ಜಗತ್ತಿನಾದ್ಯಂತ ಮಹಾ ಮಾರಿಯಂತೆ ಹಬ್ಬುತ್ತಿರುವ ಕೋವಿಡ್-19 ಕೊರೊನಾ ವೈರಸ್ ರೌದ್ರಾವತಾರಕ್ಕೆ ಜಗತ್ತಿನಲ್ಲಿ ಈಗಾಗಲೇ 15 ಸಾವಿರ ಜನರು ಮೃತಪಟ್ಟಿದ್ದಾರೆ. 3.5 ಲಕ್ಷ ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಪ್ರಪಂಚದಾದ್ಯಂತ ಸಂಶೋಧಕರು ಮಾರಣಾಂತಿಕ ಕಾಯಿಲೆಯ ಔಷಧ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ.

ಇಂಥ ಸ್ಥಿತಿಯಲ್ಲಿ ಅಮೆರಿಕಾದ ವಿಜ್ಞಾನಿಗಳು ಈಗಾಗಲೇ ಕೋವಿಡ್ -19 ಗೆ ಔಷಧ ಕಂಡು ಹಿಡಿದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್ ಆಗಿದೆ. ಫೇಸ್ ಬುಕ್, ವಾಟ್ಸಾಪ್, ಟ್ವಿಟರ್ ಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅದರ ಚಿತ್ರವೂ ಸಹ ಹರಿದಾಡುತ್ತಿದ್ದು, ಜನರು ಕುತೂಹಲಗೊಂಡಿದ್ದಾರೆ.

ಔಷಧ ಎಂದು ಹೇಳಲಾಗುತ್ತಿರುವ ಪ್ಯಾಕೆಟ್ನ ಚಿತ್ರದ ಮೇಲೆ SGTi-flex COVID-19 IgM / IgG ಎಂದು ಬರೆಯಲಾಗಿದೆ. ಅಲ್ಲದೆ, #ದೊಡ್ಡ ಸುದ್ದಿ! ಕರೋನಾ ವೈರಸ್ ಲಸಿಕೆ ಸಿದ್ಧವಾಗಿದೆ. ಚುಚ್ಚುಮದ್ದಿನ ನಂತರ 3 ಗಂಟೆಗಳಲ್ಲಿ ರೋಗಿಯನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಯುಎಸ್ ವಿಜ್ಞಾನಿಗಳಿಗೆ ಹ್ಯಾಟ್ಸ್‌ಆಫ್. ರೋಚೆ ಮೆಡಿಕಲ್ ಕಂಪನಿ ಮುಂದಿನ ಭಾನುವಾರ ಲಸಿಕೆ ಬಿಡುಗಡೆ ಮಾಡುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಲಕ್ಷಾಂತರ ಡೋಸ್ ಗಳು ಸಿದ್ದವಾಗಿವೆ’  ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ.

ತನಿಖೆಯಲ್ಲಿ ಕಂಡಿದ್ದೇನು?
ವೈರಲ್ ಆದ ಈ ಬರಹ ಮತ್ತು ಔಷಧದ ಫೋಟೊವನ್ನು ರಿವರ್ಸ್ ಇಮೇಜ್ ನಲ್ಲಿ ಹುಡುಕಾಡಿದಾಗ ಹಲವು ವಿಷಯಗಳು ಗೊತ್ತಾದವು. ಇದು ದಕ್ಷಿಣ ಕೊರಿಯಾ ಅಭಿವೃದ್ಧಿಪಡಿಸಿದ ಪರೀಕ್ಷಾ ಕಿಟ್ ಆಗಿದೆ. ದಕ್ಷಿಣ ಕೊರಿಯಾದ ಸುಜೆಂಟೆಕ್ ಪೋರ್ಟಬಲ್ ಡಯಾಗ್ನೋಸ್ಟಿಕ್ ಈ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ ಎನ್ನುವುದು ಗೊತ್ತಾಗಿದೆ.

ಈ ಕಿಟ್ ಕೇವಲ 10 ನಿಮಿಷಗಳಲ್ಲಿ ಕರೋನ ವೈರಸ್ ಪಾಸಿಟಿವ್ ಅಥವಾ ನೆಗೆಟಿವ್ ಎನ್ನುವುದನ್ನು ಪತ್ತೆ ಮಾಡುತ್ತದೆ. ಕೋರಿಯಾ ವಾರಕ್ಕೆ ಮೂರು ಲಕ್ಷ ಕಿಟ್ ಗಳನ್ನು ರಪ್ತು ಮಾಡಲು ನಿರ್ಧರಿಸಿದೆ ಎಂದು ಹಿರಿಯ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿದ್ದಾರೆ.

ಮೀನಿಗೂ ಕೊರೊನಾ: ಸುಳ್ಳು ಸುದ್ದಿಯ ಅಸಲಿ ಕತೆ ಓದಿ

ಚೀನಾದ ವಿಜ್ಞಾನಿಗಳು ವೈರಸ್‌ನ ಆನುವಂಶಿಕ ಅನುಕ್ರಮವನ್ನು ಸಾರ್ವಜನಿಕವಾಗಿ ಪ್ರಕಟಿಸಿದ ದಿನ ಜನವರಿ 10ರಿಂದ ವಿಶ್ವದಾದ್ಯಂತ ವಿಜ್ಞಾನಿಗಳು ಕೋವಿಡ್-19 ವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಕರೋನ ವೈರಸ್ ರೋಗಿಯನ್ನು ಮೂರು ಗಂಟೆಗಳಲ್ಲಿ ಗುಣಪಡಿಸುವ ಯಾವುದೇ ಲಸಿಕೆ ಇಲ್ಲ.

ಇದನ್ನೂಓದಿ: ಚಿಕನ್ನಿಂದಕೊರೊನಾವೈರಸ್; ಸುಳ್ಳುಎಂದಿದೆಕೇಂದ್ರಸರ್ಕಾರ

ಆದ್ದರಿಂದ, ಕರೋನ ವೈರಸ್ ಲಸಿಕೆ ಸಿದ್ಧವಾಗಿದೆ ಮತ್ತು ಮೂರು ಗಂಟೆಗಳಲ್ಲಿ ರೋಗಿಯನ್ನು ಗುಣಪಡಿಸಬಹುದು ಎಂಬ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಹೇಳಿಕೆಯು ನಿಜವಲ್ಲ.