ಪ್ರೀತಿಗಾಗಿ ವಿದೇಶಕ್ಕೆ ಸೈಕಲ್ ಮೇಲೆ ಹೋದವರ ಕತೆ ಕೇಳಿದ್ದೀವಿ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಿದವರ ಕತೆ ಕೇಳಿದ್ದೇವೆ. ಆದರೆ, ಈ ಗಂಡು ಹುಲಿ ಸಂಗಾತಿ ಹುಡುಕುವುದಕ್ಕಾಗಿ ಮೂರು ತಿಂಗಳಲ್ಲಿ ಬರೋಬ್ಬರಿ 3200 ಕಿ.ಮೀ. ನಡೆದುಕೊಂಡೇ ಸಾಗಿದೆ.

ಹೌದು. ಮಹಾರಾಷ್ಟ್ರದ ಟಿಪ್ಪೇಶ್ವರ ಅಭಯಾರಣ್ಯದ ಎರಡು ವರ್ಷದ ಹುಲಿ ತೆಲಂಗಾಣದ ಅಭಯಾರಣ್ಯವೂ ಸೇರಿ ವಿವಿಧೆಡೆ ನಡೆದುಕೊಂಡೇ ಇಷ್ಟು ದೊಡ್ಡ ದೂರವನ್ನು ಕ್ರಮಿಸಿದೆ. ಹುಲಿಯ ನಡಿಗೆ ಕಂಡು ವನ್ಯ ಜೀವಿ ತಜ್ಞರೇ ದಂಗಾಗಿ ಹೋಗಿದ್ದಾರೆ.
ಸಂಗಾತಿಗಾಗಿಯೇ ಇಷ್ಟೊಂದು ದೂರ ಪ್ರಯಾಣಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಆ ಹುಲಿ ಇದ್ದಲ್ಲಿಗೆ ಒಂದು ಹೆಣ್ಣು ಹುಲಿ ತಂದು ಬಿಡುವ ಬಗ್ಗೆಯೂ ಚಿಂತನೆ ನಡೆದಿದೆ.

ಏನಿದು ಹುಲಿ ಕತೆ?
ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಡಬ್ಲುಐಐ) ಅವರು ಅರಣ್ಯ ಇಲಾಖೆಯೊಂದಿಗೆ ಒಂದು ಯೋಜನೆ ಕೈಗೊಂಡಿದ್ದರು. ಪೂರ್ವ ವಿದರ್ಬ ಭಾಗಗಳಲ್ಲಿನ ಹುಲಿಗಳ ಚಲನವಲನಗಳ ಬಗ್ಗೆ ಅಧ್ಯಯನ ಮಾಡುವುದು ಯೋಜನೆಯ ಉದ್ದೇಶವಾಗಿತ್ತು.

ಮಹಾರಾಷ್ಟ್ರದ ಟಿಪ್ಪೇಶ್ವರ ಅಭಯಾರಣ್ಯದ ಟಿ1 ಎನ್ನುವ ಹೆಣ್ಣು ಹುಲಿಗೆ ಮೂರು ಮರಿಗಳು ಇದ್ದವು. ಅಧ್ಯಯನದ ಭಾಗವಾಗಿ ಹುಲಿಗಳಿಗೆ ರೇಡಿಯೊ ಕಾಲರ್ ಹಾಕಿದ್ದರು. ಟಿ1ಸಿ1 (ಟಿ1 ಹುಲಿಯ ಮರಿ) ಎನ್ನುವ ಈ ಗಂಡು ಹುಲಿ ಟಿಪ್ಪೇಶ್ವರ ಅಭಯಾರಣ್ಯದಿಂದ ಜ್ಞಾನಗಂಗಾ ಅಭಯಾರಣ್ಯದ ವರೆಗೆ 3200 ಕಿ.ಮೀ. ವರೆಗೆ ಸಂಚರಿಸಿದೆ.

ಆ ಮಧ್ಯೆ ತೆಲಂಗಾಣದ ಅದಿಲಾಬಾದ್ ಅರಣ್ಯಕ್ಕೂ ಹೋಗಿ ಬಂದಿದೆ. ಮಹಾರಾಷ್ಟ್ರದ ನಾಂದೇಡ ಯವತಮ ಜಿಲ್ಲಾ ಗಡಿಯಲ್ಲಿರುವ ಪೈಲಗಂಗಾ ಅಭಯಾರಣ್ಯದಲ್ಲೂ ಸುತ್ತಾಡಿ ಬಂದಿದೆ. ಜ್ಞಾನಗಂಗಾದಿಂದ ಔರಂಗದಾಬಾದ್ ನಲ್ಲಿರುವ ಅಜಂತಾ ಹಿಲ್ಸ್ ಗೂ ಹೋಗಿ ಬಂದಿದೆ.

ಒಟ್ಟಾರೆ 3200 ಕಿ.ಮೀ. ಪ್ರಯಾಣ ಮಾಡಿ ಸದ್ಯ ಜ್ಞಾನಗಂಗಾ ಅಭಯಾರಣ್ಯದಲ್ಲಿ ಉಳಿದಿದೆ ಎಂದು ಮಹಾರಾಷ್ಟ್ರದ ಸಿಸಿಎಫ್ ನಿತಿನ್ ಕಾಕೋಡಕರ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಗಮನಿಸಿದಂತೆ ಹುಲಿಯು ಟಿಪ್ಪೇಶ್ವರ ಸುತ್ತಮುತ್ತ 363 ಕಿ.ಮೀ. ಅಡ್ಡಾಡಿದೆ. ಅಲ್ಲಿಂದ ಜ್ನಾನಗಂಗಾ 1475 ಕಿ.ಮೀ. ನಡೆದು ಬಂದಿದೆ. ಸುತ್ತಮುತ್ತ 1185 ಕಿ.ಮೀ. ಅಡ್ಡಾಡಿದೆ. ಇಷ್ಟೆಲ್ಲ ಪ್ರಯಾಣ ಮಾಡಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಗೆ “ವಾಕರ್’ ಎಂದು ಕರೆದಿದ್ದಾರೆ.

ಪೆಟ್ಟಾದರೂ ಹುಡುಕಾಟ ಬಿಡಲಿಲ್ಲ
ಹುಲಿ ಹೊಟ್ಟಗೆ ಗಾಯ ಆಗಿತ್ತು. ಆದರೆ, ಒಂದು ತಿಂಗಳಲ್ಲಿಯೇ ಗಾಯವನ್ನು ವಾಸಿ ಮಾಡಿಕೊಂಡು ನಡಿಗೆ ಆರಂಭಿಸಿದೆ. ಡಿಸೆಂಬರ್ 5ಕ್ಕೆ ಜ್ಞಾನಗಂಗಾ ತಲುಪಿದ ಹುಲಿ ಟಿ1ಸಿ1 ಅಲ್ಲಿ 52 ಘನ ಮೀಟರ್ ಪ್ರದೇಶವನ್ನು ತನ್ನ ವಾಸ ನೆಲೆ ಮಾಡಿಕೊಳ್ಳುತ್ತಾನೆ.

ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಅರಣ್ಯ ವಿಜ್ಞಾನಿ ಬಿಲಾಲ್ ಹಬೀಬ್ ನೇತೃತ್ವದ ತಂಡ ಹುಲಿಯ ಒಟ್ಟು ಆರು ಸಾವಿರ ಕಡೆ ಜಿಪಿಎಸ್ ಟ್ರ್ಯಾಕ್ ಮಾಡಿ ಅದರ ಪ್ರಯಾಣವನ್ನು ಅಂದಾಜಿಸಿದ್ದಾರೆ. ಎರಡು ವರ್ಷ ವಯಸ್ಸಿನ ಈ ಹುಲಿ ನಡಿಗೆ ಆರಂಭಿಸಿದಾಗಿನಿಂದ ಎಲ್ಲಿಯೂ ತಂಗಿಲ್ಲ. ಹೈವೆ, ನದಿ, ಕೃಷಿ ಭೂಮಿ, ಅರಣ್ಯದಲ್ಲಿ ಹಾದು ಹೋಗಿದೆ. ಎಲ್ಲಿಯೂ ಜನರ ಮೇಲೆ ದಾಳಿ ಮಾಡಿಲ್ಲ.

ಹೊಟ್ಟೆಗೆಷ್ಟು  ಬೇಕು ಅಷ್ಟನ್ನೇ ತುಂಬಿಸಿಕೊಂಡು ಹೋಗಿದೆ. ಅನಗತ್ಯವಾಗಿ ಬೇಟೆ ಮಾಡಿಲ್ಲ. ಹುಲಿಯ ಇಷ್ಟು ದೊಡ್ಡ ನಡಿಗೆಗೆ ಇನ್ನೊಂದು ಸಂಗಾತಿಗಾಗಿಯೇ ಇರಬಹುದು ಎಂದು ತಜ್ಞರ ತಂಡ ಅಭಿಪ್ರಾಯ ಪಟ್ಟಿದೆ.

ಸದ್ಯ ಹುಲಿ ಜ್ಞಾನಗಂಗಾ ಅಭಯಾರಣ್ಯದಲ್ಲಿ ನೆಲೆಸಿದೆ. ಅಲ್ಲಿ ಅದಕ್ಕೆ ಸಾಕಷ್ಟು ಬೇಟೆ ಸಿಕ್ಕಿರಬಹುದು. ಮತ್ತು ಬೇರೆ ಹುಲಿಯ ವಿರೋಧ ಎದುರಾಗಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಜತೆಗೆ ಈ ಹುಲಿ ಸಲುವಾಗಿ ಜ್ಞಾನಗಂಗಾದಲ್ಲಿ ಹೆಣ್ಣು ಹುಲಿ ಬಿಡಬೇಕು ಎಂದು ತಜ್ಞರು ನಿರ್ಧಾರ ಮಾಡಿದ್ದಾರೆ. ಆದರೆ, ಅದಕ್ಕೂ ಮೊದಲು ಹುಲಿಯ ನಡಿಗೆ ಅಂದಾಜಿಸಲು ಸಮಿತಿ ನೇಮಿಸಲಾಗಿದೆ. ಸಮಿತಿ ವರದಿ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.