ಭಾರತೀಯರಿಗೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಬ್ರಿಟೀಷರ ಎದೆ ನಡುಗಿಸಿ ಭಾರತಾಂಬೆಗೆ ತಮ್ಮ ಪ್ರಾಣವನ್ನು ಅರ್ಪಿಸಿದ ಕ್ರಾಂತಿಕಾರಿಗಳಾದ ಆ ಮೂವರು ಈಗಲೂ ನಮ್ಮೊಳಗಿನ ಶಕ್ತಿಯಾಗಿ ಉಳಿದುಕೊಂಡಿದ್ದಾರೆ.

ಸೌಂಡರ್ಸ್ ಎಂಬ ಆಂಗ್ಲ ಅಧಿಕಾರಿಯ ಪೀಡೆಯಿಂದ ಮುಕ್ತಿ ನೀಡಿದ ಈ ಮೂವರು, ನಗುನಗುತ ನೇಣುಗಂಬವನ್ನು ಏರಿದ್ದು ಇದೇ ಮಾ.23 ರಂದು. ಆಗಲೇ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಯೊಂದು ಭಾರತದಲ್ಲಿ ಮೊಳಗಲು ಪ್ರಾರಂಭಿಸಿತು! ನಗುನಗುತಲೇ ಉರುಳಿಗೆ ಚುಂಬಿಸಿ ಕೊರಳೊಡ್ಡಿದಾಗ ಈ ಮೂವರಿಗೆ 22, 23 ವರ್ಷಗಳಷ್ಟೇ! ಅವರ ಇತಿಹಾಸವನ್ನು ಮತ್ತೆ ಮತ್ತೆ ಓದುವ ಮೂಲಕ ಬಲಿದಾನವನ್ನು ಸದಾ ನೆನೆಸಬೇಕು.

ಸ್ವಾತಂತ್ರ್ಯ ಪೂರ್ವ 1928ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದಾದ್ಯಂತ ಈ ಕಮಿಷನ್ ಗೆ ತೀವ್ರ ವಿರೋಧ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಜನರು ‘ಸೈಮನ್ ಗೋ ಬ್ಯಾಕ್’ (ಸೈಮನ್ ಹಿಂದಿರುಗು) ಎಂದು ನಿಷೇಧ ಯಾತ್ರೆಯೊಂದಿಗೆ ಬೀದಿಗಿಳಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು.
ಇದರಲ್ಲಿ ಲಾಲಾ ಲಜಪತ ರಾಯ್ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಲ್ಲುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು.
ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ ಕ್ರೂರ ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು. ಆಂಗ್ಲ ಅಧಿಕಾರಿಯನ್ನು ಕೊಂದ ಈ ಮೂವರನ್ನು ಹಿಡಿಯಲು ಬ್ರಿಟಿಷ್ ಸರಕಾರ ಶತಪ್ರಯತ್ನ ಮಾಡಿತು. ಆದರೆ ಆರಕ್ಷಕರ ಕಣ್ಣು ತಪ್ಪಿಸಿ ಇವರೆಲ್ಲರೂ ಭೂಗತರಾದರು ಮತ್ತು ಇತರ ಕ್ರಾಂತಿಕಾರಿಗಳಿಗೆ ಈ ಕಾರ್ಯವನ್ನು ಮುನ್ನಡೆಸಲು ಸ್ಪೂರ್ತಿ ನೀಡಿದರು. ಮುಂದೊಂದು ದಿನ ಇವರನ್ನು ಇನ್ನೊಂದು ಪ್ರಕರಣದಲ್ಲಿ ಬಂಧಿಸಿ 23-3-1930ರಲ್ಲಿ ಲಾಹೋರಿನ ಸೆಂಟ್ರಲ್ ಜೈಲಿನಲ್ಲಿ ಮೂವರನ್ನು ಗಲ್ಲಿಗೇರಿಸಲಾಯಿತು.

ಭಗತ್ ಸಿಂಗ್
ಪಂಜಾಬಿನ ಒಂದು ದೇಶಭಕ್ತ ಸಿಖ್ ಕುಟುಂಬದಲ್ಲಿ 27-9-1907 ರಂದು ಭಗತ್ ಸಿಂಗ್ ಜನಿಸಿದರು. 3 ವರ್ಷದ ಬಾಲಕನಾಗಿದ್ದಾಗ ಭಗತ್ ಸಿಂಗ್ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು. ಊರಿನಾಚೆ ಹೊಲ ಗದ್ದೆಗಳ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿರಿಯರು ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದ್ದದ್ದನ್ನು ಕಂಡು ಅವನೆಡೆಗೆ ನಡೆದರು. ಬಾಲಕನ ತಂದೆ ಕುತೂಹಲದಿಂದ ‘ಏನು ಮಾಡುತ್ತಿದ್ದೀಯಾ?’ ಎಂದು ಕೇಳಿದರು. ಆಗ ಬಾಲಕನು ‘ಈ ಹೊಲದ ತುಂಬಾ ನಾನು ಬಂದೂಕುಗಳನ್ನು ನೆಡುತ್ತೇನೆ’ ಎಂದು ಮುಗ್ಧವಾಗಿ ಉತ್ತರಿಸಿದನು. ಏಕೆ ಎಂದು ಪ್ರಶ್ನಿಸಿದಕ್ಕೆ ‘ಈ ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸಬಹುದು’ ಎಂಬ ಉತ್ತರ ನೀಡಿದ. ಇದನ್ನು ಕೇಳುತ್ತಿದ್ದ ಹಿರಿಯರು ಈ ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.

ಶಿವರಾಮ ಹರಿ ರಾಜಗುರು
ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ24-8-1908 ರಲ್ಲಿರಾಜಗುರು ಜನಿಸಿದರು. ಅನೇಕ ಗ್ರಂಥಗಳ ಅಧ್ಯಯನ ಮಾಡಿದ ಅವರು ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಸದಸ್ಯರಾಗಿದ್ದರು.
ಒಮ್ಮೆ ಕ್ರಾಂತಿಕಾರಿಗಳು ಊಟಕ್ಕಾಗಿ ಸೇರಿದ್ದ ಸ್ಥಳದಲ್ಲಿ ರಾಜಗುರು ರೊಟ್ಟಿಯನ್ನು ತಯಾರಿಸುತ್ತಿದ್ದನು. ತಂದೂರ್ ಒಳಗೆ ಬೇಯಿಸಿದ ರೊಟ್ಟಿಗಳನ್ನು ಬರಿಗೈಯ್ಯಿಂದ ಹೊರತೆಗೆಯುತ್ತಿದ್ದ ರಾಜಗುರುನನ್ನು ನೋಡಿದ ಓರ್ವ ಕ್ರಾಂತಿಕಾರಿ ಅವನನ್ನು ಪ್ರಶಂಸೆ ಮಾಡಿದನು. ಆಗ ಇನ್ನೋರ್ವ ಕ್ರಾಂತಿಕಾರಿ ತಮಾಷೆ ಮಾಡುತ್ತಾ ‘ತಂದೂರ್ ಒಳಗೆ ಕೈ ಹಾಕುವುದು ದೊಡ್ಡ ಕೆಲಸವಲ್ಲ. ರಾಜಗುರು ಪೊಲೀಸರ ಅತ್ಯಾಚಾರಗಳನ್ನು ಇಷ್ಟು ಸಹಿಷ್ಣುತೆಯಿಂದ ಎದುರಿಸಿದರೆ ಮಾತ್ರ ಅದು ಪ್ರಶಂಸನೀಯ’ ಎಂದನು. ಇದನ್ನು ಕೇಳಿದ ರಾಜಗುರು ಶಾಂತವಾಗಿ ಒಂದು ಬಾಣಲೆಯನ್ನು ಬಿಸಿ ಮಾಡಿ ತನ್ನ ಎದೆಗೆ ಒತ್ತಿಕೊಂಡನು. ಚರ್ಮ ಸುಟ್ಟು ಹೋಯಿತು. ಪುನಃ ಹಾಗೆ ಮಾಡಿದನು. ನಗುತ್ತ ‘ಈಗ ಹೇಳು, ನಾನು ಕಾರಾಗೃಹ ಅತ್ಯಾಚಾರಗಳನ್ನು ಸಹಿಸಲು ಸಿದ್ಧನಿದ್ದೇನೆ ಎಂಬುದಕ್ಕೆ ಏನಾದರೂ ಸಂದೇಹ ಉಂಟೆ?’ ಎಂದು. ಆ ಕ್ರಾಂತಿಕಾರಿಗೆ ತನ್ನ ತಪ್ಪಿನ ಅರಿವಾಯಿತು. ‘ರಾಜಗುರು, ನಿನ್ನ ಪ್ರಖರ ದೇಶಭಕ್ತಿಯ ಬಗ್ಗೆ ನನಗೆ ಕಿಂಚಿತ್ತೂ ಅನುಮಾನವಿಲ್ಲ. ನನ್ನನ್ನು ಕ್ಷಮಿಸು’ ಎಂದನು.

ಸುಖದೇವ್ ಥಾಪರ್
ಪಂಜಾಬ್ ಪ್ರಾಂತ್ಯದಲ್ಲಿ 15-5-1907 ರಲ್ಲಿ ಜನಿಸಿದರು. ಸುಖದೇವ್ ಮೇಲೆ ಭಗತ್ ಸಿಂಗ್ ನ ಕ್ರಾಂತಿಕಾರಿ ವಿಚಾರಗಳ ತೀವ್ರ ಪರಿಣಾಮವಾಯಿತು. ಸ್ವಾತಂತ್ರ್ಯ ಸಮರದಲ್ಲಿ ಸಹಭಾಗಿಯಾಗುವಂತೆ ಯುವಕರನ್ನು ಪ್ರೇರೇಪಿಸುವುದು, ಶಾಸ್ತ್ರೀಯ ಅಧ್ಯಯನ, ಕ್ರಾಂತಿಕಾರಿ ಹೋರಾಟ, ಅಸ್ಪೃಶ್ಯತೆಯ ನಿವಾರಣೆ ಇತ್ಯಾದಿ ಧ್ಯೇಯಗಳನ್ನು ಪೂರಿಸಲು ‘ನೌಜವಾನ್ ಭಾರತ ಸಭಾ’ ಸ್ಥಾಪಿಸಿದರು. ಕ್ರಾಂತಿಕಾರಿಗಳ ಮೇಲೆ ನಡೆಯುವ ಅತ್ಯಾಚಾರಗಳ ವಿರುದ್ಧ 1929ರಲ್ಲಿ ಪ್ರಾರಂಭವಾದ ಆಮರಣಾಂತ ಉಪವಾಸದಲ್ಲಿ ಸುಖದೇವ್ ಕೂಡ ಭಾಗವಹಿಸಿದರು.