ಜಗತ್ತಿನ ದೈತ್ಯ ಜೀವಿಯಾಗಿ ಉಳಿದಿರುವ ಅದೇ ಆನೆಗಳು ಕಾದಾಡಲು ಶುರು ಮಾಡಿದರೆ ಅದೊಂದು ರಣರೋಚಕವಾಗಿರುತ್ತದೆ. ಆನೆಗಳು ಕಾದಾಡುತ್ತಿದ್ದತೆ ಭೂಮಿಯೂ ನಡುಗುತ್ತದೆಯಂತೆ. ಅಂಥ ರೋಚಕ ಕಾದಾಟ ಸಾಮಾನ್ಯ ಜನರಿಗೆ ಕಾಣುವುದು ಬಲು ಅಪರೂಪ. ಅಸಲಿಗೆ ಆನೆಗಳು ಕಾದಾಟ ಮಾಡುವ ಕಾರಣವೂ ಸ್ವಾರಸ್ಯಕರವಾಗಿದೆ.

ಗಂಡಾನೆಗಳ ನಡುವೆ ನಡೆಯುವ ಕದನ ಘೋರವಾಗಿ ಕಾಣಬಹುದಾದರೂ ಇವು ಪರಸ್ಪರರಿಗೆ ಹೆಚ್ಚಾಗಿ ದೈಹಿಕ ಗಾಯಗಳನ್ನುಂಟುಮಾಡುವುದಿಲ್ಲ. ತಮ್ಮ ಬಲ ಮತ್ತು ಆಕ್ರಮಣಕಾರಿ ಪ್ರವೃತ್ತಿಯ ಪ್ರದರ್ಶನ ಮಾತ್ರ ನಡೆಯುವುದು. ಇಷ್ಟರಿಂದಾಗಿಯೇ ಆನೆಗಳು ಎದುರಾಳಿಯ ಶಕ್ತಿಯ ಅಂದಾಜು ಮಾಡಿಕೊಳ್ಳುತ್ತವೆ. ದುರ್ಬಲ, ಎಳೆಯ ಹಾಗೂ ಆತ್ಮವಿಶ್ವಾಸ ಕಡಿಮೆಯಿರುವ ಆನೆಗಳು ಕದನದಿಂದ ಹಿಂದೆ ಸರಿಯುತ್ತವೆ. ಆದರೆ ಸಂತಾನೋತ್ಪತ್ತಿಯ ಋತುವಿನಲ್ಲಿ ಈ ಕದನಗಳು ಭೀಷಣರೂಪ ಪಡೆಯುವುದೂ ಇದೆ. ಈ ಋತುವಿನಲ್ಲಿ ಸಲಗಗಳು ತಮಗೆದುರಾಗುವ ಪ್ರತಿ ಗಂಡಾನೆಯೊಂದಿಗೂ ಕಾದಾಡುತ್ತವೆ ಮತ್ತು ಹೆಣ್ಣನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಹೆಣ್ಣಾನೆಗಳ ಗುಂಪಿನ ಸುತ್ತಲೇ ಸುಳಿದಾಡುತ್ತಿರುತ್ತವೆ.

ಕುಟುಂಬ ಜೀವಿ
ಆನೆಗಳು ಒಂದು ವ್ಯವಸ್ಥಿತ ಸಾಮಾಜಿಕ ಕಟ್ಟಳೆಯಡಿ ಬಾಳುತ್ತವೆ. ಗಂಡು ಮತ್ತು ಹೆಣ್ಣಿನ ಸಾಮಾಜಿಕ ಜೀವನಗಳು ಬಲು ಭಿನ್ನವಾಗಿರುವುವು. ಹೆಣ್ಣಾನೆಗಳು ತಮ್ಮ ಸಂಪೂರ್ಣ ಜೀವನವನ್ನು ಒಂದು ನಿಕಟವಾಗಿ ಬಂಧಿಸಲ್ಪಟ್ಟ ಕುಟುಂಬದಲ್ಲಿಯೇ ಕಳೆಯುತ್ತವೆ. ಈ ಕುಟುಂಬವು ಕೇವಲ ಹೆಣ್ಣಾನೆಗಳನ್ನು ಮಾತ್ರ ಒಳಗೊಂಡಿದ್ದು ತಾಯಿ, ಮಗಳು, ಸಹೋದರಿಯರು, ಸೋದರತ್ತೆ ಮತ್ತು ಚಿಕ್ಕಮ್ಮಂದಿರನ್ನು ಒಳಗೊಂಡಿರುತ್ತದೆ.

ಗುಂಪಿನಲ್ಲಿ ಅತಿ ಹೆಚ್ಚು ವಯಸ್ಸಾದ ಆನೆಯು ಈ ಕುಟುಂಬದ ಯಜಮಾನಿಯಾಗಿ ಪ್ರಧಾನಮಾತೃವಿನ ಸ್ಥಾನದಲ್ಲಿರುವುದು. ವಯಸ್ಕ ಗಂಡಾನೆಗಳು ಸಾಮಾನ್ಯವಾಗಿ ಒಂಟಿಯಾಗಿಯೇ ಬಾಳುತ್ತವೆ. ಹೆಣ್ಣಾನೆಯ ಸಾಮಾಜಿಕ ವಲಯವು ತನ್ನ ಸಣ್ಣ ಕುಟುಂಬಕ್ಕೇ ಸೀಮಿತವಾಗಿರುವುದಿಲ್ಲ. ತನ್ನ ಗುಂಪಿನ ಆಸುಪಾಸಿನಲ್ಲಿ ಸುಳಿದಾಡುವ ಗಂಡಾನೆಗಳು ಮತ್ತು ಇತರ ಗುಂಪುಗಳೊಡನೆಯೂ ಸಂಪರ್ಕವಿರಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಹೆಣ್ಣಾನೆಗಳ ಕುಟುಂಬವು 5 ರಿಂದ 15 ವಯಸ್ಕ ಹೆಣ್ಣಾನೆಗಳು ಮತ್ತು ಅನೇಕ ಎಳೆಯ ಮಕ್ಕಳನ್ನು (ಗಂಡು ಮತ್ತು ಹೆಣ್ಣು) ಒಳಗೊಂಡಿರುತ್ತದೆ. ಕುಟುಂಬವು ಬಲು ದೊಡ್ಡದಾಗಿ ಬೆಳೆದಾಗ ಕೆಲ ಮಗಳು ಆನೆಗಳು ಗುಂಪಿನಿಂದ ಹೊರಬಂದು ತಮ್ಮದೇ ಆದ ಹೊಸ ಕುಟುಂಬವನ್ನು ರೂಪಿಸಿಕೊಳ್ಳುತ್ತವೆ. ಈ ಕುಟುಂಬಗಳಿಗೆ ಸುತ್ತಲಿನ ಹಿಂಡುಗಳಲ್ಲಿ ಯಾವುವು ತಮ್ಮ ಬಂಧುಗಳು ಹಾಗೂ ಯಾವುವು ಅಲ್ಲವೆಂಬ ಅರಿವಿರುತ್ತದೆ.

ಗಂಡಾನೆಯ ಜೀವನವು ಇದಕ್ಕಿಂತ ಸಂಪೂರ್ಣವಾಗಿ ಬೇರೆಯಾಗಿರುತ್ತವೆ. ತನ್ನ ತಾಯಿಯ ಗುಂಪಿನಲ್ಲಿ ಬೆಳೆಯುವ ಇದು ವಯಸ್ಸಾದಂತೆ ಕ್ರಮೇಣ ಗುಂಪಿನ ಅಂಚಿಗೆ ಸರಿಯತೊಡಗಿ ಕೆಲವೊಮ್ಮೆ ಗಂಟೆಗಳವರೆಗೆ, ದಿನಗಳವರೆಗೆ ಕುಟುಂಬದಿಂದ ದೂರವುಳಿಯಲಾರಂಭಿಸುತ್ತದೆ. ಕಾಲ ಸರಿದಂತೆ ಹೀಗೆ ಕುಟುಂಬದ ಹೊರಗಿರುವ ಅವಧಿ ಹೆಚ್ಚಾಗತೊಡಗಿ 14ನೆಯ ವಯಸ್ಸಿನ ಸುಮಾರಿಗೆ ಗಂಡಾನೆ ತನ್ನ ಕುಟುಂಬವನ್ನು ತೊರೆಯುತ್ತದೆ.

ಹೆಚ್ಚೂಕಡಿಮೆ ಒಂಟಿಯಾಗಿಯೇ ಬಾಳುವ ಗಂಡಾನೆಗಳು ಆಗಾಗ ತಮ್ಮದೇ ಹಿಂಡನ್ನು ರೂಪಿಸುವುದೂ ಇದೆ. ಇಂತಹ ಹಿಂಡನ್ನು ಬ್ರಹ್ಮಚಾರಿ ಹಿಂಡು ಎಂದು ಕರೆಯಲಾಗುತ್ತದೆ. ಗಂಡಾನೆಗಳು ಹೆಚ್ಚಿನ ಸಮಯವನ್ನು ತಮ್ಮ ಪ್ರಾಬಲ್ಯ ಸಾಧಿಸುವುದಕ್ಕಾಗಿ ಇತರ ಗಂಡಾನೆಗಳೊಡನೆ ಕಾದಾಡುವುದರಲ್ಲಿಯೇ ಕಳೆಯುವುವು. ಆನೆಗಳ ವಂಶಾಭಿವೃದ್ಧಿ ಪ್ರಕ್ರಿಯೆಯ ದೃಷ್ಟಿಯಲ್ಲಿ ಇದು ಅವಶ್ಯ. ಏಕೆಂದರೆ ಕೇವಲ ಅತಿ ಪ್ರಬಲ ಗಂಡಾನೆಗಳಿಗೆ ಮಾತ್ರ ಹೆಣ್ಣಾನೆಗಳೊಂದಿಗೆ ಸಂಗಮಿಸುವ ಅವಕಾಶವಿರುವುದು. ಉಳಿದವು ತಮ್ಮ ಸರದಿಗಾಗಿ ಕಾಯಲೇಬೇಕು. ಸಾಮಾನ್ಯವಾಗಿ 40 ರಿಂದ 50 ವರ್ಷ ವಯಸ್ಸಾಗಿರುವ ಬಲಿಷ್ಟ ಗಂಡಾನೆಗಳು ಹೆಚ್ಚಿನ ವಂಶಾಭಿವೃದ್ಧಿಯ ಕಾರ್ಯ ನಡೆಸುತ್ತವೆ.