ಬರಡು ಭೂಮಿಯಲ್ಲಿ ಏನು ಬೆಳೆಯಬಹುದು ಎನ್ನುವವರಿಗೆ ಚವಳಿಕಾಯಿ ಉತ್ತಮ ಉತ್ತರ. ಇದು ತರಕಾರಿ ಬೆಳೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಅದಕ್ಕೂ ಮೀರಿದ ಅನೇಕ ಉಪಯೋಗಗಳು ಚವಳಿಕಾಯಿ ಬೆಳೆಯಲ್ಲಿದೆ. ಸರಿಯಾಗಿ ಬೆಳೆದರೆ ವಿದೇಶಕ್ಕೂ ರಪ್ತು ಮಾಡಬಹುದು. ಚವಳಿಕಾಯಿಗೆ ಗೋರಿಕಾಯಿ ಎಂದೂ ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಕ್ಲಸ್ಟರ್ ಬೀನ್ಸ್‌ ಎಂದೂ ಕರೆಯಲಾಗುತ್ತದೆ.

ಚವಳಿಕಾಯಿ ಭಾರತ ಮೂಲದ ಬೆಳೆ.  ಇದರಲ್ಲಿ ಗಿಡ್ಡ ಮತ್ತು ದೈತ್ಯ ಎಂಬ ಎರಡು ಬಗೆಗಳಿವೆ. ಎರಡೂ ನೆಟ್ಟಗೆ ಬೆಳೆಯುವ ಏಕವಾರ್ಷಿಕ ಸಸ್ಯಗಳು. ಗಿಡ್ಡ ತಳಿ 60-90 ಸೆಂಮೀ ಎತ್ತರಕ್ಕೆ ಬೆಳೆದರೆ ದೈತ್ಯ ತಳಿ 2.5 -3 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ತರಕಾರಿ ಬೆಳೆಯಾದ ಚವಳಿಕಾಯಿಯ ಕಾಳನ್ನು ಅಂಟಿಗಾಗಿಯೂ ಉಪಯೋಗಿಸುತ್ತಾರೆ. ಅದಕ್ಕೆ ವಿದೇಶಿ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಇದಕ್ಕೆ ಹೆಚ್ಚು ನೀರು ಬೇಕಾಗಿಲ್ಲ. ಹಾಗಾಗಿ ಬರದಲ್ಲಿಯೂ ಬೆಳೆಯಬಹುದಾದ ಬಂಗಾರದ ಬೆಳೆ ಇದು.

ರಾಜಸ್ಥಾನದಂಥ ಮರುಭೂಮಿಯಲ್ಲೂ ಈ ಬೆಳೆ ಉತ್ತಮ ಇಳುವರಿ ಕೊಡುತ್ತಿದೆ. ಇದು ದ್ವಿದಳ ಧಾನ್ಯವಾಗಿದ್ದು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಒಣ ಬೇಸಾಯಕ್ಕೆ ಯೋಗ್ಯ ಬೆಳೆಯಾಗಿದೆ ಎನ್ನುತ್ತಾರೆ ಕೃಷಿ ತಜ್ಞರು. ಅಲ್ಲದೆ, ಇದರಲ್ಲಿ ಬರ ನಿರೋಧಕ ಶಕ್ತಿ ಸಹ ಇದೆ ಎನ್ನುತ್ತಾರೆ ಅವರು.

ಚವಳಿ ಅಂಟನ್ನು ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಮಾಂಸದ ಶೀತಲೀಕರಣ, ಸೌಂದರ್ಯ ವರ್ಧಕ, ಶಾಂಪು, ಟೂತ್‌ಪೇಸ್ಟ್‌, ಜವಳಿ ಉದ್ಯಮ, ಮುದ್ರಣ ವಲಯ, ಕಾಗದ ತಯಾರಿಕೆ, ಪೆಟ್ರೋಲ್‌ಗಾಗಿ ಕೊರೆಯುವ ಬಾವಿಗಳಲ್ಲಿ ಯಥೇಚ್ಛವಾಗಿ ಉಪಯೋಗಿಸುತ್ತಾರೆ. ಒಟ್ಟಾರೆ ಚವಳಿಯಿಂದ 50ಕ್ಕೂ ಹೆಚ್ಚು ಉಪಯೋಗಗಳಿವೆ.

ಚವಳಿಕಾಯಿಯ ಇಳುವರಿ ಕೆಲವೊಮ್ಮೆ ಬೆರಗು ಮೂಡಿಸುತ್ತದೆ. ಇದು ಮೂರರಿಂದ ಮೂರುವರೆ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಚೆನ್ನಾಗಿ ಬೆಳೆ ಬಂದರೆ ಒಂದು ಎಕರೆಗೆ ಸರಾಸರಿ 4 ರಿಂದ 5 ಕ್ವಿಂಟಾಲ್ ಇಳುವರಿ ಪಡೆಯಬಹದು. ಅಷ್ಟು ವ್ಯವಸಾಯಕ್ಕೆ ನಾಲ್ಕರಿಂದ ಐದು ಸಾವಿರ ಕರ್ಚು ತಗುಲಲಿದೆ. ಒಟ್ಟಾರೆ ಒಂದು ಎಕರೆಯಲ್ಲಿ 20ರಿಂದ 22 ಸಾವಿರ ರೂ. ನಿವ್ವಳ ಆದಾಯ ನಿರೀಕ್ಷಿಸಬಹುದು.

ಬೆಳೆಯುವುದು ಹೇಗೆ?
ಚವಳೀ ಗಿಡವನ್ನು ಸಾಮಾನ್ಯವಾಗಿ ಎಲ್ಲ ಬಗೆಯ ಮಣ್ಣುಗಳಲ್ಲೂ ಬೆಳೆಸಬಹುದಾದರೂ ಚೆನ್ನಾಗಿ ನೀರು ಬಸಿದು ಹೋಗುವಂಥ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಜೂನ್-ಜುಲೈ ಅಥವಾ ಜನವರಿ-ಫೆಬ್ರುವರಿ ತಿಂಗಳುಗಳು ಬೇಸಾಯಕ್ಕೆ ಸೂಕ್ತ. ಎಕರೆಗೆ 15 ರಿಂದ 20 ಗಾಡಿ ಕೊಟ್ಟಿಗೆ ಗೊಬ್ಬರ, 125 ಕೆಜಿ ಅಮೋನಿಯಂ ಸಲ್ಫೇಟ್, 250 ಕೆಜಿ ಸೂಪರ್ಫಾಸ್ಫೇಟ್, 60 ಕೆಜಿ ಮ್ಯೂರಿಯೇಟ್ ಆಫ್ ಪೊಟ್ಯಾಷ್ ಗಳನ್ನು ಹಾಕಿ, 5ರಿಂದ 7 ದಿವಸಗಳಿಗೊಮ್ಮೆ ನೀರು ಹಾಯಿಸುತ್ತಿರಬೇಕು. ಬೀಜ ಬಿತ್ತಿದ ಎರಡೂವರೆ ಅಥವಾ ಮೂರು ತಿಂಗಳ ನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ.
ಎಲ್ಲ ಗಿಡಗಳಂತೆ ಇದಕ್ಕೂ ರೋಗಗಳು ಬರುತ್ತವೆ. ಆದರೆ, ರೋಗ ನಿರೋಧಕ ಜಾತಿಯ ಬೀಜಗಳನ್ನೇ ಬಿತ್ತುವುದರಿಂದ ಉತ್ತಮ ಕೃಷಿ ಮಾಡಬಹುದು.