ಇಡೀ ದೇಶವೇ ಕೋವಿಡ್ 19 ಕೊರೊನಾ ವೈರಸ್ ಭಯಕ್ಕೆ ತತ್ತರಿಸಿದೆ. ಈ ಮಹಾ ಸಂಕಷ್ಟ ಎದುರಿಸಲು ಎಲ್ಲರೂ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಸಹಾಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಸಿಎಂ ರಿಲೀಪ್ ಫಂಡ್ ಖಾತೆಗೆ ಸಾರ್ವಜನಿಕರ ನೆರವು ಬೇಡಿದ್ದಾರೆ.

ಇಂಥ ಸ್ಥಿತಿಯಲ್ಲಿ ಮೊಬೈಲ್ ಗೆ ಉಚಿತವಾಗಿ ಕರೆನ್ಸಿ ಬರುತ್ತದೆ ಎನ್ನುವ ಸಂದೇಶವೊಂದು ವಾಟ್ಸ್ ಆ್ಯಪ್ ಗಳಲ್ಲಿ ಹರಿದಾಡುತ್ತಿದೆ. ದಿ ಸ್ಟೇಟ್ ನೆಟ್ವರ್ಕ್ ತಂಡ ಈ ಸಂದೇಶದ ಬಗ್ಗೆ ತರ್ಕ ನಡೆಸಿದೆ.

ಮೆಸೇಜ್ ನಲ್ಲಿ ಏನಿದೆ?
ನಿಮ್ಮ ಮೊಬೈಲ್ ರಿಚಾರ್ಜ್ ಮಾಡಬೇಡಿ. ಪ್ರಧಾನಿ ನರೇಂದ್ರ ಮೋದಿ ನಿಮಗೆ ಟಾಕ್ ಟೈಮ್ ಆಗಿ 400 ರೂಗಳನ್ನು ನೀಡುತ್ತಿದ್ದಾರೆ. ಅವರ ಪ್ರಾಜೆಕ್ಟ್ (ಸ್ಮಾರ್ಟ್ ಸಿಟಿ) ಉತ್ತಮ ಯಶಸ್ವಿಗೆ…
ಈ ಸಂದೇಶವನ್ನು ಕೇವಲ 3 ಗುಂಪುಗಳಿಗೆ ಕಳುಹಿಸಿ ಮತ್ತು 5 ನಿಮಿಷಗಳ ನಂತರ ನಿಮ್ಮ ಸಮತೋಲನವನ್ನು (ಬ್ಯಾಲೆನ್ಸ್) ಪರಿಶೀಲಿಸಿ….
ವೊಡಾಫೋನ್- *111*6*2#
ಏರ್ಟೆಲ್- *121*2#
ಐಡಿಯಾ- *123*10*10#
ಏರ್ಸೆಲ್- *165*6*1#
ಡೊಕೊಮೊ- *111*1*1#
ಬಿಎಸ್ಎನ್ಎಲ್- *112#
ಜಿಯೊ- 1991
ನನಗೂ ಆಘಾತವಾಯಿತು…
ಆದರೆ ಇದು ನಿಜ#

ತಪ್ಪು ಮಾಹಿತಿ:
ಪ್ರಧಾನಿ ನರೇಂದ್ರ ಮೋದಿ ಅವರು 400 ರೂ. ಉಚಿತವಾಗಿ ಮೊಬೈಲ್ ಗೆ ಟಾಕ್ ಟೈಮ್ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಸರ್ಕಾರದಿಂದಲೂ ಎಲ್ಲಿಯೂ ಪ್ರಚಾರ ಆಗಿಲ್ಲ. ಹಾಗಾಗಿ ಟಾಕ್ ಟೈಮ್ ಕೊಡುವ ಸುದ್ದಿ ಅಪ್ಪಟ ಸುಳ್ಳು.

ಸದ್ಯ ದೇಶದಲ್ಲಿ 550 ಮಿಲಿಯನ್ (55 ಕೋಟಿ) ಗೂ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ. ಬೇಸಿಕ್ ಮೊಬೈಲ್ ಗಳ ಸಂಖ್ಯೆ ಲೆಕ್ಕ ಮಾಡಿದರೆ ಇನ್ನೂ ಹೆಚ್ಚಾಗುತ್ತದೆ. ಅಷ್ಟೊಂದು ಜನರಿಗೆ ತಲಾ 400 ರೂ. ಟಾಕ್ ಟೈಮ್ ಪಾವತಿಸಿದರೂ 2200 ಕೋಟಿ ರೂ. ಬೇಕಾಗುತ್ತದೆ. ವಿಶ್ವ ವಿದ್ಯಾಲಯಗಳ ವಾರ್ಷಿಕ ಬಜೆಟ್ ಕೂಡ ಇಷ್ಟು ಇರುವುದಿಲ್ಲ. ಹೀಗಿರುವಾಗ ಸುಮ್ಮನೆ ಇಷ್ಟೊಂದು ಹಣ ಪಾವತಿಸಲು ಸಾಧ್ಯವೇ.

ಇದನ್ನೂ ಓದಿ: ಬದುಕಿರುವ ವೈದ್ಯನಿಗೆ ಕೊರೊನಾ ಸಾವಿನ ಸುಳ್ಳು ಕತೆ ಹಣೆದರು

ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಸ್ಮಾರ್ಟ್ ಸಿಟಿ ಯೋಜನೆ ಯಶಸ್ವಿಯಾಗಿ ಟಾಕ್ ಟೈಮ್ ಕೊಡುತ್ತಿದ್ದಾರೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಅಸಲಿಗೆ ಸ್ಮಾರ್ಟ್ ಸಿಟಿ ಯೋಜನೆ ಅರ್ಧದಷ್ಟೂ ಮುಗಿದಿಲ್ಲ. ಎಲ್ಲೆಡೆ ಸ್ಮಾರ್ಟ್ ಸಿಟಿ ಪ್ರಗತಿ ತುಂಬಾ ನಿಧಾನವಾಗಿದೆ. ಖರ್ಚುಗಳು ಹೆಚ್ಚಾಗುತ್ತಿವೆ. ಹಾಗಾಗಿ ಉಚಿತ ಟಾಕ್ ಟೈಮ್ ಕೊಡುವ ಸುದ್ದಿ ಅಪ್ಪಟ ಸುಳ್ಳು. ಆದರೆ ಬ್ಯಾಲೆನ್ಸ್ ಚೆಕ್ ಮಾಡಲು ಕೊಟ್ಟಿರುವ ನಂಬರ್ ಗಳು ಆಯಾ ನೆಟ್ವರ್ಕ ಕಂಪನಿಗಳಿಗೆ ಸೇರಿವೆ. ಅದರಲ್ಲಿ ಕೆಲವು ಬ್ಯಾಲೆನ್ಸ್ ಮಾಹಿತಿ ತಿಳಿಸಿದರೆ,ಇನ್ನು ಕೆಲವು ಬೆಸ್ಟ್ ಆಫರ್ಸ್ ತಿಳಿಸುವ ಟೋಲ್ ಫ್ರೀ ಸಂಖ್ಯೆಗಳಾಗಿವೆ.

ಇದು ಇಟಲಿಯಲ್ಲಿ ಕೊರೊನಾ ಸೃಷ್ಟಿಸಿದ ಹೆಣಗಳ ರಾಶಿಯೇ: ಸತ್ಯ ತಿಳಿದರೆ ಶಾಕ್ ಆಗುತ್ತೀರಿ