ಆಧಾರ್ ಕಾರ್ಡ್ ಇದ್ದರೆ ಪ್ರಧಾನ ಮಂತ್ರಿ ಸಾಲ ಯೋಜನೆಯಲ್ಲಿ ಎಲ್ಲರಿಗೂ ಎರಡು ಲಕ್ಷ ರೂಪಾಯಿ ಸಾಲ ಕೊಡಲಾಗುತ್ತದೆ ಎನ್ನುವ ಸುದ್ದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ನವದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ಸರ್ಕಾರದ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಪ್ರಧಾನ್ ಮಂತ್ರಿ ಸಾಲ ಯೋಜನೆ’ ಎನ್ನುವ ಯೋಜನೆ ಆರಂಭಿಸಿದ್ದಾರೆ. ಅದರಲ್ಲಿ 2 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದು ಫೇಸ್ ಬುಕ್, ವಾಟ್ಸ್ ಆ್ಯಪ್, ಯೂಟೂಬ್ ಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ.

ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪಿಐಬಿ ಫ್ಯಾಕ್ಟ್ ಚೆಕ್ ಈ ಮಾಹಿತಿಯನ್ನು ತನ್ನ ಫ್ಯಾಕ್ಟ್ ಚೆಕ್‌ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿರುವ ಸುದ್ದಿಯ ಅಸಲಿಯನ್ನು ಬಯಲು ಮಾಡಿದೆ.

ವಾಸ್ತವ ಏನು?
“ಪ್ರಧಾನ್ ಮಂತ್ರಿ ಸಾಲ ಯೋಜನೆ” ಹೆಸರಿನಲ್ಲಿ ಯಾವುದೇ ಯೋಜನೆ ಇಲ್ಲ.  ಆ ಯೋಜನೆ ಅಡಿಯಲ್ಲಿ ಅರ್ಜಿದಾರರಿಗೆ 2,00,000 ರೂಪಾಯಿಗಳನ್ನು ನೀಡಲಾಗುತ್ತದೆ ಎನ್ನುವುದು ಸಹ ಸುಳ್ಳು ಎಂದು ಕೇಂದ್ರ ಸರ್ಕಾರದ ಪಿಐಬಿ ಸ್ಪಷ್ಟಪಡಿಸಿದೆ.

ಪಿಐಬಿ ಎನ್ನುವುದು ಭಾರತ ಸರ್ಕಾರದ ನೀತಿಗಳು, ಕಾರ್ಯಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ತಿಳಿಸುವ ಪ್ರಮುಖ ಸಂಸ್ಥೆಯಾಗಿದೆ. ಅದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಧಾನ್ ಮಂತ್ರಿ ಸಾಲ ಯೋಜನೆ ಇಲ್ಲ. ಇದು ಸುಳ್ಳು ಸುದ್ದಿ ಎಂದು ಖಚಿತಪಡಿಸಿದೆ.

ಕೇಂದ್ರ ಸರ್ಕಾರವು ಪ್ರಧಾನ್ ಮಂತ್ರಿ ಮುದ್ರ ಎನ್ನುವ ಯೋಜನೆ (ಪಿಎಂಎಂವೈ) ಅನ್ನು ಉದ್ಯಮಿಗಳಿಗಾಗಿ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಜನರಿಗೆ ತಮ್ಮ ಉದ್ಯಮವನ್ನು (ವ್ಯವಹಾರ) ಪ್ರಾರಂಭಿಸಲು ಸಣ್ಣ ಪ್ರಮಾಣದ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯನ್ನು ಏಪ್ರಿಲ್ 2015 ರಲ್ಲಿ ಪ್ರಾರಂಭಿಸಲಾಯಿತು. ಆದರೆ, ಈ ಸಾಲ ಕೊಡುವುದಕ್ಕೂ ಮಾನದಂಡಗಳು ಇವೆ.

ಕೇಂದ್ರ ಸರ್ಕಾರದ ಮುದ್ರಾ ಯೋಜನೆ (ಪಿಎಂಎಂವೈ) ಎರಡು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ, ಸ್ವಯಂ ಉದ್ಯೋಗಕ್ಕಾಗಿ ಸುಲಭ ಸಾಲ. ಎರಡನೆಯದಾಗಿ, ಸಣ್ಣ ಉದ್ಯಮಗಳ ಮೂಲಕ ಉದ್ಯೋಗ ಸೃಷ್ಟಿಸುವುದು.  ವ್ಯವಹಾರ ಪ್ರಾರಂಭಿಸಲು  ಬಂಡವಾಳದ ಸಮಸ್ಯೆ ಎದುರಿಸುತ್ತಿದ್ದರೆ, ಕೇಂದ್ರ ಸರ್ಕಾರದ ಪಿಎಂಎಂವೈ ಮೂಲಕ ಪಡೆಯಬಹುದು.