ಕೋವಿಡ್-19 ಕೊರೊನಾ ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ. ಈ ವೈರಸ್ ಚೀನಾದಿಂದ ಹರಡಿದರೂ ಇಟಲಿ ದೇಶದಲ್ಲಿ ಅತಿ ಹೆಚ್ಚು ಜನರ ಜೀವ ಬಲಿ ಪಡೆದಿದೆ. ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲದಷ್ಟು ದಯನೀಯ ಸ್ಥಿತಿಗೆ ತಲುಪಿದೆ. ಜನರು ಇರುವೆಗಳಂತೆ ಸಾಯುತ್ತಿದ್ದಾರೆ.

ಆರಿಸಲಾಗಷ್ಟು ಶವಗಳು ಇಟಲಿಯ ಖಾಲಿ ಪ್ರದೇಶದಲ್ಲಿ ಬಿದ್ದಿವೆ ಎನ್ನುವ ಫೋಟೊವೊಂದು ಹರಿದಾಡುತ್ತಿದೆ. ರಸ್ತೆ ಬದಿಯಲ್ಲಿ ಕಸದ ರೀತಿಯಲ್ಲಿ ಹೆಣಗಳು ಬಿದ್ದಿವೆ ಎಂದು ಫೋಟೊವನ್ನು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಫಾರವರ್ಡ್ ಮಾಡಲಾಗುತ್ತಿದೆ.

ವಾಟ್ಸ್ ಆ್ಯಪ್ ಗಳಲ್ಲಿ ಹರಿದಾಡುತ್ತಿರುವ ಸುದ್ದಿ ಮತ್ತು ಫೋಟೊ

ಮೆಸೇಜ್ ನಲ್ಲಿ ಏನಿದೆ?
ಇದು ಇಟಲಿಯಲ್ಲಿನ ಭಯಾನಕ ಭೀಕರ ದೃಶ್ಯ. ಅಲ್ಲಿನೋಡಿ… ಹೆಣಗಳನ್ನು ಸಹ ತೆಗೆದುಕೊಂಡು ಹೋಗಲಾರದ ಪರಿಸ್ಥಿತಿ, ರಸ್ತೆಯ ತುಂಬಾ ಹೆಣಗಳು,
ಮಿಲಿಟರಿ ಯವರು ಎತ್ತಾಕ್ಕೊಂಡು ಹೋಗಿ ಗತಿ ಕಾಣಿಸ್ತಿದ್ದಾರೆ.
ಇದು ಬೇಕಾ ????? ದಯವಿಟ್ಟು ಸಹಕರಿಸಿ, ಮನೆಯೊಳಗೆ ಇರಿ.
ಇದು ನಿಮಗಾಗಿ ಮುಂದಿನ ಜೀವನಕ್ಕಾಗಿ ಆರೋಗ್ಯಕರ ಬದುಕು ಬೇಕು, ಮನೆಯೊಳಗಿರಿ,
ಕೊರೊನಾ ಓಡಿಸಿ.
ಹೀಗೆ ಫೋಟೊ ಜತೆ ಸಂದೇಶ ಹಂಚಿಕೊಳ್ಳಲಾಗುತ್ತಿದೆ.

ವಾಸ್ತವ ಏನು?
ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ ಅದು ಈ ವರ್ಷದ ಫೋಟೊ ಅಲ್ಲ ಎನ್ನುವುದು ಪತ್ತೆಯಾಯಿತು. 2014ರಲ್ಲಿ ಜರ್ಮನಿಯಲ್ಲಿ ತೆಗೆದ ಫೋಟೊ ಅದು. ಅಲ್ಲದೆ, ಫೋಟೊದಲ್ಲಿ ಇರುವುದು ಹೆಣಗಳ ರಾಶಿ ಅಲ್ಲ.

ಇದನ್ನೂ ಓದಿ: ಮೂರು ಗಂಟೆಯಲ್ಲಿ ಕೊರೊನಾ ಗುಣಪಡಿಸುವ ಔಷಧ ಸಿದ್ಧವಾಯಿತಾ?

2014ರಲ್ಲಿಯೇ ಪ್ರಕಟವಾದ ಫೋಟೊ

ಅದು ಜರ್ಮನಿಯಲ್ಲಿ 1945ರ ಮಾರ್ಚ್ 24 ರಂದು ನಡೆದ 528 ಜನರ ಸಾವಿನ ಘಟನೆಯನ್ನು ನೆನೆಸಲು 2014ರ ಮಾರ್ಚ್ 24 ರಂದು ಜರ್ಮನಿಯ ಫ್ರಾಂಕ್ ಫರ್ಟ್ ನ ರಸ್ತೆಯಲ್ಲಿ ಜನರು ಮಲಗಿ ಅಣಕು ಪ್ರದರ್ಶಿಸಿದ್ದರು. ಅದೇ ಫೋಟೊವನ್ನು ಬಳಸಿ ಇಟಲಿಯಲ್ಲಿ ಕೊರೊನಾದಿಂದ ಸತ್ತಿರುವ ಜನರ ಹೆಣಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎನ್ನುವುದು ವೈರಲ್ ಚೆಕ್ ನಿಂದ ಗೊತ್ತಾಗಿದೆ.

ಇದನ್ನೂಓದಿ: ಚಿಕನ್ನಿಂದ ಕೊರೊನಾ ವೈರಸ್; ಸುಳ್ಳು ಎಂದಿದೆ ಕೇಂದ್ರ ಸರ್ಕಾರ