ಕೆಲ ದಿನಗಳ ಹಿಂದೆ ಗೋವಾ ರಾಜ್ಯದ ಮಡಗಾಂವ ದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದೆ. ರಸ್ತೆ ಪಕ್ಕದಲ್ಲಿ ಧರೆ ರೀತಿ ಇದ್ದ ಗುಡ್ಡ ಇದ್ದಕ್ಕಿದ್ದಂತೆ ಕುಸಿದು ಬಿದ್ದು ರಸ್ತೆ ಸಂಪರ್ಕವೇ ಕಡಿತವಾಗುತ್ತದೆ. ಅಲ್ಲದೆ, ಗುಡ್ಡ ಕುಸಿಯುವಾಗ ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರನೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆ ವಿಡಿಯೊ ದೇಶವ್ಯಾಪಿ ಭಾರೀ ವೈರಲ್ ಆಗಿದೆ. ಗೋವಾ, ಕರ್ನಾಟಕದ ಜನರೂ ಆ ವಿಡಿಯೊವನ್ನು “ಗೋವಾ ಮಡಗಾಂವ ನಲ್ಲಿ ಭೂ ಕುಸಿತ’ ಎನ್ನುವ ಕ್ಯಾಪ್ಶನ್ ನೊಂದಿಗೆ ಫೇಸ್ ಬುಕ್, ವಾಟ್ಸಆಪ್, ಟ್ವಿಟರ್ ಗಳಲ್ಲಿ ಹಂಚಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ವಿಡಿಯೊ.

ವಾಸ್ತವದಲ್ಲಿ ಅದು ನಮ್ಮ ದೇಶದಲ್ಲಿ ನಡೆದ ಗುಡ್ಡ ಕುಸಿತದ ದೃಶ್ಯ ಅಲ್ಲವೇ ಅಲ್ಲ. ಆದರೂ ಅದನ್ನು ಗೋವಾ ರಾಜ್ಯದೊಂದಿಗೆ ಜೋಡಿಸಿ ಸುಳ್ಳು ಸುದ್ದಿ ಹರಿ ಬಿಡಲಾಗಿದೆ. ಅಸಲಿಗೆ ಅದೇ ವಿಡಿಯೊ ಇಟ್ಟುಕೊಂಡು ಮೇಘಾಲಯದಲ್ಲಿಯೂ ಭೂ ಕುಸಿತ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಅದು ಅಲ್ಲಿನ ಪೊಲೀಸ್ ಇಲಾಖೆಯನ್ನೂ ಚಿಂತೆ ಗೀಡು ಮಾಡಿತ್ತು.

ಫ್ಯಾಕ್ಟ್ ಚೆಕ್:
ವೈರಲ್ ವಿಡಿಯೊ ಬಗ್ಗೆ ದಿ ಸ್ಟೇಟ್ ನೆಟ್ವರ್ಕ್ ತಂಡ ಶೋಧನೆ ನಡೆಸಿದಾಗ ಅದು ಇಂಡೋನೇಶಿಯಾ ದೇಶದಲ್ಲಿ ನಡೆದ ಗುಡ್ಡ ಕುಸಿತದ ದೃಶ್ಯ ಎನ್ನುವುದು ಪತ್ತೆಯಾಗಿದೆ. ಇಂಡೋನೇಶಿಯಾದ ವೆಸ್ಟ್ ಜಾವಾ ಎನ್ನುವ ಪ್ರದೇಶದಲ್ಲಿ ಇದೇ ವರ್ಷ ಏಪ್ರಿಲ್ 9 ರಂದು ಗುಡ್ಡ ಕುಸಿದಿತ್ತು. ಅದರಿಂದ ಇಂಡೋನೇಶಿಯಾದ ಚೈಂಗ್ಜುರ್ ಮತ್ತು ಸುಖನಗರ ಎನ್ನುವ ಎರಡು ಜಿಲ್ಲೆಗಳ ನಡುವಿನ ಸಂಪರ್ಕ ಕಡಿತವಾಗಿತ್ತು. ಈ ಕುರಿತು ಇಂಡೋನೇಶಿಯಾದ ಟಿವಿ ಚಾನಲ್ ಗಳು ವರದಿ ಮಾಡಿವೆ. ಅದರ ವಿಡಿಯೊ ಲಿಂಕ್ ಇಲ್ಲಿ ನೀಡಲಾಗಿದೆ.
https://youtu.be/v8S9nRJLrK0

ಗುಡ್ಡ ಕುಸಿತದ ವಿಡಿಯೊ ಸುದ್ದಿ

ಅದೇ ವಿಡಿಯೊ ಇಟ್ಟುಕೊಂಡು ಮೇಘಾಲಯದಲ್ಲಿಯೂ ಗುಡ್ಡ ಕುಸಿತವಾಗಿದೆ ಎಂದು ಮೇ ತಿಂಗಳಲ್ಲಿ ಸುದ್ದಿ ಹಬ್ಬಿಸಲಾಗಿತ್ತು. ಅದರ ಬಗ್ಗೆ ಮೇಘಾಲಯದ ಪೊಲೀಸ್ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸತ್ಯಾಂಶ ಬರೆದು ಫೋಟೊ ಸಮೇತ ಟೀಟ್ ಮಾಡಿದೆ.

“ಇದು ಇಂಡೋನೇಶಿಯಾದ ಚೈಂಗ್ಜುರ್ ಮತ್ತು ಸುಖನಗರ ಎನ್ನುವ ಎರಡು ಊರುಗಳ ನಡುವಿನ ರಸ್ತೆ ಪಕ್ಕದಲ್ಲಿ ನಡೆದ ಗುಡ್ಡ ಕುಸಿತದ ದೃಶ್ಯ. ಮೇಘಾಲಯದಲ್ಲಿ ಗುಡ್ಡ ಕುಸಿತ ನಡೆದಿಲ್ಲ. ನಾಗರೀಕರು ಸುಳ್ಳು ಹೇಳಿಕೆ ಇರುವ ಈ ವಿಡಿಯೊಗಳನ್ನು ಶೇರ್ ಮಾಡರಬಾರದು’ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

ಮೇಘಾಲಯ ಪೊಲೀಸ್ ಇಲಾಖೆ ಟ್ವೀಟ್.

ತೀರ್ಮಾನ: ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿರುವ ಈ ವಿಡಿಯೊ ದೃಶ್ಯ. ಗೋವಾ ರಾಜ್ಯಕ್ಕೆ ಸಂಬಂಧಿಸಿದ್ದು ಅಲ್ಲ.