ಪ್ರತಿದಿನ ಶಾಲೆಯಲ್ಲಿ ತನ್ನ ಗೆಳತಿಯರೊಂದಿಗೆ ಖುಷಿ ಖುಷಿ ಯಾಗಿ ಇರುತ್ತಿದ್ದ ಪುಟಾಣಿ ಮೈತ್ರಿಯು ಯಾಕೋ ಅಂದು ಮಧ್ಯಾಹ್ನ ವೇಳೆಯಲ್ಲಿ ತುಂಬಾ ಮಂಕಾಗಿದ್ಡಳು. ಗೆಳತಿಯರು ಬಂದು ಆಟಕ್ಕೆ ಕರೆದರೂ ಹೋಗದ ಮೈತ್ರಿಯು ಆ ದಿನ ಮನೆಗೂ ಒಂಟಿಯಾಗಿಯೇ ಹೋದಳು.

ಪ್ರತೀ ದಿನ ಮನೆಯ ಒಳಗೆ ಅಮ್ಮಾ, ಅಮ್ಮಾ ಎಂದು ಪ್ರೀತಿಯಿಂದ ಕೂಗುತ್ತಾ ಓಡೋಡಿ ಬರುತ್ತಿದ್ದ ಮಗಳು ಅಂದು ಮೌನವಾಗಿರುವುದನ್ನು ತಾಯಿ ಗಮನಿಸಿದಳು. ಜ್ವರ ಬಂದಿರಬಹುದೆಂದು ಹಣೆ ಮೇಲೆ, ಮೈ ಮೇಲೆ ಕೈ ಇಟ್ಟು ಪರೀಕ್ಷಿಸಿದಳು. ಜ್ವರ ಇಲ್ಲ. ಮಗಳಿಗೆ ತಿನ್ನಲು ಹಣ್ಣು ಕೊಟ್ಟು ಮುದ್ದು ಮಾಡಿದ ಬಳಿಕ ಸ್ವಲ್ಪ ನಗುತ್ತ ಅಮ್ಮನೊಂದಿಗೆ ,ತಂಗಿಯೊಂದಿಗೆ ಆಟ ಆಡಿದಳು ಮೈತ್ರಿ.

ಸಂಜೆ ಸುಮಾರು ಆರು ಗಂಟೆ ಹೊತ್ತಿಗೆ ಮನೆಯ ಕಿಟಕಿಯಿಂದ ಇಣುಕಿ ಹೊರಗಡೆ ನೋಡಿದಾಗ, ದೂರದಲ್ಲಿ ತನ್ನ ತಂದೆ ಬರುವುದನ್ನು ನೋಡಿದ ಮೈತ್ರಿಯ ಮುಖ ಅರಳುತ್ತದೆ. ಆ ತಂದೆ ತನ್ನ ಎರಡೂ ಮಕ್ಕಳನ್ನು ಎರಡು ಕಣ್ಣುಗಳು ಎಂದು ತಿಳಿದವನು. ಇಬ್ಬರನ್ನೂ ತುಂಬಾ ಪ್ರೀತಿಸುತ್ತಿದ್ದನು. ಮಕ್ಕಳ ಇಷ್ಟದಂತೆ ಕೇಳಿದ್ದನ್ನು ತಂದು ಕೊಡುತ್ತಿದ್ದನು.

ತಂದೆಯ ಕೈಯಲ್ಲಿದ್ದ ಸಿಗರೇಟ್ ನೋಡಿದ ತಕ್ಷಣ ಮೈತ್ರಿಯ ಅರಳಿದ ಮುಖ ಪುನಃ ಬಾಡಿತು. ತಂದೆ ಬಿಡುತ್ತಿದ್ದ ಸಿಗರೇಟ್ ಹೊಗೆ ಸುರುಳಿ, ಸುರುಳಿಯಾಗಿ ತಿರುಗುತ್ತಿರುವುದನ್ನು ನೋಡಿ ಅದರಲ್ಲಿ ಭಯಾನಕವಾದ ವಿಚಿತ್ರ ಆಕಾರವನ್ನು ಭಾವಿಸಿ ಹೆದರಿ ರೂಮ್ ನ ಮೂಲೆಯಲ್ಲಿ ಕುಳಿತು ಅಳಲು ಶುರುಮಾಡಿದಳು.

ಪ್ರತೀ ದಿನ ತಂದೆ ಮನೆಗೆ ಬಂದಾಗ “ಅಮ್ಮಾ ಅಪ್ಪ ಬಂದ್ರು’ ಎನ್ನುತ್ತ “ನಂಗೆ ಏನ್ ತಂದಿದ್ಯಾ” ಅಂತ ಅಪ್ಪನ ಹತ್ತಿರ ಓಡಿ ಬಂದು ಕೇಳುತ್ತಿದ್ದ ಮುದ್ದಿನ ಮಕ್ಕಳನ್ನು ಆವತ್ತು ನೋಡದಿದ್ಧಾಗ “ಏಯ್ ಶೋಭಾ ಮಕ್ಕಳು ಎಲ್ಲಿ?’ ಎಂದು ಕೇಳಿದರು.

ಅಡುಗೆ ಮಾಡುತ್ತಿದ್ದ ಶೋಭಾ, ಚಿಕ್ಕವಳು ಮಲಗಿದ್ದಾಳೆ, ಮೈತ್ರಿ ಇಲ್ಲಿಯೇ ಆಟ ಆಡುತ್ತಿದ್ದವಳು ಈಗ ಎಲ್ಲಿ ಹೋದಳು? ಎನ್ನುತ್ತಾ ಮೈತ್ರಿ…ಮೈತ್ರಿ…ಎಂದು ಕರೆಯುತ್ತ ಒಳಗಡೆ ಹುಡುಕಿದರು. ಮನೆಯ ಒಳಗೆ ಒಂದು ಕೋಣೆಯ ಬಾಗಿಲ ಮರೆಯಲ್ಲಿ ಅಳುತ್ತಾ ಕುಳಿತಿರುವ ಮಗಳನ್ನು ನೋಡಿ ಇಬ್ಬರೂ ಗಾಬರಿಯಾದರು. ಎತ್ತಿಕೊಂಡ ಕೂಡಲೇ ಮೈತ್ರಿ ಇನ್ನೂ ಜೋರಾಗಿ ಕಣ್ಣೀರಿಟ್ಟಳು.

ಸ್ವಲ್ಪ ಹೊತ್ತು ಅಪ್ಪ, ಅಮ್ಮ ಸೇರಿ ಮೈತ್ರಿಯನ್ನು ಸಮಾಧಾನ ಮಾಡಿ ಮಗಳ ಮುಖದಲ್ಲಿ ನಗು ತರಿಸುವ ಸಣ್ಣ ತಮಾಷೆ ಮಾಡಿದರು. ತಮಗೆ ಎಷ್ಟೇ ಸಮಸ್ಯೆ, ಕಷ್ಟವಿದ್ದರೂ ಮಕ್ಕಳ ಮುಖದಲ್ಲಿ ಮುದ್ದಾದ ನಗುವನ್ನು ನೋಡಿ ಎಲ್ಲವನ್ನು ತಂದೆ-ತಾಯಿಗಳು ಮರೆಯುತ್ತಾರೆ ಅಲ್ಲವೇ?

ಎಲ್ಲರೂ ಒಟ್ಟಿಗೆ ಊಟ ಮಾಡಿದ ಬಳಿಕ ಅಪ್ಪ ಮತ್ತೆ ಸಿಗರೇಟ್ ಸೇದುವುದನ್ನು ನೋಡಿದ ಮೈತ್ರಿ ಮತ್ತೆ ಹೆದರಿಕೊಂಡು ಕೋಣೆಯೊಳಗೆ ಓಡಿದಳು. ಪುನಃ ಚಿಂತೆ ಮಾಡುತ್ತಾ ಕೋಣೆಯ ಒಳಗಡೆ ಹಾಸಿಗೆಯಲ್ಲಿ ಮಲಗಿ ನಿದ್ರೆಗೆ ಜಾರಿದಳು.

ರಾತ್ರಿ ಇದ್ದಕ್ಕಿದ್ದಂತೆ “ಅಪ್ಪಾ ನಮ್ಮನ್ನು ಬಿಟ್ಟು ಹೋಗಬೇಡಪ್ಪಾ!” ಎಂದು ಕನವರಿಸುತ್ತಾ ಮೈತ್ರಿ ಜೋರಾಗಿ ಕೂಗಲು ಶುರು ಮಾಡಿದಳು. ಗಾಬರಿಯಿಂದ! ಅಪ್ಪ ಮಗಳನ್ನು ಎತ್ತಿಕೊಂಡು, “ಇಲ್ಲಾ ಮಗು ನಿಮ್ಮನ್ನು ಬಿಟ್ಟು ನಾನು ಎಲ್ಲಿಗೂ ಹೋಗೋದಿಲ್ಲ” ಎಂದಾಗ ಮೈತ್ರಿ ತನ್ನ ತಂದೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಮತ್ತೊಮ್ಮೆ ಅತ್ತಳು.

ಮಗಳನ್ನು ಸಮಾಧಾನ ಮಾಡಿದ ಅಪ್ಪ ಪ್ರೀತಿಯಿಂದ ಮಗಳ ನೋವು ಕೇಳಿದರು. ಆಗ ಮೈತ್ರಿ “ಅಪ್ಪ ನಾನು ಹೇಳಿದ ಹಾಗೇ ಕೇಳ್ತೀನಿ ಅಂತ ಮೊದಲು ಪ್ರಾಮಿಸ್ ಮಾಡು” ಎಂದಾಗ “ಖಂಡಿತಾ ಮಗಳೇ ಅದು ಎಷ್ಟೇ ಕಷ್ಟ ಆದರೂ ನಡೆಸಿಕೊಡುತ್ತೇನೆ ” ಎಂದು ತಂದೆ ಪ್ರಾಮಿಸ್ ಮಾಡಿದರು.

“ಇವತ್ತು ನಮ್ಮ ಟೀಚರ್ ದೂಮಪಾನದ ಕೆಟ್ಟ ಪರಿಣಾಮಗಳ ಬಗ್ಗೆ ಪಾಠ ಮಾಡಿದ್ದರು. ಸಿಗರೇಟ್ ಸೇದುವುದರಿಂದ ಆರೋಗ್ಯ ಹಾಳಾಗುತ್ತದೆ. ಅದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಅವರು ಬಿಡುವ ಹೊಗೆಯಲ್ಲೂ ವಿಷವಿರುತ್ತದೆ. ಅದನ್ನು ಸೇವಿಸಿದ ಇತರರಿಗೂ ಅಪಾಯ ಇದೆ ಎಂದು ಹೇಳಿದ್ದಾರೆ’.

ದೂಮಪಾನ, ಮಧ್ಯಪಾನ ಹೀಗೆ ಸಿಗರೇಟ್ ಸೇದಿದ ಕೆಟ್ಟ ಪರಿಣಾಮಗಳ ಕಾಯಿಲೆಗಳ ಬಗ್ಗೆ ಹಲವಾರು ಕಥೆ ಹೇಳಿದ್ದರು. ಅಲ್ಲದೆ, ಯಾವತ್ತು ಇಂಥ ದುಶ್ಚಟಗಳಿಗೆ ಬಲಿಯಾಗಬೇಡಿ. ಜೀವನ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಸಂಬಂಧಿಕರಿಗೆ, ನೆರೆಹೊರೆಯವರಿಗೂ ಈ ಕುರಿತು ತಿಳಿಸಿ ಹೇಳಿ ಎಂದಿದ್ದಾರೆ’.

“ಅಪ್ಪಾ ನೀನು ಪ್ರತೀದಿನ  ಬಹಳ ಸಿಗರೇಟ್ ಸೇದ್ತಿಯಾ. ಇದರಿಂದ ನಿನಗೆ ಕಾಯಿಲೆ ಬಂದು ನನ್ನನ್ನು, ತಂಗಿಯನ್ನು, ಅಮ್ಮನನ್ನು ಬಿಟ್ಟು ಹೋದರೆ ನಮಗೆ ಯಾರಪ್ಪ ಗತಿ?, ನೀನು ನಮ್ಮನ್ನು ಬಿಟ್ಟು ಹೋಗಬೇಡಪ್ಪ. ನೀನು ಸಿಗರೇಟ್ ಸೇದುವುದು ಬಿಟ್ಟು ಬಿಡು”ಎಂದು ಅಳುತ್ತಾ ಹೇಳಿದಳು ಮೈತ್ರಿ.

ಮಗಳ ಮಾತು ಅಪ್ಪನ ಮನಸ್ಸಿಗೆ ನಾಟಿತು. ಇಷ್ಟು ಚಿಕ್ಕ ವಯಸ್ಸಲ್ಲಿ ಅವಳ ಆಲೋಚನೆ ಕೇಳಿ. “ಇಲ್ಲಾ ಮಗು ನಿಮ್ಮನ್ನೆಲ್ಲಾ ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ’ ಎಂದು ಹೇಳುತ್ತಾನೆ. ಆದರೆ, ಅವನಿಗೆ ಸಿಗರೇಟ್ ಬಿಡುವುದು ಮಗಳಿಗೆ ಮಾತು ಕೊಟ್ಟಷ್ಟು ಸುಲಭ ಇರಲಿಲ್ಲ.

ಸಿಗರೇಟ್ ಬಿಟ್ಟು ನಿತ್ಯ ಕರ್ಮ, ಕೆಲಸ ಮಾಡುವುದು ತುಂಬಾ ಕಷ್ಟವಾಗತೊಡಗಿತು. ದಿನೇ ದಿನೆ ಮಾನಸಿಕವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗತೊಡಗಿತು. ಹಲವಾರು ವರ್ಷಗಳಿಂದ ಸಿಗರೇಟ್ ಸೇದುತ್ತಿದ್ದ ಅವನಿಗೆ ಒಮ್ಮೆಲೆ ಅದನ್ನು ಬಿಡುವುದು ತುಂಬಾ ಕಷ್ಟವಾಯಿತು.
ಸಿಗರೇಟ್ ಕೈಗೆತ್ತಿಕೊಂಡಾಗಲೆಲ್ಲ ಮಗಳು “ನಮ್ಮನ್ನು ಬಿಟ್ಟು ಹೋಗಬೇಡಪ್ಪ” ಎಂದಿದ್ದ ಕೂಗು ಕೇಳಿ ಬರುತಿತ್ತು. ಕ್ರಮೇಣ ತನ್ನ ಮಕ್ಕಳಿಗೋಸ್ಕರ ಆ ಚಟವನ್ನು ಶಾಶ್ವತವಾಗಿ ಬಿಟ್ಟು ಬಿಡುತ್ತಾನೆ. ದೂಮಪಾನ ಬಿಟ್ಟು ತನ್ನ ಮಕ್ಕಳೊಂದಿಗೆ  ಸುಂದರವಾದ ಜೀವನ ಸಾಗಿಸುತ್ತಾರೆ.

ತನ್ನ ಮಗಳಿಗೆ ಪಾಠ ಮಾಡಿ ಪರೋಕ್ಷವಾಗಿ ತನಗೂ ಪಾಠ ಕಲಿಸಿದ ಆ ಶಿಕ್ಷಕರನ್ನೂ ಭೇಟಿಯಾಗಿ ವಂದನೆ ತಿಳಿಸುತ್ತಾನೆ. ಮಕ್ಕಳು ಮನಸ್ಸು ಮಾಡಿದರೆ ಆರೋಗ್ಯವಾದ ಸಮಾಜ ನಿರ್ಮಾಣ ಮಾಡಬಹುದಲ್ಲವೆ?

ಬರಹ: ಸುರೇಂದ್ರ ಎಸ್. ಗುಡ್ಡೆಹೋಟೆಲ್,
ಪ್ರೌಢಶಾಲೆ ಕಲಾ ಶಿಕ್ಷಕರು, ಬೆಂಗಳೂರು ದಕ್ಷಿಣ ಜಿಲ್ಲೆ.