ಕೋವಿಡ್ 19 ವೈರಸ್ ಹಾವಳಿ ಹೆಚ್ಚಾದ ಬಳಿಕ ಪ್ರತಿಯೊಬ್ಬರಲ್ಲಿಯೂ ಆಹಾರದ ಕಾಳಜಿ ಹೆಚ್ಚಾಗಿದೆ. ಎಲ್ಲೆಡೆ ಗುಣಮಟ್ಟದ ಆಹಾರದ ಹುಡುಕಾಟ ಶುರುವಾಗದೆ. ಯಥೇಚ್ಚ ಪೌಷ್ಟಿಕಾಂಶವುಳ್ಳ, ರೋಗ ನಿರೋಧಕ ಹೆಚ್ಚಿಸಬಲ್ಲ ದೇಶೀಯ ತಳಿಗಳಗಳೇ ಅದರಲ್ಲಿ ಅಗ್ರ ಸ್ಥಾನದಲ್ಲಿವೆ.

ಇಂಥದ್ದೇ ವಿಶೇಷತೆ ಹೊಂದಿರುವ ಕುಣಬಿ ಜನಾಂಗದ ಕೃಷಿ ಉತ್ಪನ್ನಗಳು ಈಗ ಗಮನ ಸೆಳೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡೇರಿಯಾ ಎಂಬ ಗ್ರಾಮದ ಕುಣಬಿ ಜನಾಂಗ ಪಾರಂಪರಿಕ ಶೈಲಿಯಲ್ಲಿ ಬೆಳೆಯುವ ಗಡ್ಡೆ ಗೆಣಸು ಅನೆಕ ವಿಶೇಷತೆಗಳನ್ನು ಹೊಂದಿದೆ.

ಪಶ್ಚಿಮ ಘಟ್ಟದ ದಟ್ಟವಾದ ಕಾಡು, ಎತ್ತರಕ್ಕೆ ಬೆಳೆದ ಮರಗಳು. ಇಂಥ ಸಹಜ ನಿಸರ್ಗದಲ್ಲಿ ಡೇರಿಯಾ ಗ್ರಾಮ ಇದೆ. ಇಡೀ ಗ್ರಾಮ ಸುಮಾರು 12 ಎಕರೆ ಪ್ರದೇಶದಲ್ಲಿ ಮೆಟ್ಟಿಲು ಕೃಷಿ ಪದ್ದತಿಯಲ್ಲಿ ಭತ್ತವನ್ನು ಮುಖ್ಯ ಕೃಷಿಯಾಗಿ ಬೆಳೆಯುತ್ತಾರೆ. ಅದರ ಜತೆಯಲ್ಲಿಯೇ ಮನೆಯ ಹಿತ್ತಲಿನಲ್ಲಿ ಗಡ್ಡೆ ಗೆಣಸು ಬೆಳೆಯುತ್ತಾರೆ.

ನಿಸರ್ಗದತ್ತವಾಗಿ ಬೆಳೆಯುವ ಆ ಗಡ್ಡೆ ಗೆಣಸುಗಳು ಅತ್ಯಧಿಕ ರೋಗ ನಿರೋಧಕ ಶಕ್ತಿಗಳನ್ನು ಹೊಂದಿವೆ. ಹಾಗಾಗಿ, ಅನೇಕರು ಗಡ್ಡೆ ಗೆಣಸಿಗಾಗಿ ಆ ಹಳ್ಳಿಯನ್ನು ಹುಡುಕಿ ಬರುತ್ತಾರೆ. ವಾಸ್ತವದಲ್ಲಿ ಈ ಕುಣಬಿ ಕುಟುಂಬಗಳು ಮೂಲತಃ ಗೋವಾ ರಾಜ್ಯದವರು. ಸುಮಾರು ವರ್ಷದ ಹಿಂದೆ ಡೇರೆ ಕಟ್ಟಿಕೊಂಡು ವಾಸವಾಗಿದ್ದ ಕಾರಣಕ್ಕೆ ಈ ಊರಿಗೆ ಡೇರಿಯಾ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಕುಣಬಿ ಸಮುದಾಯದವರು ಹಿಂದಿನಿಂದಲೂ ಗಡ್ಡೆಗೆಣಸು ಕೃಷಿ ಮಾಡಿಕೊಂಡು ಬಂದಿದ್ದಾರೆ. ಹಿಂದೆ ಋಷಿ ಮುನಿಗಳು ಇವುಗಳನ್ನೆ ಆಹಾರವಾಗಿ ಬಳಸುತ್ತಿದ್ದರು. ಜ್ವರ ನಿರೋಧಕ ಶಕ್ತಿ ಹೊಂದಿರುವ ಗೆಣಸುಗಳು ಆರ್ಯುವೇದದಲ್ಲಿಯೂ ಮಹತ್ವ ಪಡೆದಿದೆ. ಇವು ಪಕೃತಿ ಮಾತೆಯ ಅದ್ಭುತ ಸೃಷ್ಟಿ. ಗಡ್ಡೆಗೆಣಸು ಯಥೇಚ್ಚವಾಗಿ ಖನಿಜ ಪೋಷಕಾಂಶದಿಂದ ಕೂಡಿದ ಆಹಾರವಾಗಿದೆ.

ಕೊಂಕಣಿ ಭಾಷೆಯಲ್ಲಿ ಕೆಸು, ಕಾಸರ, ಆಲು, ಆಳೆ, ಕಾಂದೋದಯೇ, ಕೋನಾ, ಖಣಗಾ, ಚುರಣ, ವೃತ್ತಾಳಿ ಹೀಗೆ ಹಲವು ವೈವಿಧ್ಯಮಯ ಗಡ್ಡೆಗೆಣಸುಗಳನ್ನು ಇಲ್ಲಿ ಕಾಣಬಹುದು. ಇವುಗಳು ಔಷಧಿ ಗುಣಗಳನ್ನು ಹೊಂದಿರುವುದರಿಂದ ಮಧುಮೇಹ ರೋಗಿಗಳು ಆತಂಕವಿಲ್ಲದೆ ಸೇವಿಸಬಹುದು.

ಕುಣಬಿ ಸಮುದಾಯದವರು ಬೆಳೆದ ವಿಶೇಷ ಗೆಣಸು ಚಿತ್ರ: ಉಮಾತನಯ

ಗೆಣಸು ಮೇಳ
ಪ್ರತಿವರ್ಷ ಜೊಯಿಡಾದಲ್ಲಿ ಗಡ್ಡೆ ಗೆಣಸುಮೇಳ ಆಯೋಜಿಸಲಾಗುತ್ತದೆ. ತೀರಾ ಇತ್ತೀಚೆಗೆ ದೂರದೂರದ ಊರುಗಳಿಂದ ಜನ ಗಡ್ಡೆ ಗೆಣಸು ಖರೀದಿ ಮತ್ತು ನೋಡಲು ಬರುತ್ತಿದ್ದಾರೆ. ಸಾಮಾನ್ಯವಾಗಿ ಗೆಣಸಿನ ಬಣ್ಣ ಕೆಂಪದಾಗಿರುತ್ತದೆ. ಆದರೆ ಇಲ್ಲಿನ ಗೆಣಸಿನ ಬಣ್ಣ ಭಿನ್ನವಾಗಿದ್ದು, 18 ತಳಿಗಳನ್ನು ಕಾಣಬಹುದು. 6 ನಮೂನೆಯ ಕೇಸೆುಗಡ್ಡೆಗಳಿದ್ದು ಸಾಂಬಾರನಲ್ಲಿ ಇದನ್ನು ಬಳಸುತ್ತಾರೆ.

ಗೆಣಸಿಗೆ ಕುಣಬಿಗಳು ಮುಡ್ಲಿ ಎಂದು ಕರೆಯುತ್ತಾರೆ. ಕಾಳಿ ಮುಡ್ಲಿ, ಲಾಂಬಟ್ ಮುಡ್ಲಿ, ಗಿಡ್ಡಿ ಮುಡ್ಲಿ, ದಾವಾ ಮುಡ್ಲಿ ಎಂದೆಲ್ಲಾ ಬಗೆಗಳಿವೆ.  ಮಾರ್ಚ್ ಏಪ್ರಿಲ್ (ಹೋಳಿ ಹುಣ್ಣಿಮೆ)ವೇಳೆ ಗಡ್ಡೆ ನೆಟ್ಟು ಸಸಿಯ ಮಡಿ ಮಾಡುತ್ತಾರೆ. ನಂತರ ಕಾಲುವೆ ಹೊಡೆದು ಅದರ ಜತೆಗೆ  ಕಟ್ಟಿಗೆ ತುಂಬಿ, ಸುಟ್ಟು, ಹಸಿ ಸೊಪ್ಪು ಸಗಣಿ ಹಾಕಿ ಮಳೆಗಾಲ ಆರಂಭಕ್ಕೂ ಮುನ್ನ ನಾಟಿ ಮಾಡುತ್ತಾರೆ.

ಮಳೆ ಬೀಳಲಾರಂಭಿಸಿದ ನಂತರ ಕೇಸುಗಡ್ಡೆಗೆ ಹಸಿ ಸೆಗಣಿ ಹಾಕಿ ಸುತ್ತ ಮಣ್ಣು ಹಾಕುತ್ತಾರೆ. ಮುಂದೆ ಸೆಪ್ಟಂಬರ್ ನವೆಂಬರ್ ಹೊತ್ತಿಗೆ ಗೆಣಸು ಬೆಳೆದು ನಿಲ್ಲುತ್ತವೆ. ಕೆಂಪು ಮಣ್ಣಿನ ಫಲವತ್ತತೆ ಇಲ್ಲಿನ ಗಡ್ಡೆಗಳ ಮೌಲ್ಯ ಹೆಚ್ಚಿಸಿದೆ. 26ಕ್ಕೂ ಹೆಚ್ಚು ಗಡ್ಡೆ ಗೆಣಸುಗಳ ತಳಿ ಸಂರಕ್ಷಣೆ ಕಾರ್ಯಕ್ಕೆ ಕೇಂದ್ರ ಸರಕಾರದ ತಳಿ ವೈವಿಧ್ಯ ಸಂರಕ್ಷಣೆ ಮತ್ತು ರೈತ ಹಕ್ಕುಗಳ ಪಾಧ್ರಿಕಾರ(ಪಿಇವಿ ಮತ್ತು ಎಂಆರ ಎ)2014-15ನೇ ಸಾಲಿನ ಪ್ಲಾಂಟ್ ಜಿನೋಮ್ ಸೇವರ್ ಪ್ರಶಸ್ತಿ ಜತೆಗೆ 10 ಲಕ್ಷ ರೂ ನೀಡಿ ಗೌರವಿಸಿದೆ.

ಬಿಹಾರದ ಪೂರ್ವ ಚಂಪಾರಣ್ ನ ಮೋಟಿಹರಿಯಲ್ಲಿ ನಡೆದ ಸಮಾರಂಭದಲ್ಲಿ ಜಯಾನಂದ ಡೇರೇಕರ್ ಈ ಪ್ರಶಸ್ತಿ ಪಡೆದುಕೊಂಡು ಬಂದಿದ್ದಾರೆ. ಸಮೀಪದ ರಾಮನಗರ, ಲೋಂಡಾ, ಕ್ಯಾಸಲರಾಕ್ ಹೋಗುವ ದಾರಿ ಬದಿ ಈ ಗಡ್ಡೆ ಗೆಣಸುಗಳ ಮಾರಾಟ ಜೋರಾಗಿ ಸಾಗಿರುತ್ತದೆ. ಇದೇ ರೀತಿ ಗೋವಾದ ಸಾಕಳಿ ಮಾರುಕಟ್ಟೆಯಲ್ಲೂ ಈ ಗಡ್ಡೆ ಗೆಣಸುಗಳಿಗೆ ಭಾರಿ ಬೇಡಿಕೆ ಮತ್ತು ಬೆಲೆ ಇದೆ.

ಭತ್ತದಲ್ಲಿಯೂ ಗಂಧ ಸಾಲಿ, ಕಾಲಾ ಜೀರಾ, ಕಾಗಿಸಾಳಿ, ಹೀಗೆ ಹಲವು ದೇಸಿ ತಳಗಳನ್ನು ಇವರು ಬೆಳೆಯುತ್ತಾರೆ. ಈ ಕೃಷಿಯಲ್ಲಿ ನಮಗೆ ನೆಮ್ಮದಿ, ಖುಷಿ ಇದೆ ಎನ್ನುತ್ತಾರೆ ಪ್ರಗತಿಪರ ರೈತ ಶಂಕರ ಲಂಗಟಿ.

ಡೇರಿಯಾ ಗ್ರಾಮ

ಸಾಕಷ್ಟು ಪೌಷ್ಟಿಕ ಅಂಶಗಳ ಜತೆಗೆ ಔಷಧ ಗುಣ ಗಡ್ಡೆಗಳಲ್ಲಿವೆ. ಗಡ್ಡೆ ತರಕಾರಿ ಮತ್ತು ಕಾರ್ಬೋಹೈಡ್ರೇಟ್ ನ ಉತ್ತಮ ಮೂಲ. ಕ್ಯಾಲ್ಸಿಯಂ, ಪಾಸರಸ್, ಪೊಟ್ಯಾಶಿಯಂ ಮತ್ತು ಮೆಗ್ನೇಷಿಯಂ ಅಂಶ ಇದರಲ್ಲಿವೆ. ಇದರಲ್ಲಿ ಕಬ್ಬಿಣದ ಅಂಶವೂ ಇದ್ದು, ಮಹಿಳೆಯರಿಗೆ ಅತ್ಯುತ್ತಮ. ಈ ಗಡ್ಡೆ ಗೆಣಸುಗಳ ಬಗ್ಗೆ ವ್ಯಾಪಕ ಪ್ರಚಾರ ಮತ್ತು ಬಳಕೆಯ ತುರ್ತು ಅಗತ್ಯ ಇದೆ.

ಪ್ರಸನ್ನ ಕರ್ಪೂರ, ಪರಿಸರವಾದಿ, ಪತ್ರಕರ್ತರು.

ಗಡ್ಡೆ ಗೆಣಸು ಬೆಳೆಗಾರರು ಸಂಘಟಿತರಾಗಿದ್ದಾರೆ. ಉತ್ತಮ ದರದೊಂದಿಗೆ ಗಡ್ಡೆ ಗೆಣಸು ಖರೀದಿಸುವವರು ಮುಂದೆ ಬರುತ್ತಿದ್ದಾರೆ. ರುಡ್ ಸೆಟ್ ನಂಥ ಸಂಘ ಸಂಸ್ಥೆಗಳ ಸಹಕಾರದಿಂದ ಗೆಣಸುಗಳ ಮೌಲ್ಯವರ್ಧನೆ ಮಾಡಬೇಕೆಂದಿದ್ದೇವೆ. ಭಾರತದಾಚೆಗೂ ಈ ಗಡ್ಡೆ ಗೆಣಸುಗಳ ಮಹತ್ವ ಸಾರಬೇಕು ಎನ್ನುವುದು ನಮ್ಮ ಗುರಿ.

ಜಯಾನಂದ ಡೇರೇಕರ್, ಜೊಯಿಡಾ ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ.

ಲೇಖನ: ವಿನೋದ ಪಾಟೀಲ್,
ಬೆಳಗಾವಿ.