ಕರೋನಾ… ಈಗ ಪ್ರಪಂಚವನ್ನು ಸುತ್ತುತ್ತಿರುವ ವೈರಸ್. ಚೀನಾದಲ್ಲಿ ಬಿಡುಗಡೆಯಾದ ಈ ವೈರಸ್ ಎಲ್ಲಾ ನೆರೆಯ ರಾಷ್ಟ್ರಗಳನ್ನು ನಡುಗಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಂತೂ ವೈರಸ್ ಸೋಂಕಿಗೆ ಒಳಗಾದವರಿಗೆ ಸಾವನ್ನು ಹೊರತುಪಡಿಸಿ ಪರ್ಯಾಯ ಮಾರ್ಗವಿಲ್ಲ ಎಂಬ ಕಲ್ಪನೆಯನ್ನು ಉತ್ತೇಜಿಸುತ್ತಿವೆ. ಹೊಸದಾಗಿ ಪತ್ತೆಯಾದ ಈ ಕಾಯಿಲೆಗೆ ಇನ್ನೂ ನಿರ್ಧಿಷ್ಟ ಔಷಧ ಪತ್ತೆಯಾಗಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಅರ್ಸೆನಿಕ್ ಆಲ್ಬಮ್- 30 ಎನ್ನುವ ಹೋಮಿಯೋಪತಿ ಔಷಧವನ್ನು ಕರೋನ ವೈರಸ್‌ಗೆ ಮದ್ದು ಎಂದು ಪ್ರಚಾರ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಔಷಧದ ಕುರಿತ ಪೋಸ್ಟ್ ವೈರಲ್ ಆಗಿವೆ.

ಪೋಸ್ಟ್ನಲ್ಲಿ ಏನಿದೆ?
“ಕರೋನ ವೈರಸ್‌ಗೆ ಹೋಮಿಯೋಪತಿ ಔಷಧಿ. ಆರ್ಸೆನಿಕ್ ಆಲ್ಬಮ್. ಇದು ಭಾರತ ಸರಕಾರದ ಆಯುಷ್ ಸಂಸ್ಥೆಯಿಂದ ಅಂಗೀಕಾರ ಪಡೆದ ಔಷಧಿ. ಇದನ್ನು ಮೂರು ದಿನ ಉಪಯೋಗಿಸಿದರೆ ಕರೋನ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಬಹುದು… ದಯವಿಟ್ಟು ಎಲ್ಲರೊಂದಿಗೆ ಈ ವಿಷಯವನ್ನು ಶೇರ್ ಮಾಡಿ’’.
ಈ ಬರವಣಿಗೆಯ ಜೊತೆಗೆ, ಆರ್ಸೆನಿಕ ಆಲ್ಬಮ್ -30 ಹೋಮಿಯೋಪತಿ ಬಾಟಲ್ ಇಮೇಜ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

ವಾಸ್ತವ ಏನು?
ವಾಸ್ತವವಾಗಿ, ಆರ್ಸೆನಿಕ ಆಲ್ಬಮ್ -30 ಎಂಬ ಔಷಧವು ಹೊಸದಲ್ಲ. ಖಿನ್ನತೆ, ಅಜೀರ್ಣ, ಆತಂಕ, ಅಲರ್ಜಿಗಳಂತಹ ಲಕ್ಷಣಗಳು ಇದ್ದಾಗ ಈ ಔಷಧಿಯನ್ನು ಮುಖ್ಯವಾಗಿ ಬಳಸಲಾಗುತ್ತದೆ.

ಆಯುಷ್ ಸಚಿವಾಲಯ ಹೇಳಿದ್ದೇನು?
ಭಾರತ ಸರ್ಕಾರದ ಆಯುರ್ವೇದ ಸಚಿವಾಲಯದ ಅಡಿಯಲ್ಲಿ ಕರೋನ ವೈರಸ್ ತಡೆಗಟ್ಟುವ ಕುರಿತು ಕೆಲಸ ಮಾಡುತ್ತಿರುವ ಹಲವಾರು ಸಂಶೋಧನಾ ಮಂಡಳಿಗಳು ಜನವರಿ 29 ರಂದು ಜಂಟಿ ಹೇಳಿಕೆ ನೀಡಿವೆ. ಕರೋನಾ ಸೋಂಕಿಗೆ ಒಳಗಾಗದಂತೆ ವೈಯಕ್ತಿಕ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ಸೂಚಿಸುವುದರ ಜೊತೆಗೆ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಔಷಧಗಳು ಚಿಕಿತ್ಸೆಗೆ ಸಹಕಾರಿಯಾಗಬಲ್ಲವು. ಅವು ಕರೋನ ವೈರಸ್‌ಗೆ ಚಿಕಿತ್ಸೆಗಳಲ್ಲದಿದ್ದರೂ, ಅದರ ರೋಗ ಲಕ್ಷಣಗಳ ವಿಷಯದಲ್ಲಿ ಎಚ್ಚರಿಕೆಯಿಂದ ಬಳಸಬಹುದು ಎಂದು ಸೂಚಿಸಿತ್ತು. ಆದರೆ, ಆ ಔಷಧಗಳ ಪಟ್ಟಿಯಲ್ಲಿ ಆರ್ಸೆನಿಕ ಆಲ್ಬಮ್ -30 ಇರಲಿಲ್ಲ.

ಇದರಲ್ಲಿರುವ ಸತ್ಯವೇನು:
ಆರ್ಸೆನಿಕ ಆಲ್ಬಮ್ -30 ಹೋಮಿಯೋಪತಿ ಔಷಧವಾಗಿದೆ. ಆದರೆ, ಇದು ಕರೋನಾಗೆ  ಸಂಪೂರ್ಣ ಪರಿಹಾರವಲ್ಲ. ಭಾರತದ ಆಯುಷ್ ಸಚಿವಾಲಯದ ಆಶ್ರಯದಲ್ಲಿ ಸಂಶೋಧನಾ ತಂಡಗಳು ಕರೋನ ವೈರಸ್ ಸೋಂಕನ್ನು ತಡೆಗಟ್ಟಲು ತೆಗೆದುಕೊಂಡ ಕೆಲವು ಔಷಧಿಗಳ ಪಟ್ಟಿಯಲ್ಲಿ ಆರ್ಸೆನಿಕ ಆಲ್ಬಮ್ -೩೦ ಇಲ್ಲವೇ ಇಲ್ಲ. ಹಾಗಾಗಿ ರೋಗ ಲಕ್ಷಣ ಕಂಡಾಗ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.