ಲಾಕ್ ಡೌನ್ ಘೋಷಣೆ ಆದಾಗಿನಿಂದ ರೈತರು ನಷ್ಟದ ಮೇಲೆ ನಷ್ಟ ಎದುರಿಸುತ್ತಲೇ ಇದ್ದಾರೆ. ಹಿಂದಿನ ವರ್ಷದ ಮುಂಗಾರು ಪ್ರವಾಹದಲ್ಲಿಯೇ ಕಳೆದು ಹೋಯಿತು. ಹಲವರ ಬದುಕನ್ನೂ ಕಸಿದುಕೊಂಡಿತು. ಈಗ ಕೊರೊನಾ ರೈತರ ಗಾಯದ ಮೇಲೆ ಮತ್ತೆ ಬರೆ ಎಳೆದಿದೆ.

ಈಗಂತೂ ಬೆಳೆದ ಬೆಳೆಗಳೆಲ್ಲ ಹೊದಲ್ಲಿಯೇ ಕೊಳೆತು ಹಾಳಾಗುತ್ತಿವೆ. ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುವುದು ಕಷ್ಟ. ಇಂಥ ಸಂದರ್ಭದಲ್ಲಿ ರೈತರು ಒಂದಷ್ಟು ಬದಲಾವಣೆ ಮಾಡಿಕೊಂಡರೆ ನಷ್ಟದಿಂದ ಪಾರಾಗಬಹುದು. ಅಲ್ಲದೆ, ಕೃಷಿ ವೃತ್ತಿಯನ್ನೂ ಹೆಮ್ಮೆಯಿಂದ ಮಾಡಬಹುದು.

ಸದ್ಯ ರೈತರು ಒಂದೇ ಬೆಳೆಯನ್ನು ಹೆಚ್ಚಾಗಿ ಬೆಳೆದು ಮಾರಾಟ ಮಾಡಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಖುದ್ದಾಗಿ ಮಾರಾಟ ಮಾಡಬೇಕು ಎಂದರೂ ರೈತರಿಗೆ ನಾಲ್ಕೈದು ಎಕರೆಯ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಆಗುವುದಿಲ್ಲ. ದಲ್ಲಾಳಿಗಳ ಸಹವಾಸ ಮಾಡಿದರೆ ಮಾಡಿದ ಖರ್ಚು ಸಹ ಸಿಗುವುದಿಲ್ಲ.

ಇದನ್ನೂ ಓದಿ: ಅದೃಷ್ಟ ತರಲಿದೆ ಮುಂಗಾರು: ವಿಜ್ಞಾನಿಗಳ ಭವಿಷ್ಯ

ಹಾಗಾಗಿ ರೈತರು ಬಿತ್ತನೆ ಮಾಡುವಾಗಲೇ ಒಂದಷ್ಟು ಜಾಣತನ ಮಾಡಬೇಕು. ರೈತರು ಉತ್ಪಾದಕರಾಗಿ ಉಳಿಯದೆ ವ್ಯಾಪಾರಕ್ಕೂ ಕೈ ಹಾಕಬೇಕು. ಆಗ ದಲ್ಲಾಳಿಗಳ ಪಾಲಾಗುವ ಲಾಭವನ್ನು ರೈತರು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. ದೊಡ್ಡ ಮಟ್ಟದ ಕೃಷಿ ಮಾಡುವಾಗ ಬೆಳೆಯನ್ನು ಮಾರಾಟ ಮಾಡುತ್ತ ಕುಳಿತುಕೊಳ್ಳುವುದು ಆಗದ ಮಾತು ಎನಿಸಬಹುದು. ಅದಕ್ಕೂ ಪರಿಹಾರ ಇದೆ.

ಲಾಕ್ ಡೌನ್ ಸಂದರ್ಭದಲ್ಲಿ ಕೃಷಿ ಬೆಳೆಗಿಂತ ತೋಟಗಾರಿಕೆ ಬೆಳೆ ಹೆಚ್ಚು ನಷ್ಟಕ್ಕೆ ಒಳಗಾಗುತ್ತಿದೆ. ಕೃಷಿಯಲ್ಲಿ ಬೇಳೆ ಕಾಳುಗಳನ್ನು ಸಂಸ್ಕರಿಸಿ ಇಡಬಹುದು. ಅದನ್ನು ಯಾವಾಗ ಬೇಕಾದರು ಮಾರಾಟ ಮಾಡಬಹುದು. ಆದರೆ, ತೋಟಗಾರಿಕೆ ಬೆಳೆ ಹಾಗಲ್ಲ. ಕೆಲವೇ ದಿನಗಳಲ್ಲಿ ಅದು ಹಾಳಾಗಿ ಬಡುತ್ತವೆ.

ಇದನ್ನೂ ಓದಿ: ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ.

ಅದಕ್ಕಾಗಿ ತರಕಾರಿ ಮತ್ತಿತರ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಬಿತ್ತನೆ ಮಾಡುವಾಗ ವಿವಿಧ ಬೆಳೆಗಳನ್ನು ಬಿತ್ತಬೇಕು. ನೇರವಾಗಿ ಹೇಳಬೇಕೆಂದರೆ ಲಾಕ್ ಡೌನ್ ಬಿಕ್ಕಟ್ಟಿನಿಂದ ಪಾರಾಗಲು ರೈತರು ಮಿಶ್ರ ಬೇಸಾಯ ಅನುಸರಿಸಬೇಕು. ಸದ್ಯ ನಷ್ಟದಿಂದ ಪಾರಾಗಲು ಅದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ.

ಮಿಶ್ರ ಬೇಸಾಯ ಮಾಡುವುದರಿಂದ ಒಂದೇ ಬೆಳೆಯನ್ನು ಅವಲಂಬಿಸುವ ಅನಿವಾರ್ಯತೆ ಇರುವುದಿಲ್ಲ. ಒಂದಲ್ಲ ಒಂದು ಬೆಳೆ ಕೈ ಹಿಡಿಯುತ್ತದೆ. ಜತೆಗೆ ಹೀಗೆ ಮಾಡಿದಾಗ ರೈತರ ಬಳಿ ವಿವಿಧ ಕೃಷಿ ಉತ್ಪನ್ನಗಳು ಇರುತ್ತವೆ. ವಿವಿಧ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ದರೆ ಮಾರಾಟ ಸುಲಭ. ವಿಶೇಷ ಎಂದರೆ ಮಿಶ್ರ ಬೆಳೆಯಿಂದ ಇಳುವರಿಯೂ ಹೆಚ್ಚು, ಲಾಭವೂ ಅಧಿಕವಾಗಿ ಬರುತ್ತದೆ ಎನ್ನುವುದು ಕೃಷಿ ಅಧ್ಯಯನದಿಂದ ಸಾಬೀತಾಗಿದೆ.

ಇದನ್ನೂ ಓದಿ: ಲಾಕ್ ಡೌನ್ ನಲ್ಲಿ ಕೃಷಿ ಮಾಡುವುದು ಹೇಗೆ? ಸುರಕ್ಷತೆಯ ಮಾರ್ಗ ತಿಳಿಯಿರಿ

ಇನ್ನೊಂದು ಮುಖ್ಯ ವಿಷಯ ಏನೆಂದರೆ, ಏನು ಬೆಳೆಯಬೇಕು ಎನ್ನುವುದನ್ನು ಸ್ವ ವಿವೇಚನೆಯಿಂದ ನಿರ್ಧರಿಸಬೇಕು. ಎಲ್ಲರೂ ಬೆಳೆಯುತ್ತಾರೆ ಎಂದು ಬೆಳೆದರೆ ಹತ್ತರಲ್ಲಿ ಹನ್ನೊಂದು ಆಗಿ ನಷ್ಟದಲ್ಲಿ ಬೀಳಬೇಕಾಗುತ್ತದೆ. ಹೊಲದಲ್ಲಿ ಎಲ್ಲ ಬೆಳೆಯೂ ಇದ್ದಾಗ ಒಂದಕ್ಕೆ ಬೆಲೆ ಕಡಿಮೆ ಆದರೆ, ಮತ್ತೊಂದಕ್ಕೆ ಬೆಲೆ ಬಂದಿರುತ್ತದೆ. ಆಗ ನಷ್ಟ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ

ಬಹುತೇಕ ಎಲ್ಲ ರೈತರಿಗೂ ಇದರ ಅರಿವು ಇದೆ. ಆದರೆ, ಅದನ್ನು ಪಾಲಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ಬೇರೆಯವರನ್ನು ಅನುಸರಿಸದೆ ಸ್ವಂತ ಅನುಭವ ಪ್ರಯೋಗಿಸಿದರೆ ಎಂಥ ಸವಾಲನ್ನಾದರೂ ಜಯಿಸಬಹುದು. ಏನಂತೀರ…