2020-21ನೇ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯಿಂದ  ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಸಮೀಪದ ತೋಟಗಾರಿಕೆ ಇಲಾಖೆ ತಾಲೂಕಉ ಕಚೇರಿ ಅಥವಾ  ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್:
ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ (ಮಾವು, ದಾಳಿಂಬೆ) ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ, ವೈಯ್ಯಕ್ತಿಕ ಮತ್ತು ಸಮುದಾಯ ನೀರು ಸಂಗ್ರಹಣಾ ಘಟಕ, ಪ್ಯಾಕ್ ಹೌಸ, ಈರುಳ್ಳಿ ಶೇಖರಣಾ ಘಟಕ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಯಂತ್ರೋಪಕರಣ (ಮಿನಿ ಟ್ರ್ಯಾಕ್ಟರ್ 2೦ ಎಚ್.ಪಿ ಒಳಗಡೆ) ಖರೀದಿ, ಸಂರಕ್ಷಿತ ಬೇಸಾಯ (ಪಾಲಿ ಮನೆ ಮತ್ತು ನೆರಳು ಪರದೆ) ಹಾಗೂ ಶೈತ್ಯಾಗಾರ ಘಟಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತರಿ ಯೋಜನೆ:
ಈ ಯೋಜನೆಯಡಿ ಮಾವು, ಸಪೋಟ, ದಾಳಿಂಬೆ, ಬಾಳೆ, ನುಗ್ಗೆ ಪಪ್ಪಾಯ, ಪೇರಲ, ಗೇರು, ಬೆಳೆಗಳ ಪ್ರದೇಶ ವಿಸ್ತರಣಾ ಕಾರ್ಯಕ್ರಮಗಳನ್ನು ಹಾಗೂ ಮಾವು ಪುನಃಶ್ಚೇತನ, ಕೊಳವೆ ಬಾವಿ ಮರು ಪೂರಣ, ಕಾಮಗಾರಿಗಳು ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳನ್ನು ರೈತರ ಜಮೀನಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಇದಕ್ಕೂ ಅರ್ಜಿ ಸಲ್ಲಿಸಬಹುದು.

ಈ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸರ್ಕಾರದಿಂದ ನಿಯಮ, ಮಾರ್ಗಸೂಚಿ ರೂಪಿಸಲಾಗಿದೆ. ಅದರಂತೆ ಫಲಾನುಭವಿಗಳಿಂದ ಆಯಾ ಯೋಜನೆಗಳಡಿ ಕಾರ್ಯಕ್ರಮವಾರು ಮತ್ತು ಹೋಬಳಿವಾರು ಗುರಿಯಂತೆ ರೈತರಿಂದ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ತೋಟಗಾರಿಕೆ ಕಚೇರಿಗೆ ಕಚೇರಿ ಸಮಯದಲ್ಲಿ  ಭೇಟಿ ನೀಡಬಹುದು ಎಂದು ರಾಯಚೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಯೋಜನೆ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಲಾಗುತ್ತದೆ.