ಕೊರೊನಾ ವಿರುದ್ಧ ಹೋರಾಡಿ ಮೃತಪಟ್ಟರೆ ಅವರ ಕುಟುಂಬಕ್ಕೆ ಬರೋಬ್ಬರಿ ಒಂದು ಕೋಟಿ ರೂ. ಪರಿಹಾರ ಸಿಗಲಿದೆ! ಭಾರತದ ಈ ಸುದ್ದಿ ಜಗತ್ತಿನಾದ್ಯಂತ ವೈರಲ್ ಆಗಿದೆ. ಅಸಲಿಗೆ ಇದು ಸುಳ್ಳು ಸುದ್ದಿ ಅಲ್ಲ. ನಿಜವಾದ ಸುದ್ದಿ.

ದೆಹಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ರಾಜ್ಯದ ಪ್ರಜೆಗಳ ರಕ್ಷಣೆಗಾಗಿ ಇಂಥದ್ದೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಅದನ್ನು ಟ್ವಿಟರ್ ನಲ್ಲಿಯೂ ಹಂಚಿಕೊಂಡಿದ್ದಾರೆ. ಅವರ ನಿರ್ಧಾರ ಜಗತ್ತಿನ ಗಮನಸೆಳೆದಿದೆ.

ದೆಹಲಿಯಲ್ಲಿ ಹುತಾತ್ಮರಾದ ಪ್ರತಿ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಸಹ ಯಾವುದೇ ಸೈನಿಕರಿಗಿಂತ ಕಡಿಮೆ ಇಲ್ಲ. ಇದುವರೆಗೆ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ಯಾವುದೇ ವೈದ್ಯಕೀಯ ಸಿಬ್ಬಂದಿಗೆ ಆರೋಗ್ಯ ಸಮಸ್ಯೆ ಕಾಡಿಲ್ಲ.

ಒಂದು ವೇಳೆ ಕೊರೊನಾ ಚಿಕಿತ್ಸೆ ನೀಡುತ್ತಿರುವ ಅಥವಾ ಚಿಕಿತ್ಸೆಗೆ ನೆರವಾಗುತ್ತಿರುವ ಯಾವುದಾದರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟರೆ ಸೈನಿಕರ ಕುಟುಂಬಗಳಿಗೆ ನೀಡುವಂತೆಯೇ ವೈದ್ಯಕೀಯ ಸಿಬ್ಬಂದಿ ಕುಟುಂಬಕ್ಕೂ ಒಂದು ಕೋಟಿ ರೂ. ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

ಇದು ಕೇವಲ ವೈದ್ಯರಿಗೆ ಮಾತ್ರವಲ್ಲ. ನರ್ಸ್, ಸ್ವಚ್ಛತಾ ಕಾರ್ಮಿಕರು, ಗುತ್ತಿಗೆ, ತಾತ್ಕಾಲಿಕ ಅಥವಾ ಕಾಯಂ ನೌಕರರು ಹೀಗೆ ಕೊರೊನಾ ಹೋಗಲಾಡಿಸಲು ದುಡಿಯುತ್ತಿರುವ ಸರ್ಕಾರಿ, ಖಾಸಗಿ ಸಂಸ್ಥೆಗಳ ಎಲ್ಲ ರೀತಿಯ ವೈದ್ಯಕೀಯ ಸಿಬ್ಬಂದಿಗೆ ಈ ಪರಿಹಾರ ಸೌಲಭ್ಯ ಸಿಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ದೇವರ ದಯೆಯಿಂದ ಯಾವುದೇ ಸಿಬ್ಬಂದಿಗೆ ಅಂಥ ಸಂದರ್ಭದ ಎದುರಾಗದಿರಲಿ ಎಂದೂ ಅವರು ಪ್ರಾರ್ಥಿಸಿದ್ದಾರೆ.

ಅಲ್ಲದೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಪಂಚತಾರಾ ಹೊಟೆಲ್ ಗಳಿಂದ ಊಟದ ವ್ಯವಸ್ಥೆ ಮತ್ತು ವಾಸ್ತವ್ಯವದ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ವೈದ್ಯಕೀಯ ಸಿಬ್ಬಂದಿಯ ಕುಟುಂಬದ ಸಮಸ್ಯೆಗಳಿಗೂ ಎಲ್ಲ ರೀತಿಯಲ್ಲಿ ಸ್ಪಂದಿಸುವುದಾಗಿ ದೆಹಲಿ ಸಿಎಂ ಹೇಳಿದ್ದಾರೆ.

ಭಾರತದ ರಾಜಧಾನಿ ದೆಹಲಿಯಲ್ಲಿ ಏ.1ರವರೆಗೆ 152 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಆರು ಜನ ಗುಣಮುಖರಾಗಿದ್ದಾರೆ. ಸೋಂಕು ಇನ್ನಷ್ಟು ಹರಡುವುದನ್ನು ತಡೆಯಲು ದೆಹಲಿ ಸರ್ಕಾರ ಇಂಥ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ಡಾರ್ಜಿಲಿಂಗ್ ನಲ್ಲಿದೆ ಕರ್ನಾಟಕದ ಯೋಧನ ದೇವಾಲಯ: ಸೈನಿಕನ ತ್ಯಾಗ ತಿಳಿದರೆ ಕಣ್ಣೀರು ಬರುತ್ತದೆ.

ಪಡಿತರ ಚೀಟಿ ಇಲ್ಲದವರಿಗೂ ದಿನಸಿ
ಸದ್ಯ ಕಠಿಣ ಪರಿಸ್ಥಿತಿಯಲ್ಲಿಯೂ ದೆಹಲಿ ಸರ್ಕಾರ ಪಡಿತರ ಚೀಟಿ ಇಲ್ಲದವರಿಗೂ ಪಡಿತರ ನೀಡಲು ಮುಂದಾಗಿದೆ. ಅದಕ್ಕೊಂದು ಮಾಸ್ಟರ್ ಪ್ಲಾನ್ ಮಾಡಿದೆ. ಯಾರ ಬಳಿ ಪಡಿತರ ಚೀಟಿ ಇಲ್ಲವೊ ಅವರು ತಕ್ಷಣ ಆನ್ ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು. ಅದರಿಂದಲೇ ಸಂಪೂರ್ಣ ಮಾನ್ಯತೆ ಇರುವ ಪಡಿತರ ಚೀಟಿ ಸಿಗುವುದಿಲ್ಲ. ಬದಲಾಗಿ ಪಡಿತರ ಚೀಟಿ ಪಡೆಯಲು ಸಲ್ಲಿಸಿದ ಅರ್ಜಿಯನ್ನೇ ಮಾನ್ಯಮಾಡಿ ಕೊರೊನಾ ಸಂಕಷ್ಟ ಮುಗಿಯುವ ವರೆಗೆ ಅಕ್ಕಿ, ಧಾನ್ಯ ವಿತರಿಸುವುದಾಗಿ ಹೇಳಿದೆ. ಹೀಗೆ ಮಾಡುವುದರಿಂದ ಪಡಿತರ ಸೋರಿಕೆ ತಡೆಯಬಹುದು ಎನ್ನುವುದು ದೆಹಲಿ ಸರ್ಕಾರದ ನಂಬಿಕೆ. ದೆಹಲಿ ಸರ್ಕಾರ ಕೈಗೊಂಡಿರುವ ಈ ಉಪಾಯ ನಿಜಕ್ಕೂ ಮಾದರಿ ಅಲ್ಲವೆ?

ಇದನ್ನೂ ಓದಿ: ಸ್ಪೇನ್ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೊಗೆ ಇಟಲಿ ವೈದ್ಯ ದಂಪತಿ ಸಾವು ಎಂದು ಪೋಸ್ಟ್

ಹೋಮ್ ಕ್ವಾರಂಟೈನ್ ಇಲ್ಲಿ ಇದ್ದವರ ಜಿಪಿಎಸ್ ಟ್ರ್ಯಾಕಿಂಗ್
ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ ಇರುವರು ಹೊರಗಡೆ ಓಡಾಡುವದನ್ನು ತಡೆಯಲು ದೆಹಲಿ ಸರ್ಕಾರ ಡಿಜಿಟಲ್ ಉಪಾಯ ಕಂಡುಕೊಂಡಿದೆ. ಕ್ವಾರಂಟೈನ್ ನಲ್ಲಿರುವ ಮೊಬೈಲ್ ಜಿಪಿಎಸ್ ಟ್ರ್ಯಾಕಿಂಗ್ ನಡೆಸುತ್ತಿದೆ. ಅದರ ಮೂಲಕ ಶಂಕಿತ ವ್ಯಕ್ತಿ ಎಲ್ಲಿ ಓಡಾಡುತ್ತಿದ್ದಾರೆ. ಯಾರೊಂದಿಗೆ ಸಂಪರ್ಕ ಸಾಧಿಸುತ್ತಾರೆ ಎನ್ನುವ ಬಗ್ಗೆಯೂ ಪತ್ತೆ ಮಾಡುತ್ತಿದೆ. ಅದನ್ನೂ ಕೇಜ್ರಿವಾಲ್ ಅವರು ಹೇಳಿಕೊಂಡಿದ್ದಾರೆ.