ಮನುಷ್ಯರು ಅದೆಷ್ಟೋ ಬಾರಿ ಪ್ರಾಣಿಗಳನ್ನು ಮೋಸ ಮಾಡಿ ಹಿಡಿದು ಪಳಗಿಸುವುದು ಅಥವಾ ಭಕ್ಷಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಇಲ್ಲೊಂದು ಚಿರತೆ ಅಂಥ ಮನುಷ್ಯರಿಗೇ ಚಳ್ಳೆ ಹಳ್ಳು ತಿನ್ನಿಸಿ ಕಾಡು ಸೇರಿದೆ. ಆ ಚಿರತೆಯ ಬುದ್ಧಿವಂತಿಕೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಜನರು ಭಿನ್ನವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಪಾಳು ಬಾವಿಯಲ್ಲಿ ಚಿರತೆ ಬಿದ್ದಿತ್ತು. ಅದನ್ನು ರಕ್ಷಣೆ ಮಾಡುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿನೊಂದಿಗೆ ಬಂದಿದ್ದರು. ಚಿರತೆ ಸೆರೆ ಹಿಡಿಯುವುದನ್ನು ನೋಡಲು ಗ್ರಾಮಸ್ಥರೆಲ್ಲರೂ ಬಾವಿಯ ಸಮೀಪ ನೆರೆದಿದ್ದರು.

ಚಿರತೆ ಮೇಲೆ ಬಂದಾಗ ನೇರವಾಗಿ ಬೋನಿಗೆ ಹೋಗುವ ರೀತಿ ಬಾವಿಯ ಒಂದು ಅಂಚಿನಲ್ಲಿ ಬೋನು ಇಟ್ಟಿದ್ದರು. ಚಿರತೆಗೆ ಬೇರೆಲ್ಲಿಯೂ ದಾರಿ ಇಲ್ಲದಂತೆ ಬೋನಿನ ದ್ವಾರ ಬಿಟ್ಟು ಬಾವಿಯ ಸುತ್ತಲೂ ಮುಳ್ಳು ಗಿಡಗಳನ್ನು ಹಾಕಿದ್ದರು. ಚಿರತೆಗೆ ಬಾವಿಯಿಂದ ಮೇಲೆ ಬರಲು ಅನುಕೂಲ ಆಗುವಂತೆ ಬಾವಿಯೊಳಗೆ ಏಣಿ ಬಿಡಲಾಯಿತು. ಏಣಿ ಏರಿ ಬಂದರೆ ನೇರವಾಗಿ ಬೋನಿನ ಒಳಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದರು.

ಎಲ್ಲರಲ್ಲಿಯೂ ಕುತೂಹಲ ಮನೆ ಮಾಡಿತ್ತು. ಏಣಿ ಏರಿ ಬಂದ ಚಿರತೆ ಬೋನಿನ ಸಮೀಪ ಬಂದಿತು. ಇನ್ನೇನು ಅದು ಬೋನಿನೊಳಗೆ ಹೋಗುತ್ತದೆ. ಬೋನಿನ ದ್ವಾರ ಮುಚ್ಚಿ ಬಿಡಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಯಾರಾಗಿದ್ದರು. ಆದರೆ, ಚಿರತೆ ಬೋನಿನ ಒಳಗೆ ಹೋಗದೆ, ಅದರ ಪಕ್ಕದಲ್ಲಿ ಹಾಕಿದ್ದ ಮುಳ್ಳು ಗಿಡಗಳಿಂದ ನುಸುಳಿ ಕಾಡಿನತ್ತ ಓಡಿತು. ನೆರೆದಿದ್ದ ಜನರೆಲ್ಲ ಕೂಗಾಡಿ ಮಜಾ ಅನುಭವಿಸಿದರು.

ಅಸಲಿಗೆ ಇದು ಬಹಳ ವರ್ಷಗಳ ಹಿಂದೆ ನಡೆದಿರುವ ಘಟನೆ. ಚಿರತೆಯ ಚತುರತೆ ತೋರ್ಪಡಿಸುವ ಸಲುವಾಗಿ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಟ್ವಿಟರ್ ನಲ್ಲಿ ಆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದು ಈಗ ವೈರಲ್ ಆಗಿದೆ. ಆ ವಿಡಿಯೊವನ್ನು ಇನ್ ವಿಡ್ ತಂತ್ರಾಂಶದಲ್ಲಿ ಸರ್ಚ್ ಮಾಡಿದಾಗ 2013ರಲ್ಲಿ ಈ ವಿಡಿಯೊ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎನ್ನುವ ಫಲಿತಾಂಶ ಸಿಕ್ಕಿದೆ. ಅದೇನೆ ಇದ್ದರೂ ಚಿರತೆಯ ಬುದ್ದಿವಂತಿಕೆಗೆ ಸಕತ್ ಕಮೆಂಟ್ ಬಂದಿವೆ.