ಅನೇಕ ದಿನಗಳಿಂದ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿರುವ ತಾಯಿಯನ್ನು (ನರ್ಸ್) ಅಪ್ಪಿ ಅಳಬೇಕು ಎನ್ನುವ ಮಗು ಒಂದು ಕಡೆ. ಕರುಳ ಕುಡಿಯನ್ನು ಮುದ್ದಾಡಿ ಸಂತೈಸಬೇಕು ಎನ್ನುವ ತಾಯಿ ಮತ್ತೊಂದು ಕಡೆ. ಆದರೆ, ಕರೋನಾ ವೈರಸ್ ನಿಂದಾಗಿ ಅವರಿಬ್ಬರೂ ಪರಸ್ಪರ ಸ್ಪರ್ಷಿಸುವಂತಿಲ್ಲ.
ಆ ಪುಟ್ಟ ಮಗು ದೂರದಲ್ಲಿಯೇ ನಿಂತು ತನ್ನ ತಾಯಿಗೆ ಗಾಳಿಯಲ್ಲಿ ಅಪ್ಪುಗೆ ನೀಡುವ ಆ ಘಟನೆ ಇಡೀ ಜಗತ್ತೇ ಮರಗುವಂತೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆ ವಿಡಿಯೊ ನೋಡಿದರೆ ಎಂಥವರಿಗೂ ಒಂದು ಕ್ಷಣ ಕರುಳು ಚುರುಕ್ ಎನ್ನುತ್ತದೆ. ಇಲ್ಲಿದೆ ಆ ವಿಡಿಯೊ.
ಚೀನಾದ ಹೆನಾನ್ ಪ್ರಾಂತ್ಯದ ಕರೋನ ವೈರಸ್ ರೋಗಿಗಳ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಒಬ್ಬಳು ತನ್ನ ಮಗಳನ್ನು ದೂರದಿಂದಲೇ ನೋಡಿ ತಬ್ಬಿಕೊಳ್ಳುವಂತೆ ಅಂಗೈ ಚಾಚುತ್ತಾಳೆ. ಆ ಮಗು ತನ್ನ ತಾಯಿಯನ್ನು ತಾನೂ ತಬ್ಬಿಕೊಳ್ಳುವಂತೆ ಅಂಗೈ ಚಾಚುತ್ತಾರೆ. ಮಗು ಅಮ್ಮಾ ಅಮ್ಮಾ ಎನ್ನುತ್ತಿದ್ದರೆ, ಆ ತಾಯಿ ಒಳಗೊಳಗೆ ರೋಧಿಸುತ್ತಾಳೆ. ಇಬ್ಬರ ಕಣ್ಣೀರು ಕರೋನಾ ವೈರಸ್ ರಕ್ಷಣೆಗೆ ಧರಿಸಿದ ಮಾಸ್ಕ್ ಒಳಗೆ ಜಾರುತ್ತವೆ.
ಪುಟ್ಟ ಮಗು ತನ್ನತಾಯಿಗೋಸ್ಕರ ತಂದಿರುವ ಊಟದ ಡಬ್ಬಿಯನ್ನೂ ಆಕೆಯ ಕೈಗೆ ಕೊಡಲಾಗದಷ್ಟು ಘೋರ ಪರಿಸ್ಥಿತಿಯನ್ನು ಕರೋನಾ ವೈರಸ್ ತಂದಿರಿಸಿದೆ. ಮಗು ನೆಲದ ಮೇಲೆ ಊಟದ ಡಬ್ಬಿ ಇಟ್ಟು ದೂರ ಬರುತ್ತಾಳೆ. ಆಗ ತಾಯಿ ಆ ಡಬ್ಬಿಯನ್ನು ತೆಗೆದುಕೊಂಡು ಹೋಗುತ್ತಾಳೆ.

ಕರೋನಾ ರಾಕ್ಷಸರನ್ನು ಗೆದ್ದು ಬರುತ್ತೇನೆ
ಚೀನಾದಲ್ಲಿ ಕರೋನಾ ವೈರಸ್ ಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೊರಗಿನ ವ್ಯಕ್ತಿಗಳನ್ನು ಸ್ಪರ್ಷಿಸುವಂತಿಲ್ಲ. ವಿಶೇಷ ಸುರಕ್ಷತೆಯಲ್ಲಿ ರೋಗಿಗಳಿಗೆ ಚಿಕತ್ಸೆ ನಡೆಯುತ್ತಿದೆ. ಹಾಗಾಗಿ ತಾಯಿ ಮಗು ಇಬ್ಬರೂ ದೂರದಲ್ಲಿಯೇ ನಿಂತು ಸಂಭಾಷಣೆ ನಡೆಸುತ್ತಾರೆ.

ಮಗು ತಾಯಿಯನ್ನು ನೋಡುತ್ತಿದ್ದಂತೆಯೇ ಅಳಲು ಶುರು ಮಾಡುತ್ತಾಳೆ ಮತ್ತು “ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಮ್ಮಾ’ ಎಂದು ದಯನೀಯವಾಗಿ ಹೇಳುತ್ತಾರೆ. ಉಮ್ಮಳಿಸಿ ಬರುತ್ತಿರುವ ದುಃಖವನ್ನು ಸಂತೈಸಿಕೊಳ್ಳುತ್ತಲೇ ಮಾತನಾಡಿದ ತಾಯಿ “ನೀನು ಒಳ್ಳೆಯವಳು. ಅಮ್ಮ ಕರೋನಾ ರಾಕ್ಷಸರ ವಿರುದ್ಧ ಹೋರಾಡುತ್ತಿದ್ದಾಳೆ. ವೈರಸ್ ಹೊಡೆದ ನಂತರ ನಾನು ಮನೆಗೆ ಮರಳುತ್ತೇನೆ” ಎಂದು ಮಗಳಿಗೆ ಹೇಳುತ್ತಾಳೆ. ಇಬ್ಬರೂ ಕಣ್ಣೀರು ಸುರಿಸುತ್ತಲೇ ಮರಳುತ್ತಾರೆ.

ಕೊರೊನ ವೈರಸ್ ಸಾಮಾನ್ಯ ಜ್ವರಕ್ಕೆ ಹೋಲುವಂತೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಚೀನಾದ ವುಹಾನ್‌ನಲ್ಲಿ ಹುಟ್ಟಿದ ಕರೋನ ವೈರಸ್ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗೆ ತಿರುಗಿದೆ. ಇದು 27 ದೇಶಗಳಿಗೆ ಹರಡಿದೆ. ಹಲವಾರು ದೇಶಗಳು ಚೀನಾಕ್ಕೆ ವಿಮಾನ ಹಾರಾಟವನ್ನು ನಿಷೇಧಿಸಿವೆ.