ಚಂದಾಪುರ ಇತ್ತ ಶಹರವೂ ಅಲ್ಲಾ ಹಳ್ಳಿಯೂ ಅಲ್ಲ. ಬೆಳಗಾವಿ ನಗರಕ್ಕೆ ಅಂಗಡಿಯಲ್ಲಿ ಕಾರಕೂನ ಕೆಲಸಕ್ಕೆ ಹೋಗುವ ಮಗ ಮಕರಂದನ ಮದುವೆ ಮಾಡಿ ಮಲ್ಲವ್ವ ಕಣ್ಣಮುಚ್ಚಿಕೊಂಡಿದ್ದಳು. ಶಹರದ ಆಡಂಬರದ ಬದುಕಿಗೆ ಒಗ್ಗಿಕೊಂಡಿದ್ದ ಮಕರಂದನ ಹೆಂಡತಿ ಭಾಗ್ಯ ಅವನ ಪಾಲಿಗೆ ಎಲ್ಲವೂ ಆಗಿದ್ದಳು. ಸಂಜೆ ಮನೆಗೆ ಮರಳುವಾಗ ನಿತ್ಯ ಮಲ್ಲಿಗೆ ತರುತ್ತಿದ್ದ. ವರ್ಷ ಕಳೆಯುವಷ್ಟರಲ್ಲಿ ಮುದ್ದಾದ ಹೆಣ್ಣು ಮಗು ಜನಿಸಿತು.

ಮಗುವಿನ ಮುಖ ಚಂದ್ರನಿಗೆ ಹೋಲುತ್ತಿದ್ದ ಕಾರಣಕ್ಕೆ ಚಾಂದನಿ ಎಂದು ಹೆಸರಿಟ್ಟಿದ್ದರು. ಹೀಗಿರುವಾಗ ಭಾಗ್ಯ ಒಂದು ದಿನ ಬಟ್ಟೆ ತೊಳೆದು ಮಹಡಿ ಮೇಲೆ ಕಟ್ಟಿರುವ ತಂತಿಗೆ ಒಣಗಲು ಹಾಕುತ್ತಿದ್ದರು. ಆಕಸ್ಮಿಕವಾಗಿ ಬಟ್ಟೆ ಹಾಕುವಾಗ ಮಹಡಿ ಮೇಲೆ ಹಾಯ್ದು ಹೋದ ಕರೆಂಟ್ ತಂತಿಗೆ ಅವಳ ಕೈ ತಗುಲಿ ಅಸುನೀಗಿದಳು.

ಅತಿಯಾಗಿ ಪ್ರೀತಿಸುತ್ತಿದ್ದ ಭಾಗ್ಯಳನ್ನು ಕಳೆದುಕೊಂಡ ಮಕರಂದ ಒತ್ತಡಕ್ಕೆ ಸಿಲುಕಿ ಕುಡಿತದ ಚಟಕ್ಕೆ ಬಿದ್ದ. ಹೀಗಾಗಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಹೆಸರು ಕೆಡಿಸಿಕೊಂಡ. ಚಂದಾಪುರದದಲ್ಲಿನ ಸಂಬಂಧಿಗಳು ಮಕರಂದನನ್ನು ಊರಿಗೆ ಕರೆಸಿಕೊಂಡು ಮತ್ತೊಂದು ಮದುವೆ ಮಾಡಿದರು. ಊರಿನಲ್ಲಿರುವ ತುಂಡು ಜಮೀನು ನೀಡಿ ಜೊತಗೆ ಒಂದು ಎಮ್ಮೆಯನ್ನೂ ಕೊಡಸಿದರು.

ಚಾಂದನಿ 6 ವರ್ಷದ ಬಾಲ್ಯದಲ್ಲಿಯೇ  ತಾಯಿ ಕಳೆದುಕೊಂಡು ಅನಾಥವಾಗಿತ್ತು. ಅಪ್ಪನ  ಹಳೆಯ ನೆನಪಿಗೆ  ದುಡಿದ ಅರ್ಧ ಹಣ ಸರಾಯಿ ಅಂಗಡಿಗೆ ಹೊಗುತ್ತಿತ್ತು. ಮುದ್ದುಕಂದನಿಗೆ ಎನೂ ಅರಿಯದ ವಯಸ್ಸಿನಲ್ಲಿ  ಅವ್ವನ ಅಸ್ಪಷ್ಟ ಚಿತ್ರಗಳು ಅವಳೆದುರು ಬರುತ್ತಿದ್ದವು. ಇನ್ನು ಎರಡನೆ ಅಮ್ಮನಿಗೆ ಮನೆಯ ಕೆಲಸದಲ್ಲಿ ನೆರವಾಗುತ್ತಿದ್ದಳು. ನೀರು ತುಂಬುವುದು, ಬಟ್ಟೆ ತೊಳೆಯುವುದು. ನೆಲ ಒರೆಸುವುದು ಮಾಡುತ್ತಿದ್ದಳು.

ಈ ಕೆಲಸಗಳು ಅಸ್ತವ್ಯಸ್ತವಾದರೆ ಅಮ್ಮ ಪೆಟ್ಟು ನೀಡುತ್ತಿದ್ದಳು. ಬಾಲಕಿಯ ಪುಟ್ಟ ಕೈಯಗಳು ಶ್ರಮದ ಹಾಡು ಹಾಡುತ್ತಿದ್ದವು. ಅಪ್ಪ ಸರಕಾರಿ ಶಾಲೆಗೆ ಸೇರಿಸಿದರು. ಬಿಡುವಿನ ವೇಳೆಯಲ್ಲಿ ಚಾಂದನಿ ಆಕಳನ್ನು ಊರಿನ ಗೋಮಾಳಕ್ಕೆ ಮೇಯಿಸಲು ಹೋಗುತ್ತಿದ್ದಳು. ಭಗವಂತ ಆ ಹುಡುಗಿಗೆ ಮಾತು ಕೊಟ್ಟಿದ್ದರೂ ಮೌನವೇ ಅವಳಿಗೆ ಸಂಗಾತಿಯಾಗಿತ್ತು. ಊರಿನ ಅಕ್ಕಪಕ್ಕದ ಮನೆಯವರು ಮಾತನಾಡಿಸಿದರೂ ಸನ್ನೆಗಳಲ್ಲಿ ಮಾತನಾಡುತ್ತಿದ್ದಳು.

ಚಾಂದನಿಗೆ ಹಸು ಮೇಯಿಸುವುದೆಂದರೆ ಎಲ್ಲಿಲ್ಲದ ಹರುಷ. ಗೋಮಾಳದಲ್ಲಿ ಕರುವಿನೊಂದಿಗೆ ಮನಸ್ಸು ಬಿಚ್ಚಿ ಮಾತನಾಡಲು ಅವಕಾಶ ಸಿಗುತ್ತಿತ್ತು. ಗೋಮಾಳದ ಅರಳಿ ಮರದ ಒಣಗಿದ ಎಲೆಗಳಿಗೆ ಆಕೆಯ ಕಣ್ಣೀರು ಹನಿ ನಿತ್ಯ  ತಲುಪುತ್ತಿದ್ದವು. ಗೋಮಾಳದ ಮರದಡಿಯಲ್ಲಿ ಕುಳಿತು ಲಂಗದ ಜೇಬಿನಲ್ಲಿ ತಂದ ನಿನ್ನೆಯ ಒಣರೊಟ್ಟಿ ಚೂರುಗಳು ಗಂಟಲ ಕರೆದುಕೊಂಡು ಹೊಟ್ಟೆ ಸೇರುತ್ತಿದ್ದವು.

ಇತ್ತೀಚಿಗೆ ಮಕರಂದ ಕುಡಿತ ಬಿಟ್ಟು ಉದ್ಯೋಗ ಮಾಡಲು ನಿರ್ಧರಿಸಿದ್ದ. ಊರ ಅಗಸಿಯಲ್ಲಿ ಪಾನಿಪುರಿ ಮಾಡುವ ಅಂಗಡಿ ತೆರೆದ. ಈ ಹುಡುಗಿಗೆ ಮನೆಯ ಕೆಲಸದ ಜೊತೆ ಅಂಗಡಿಯ ಕೆಲಸವನ್ನೂ ಮಾಡಬೇಕಾಯಿತು. ನೀರು ತುಂಬುವುದು, ಪ್ಲೇಟ್ ತೊಳೆಯುವುದು, ಕಸ ಗುಡಿಸುವುದು ಹೀಗೆ  ಕೆಲಸದ ಒತ್ತಡ ಬಿತ್ತು. ಅಂಗಡಿಯ ಮುಂದಿನ ಕಸ ಗುಡಿಸಿ, ಈರುಳ್ಳಿ ಹೆಚ್ಚಿ ಬರಬೇಕೆನ್ನುವಷ್ಟರಲ್ಲಿ ಶಾಲೆಯ ಪ್ರಾರ್ಥನೆ ಮುಗಿದಿರುತಿತ್ತು. ದಿನಾಲು ಶಾಲೆಗೆ ಲೇಟಾಗಿ ಬರುವ ಕಾರಣ ಶಾಲೆ ಮೈದಾನದ ಉದ್ದಗಲವೂ ಅವಳಿಗೆ ಗೊತ್ತಿತ್ತು. ವಾರಿಗೆ ಗೆಳೆಯರು ಇವಳನ್ನು ಪಾನಿಪುರಿ ಎಂದೇ ಕರೆಯುತ್ತಿದ್ದರಿಂದ ಆ ಹೆಸರೇ ಕಾಯಂ ಆಗಿತ್ತು.

ಇದನ್ನೂ ಓದಿ: ಬಿಟ್ಟು ಹೋಗಬೇಡ ಅಪ್ಪ…

ಮಕರಂದನ ಎರಡನೇ ಹೆಂಡತಿಗೆ ಎರಡು ಮಕ್ಕಳಾದವು. ಅವುಗಳ ಲಾಲನೆ ಪಾಲನೆಯ ಜವಾಬ್ದಾರಿ ಸಹ ಚಾಂದನಿ ಮೇಲೆ ಬಿತ್ತು. ಮಗು ಅತ್ತರೆ, ಬಿದ್ದರೆ ಎಲ್ಲದಕ್ಕೂ ಚಾಂದನಿ ಮೇಲೆ ರೇಗುವುದು ಸಾಮಾನ್ಯವಾಗಿತ್ತು. ಹಲವು ಸಲ ಉಪವಾಸವೂ  ಅವಳಿಗೆ ಅನಿವಾರ್ಯವಾಗುತ್ತಿತ್ತು. ತಂದೆಯ ಚೂರು ವಾತ್ಸಲ್ಯ ಇವಳ ಮೇಲಿತ್ತು. ಆದರೆ ಹೆಂಡತಿ ಭಯದ ಕಾರಣ ಅದನ್ನು ಧೈರ್ಯವಾಗಿ ತೋರಿಸುತ್ತಿರಲಿಲ್ಲ.

ಆದರೆ, ಮಗಳ ಊಟ ತಿಂಡಿ ವಿಚಾರಿಸಿಯೇ ತಾನು ಊಟ ಮಾಡುತ್ತಿದ್ದ.ದಿನಾ ರಾತ್ರಿ ಮಲಗುವ ಸಮಯವೇ 11 ಗಂಟೆಯಾಗುತ್ತಿತ್ತು. ಮುಸುಕು ಹಾಕಿದ ಚಾಂದನಿಯ ಹಾಸಿಗೆಯಿಂದ  ಬಿಕ್ಕಳಿಕೆ ಕೇಳಿದಾಗ ಮಕರಂದ ಎದ್ದು ಬಂದು ಮಗಳನ್ನು ತಬ್ಬಿಕೊಳ್ಳುತ್ತಿದ್ದನು. ಚಾಂದನಿಗೆ ಅಷ್ಟು ಸ್ವಾಂತ್ವನ ಸಿಗುತ್ತಿತ್ತು. ಇಲ್ಲಿ ಅವನ ಹೆಂಡತಿಯ ಮಾತೇ ನಡೆಯುತ್ತಿದ್ದರಿಂದ ಮಗಳ ದುಃಖಕ್ಕೆ ನೊಂದುಕಕೊಳ್ಳುತ್ತಿದ್ದ. ಪರ್ಸಲ್ಲಿದ್ದ ಮೊದಲ ಹೆಂಡತಿ ಫೋಟೊ ನೋಡಿ  ಕಣ್ಣೀರು ಸುರಿಸುತ್ತಿದ್ದ.

ಅಂದು ಮಕರಂದ ಮತ್ತು ಅವನ ಎರಡನೇ ಹೆಂಡತಿ  ಸಂಬಂಧಿಕರ ಮದುವೆಗೆ ಹೋಗಬೇಕಿತ್ತು. ಅದಕ್ಕೆ ಎರಡು ಮಕ್ಕಳನ್ನು ಚಾಂದನಿ ಜವಾಬ್ದಾರಿಗೆ ಒಪ್ಪಿಸಿ ಹೋದರು. ಮಕರಂದನ ಚಿಕ್ಕ ಮಗಳು ಕಿರಿಯ ಮಗ ಗೋಕುಲನನ್ನು ಆಡಿಸಲು ಬೀದಿಯ ಗೌಡರ ಮನೆಯ ಜಗಲಿಯ ಮೇಲೆ ಕುಳಿತಾಗ ಅವನ ಕಾಲಿನ ಗೆಜ್ಜೆ ಕಳಚಿ ಬಿತ್ತು. ಅಲ್ಲಿಂದ ಮಗುವನ್ನು ಕರೆದುಕೊಂಡು ಮನೆಗೆ ಬಂದ ಸಂದ್ಯಾಳ (ಕಿರಿಯ ಮಗಳು) ಕೈಯಲ್ಲಿದ್ದ ಮಗುವಿನ ಕಾಲಿನ ಮೇಲೆ ಚಾಂದನಿ ಗಮನ ಹೋಗುತ್ತದೆ. ಗೆಜ್ಜೆ ಇಲ್ಲದ್ದನ್ನು ಕಂಡು ಅಮ್ಮ ಬಂದರೆ ಬೈದಾಳು ಎಂಬ ಕಾರಣಕ್ಕೆ ಇಬ್ಬರೂ ಒಬ್ಬರಿಗೆ ಒಬ್ಬರು ಪರಸ್ಪರ ಬೈದಾಡಿಕೊಳ್ಳುತ್ತಾರೆ. ಅಮ್ಮನಿಗೆ ಏನು ಉತ್ತರಿಸುವವುದು ಎಂದು ತಿಳಿಯದಾಗಿ ಚಾಂದನಿ ಚಡಪಡಿಸುತ್ತಾಳೆ.

ಅಮ್ಮ ಬಂದರೆ ಎನಾದೀತು ಎಂಬದನ್ನು ಊಹಿಸಿ ಊರ ಹೊರಗಿನ ದಾರಿ ಹಿಡಿದು ತನ್ನ ಅಮ್ಮನ ಸಮಾಧಿ ಸ್ಥಳಕ್ಕೆ ಬಂದು ದುಃಖ ತೋಡಿಕೊಳ್ಳುತ್ತಾಳೆ. ಅಲ್ಲಿರುವ ಮರಗಿಡಗಳಿಗೆ ತನ್ನ ಒಳಗುದಿಯನ್ನು ಹೇಳಿ ಸಮಾಧಿ ಮೇಲೆ ಕೈ ಇಟ್ಟು ಒರಗಿಕೊಳ್ಳುತ್ತಾಳೆ.

ಸಂಜೆ ಮನೆಗೆ ಮರಳಿದ ದಂಪತಿ ಕಾಲು ತೊಳದು ಒಳಗೆ ಬರುವಷ್ಟರಲ್ಲಿ ಗೌಡರ ಮನೆಯ ಗೌಡಶ್ಯಾನಿ ಬಂದು ನಿಮ್ಮ ಹುಡುಗನ ಕಾಲಗೆಜ್ಜೆ ಜಗಲಿ ಮೇಲೆ ಇತ್ತು ಎಂದು ಕೊಟ್ಟು ಹೋಗುತ್ತಾಳೆ.

ಇತ್ತ ಸಂಜೆಯಾದರೂ ಸುಳಿವಿರದ ಚಾಂದನಿ ಎಲ್ಲಿ? ಎಂದು ಸಂದ್ಯಾಳನ್ನು ಮಕರಂದ ಪ್ರಶ್ನಿಸುತ್ತಾನೆ. ಆಗ ನಡೆದ ಘಟನೆ ವಿವರಿಸುತ್ತಾರೆ. ಚಾಂದನಿ ಮನಸ್ಸನ್ನು ಬಲ್ಲವನಾದ ಮಕರಂದ ಮಗಳಿಗಾಗಿ ಎಲ್ಲೆಡೆ ವಿಚಾರಿಸುತ್ತಾ ಬೀದಿ ಬೀದಿ ಅಲೆಯುತ್ತಾನೆ. ಎಲ್ಲಿಯೂ ಸುಳಿವು ಸಿಗುವುದಿಲ್ಲ. ದಿನಗಳದಂತೆ ಹುಟುಕಾಟದ ಪ್ರಕಿಯೆಯೂ ನಿಂತು ಹೋಗುತ್ತೆ.

ಇದನ್ನೂ ಓದಿ: ವಿಮಲವ್ವನ ಜಂಬ ಮುರಿದ ರಸ್ತೆ ಮೇಲಿನ ವಿದ್ಯುತ್ ಕಂಬ

ಚಾಂದನಿ ರೇಲ್ವೆ ಹಳಿ ಹಿಡಿದು ಗಾಣಾಪುರ ಸ್ಟೇಷನ್ ತಲುಪಿದಳು. ಅಲ್ಲಿಂದ ಮುಂಬೈ ಹೋಗುವ ಬೋಗಿಯಲ್ಲಿ ಪ್ರಯಾಣಿಸುತ್ತಿರುತ್ತಾಳೆ.  ಹಸಿವಿನಿಂದ ಬಳಲಿ ನಲುಗುವದನ್ನು ನೋಡಿದ ಪ್ರಾಚ್ಯವಸ್ತು ಇಲಾಖೆಯ ಸುಮಾ ಮಗುವಿನ ವಿಳಾಸ ವಿಚಾರಿಸುತ್ತಾಳೆ. ಸರಿಯಾದ ಮಾಹಿತಿ ನೀಡದ ಚಾಂದನಿಯನ್ನು ಮುಂಬೈನ ಅನಾಥಾಶ್ರಕ್ಕೆ ಸೇರಿಸಿಸುತ್ತಾಳೆ.

ಇದನ್ನೂ ಓದಿ: ಬಿಟ್ಟು ಹೋಗಬೇಡ ಅಪ್ಪ…

ಅನಾಥಾಶ್ರಮದಲ್ಲಿ ಉತ್ತಮ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾಳೆ. ಮುಂದೆ ವೈದ್ಯಕೀಯ ಸೀಟು ಲಭಿಸುತ್ತದೆ. ವೈದ್ಯಳಾಗಿ ತಾನು ಬಾಲ್ಯದಲ್ಲಿ ಕಳೆದುಕೊಂಡ ಹಳ್ಳಿಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ತನ್ನನ್ನು ಪೋಸಿಸಿದ ಹಳ್ಳಿಯಲ್ಲಿ ಅವ್ವ, ಅಪ್ಪನ ನೆನಪಿನ ನೆರಳಿನಲ್ಲಿ ಸೇವೆ ಮಾಡುತ್ತಾ ಬದುಕನ್ನು ಸಾಗಿಸುತ್ತಾಳೆ.

ಇದನ್ನೂ ಓದಿ: ಮಾರಿ ರೋಗಕ್ಕೆ ಬ್ಯಾಟಿ ಬಲಿಯ ನೆತ್ತರ ಕತೆ

ಲೇಖನ: ವಿನೋದ ರಾ. ಪಾಟೀಲ
ಚಿಕ್ಕಬಾಗೇವಾಡಿ, ಬೈಲಹೊಂಗಲ, ಬೆಳಗಾವಿ.