ಎರಡು ವಾರಗಳು ಕಳೆದುಹೋದವು. ಹೊರ ಪ್ರಪಂಚದ ನಂಟಿಲ್ಲ. ಕಾಲ್ನಡಿಗೆಯ ಪುಳಕವಿಲ್ಲ. ಮೂರು ಮುಕ್ಕಾಲು ಗೋಡೆಯೊಳಗೆ ಬಾಡಿದ ಜೀವಕ್ಕೆ ತಣ್ಣೀರು ಚೆಲ್ಲಿದಂತಾಗುತ್ತಿದೆ. ಮೂರು ಮುಕ್ಕಾಲು ಗೋಡೆ ಎಂದರೆ, ಒಂದು ಕಡೆ ಬಾಗಿಲು ತೆರೆದಿರುತ್ತವಲ್ಲ ಅದಕ್ಕೆ.

ಕೊರೊನಾ ಬಂಧನದಲ್ಲಿ ತಲೆ ಕೆರೆದುಕೊಳ್ಳುವಂತಾಗಿದೆ ದಿಗ್ಬಂಧನ. ದೇಹಕ್ಕೆ ಬಂಧನ ಹಾಕಬಹುದು. ಮನಸ್ಸಿಗೆ ಹೇಗೆ ಬೇಲಿ ಹಾಕಲಿ. ಹಾರಾಡುವ, ಕುಣಿದಾಡುವ ಮನಸ್ಸೆಂಬ ಆ ಚೆಲುವೆಯನ್ನು ಕಟ್ಟಿಹಾಕುವುದಾರು ಹೇಗೆ. ಮಲ್ಲಿಗೆಯಷ್ಟೇ ಹಿತವಾದ ಲವಲವಿಕೆಯ ಮನಸ್ಸಿಗೆ ಕೊರೊನಾದ ಭಯ ತಾಕಬೇಕೆ. ಸಂಗಕ್ಕೂ, ಸಂಗಾತಿ ಸ್ನೇಹಕ್ಕೂ ಸೇತುವೆಯಾಗುವ ಮನಸ್ಸು ಕೊರೊನಾ ಬಂಧನದಲ್ಲಿ ಮೊದ ಮೊದಲು ಎದೆ ಗೂಡಲ್ಲಿಯೇ ಚಡಪಡಿಸುತ್ತಿತ್ತು.

ಲಾಕ್ ಡೌನ್ ನಲ್ಲಿ ಸಮಯ ಕಳೆದು ಹೋಗುತ್ತಿರುವಾಗ ಮನಸ್ಸಿಗೂ ವಯಸ್ಸಾಗಬಾರದು. ಯೌವ್ವನದ ಉತ್ಸಾಹ ಜಿನುಗುತ್ತಿರಬೇಕಲ್ಲವೆ. ದೇಹಕ್ಕೆ ಚಟುವಟಿಕೆ ಇಲ್ಲದಾಗ ಮನಸ್ಸೂ ಕೂಡ ಜಡವಾಗುವುದೆಂಬ ಆತಂಕ. ಮನಸ್ಸೆಂಬ ನನ್ನ ಚೆಲುವೆ ಚಂದವಾಗಿರಬೇಕು, ಮುದ್ದಾಗಿರಬೇಕು.‌ ಲಾಕ್‌ಡೌನ್ ಇರಲಿ, ಕರ್ಪ್ಯೂ ಇರಲಿ ಆಕೆ ಕುಣಿದಾಡುತ್ತಿರಬೇಕು.

ಇದೊಂದು ರೀತಿ ಹುಚ್ಚು ಎನಿಸಿದರೂ ಪರವಾಗಿಲ್ಲ. ಮನಸ್ಸು ಎಂದಿಗೂ ಸೋಲಬಾರದು, ಅವಳು ನನ್ನ ಪಾಲಿಗೆ ನಾಯಕಿಯೇ ಆಗಿರಬೇಕು. ಹೌದು ನೀವು ಹುಡುಗಿಯಾಗಿದ್ದರೆ ನಿಮ್ಮ ಮನಸ್ಸು ನಿಮ್ಮ ಪಾಲಿಗೆ ನಾಯಕನೂ ಆಗಬಹುದು. ನಾಯಕಿಯೂ ಆಗಿರಬಹುದು.

ನನ್ನದೇನೂ ತಕರಾರು ಇಲ್ಲ. ನನ್ನವಳು ಮಾತ್ರ ನಗುತ್ತಿರಬೇಕು. ಅವಳಿಗಾಗಿಯೇ ಈ ದಿಗ್ಬಂಧನವನ್ನು ರೂಢಿ ಮಾಡಿಸುತ್ತಿದ್ದೇನೆ. ಮನಸ್ಸು ತುಂಬಿದ ದೇಹ ಬರೀ ಉಂಡು, ತಿಂದು ಉಬ್ಬುತ್ತಿದೆ. ಕೂತು ಕೂತು ಪೀಠವೂ ಭಾರವಾಗಿದೆ. ಮನಸ್ಸಿನ ಭಾಷೆ ಅಲ್ಲವಾ ಅದಕ್ಕೆ ಪೀಠ ಎಂದು ಪದ ಬಳಸಿದೆ.

ದಿನ ಹಸಿವಾಗುವ ದೇಹಕ್ಕೆ ಗೂಸಾ ತಪ್ಪದೆ ಸಿಗುವಾಗ ಮನಸ್ಸು ಪಾಪ, ಕೇವಲ‌ ಕಿವಿಯನ್ನೇ ನಂಬಿ ಫೋನ್ ಕರೆ ದ್ವನಿಯಲ್ಲೇ ಕನಸು ಹೆಣೆಯುತ್ತಿದೆ. ಈಗೀಗ ಮೊಬೈಲ್‌ನಲ್ಲಿ ಮನಸ್ಸು ಬರೀ ಚಿಕನ್ ತಿನಿಸುಗಳ ಪಾಕವನ್ನೇ ವೀಕ್ಷಿಸುತ್ತಿದೆ. ಅದೇನೊ ನನ್ನಾಕೆಗೆ ಎರಡು ವಾರದಿಂದ ಲೆಗ್ ಪೀಸ್ ಮುರಿಯುವ ಆಸೆಯಾಗಿದೆ. ನಾಲಿಗೆ‌, ಹಲ್ಲುಗಳು ಹಠ ಮಾಡುವಾಗಲೇ ಮನಸ್ಸಿನ ತವಕ ಅರಿವಾಗುತ್ತಿದೆ.

ನನ್ನ‌ ಮುದ್ದು ಮನಸ್ಸು ಚಿಕನ್ ಪ್ರಿಯೆ ಎನ್ನುವುದು ನನಗೆ ಗೊತ್ತು.‌ ಆದರೆ ಊರೆಲ್ಲ ಸುತ್ತಾಡುತ್ತಿದ್ದ ಮನಸ್ಸಿಗೆ ಏಕಾ ಏಕಿ ಚಿಕನ್ ಆಸೆ ಹುಟ್ಟಿದ್ದು ಹೇಗೆಂದು ಹೊಳೆಯಲೇ ಇಲ್ಲ. ಚಿಕನ್ ಆಸೆ ಅದೆಷ್ಟು ಬೆಳೆದಿದೆ ಎಂದರೆ ಆಗಾಗ ಯೂಟ್ಯೂಬ್ ನಲ್ಲಿ ಯಾರೋ ಚಿಕನ್ ತಿನ್ನುವ ವಿಡಿಯೊ ನೋಡಬೇಕೆನಿಸುತ್ತದೆ.

ನೋಡಿ, ಊರೆಲ್ಲ ಕೊರೊನಾ ಭಯಕ್ಕೆ ಹೆದರಿ ಕೂತರೆ ನನ್ನ ಮನಸ್ಸಿಗೆ ತಿನ್ನುವ ಆಸೆ ಹೆಚ್ಚಾಗಿದೆ. ಅದಕ್ಕೆ ಮಾಲಿನಿಯಾಗಿ ನನ್ನನ್ನು ಮುದ್ದಿಸುತ್ತಿದ್ದಾಳೆ. ಮಧ್ಯಾಹ್ನವಾದರಂತೂ ರಮಿಸಿ, ಕಚಗುಳಿ ಇಟ್ಟು ಮುತ್ತಿಡುತ್ತಾಳೆ. ಆ ಹಠ ಸಮಾಧಾನ ಮಾಡುವುದೇ ಸವಾಲಾಗಿ ಸೋತುಬಿಡುತ್ತೇನೆ.

ನಿತ್ಯವೂ ನಡೆಯುವ ಈ ತುಂಟಾಟ ಖುಷಿ ಎನಿಸಿದರೂ ಹಠ ಸಹಿಸುವುದು ಸ್ವಲ್ಪ ಕಷ್ಟವೇ. ನಿಜ ಹೇಳಬೇಕೆಂದರೆ ಅದು ತುಂಟಾಟ ಎನ್ನುವಷ್ಟು ಹಿತವಾದುದ್ದಲ್ಲ. ಮುದ್ದು ಮನಸ್ಸು ತಾಡಿಕೊಳ್ಳಲಿ ಅಂತ ಹಾಗೆ ಹೇಳಿದ್ದು.

ಈಗವಳು ಆಸೆಗಳ ಮೂಟೆ ತುಂಬಿ ಕುಣಿಯಲಾರಂಭಿಸಿದ್ದಾಳೆ. ಒಂದಲ್ಲ ಒಂದು ದಿನ ಕೊರೊನಾ ಬಂಧನ ಮುಗಿಯುತ್ತದೆ. ಚಿಕನ್ ಮೇಲೆ ಇರುವ ಎಲ್ಲ ಅಪವಾದಗಳು ದೂರವಾಗುತ್ತವೆ. ಮತ್ತೆ ಪ್ರಪಂಚ ಸ್ವತಂತ್ರವಾಗುತ್ತದೆ. ಆಗ ಒಂದು ಇಡೀ ಕೋಳಿಯನ್ನು ಬೇಯಿಸಿ ನುಂಗಬೇಕು ಎಂದುಕೊಂಡಿದ್ದಾಳೆ. ನಾಲಗೆ ನೀರು ಸುರಿಸುತ್ತಿದೆ. ಒಮ್ಮೆ ನುಂಗಿ ಬಿಡ್ತೀನಿ.

ಇದನ್ನೂ ಓದಿ: ಗೌಡಶ್ಯಾನಿ ಹಿರೇತನ; ಬಡೇಸಾಬರ ಗಡಿಬಿಡಿ

ಕೊರೊನಾದ ಅಂತ್ಯದ ದಿನಗಳಿಗಾಗಿ ಎದುರು ನೋಡುತ್ತಿರುವ ನನ್ನ ಕಿಲಾಡಿ ಮನಸ್ಸು ಆಸೆಗಳೆಲ್ಲವನ್ನೂ ಪ್ರತಿ ದಿನ ನೆನೆಸುತ್ತಿದ್ದಾಳೆ. ನೆನಪಾದಾಗಲೆಲ್ಲ ಬಾಯಲ್ಲಿ ಕಬಾಬ್ ಪೀಸ್ ಇಟ್ಟಂತೆ ಮುದ್ದಿಸುತ್ತಿದ್ದಾಳೆ. ಆ ದಿನಕ್ಕಾಗಿ ಮನೆಯೊಳಗೆ ಇದ್ದು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾಳೆ.

ಇದನ್ನೂ ಓದಿ: ಸಂಗ್ಯಾ ಬಾಳ್ಯಾ ಹಾಡು ಹೇಳಿ ಸಿಕ್ಕಾಕೊಂಡ ಗಡ್ಡದ ಸ್ವಾಮಿ

ನಿಮ್ಮ ಮನಸ್ಸಿಗೂ ಅಂಥದ್ದೇ ಆಸೆ, ಕನಸುಗಳು ಚಿಗುರೊಡೆದಿರಬಹುದು. ಮನಸ್ಸು ನಮ್ಮನ್ನು ಅಷ್ಟೊಂದು ಪ್ರೀತಿಸುವಾಗ ಅದರ ಆಸೆ ಈಡೇರಿಸಲು ನಮ್ಮ ದೇಹ ಆರೋಗ್ಯವಾಗಿರಬೇಕಲ್ಲವೆ. ಕೊರೊನಾ ಭಯ ಮನಸ್ಸು ಮುಟ್ಟದಂತೆ ಮನೆಯೊಳಗೆ ಇದ್ದು ಮುದ್ದು ಮನಸ್ಸನ್ನು ಜೋಪಾನ ಮಾಡೋಣ. ಏನಂತೀರಿ…