ಹಲವಾರು ಸ್ಥಳೀಯ ಚಳುವಳಿಗಳು, ಸಾಮೂಹಿಕ ನಿರಂತರ ಪ್ರಯತ್ನಗಳು, ತ್ಯಾಗಗಳು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದ್ದವು. ಬೃಹತ್ ಚಳುವಳಿಗಳು ಸಾರ್ವಜನಿಕ ಸ್ಮರಣೆಯಲ್ಲಿ ಇದ್ದರೂ, ಸ್ವಾತಂತ್ರ್ಯ ಹೋರಾಟವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಅನೇಕ ಪ್ರಾದೇಶಿಕ ಚಳುವಳಿಗಳು ಮರೆಯಾಗುತ್ತದೆ.

ವಸಾಹತು ಶಾಹಿಯಿಂದ ಸ್ವಾತಂತ್ರ್ಯ ಪಡೆಯುವ ಅಸಮಾನ್ಯ ಗುರಿಯತ್ತ ಸಾಗಲು ಕಾರಣವಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಿಳಗಿ ಗ್ರಾಮದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅದೆಷ್ಟೋ ರೋಚಕ ಸಂಗತಿಗಳು ಅಡಿಗೆ. ಸಿದ್ದಾಪುರ ತಾಲೂಕಿನಿಂದ 12 ಕಿ.ಮೀ. ದೂರದಲ್ಲಿ ಈ ಗ್ರಾಮವಿದೆ.

ಉತ್ತರ ಕನ್ನಡ ಜಿಲ್ಲೆ ಅರಣ್ಯ ಸಂಪತ್ತಿನಿಂದ ಕೂಡಿದ ಪ್ರದೇಶ. 1914 ಕ್ಕಿಂತ ಮೊದಲೇ ಬ್ರಿಟಿಷ್ ಸರಕಾರ ಉತ್ತರಕನ್ನಡ ಜಿಲ್ಲೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿತ್ತು. ಈ ಜಿಲ್ಲೆಯಲ್ಲಿ ಹೆಚ್ಚಾಗಿ ಅರಣ್ಯವನ್ನೇ ಬೆಳೆಸಬೇಕೆಂಬ ಉದ್ದೇಶದಿಂದ ಫಾರೆಸ್ಟ್ ಕಾಯ್ದೆಗಳನ್ನು ತುಂಬ ಬಿಗುಮಾಡಿತು.

ಆ ಸಮಯಕ್ಕೆ ಯಾವನೊಬ್ಬನೂ ಫಾರೆಸ್ಟ್ ಗಾರ್ಡ್‍ನ ಅನುಮತಿ ಪಡೆಯದೇ ಮೈನರ್ ಜಂಗಲ್‍ನಿಂದ ಉರುವಲು ಕಟ್ಟಿಗೆ, ಸೊಪ್ಪು, ವಗೇರೆ ತರುವಂತಿರಲಿಲ್ಲ. ಕತ್ತಿ, ಕೊಡಲಿ, ಹಗ್ಗ ಹಿಡಿದು ಅರಣ್ಯ ರಸ್ತೆಯಲ್ಲಿ ಓಡಾಡುವಂತಿರಲಿಲ್ಲ.

ಸ್ವಂತ ಭೂಮಿಯಿಂದ ಕಟ್ಟಿಗೆ, ಸೊಪ್ಪು, ಸದೆಗಳನ್ನು ರೈತರು ತಮ್ಮ ಮನೆಗೆ ಒಯ್ಯುವುದಾದರೂ ಆ ರಸ್ತೆ ಅರಣ್ಯ ಪ್ರದೇಶದಿಂದ ಹಾದು ಹೋಗುವಂತಿದ್ದರೆ ಫಾರೆಸ್ಟ್ ಗಾರ್ಡ್‍ರಿಗೆ ತಿಳಿಸಿಯೇ ಮನೆಗೆ ಒಯ್ಯಬೇಕಾಗಿತ್ತು.

ಇದನ್ನೂ ಓದಿ: ಕನ್ನಡ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸೈನಿಕ ತರಬೇತಿ

ತಪ್ಪಿದರೆ ಫಾರೆಸ್ಟ್ ಗಾರ್ಡ್ ವಿಧಿಸಿದ ದಂಡ ಅರಣ್ಯ ಇಲಾಖೆಗೆ ಪಾವತಿಸಬೇಕಾಗಿತ್ತು. ಇದು ರೈತರ ಬೇಸಾಯ, ನಿತ್ಯ ಜೀವನಕ್ಕೆ ಅತೀವ ತೊಂದರೆಯಾಗಿದ್ದಲ್ಲದೇ ಜೀವನ ಅಳಿವು-ಉಳಿವಿನ ಪ್ರಶ್ನೆಯಾಗಿ ಪರಿಣಮಿಸಿತು. ಈ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಬಿಳಗಿ ಜನತೆ ನಿತ್ಯ ಅನುಭವಿಸುತ್ತಿತ್ತು.

ಬೆಟ್ಟ-ಕಾಡು-ಗುಡ್ಡಗಳಲ್ಲಿ ತಾನಾಗಿಯೇ ಬೆಳೆಯುವ ಹುಲ್ಲು, ಸೊಪ್ಪುಗಳನ್ನು ದನ-ಕರುಗಳ ಮೇಯಲು ಸರಕಾರದ ಅನುಮತಿ ಏಕೆ ಬೇಕು ? ಅದೇ ಕಾಡು ಬೆಟ್ಟಗಳಲ್ಲಿ ಹುಟ್ಟಿ ಬೆಳೆದ ನಾವು ಪರದೇಶದವರಿಗೆ ತೆರಿಗೆ (ತೀರ್ವೆ) ಏಕೆ ಕೊಡಬೇಕು ? ಹರಿಯುವ ನದಿ ನೀರು ತರಲು ದೊಣ್ಣೆ ನಾಯಕನ ಅಪ್ಪಣೆ ಬೇಕೆ ? ಜನರ ಈ ಪ್ರಶ್ನೆಗಳಿಗೆ ಸರಕಾರಿ ಅಧಿಕಾರಿಗಳಲ್ಲಿ, ಊರ ಪಟೇಲರಲ್ಲಿ ಉತ್ತರವಿರಲಿಲ್ಲ.

ಹೀಗಾಗಿ ಊರಿನ ಜನರೊಡನೆ ಮೇಲ್ನೋಟಕ್ಕೆ ಸಾಮಾನ್ಯ ಸಂಬಂಧ ಕಳೆದುಕೊಂಡ ಊರಿನ ಪಟೇಲರು, ಸರಕಾರಿ ನೌಕರರು ಜನರ ಅಸೂಯೆಗೆ ಕಾರಣರಾದರು. ಪರಸ್ಪರ ದ್ವೇಷ, ಈರ್ಷೇ ದಿನೇ ದಿನೆ ಬೆಳೆಯತೊಡಗಿತು. ಕರವಸೂಲಿ ಕ್ರಮ ಸರಕಾರಿ ಅಧಿಕಾರಿಗಳಿಗೆ ಒಂದು ಸವಾಲಾಗಿ ಪರಿಣಮಿಸಿತು. ಸರಕಾರದ ನಿಯಮ ಕಟ್ಟಲೆಗಳು ಜನರಿಗೆ ಬೇರೊಂದು ಸವಾಲಾಯಿತು.

ಇತ್ತ ರಾಷ್ಟ್ರ ಮಟ್ಟದಲ್ಲಿ ಗಾಂಧೀಜಿಯವರು ಕರೆಕೊಟ್ಟ ಅಸಹಕಾರ ಚಳುವಳಿ ತೀವ್ರ ಪರಿಣಾಮ ಬೀರಲು ಶುರು ಮಾಡಿತು. ಹಲವು ವಕೀಲರು, ಸರಕಾರಿ ಅಧಿಕಾರಿಗಳು ವೃತ್ತಿ ತೊರೆದು, ದೇಶ ಸೇವೆಗೆ ಅಣಿಯಾದರು. ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ಹಳ್ಳಿ-ಹಳ್ಳಿಗಳಿಗೆ ತೆರಳಿ ಗಾಂಧೀಜಿ ಸಂದೇಶ ಪ್ರಸಾರಕ್ಕೆ ತೊಡಗಿದರು.

ಬಿಳಗಿಯೂ ಸೇರಿದಂತೆ ಸಿದ್ದಾಪುರ ತಾಲೂಕಿನಾದ್ಯಂತ ಅಸಹಕಾರ ಚಳುವಳಿ, ವಿದೇಶಿ ಬಟ್ಟೆ, ವಸ್ತುಗಳ ಬಹಿಷ್ಕಾರ ನಡದೆ ಇತ್ತು. ವಿಧಾಯಕ ಕಾರ್ಯ ಅನ್ವಯ ನೂಲುವುದು, ಖಾದಿ ವಸ್ರ್ತ ತೊಡುವ ಪ್ರತಿಜ್ಞೆ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಚಳುವಳಿಯ ಸಮಾಚಾರವನ್ನು ಸರಕಾರಿ ಅಧಿಕಾರಿಗಳ ಕಣ್ಣುತಪ್ಪಿಸಿ ಊರಿಂದ ಊರಿಗೆ ತಲುಪಿಸುವ ಕಾರ್ಯವೂ ಮುನ್ನೆಲೆಗೆ ಬಂತು. ಹೀಗಾಗಿ ಬಿಳಗಿಯಲ್ಲಿ ಕರಪತ್ರ ಮುದ್ರಣ ಪ್ರಾರಂಭವಾಯಿತು.

ಬ್ರಿಟಿಷರು ಬರುತ್ತಿದ್ದ ಮನೆಯಲ್ಲೇ ಕರಪತ್ರ ಮುದ್ರಣ

ಬ್ರಿಟೀಷ್ ಸರಕಾರ 1931ರ ಆರಂಭದಿಂದಲೇ ಸರಕಾರದ ವಿರುದ್ಧ ಘೋಷಣೆ ಕೂಗುವುದು, ಭಾಷಣ ಮಾಡುವುದು, ಮೆರವಣಿಗೆ ಮಾಡುವುದು ಹಾಗೂ ಸಭೆ ಕೂಡುವುದನ್ನು ಪ್ರತಿಬಂಧಿಸಿ ಒಂದು ಆಜ್ಞೆ ಹೊರಡಿಸಿತು.

ಇದರಿಂದ ಗುಪ್ತ ಕರಪತ್ರಗಳ ಪ್ರಸಾರ ಹೆಚ್ಚಾಯಿತು. ಉತ್ತರ ಕನ್ನಡ ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ 2-3 ಕೇಂದ್ರಗಳಲ್ಲಿ ಗುಪ್ತ ಕರಪತ್ರ ಮುದ್ರಣ ಆರಂಭಗೊಂಡವು. ಸಿದ್ದಾಪುರ ತಾಲೂಕಿನ ಗಡಿಯ ತಡಗಳಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಮಾಚಾರ ಸಂಗ್ರಹಿಸುವ ಹಾಗೂ ಕರಪತ್ರ ರವಾನೆಯ ಪ್ರಮುಖ ಕೇಂದ್ರವಾಯಿತು.

ಬಿಳಗಿ ರಾಮದಾಸ ತಿಮ್ಮಣ್ಣ ಪೈ ಅವರ ಮೆತ್ತಿನ ಮಾಳಿಗೆಯ ಮೇಲೆ 1930 ರಿಂದ 6 ವರ್ಷಗಳ ಕಾಲ ಪುಂಡ್ಲೀಕ ಶಣೈ ಹಾಗೂ ಶಂಕರ ಗುಲ್ವಾಡಿಯವರು ಕರಪತ್ರ ಮುದ್ರಣ ಕೆಲಸ ಗುಪ್ತವಾಗಿ ಮಾಡುತ್ತಿದ್ದರು. ರಾಮದಾಸ ತಿಮ್ಮಣ್ಣ ಪೈ ಅವರ ಮನೆಯಲ್ಲೇ ಕರಪತ್ರ ಮುದ್ರಣ ಪ್ರಾರಂಭಿಸಲು ಕಾರಣ ಏನೆಂದರೆ ಇವರು ಸಾರ್ವಜನಿಕವಾಗಿ ಗುರುತಿಸಿಕೊಂಡವರು ಹಾಗೂ ಜಮೀನುದಾರರು.

ಸ್ವಾತಂತ್ರ್ಯ ಚಳುವಳಿಯ ಮುಖ್ಯವಾಹಿನಿಯಲ್ಲಿ ನೇರವಾಗಿ ಗುರುತಿಸಿಕೊಳ್ಳದೇ ಬ್ರಿಟಿಷರ ಪರವಾಗಿದ್ದುಕೊಂಡು ಪರೋಕ್ಷವಾಗಿ ಚಳುವಳಿಗಾರರಿಗೆ ನೆರವಾಗುತ್ತಿದ್ದರು. ಅಲ್ಲದೇ ಬ್ರಿಟಿಷ್ ಅಧಿಕಾರಿಗಳು ಬಿಳಗಿಗೆ ಬಂದಾಗ ನೇರವಾಗಿ ಇವರ ಮನೆಗೆ ಬಂದು ಊರಿನ ಸ್ಥಿತಿಗತಿಗಳನ್ನು ತಿಳಿಯುತ್ತಿದ್ದರು. ಹಾಗಾಗಿ ಬ್ರಿಟಿಷರಿಗೆ ಈ ಕುರಿತು ಅನುಮಾನ ಬರುತ್ತಿರಲಿಲ್ಲ.

ಇವರು ಸೈಕ್ಲೋಸ್ಟೈಲ್ ಅಥವಾ ಪಡಿಯಚ್ಚು ಯಂತ್ರದಿಂದ ಕರಪತ್ರಗಳನ್ನು ಮುದ್ರಿಸುತ್ತಿದ್ದರು. ಸಿದ್ದಾಪುರದ ಮಾಳಪ್ಪ ಪೈ ಮಾಸ್ತರ ಹಾಗೂ ದುರ್ಗಪ್ಪಾ ಶಮೈನ್ ಮದ್ಲೆಗಾರ ಇವರು ಈ ಸರಳ ಯಂತ್ರ ಸಾಮಾನುಗಳನ್ನು ಒದಗಿಸುತ್ತಿದ್ದರು. ಅವರಿಗೆ ಆ ಯಂತ್ರದ ರಿಪೇರಿ ಕೆಲಸವೂ ಗೊತ್ತಿತ್ತು.

ಇದನ್ನೂ ಓದಿ: ಬೇಟೆಗಾರರ ಬಂದೂಕು ಕಸಿದು ಬೆನ್ನಟ್ಟಿದ 10ನೇ ತರಗತಿ ಬಾಲಕ

ಪ್ರತಿದಿನ ಮುದ್ರಿಸಲು ಬೇಕಾಗುವ ಮಸಿ, ಶಾಯಿ ಬಿಳಗಿಯಲ್ಲಿಯೇ ತಯಾರಿ ಮಾಡಿಕೊಳ್ಳುತ್ತಿದ್ದರು. ರಾತ್ರಿ ಉರಿಸಿದ ಕಂದಿಲ ಮಸಿಯನ್ನು ಸಂಗ್ರಹಿಸಿ ಅದಕ್ಕೆ ಅಲ್ಪ ಪ್ರಮಾಣದಲ್ಲಿ ಜೌಡಲ ಎಣ್ಣೆ ಬೆರೆಸಿ ಮುದ್ರಣ ಇಂಕ್ ತಯಾರಿಸಿಕೊಳ್ಳುತ್ತಿದ್ದರು.

ಬರವಣಿಗೆ ಹಾಗೂ ಮುದ್ರಣ ಕಲೆ ಪುಂಡ್ಲೀಕ ಶಣೈ ಚೆನ್ನಾಗಿ ಕರಗತ ಮಾಡಿಕೊಂಡಿದ್ದರು. ಅವರು ಅಕ್ಷರಗಳನ್ನು ದುಂಡಗೆ ತಪ್ಪು ರಹಿತವಾಗಿ ಬರೆಯುತ್ತಿದ್ದರು. ಅವರಿಗೆ ಕನ್ನಡ, ಇಂಗ್ಲೀಷ್, ಮರಾಠಿ ಜ್ಞಾನವು ಇತ್ತು. ಶಂಕರ ಗುಲ್ವಾಡಿಯವರು ಓಡಾಡಿ ಗಾಂಧೀ ಸಂದೇಶ ಹಾಗೂ ಚಳುವಳಿ ಸಮಾಚಾರ ತರುತ್ತಿದ್ದರು.

ಇದನ್ನೂ ಓದಿ: ಸಂಗಾತಿಗಾಗಿ 3200 ಕಿ.ಮೀ. ಸಂಚರಿಸಿದ ಗಂಡು ಹುಲಿ

ಭೂಗತರಾದ ಶಂಕರ ಗುಲ್ವಾಡಿಯವರು ರಾತ್ರಿ ಸಮಯಕ್ಕೆ ಬಿಳಗಿಗೆ ಬಂದು ಕರಪತ್ರ ಮುದ್ರಣ ಕೆಲಸ ಮುಗಿಸಿ ಬೆಳಕು ಹರಿಯುತ್ತಿದ್ದಂತೆ ಸಮೀಪದ ಅಭಿಗದ್ದೆ ಅರಣ್ಯ ಸೇರುತ್ತಿದ್ದರು. ವಾರಕ್ಕೆ ಒಂದು ಅಥವಾ ಎರಡು ಬುಲೆಟಿನ್ ಹೊರತರಲಾಗುತ್ತಿತ್ತು.

ಅದನ್ನು ಒಯ್ಯಲು ಅಥವಾ ಸಮಾಚಾರ ನೀಡುವ ಕಾರ್ಯಕರ್ತರಿಗೆಲ್ಲ ಮೋಹಿನಿ ರಾಮ ಪೈ ಮೂಡ್ಲಗಿರಿಯವರು ಊಟ-ಉಪಹಾರ ನೀಡುತ್ತಿದ್ದರು. ಯಾವುದೇ ವೇಳೆಯಲ್ಲಿ ಬಂದರೂ ತುತ್ತು ಅನ್ನ ನೀಡುವ ಅನ್ನಪೂರ್ಣೆಯಾಗಿದ್ದರು.

ಇದನ್ನೂ ಓದಿ: ಹೆಣ್ಣು ಮುಗು ಹುಟ್ಟಿದರೆ 111 ಗಿಡ ನೆಡುವ ಗ್ರಾಮ

ಶಿರಸಿಯಲ್ಲಿ ಸೊಂದೆ ನಾರಾಯಣ ರಾಯರ ವಖಾರಿ ಎದುರು ಮಾಮಲೇದಾರನ ಮನೆ ಇದ್ದಿತು. ಅಲ್ಲಿ ಸರಕಾರಿ ನೌಕರರ ಕೂಟಗಳು ನಡೆಯುತ್ತಿರುತ್ತಿದ್ದವು. ಕದ್ದು-ಮುಚ್ಚಿ ಅಲ್ಲಿಯ ಸುದ್ದಿಗಳನ್ನೇ ಬಿಳಗಿ ಗೋಪಾಲ ಶಣೈ ಸಂಗ್ರಹಿಸಿ ಬರೆದು ಸಿದ್ದಾಪುರ ಚಂದ್ರಘಟ್ಗಿಯವರಲ್ಲಿ ತಲುಪಿಸುತ್ತಿದ್ದರು.

ಪ್ರತಿವಾರವೂ ತವರು ಮನೆಗೆ ಹೋಗುವುದಾಗಿ ಗೋದುಬಾಯಿ ಯಾನೆ ಸೀತಾಬಾಯಿ ಮಡಗಾಂವಕರ ಚಂದ್ರಘಟ್ಗಿಯವರಲ್ಲಿ ಹೋಗಿ ಬಿಳಗಿಯ ಕರಪತ್ರಗಳನ್ನು ತಲುಪಿಸಿ ಅಲ್ಲಿಯ ಸಮಾಚಾರಗಳನ್ನು ಬಿಳಗಿಗೆ ತರುತ್ತಿದ್ದರು.

ಪ್ರತಿ ಸಲ ಕಾಡು ದಾರಿಯಲ್ಲಿ 8 ಮೈಲು ದೂರ ಮಗುವನ್ನು ಕಂಕುಳಲ್ಲಿ ಹಿಡಿದು ಓಡಾಡಬೇಕಿತ್ತು. ಜೈಲು ಸೇರಿದ ಅವಧಿ ಬಿಟ್ಟು ಸುಮಾರು ಸತತ ಆರು ವರ್ಷ ಅವರು ಈ ಕೆಲಸ ಮಾಡಿದರು.

ಇದನ್ನೂ ಓದಿ: ಕನ್ನಡ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸೈನಿಕ ತರಬೇತಿ

ರಾಮ ನಾರಾಯಣ ಪೈಯವರು ಬಿಳಗಿಯಲ್ಲಿ ಸರಕಾರಿ ಪೋಸ್ಟ್ ಮಾಸ್ತರರಾಗಿದ್ದರು. ಅವರಲ್ಲಿ ಪತ್ರ ಒಯ್ಯಲು ಹಾಗೂ ಅಂಚೆ ಕಾರ್ಡ ಕವರ್ ಖರೀದಿಸಲು ಬಂದ ಜನರ ಮೂಲಕ ಹಳ್ಳಿ-ಹಳ್ಳಿಗೆ ಕರಪತ್ರಗಳನ್ನು ಕಳಿಸುತ್ತಿದ್ದರು. ಅದರಿಂದ ಅವು ಪೋಲಿಸರ ಕೈ ಸೇರದೇ ತಲುಪುತ್ತಿದ್ದವು. ಆಗಿನ ಬಿಳಗಿಯ ಬಹುಪಾಲು ಸ್ರ್ತೀ-ಪುರುಷರು ಕರಪತ್ರಗಳನ್ನು ಸಾಗಿಸುತ್ತಿದ್ದರು.

ಬಿಳಗಿಯಲ್ಲಿ 51ಕ್ಕೂ ಹೆಚ್ಚು ನಾಗರಿಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ತಮ್ಮದೇ ಕೊಡುಗೆ ನೀಡಿದ್ದಾರೆ. ಇತಿಹಾಸಕಾರ ಪದ್ಮಕರ ಮಡಗಾಂವಕರರ “ಬಿಳಗಿಯಲ್ಲಿ ಸ್ವಾತಂತ್ರ್ಯ ಚಳುವಳಿ” ಕೃತಿಯಲ್ಲಿ ಸಂಪೂರ್ಣವಾಗಿ ತಿಳಿಯಬಹುದು.

ಅವರಲ್ಲಿ ಕರಪತ್ರ ಮುದ್ರಣ ಹಾಗೂ ಸಾಗಾಣಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಿಕ್ಷೆ ಅನುಭವಿಸಿದವರಲ್ಲಿ ನರಸಿಂಹ ರಾಮಚಂದ್ರ ಭಂಡಾರಕರ, ವಾಸುದೇವ ಅನಂತ ಪ್ರಭು ಗೋಸಾವಿ, ರಾಮ ನಾರಾಯಣ ಪೈ ಮೂಡ್ಲಗಿರಿ, ವೆಂಕಟೇಶ ನಾಗೇಶ ಪೈ ಮೂಡ್ಲಗಿರಿ,  ರಾಮದಾಸ ತಿಮ್ಮಣ್ಣ ಪೈ ಮೂಡ್ಲಗಿರಿ, ಮೋಹಿನಿ ರಾಮ ಪೈ ಮೂಡ್ಲಗಿರಿ, ವಿಠೋಬ ದಾಸಪ್ಪ ಶೆಣೈ ಮಡಗಾಂವಕರ, ಪಾಂಡುರಂಗ ದಾಸಪ್ಪ ಶೆಣೈ ಮಡಗಾಂವಕರ, ರಾಮ ಶಂಕರ ಭಟ್ಟ ಬಿಳಗಿ ಹಾಗೂ ಬಿಳಗಿಯಲ್ಲಿ ದುಡಿದ ಪರಊರಿನ ಸ್ವಾತಂತ್ರ್ಯ ಯೋಧ ದಕ್ಷಿಣ ಕನ್ನಡ ಜಿಲ್ಲೆಯ ಗುಲ್ವಾಡಿಯ ಶಂಕರ ಗುಲ್ವಾಡಿ ಮಾಮಾ ಕೂಡ ಪ್ರಮುಖರಾಗಿದ್ದಾರೆ.

ಆ ಕಾಲದಲ್ಲಿ ಕರಪತ್ರ ಮುದ್ರಣ ಪ್ರಾರಂಭಿಸಿದ ಬಿಳಗಿಯ ರಾಮದಾಸ ತಿಮ್ಮಣ್ಣ ಪೈಯವರ ಮನೆಯು ಈಗಲೂ ಸುಸ್ಥಿತಿಯಲ್ಲಿ ಇದೆ. ಮೋಹಿನಿ ರಾಮ ಪೈ ಅವರ ಮೊಮ್ಮಗ ಶಾಂತರಾಮ ಹನುಮಂತ ಪೈ ವಾಸವಾಗಿದ್ದಾರೆ.

ಆಧಾರ : “ಬಿಳಗಿಯಲ್ಲಿ ಸ್ವಾತಂತ್ರ್ಯ ಚಳುವಳಿ” – ಪದ್ಮಾಕರ ಮಡಗಾಂವಕರ್.

ವಿಡಿಯೊ, ಲೇಖನ: ದರ್ಶನ ಹರಿಕಾಂತ,
ಶಿಕ್ಷಕರು, ಸಿದ್ದಾಪುರ.