ್ರಷ್ಠ ಭಾಗವನ್ನು ಹಿಮ್ಮಡಿಯ ಮೇಲಿರಿಸಿ ನಿಮ್ಮ ಹಣೆ ಮತ್ತು ಹಸ್ತ ನೆಲದ ಮೇಲಿರಲಿ.
12) ಹಸ್ತ ಉತ್ತನಾಸನ:- ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ಮೇಲಕ್ಕೆತ್ತಿ ಸ್ವಲ್ಪ ಹಿಂದಕ್ಕೆ ಭಾಗಿ.
13) ನಮಸ್ಕಾರಾಸನ:- ಹಸ್ತಗಳನ್ನು ಕೂಡಿಸಿಕೊಂಡು ಉಸಿರನ್ನು ಹೊರ ಹಾಕುತ್ತಾ ಎದೆಯ ಹತ್ತಿರ ತೆಗೆದುಕೊಂಡು ಬನ್ನಿ. ಈಗ ಹಸ್ತಗಳನ್ನು ಬಿಡಿಸಿ ತೊಡೆಯ ಮೇಲಿರಿಸಿ ವಜ್ರಾಸನ ಸ್ಥಿತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.
ಉಪಯೋಗಗಳು:
ನಿಂತು ಮಾಡುವ ಸೂರ್ಯ ನಮಸ್ಕಾರದಲ್ಲಿ ಸಿಗುವ ಎಲ್ಲಾ ರೀತಿಯ ಲಾಭಗಳು ಕುಳಿತುಕೊಂಡು ಮಾಡುವ ಸೂರ್ಯ ನಮಸ್ಕಾರದಲ್ಲಿ ಪಡೆದುಕೊಳ್ಳಬಹುದಾಗಿದೆ.
ಎಚ್ಚರಿಕೆ:
ಮಂಡಿಯ ಗಾಯ ಮತ್ತು ನೋವು ಇರುವಂತವರು ಈ ಆಸನ ಮಾಡಬಾರದು.