ಕೊರೊನಾ ದೇಶಕ್ಕೆ ಕಾಲಿಟ್ಟಾಗಿನಿಂದ ಮನೆಯಲ್ಲಿ ಸುಮ್ಮನೆ ತೆಲೆ ಕೆರೆದುಕೊಳ್ಳುವುದೇ ಆಗಿದೆ. ಯಾರನ್ನೂ ಮನೆಗೆ ಕರೆಯುವಂತಿಲ್ಲ. ಯಾರ ಮನೆಗೂ ಹೋಗುವಂತಿಲ್ಲ. ಇಂಥ ಸ್ಥಿತಿಯಲ್ಲಿ ಅವರು ಬಂದು ಶಿಳ್ಳೆ ಹೊಡೆದು ಕರೆದಾಗ ಸುಮ್ಮನಿರಲು ಆಗಲೇ ಇಲ್ಲ.

ಅವರ ಶಿಳ್ಳೆ ಮೊದಲು ಕೇಳಿಸಿದ್ದು ನಮ್ಮ ಗುಂಡನಿಗೆ (ಮೊದಲನೆ ಮಗ). ಬೇಸಿಗೆ ರಜೆಯಲ್ಲಿರುವ ಗುಂಡನಿಗೆ ಊರೆಲ್ಲ ಸುತ್ತುವ ಆಸೆ. ಆದರೆ ಕರೋನಾ ವೈರಸ್ ಆತನ ರಜೆಯನ್ನು ನುಂಗಿ ನೀರು ಕುಡಿಯುತ್ತಿದೆ.

ಮನೆಯಲ್ಲಿಯೇ ಅಪ್ಪ, ಮಗ ಸುಮ್ಮನೆ ಆಟ ಆಡುತ್ತಿದ್ದಾಗ ಇದ್ದಕ್ಕಿದ್ದಂತೆ ಪಿಕಳಾರ ಹಕ್ಕಿಗಳ ದ್ವನಿ ಕೇಳಿಸಿತು. ಗುಂಡನ ಕಿವಿ ಅರಳಿತು. ಕುತೂಹಲದಿಂದ ಆಲಿಸಿದ. ಅಸಲಿಗೆ ಪಿಕಳಾರ ಶಿಳ್ಳೆ ಹೊಡೆಯುವುದಿಲ್ಲ. ಅವುಗಳ ದ್ವನಿಯನ್ನು ಗುಂಡ ಶಿಳ್ಳೆ ಹೊಡೆದು ಕರೆದಂತೆಯೇ ಭಾವಿಸಿದ್ದ.

ನಿಜ ಹೇಳಬೇಕೆಂದರೆ, ನಾನು ಮತ್ತು ಮಗ ಗುಂಡ ನಿತ್ಯ ಹಲವು ಹಕ್ಕಿಗಳನ್ನು ಗಮನಿಸುತ್ತಿರುತ್ತೇವೆ. ಸೂರಕ್ಕಿ, ಮಡಿವಾಳ, ಮುನಿಯ, ಗಿಳಿ, ಪಿಕಳಾರ ಹೀಗೆ ಹಲವು ಹಕ್ಕಿಗಳು ನಮ್ಮನೆಯ ಬಳಿ ಸುತ್ತಾಡಿ ಹೋಗುತ್ತವೆ. ಗುಂಡನಿಗೆ ಚಿಕ್ಕವಯಸ್ಸಿನಲ್ಲಿಯೇ ಅವರಮ್ಮ ಹಕ್ಕಿ ತೋರಿಸಿಯೇ ಊಟ ಮಾಡಿಸುತ್ತಿದ್ದಳು. ಹೀಗಾಗಿ ಅವನಿಗೆ ಅವುಗಳ ಸಾಂಗತ್ಯ ಖುಷಿ ತಂದಿದೆ.

ಪಿಕಳಾರದ ಶಬ್ದ ಕೇಳುತ್ತಲೇ ಗುಂಡ ಪಪ್ಪಾ ಎರಡು ದಿನದಿಂದ ಇವುಗಳು ನಮ್ಮ ಮನೆಯ ಹತ್ತಿರವೇ ಸುಳಿದಾಡುತ್ತಿವೆ ಎಂದು ಪುಳಕದಿಂದಲೇ ಹೇಳಿದ.

ಸರಿ ಹಾಗಾದರೆ ನೋಡೋಣ ಬಾ ಎಂದು ಇಬ್ಬರೂ ಮನೆಯಿಂದ ಹೊರ ಬಂದೆವು. ನಿರೀಕ್ಷೆ ಸುಳ್ಳಾಗಲಿಲ್ಲ. ಮನೆಯ ಹಿಂದಿನ ಶೆಡ್ ನ ತುದಿಯ ಆಯಕಟ್ಟಿನ ಜಾಗವನ್ನು ನಮ್ಮ ಪಿಕಳಾರ ಹಕ್ಕಿಗಳು ಆಯ್ಕೆ ಮಾಡಿಕೊಂಡಿದ್ದವು. ಅಲ್ಲಿ ಹುಲ್ಲಿನ ಎಸಳು, ತೆಂಗಿನ ಗರಿಯ ಚೂರುಗಳು ಬಿದ್ದಿದ್ದು ಕಂಡು ಅವರು ಗೂಡು ಕಟ್ಟುತ್ತಿರುವ ಸಂಗತಿ ತಿಳಿಸಿತು.

ರೋಗಿ ಬಯಸಿದ್ದು ಹಾಲು, ವೈದ್ಯರು ಹೇಳಿದ್ದು ಹಾಲು ಎನ್ನುವಂತೆ ಮಗ ಕೇಳಿಯೇ ಬಿಟ್ಟ. ಪಪ್ಪಾ ಅವುಗಳ ಹೇಗೆ ಗೂಡು ಕಟ್ಟುತ್ತವೆ. ಇಲ್ಲೇ ಯಾಕೆ ಕಟ್ಟುತ್ತವೆ ಎಂದ.

ಎಲ್ಲ ಪ್ರಾಣಿಗಳು ತಮಗೆ ಸುರಕ್ಷಿತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಗೂಡು ಕಟ್ಟುತ್ತವೆ. ಕಾಗೆ, ಹದ್ದುಎತ್ತರದ ಮರಗಳಲ್ಲಿ ಗೂಡು ಕಟ್ಟಿದರೆ ಹಾವುಗಳು ಬಿಲದಲ್ಲಿ, ಕೀಟಗಳು ಗಿಡದಲ್ಲಿ ಗೂಡು ಕಟ್ಟುತ್ತವೆ. ಆದರೆ, ಪಿಕಳಾರ ಸಾಮಾನ್ಯವಾಗಿ ಜನರ ವಾಸ ಸ್ಥಳದ ಸಮೀಪ, ಉದ್ಯಾನ, ಹಿತ್ತಲ ತೋಟದಲ್ಲಿ ಗೂಡು ಕಟ್ಟುವುದು ಕಾಣುತ್ತೇವೆ. ಈ ಪಿಕಳಾರಗಳು ಇನ್ನೆರಡು ವಾರ ಇಲ್ಲೇ ಇದ್ದು ಗೂಡು ಕಟ್ಟಿ ಮರಿ ಮಾಡಿಕೊಂಡು ಹೋಗುತ್ತವೆ ಎಂದೆ. ದೂರದಿಂದಲೇ ಗಮನಿಸಬೇಕು ಎಂದು ತಾಕೀತೂ ಮಾಡಿದೆ.

ನಿತ್ಯ ಅವುಗಳ ಶುಶ್ರಾವ್ಯ ಸಂಗೀತಮಯ ಕೂಗು ನಮ್ಮನ್ನು ಸೆಳೆಯುತ್ತಿತ್ತು. ನಮ್ಮಲ್ಲಿ ಗೂಡು ಕಟ್ಟಿದ್ದು ಕೆಮ್ಮೀಸೆ ಪಿಕಳಾರ. ಅವು ಸಾಮನ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚು ಕಂಡುಬರುತ್ತವೆ. ಗಾತ್ರದಲ್ಲಿ ಗುಬ್ಬಿಗಳಿಗಿಂತ ಸ್ವಲ್ಪ ದೊಡ್ಡ, ಮೈನಾ ಹಕ್ಕಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ. ಅವು ಹುಲ್ಲಿನ ಎಸಳು, ತೆಂಗಿನ ನಾರು ಇಂಥ ವಸ್ತುಗಳಿಂದ ಗೂಡುಕಟ್ಟುತ್ತವೆ. ಒಂದು ಗೂಡಿನಲ್ಲಿ 2 ರಿಂದ 3 ಮೊಟ್ಟೆಗಳನ್ನು ಇಡುತ್ತವೆ. ಆಹಾರವಾಗಿ ಕ್ರೀಮಿ ಕೀಟ, ಹಣ್ಣುಗಳನ್ನು ತಿನ್ನುತ್ತವೆ. ಡಿಸೆಂಬರ ದಿಂದ ಮೇ ಯವರೆಗೂ ಇವು ಗೂಡು ಕಟ್ಟುತ್ತವೆ ಎಂದೆ.

ಹಕ್ಕಿ ಲೋಕದ ಈ ಕೌತುಕಗಳ ಅಲ್ಪ ಸ್ವಲ್ಪ ಅರಿಯುವ ಪ್ರಯತ್ನವನ್ನು ಮಗ ಮತ್ತು ನಾನು ಮಾಡಿದೆವು. ಈ ಜೀವಲೋಕದ ವೈವಿಧ್ಯತೆಗೆ ಪರಿಸರ ದೇವತೆಗೆ ಶರಣೆಂದೆವು. ಕೆಲದಿನಗಳ ಹಿಂದೆ ಪಿಕಳಾರ ಹಕ್ಕಿಗಳ ಜೋಡಿ ಮತ್ತೆ ಬಂದು ತಮ್ಮ ಹಳೆಯ ಗೂಡನ್ನು ನೋಡಿ ಗುಂಡನಿಗೆ ಬೈ ಹೇಳಿ ಹೋದವು.

ಚಿತ್ರ, ಲೇಖನ: ವಿನೋದ ರಾ. ಪಾಟೀಲ್, ಚಿಕ್ಕಬಾಗೇವಾಡಿ.