ಸಂಗಪ್ಪಗೌಡರು ಹಾಗೂ ಗೌಡಶ್ಯಾನಿ ಪಟ್ಟಣಕ್ಕೆ ಹೊರಟಿದ್ದರು.  ಗೌಡರು ಹೊಸ ಬಿಳಿಜುಬ್ಬಾ ತೆಲೆಗೆ ಪೇಟ ಸುತ್ತಿಕೊಂಡು ಇಸ್ತ್ರಿ ಬಟ್ಟೆ ಧರಿಸಿದ್ದರು. ಗೌಡರು ಮುಂದೆ ಸಾಗುತ್ತಿದ್ದರು. ಅವರ ಹಿಂದೆ ಗೌಡಶ್ಯಾನಿ ಯಾರಾದರೂ ಮನೆಮುಂದೆ ಮಲ್ಲಿಗೆ ಹೂ ಅದಾವೇನು ಎಂದು ಗಮನಿಸುತ್ತಿದ್ದರು. ಹೂವಿನ ಬಳ್ಳಿ ಅನ್ವೇಷಣೆಯಲ್ಲಿದ್ದ ಅವರು ಗೌಡರಿಂದ ಅನತಿ ಅಂತರದಲ್ಲಿ ಸಾಗುತ್ತಿದ್ದರು.
ಮನೆಯೊಂದರ ಮುಂದೆ ಮಲ್ಲಿಗೆ ಸಿಕ್ಕ ಕಾರಣ ಹೂ ಕಿತ್ತೂಕೊಳ್ಳಲು ನಿಂತರು. ಅಷ್ಟರೊಳಗೆ ಪಟ್ಟಣದ ಕಡೆ ಹೋಗುವ ಬಸ್ಸು ಬಂತು. ಗೌಡಶ್ಯಾನಿ ಹಿಂದಿನ ಬಾಗಿಲಿನಿಂದ ಹತ್ತುತ್ತಾಳೆ ಎಂದು ತಿಳಿದು ಗೌಡರು ಮುಂದಿನ ಬಾಗಲಿನಿಂದ ಬಸ್ಸು ಏರಿದರು. ಅಲ್ಲೇ ಮುಂದೆ ಆಸೀನರಾದರು.
ಚಲಿಸುತ್ತಿರುವ ಬಸ್ಸಿನಲ್ಲಿ ಟಿಕೆಟ್ ಕೇಳುತ್ತಾ ಬಂದ ಕಂಡಕ್ಟರ್ ಗೌಡರ ಮುಂದೆ ನಿಂತು ಟಿಕೆಟ್ ತಗೊಳ್ಳಿ ಅಂದರು. ಗೌಡರು ಹಿಂದೆ ನಮ್ಮ ಗೌಡಶ್ಯಾನಿ ಅದಾಳ. ನೋಡ ಅಲ್ಲಿ ಹೋಗಾ… ಅಂದರು ಭಾರೀ ಗತ್ತಿನಿಂದ. ಕಳೆದ ವರ್ಷದಿಂದ ಗೌಡಶ್ಯಾನಿ ಹತ್ತಿರವೇ ಮನೆತನ, ಖಜಾನಿ ಚಾವಿ. ಹೀಗಾಗಿ ಗೌಡರ ಜೇಬಿನಲ್ಲಿ ಕಾಸು ಇರಲಿಲ್ಲ. ಕಂಡಕ್ಟರ್ ಎರಡು- ಮೂರು ಸಾರಿ ಹಿಂದೆ ಹೋಗಿ ಗೌಡರ ಹೆಂಗಸರು ಯಾರು ಎಂದು ಮೂರು ಸಲ ಕೇಳಿದಾಗಲೂ ಅಲ್ಲಿರುವ ಎಲ್ಲ ಹೆಂಗಸರು ಮುಖ ಮುಖ ನೋಡಿಕೊಳ್ಳುತ್ತಿದ್ದರು.
ಅವರ  ನಿರುತ್ತರ ಕಂಡು ಕೋಪದಿಂದ ಬಂದು “ಹಿಂದ ಅಷ್ಟ ಮಂದಿ ಹೆಂಗಸರು ಕುಳಿತಾರ. ಅದರಾಗ ನಿಮೌರ ಯಾರು ಹೇಳ್ರಿ ? ಅಂದಾ’, ಆಗ ಗೌಡರು ಹಿಂತಿರುಗಿ “ಎಲ್ಲಿ ಅದಿ ಇಕಿಯಾ…?’ ಅಂದರು. ಅಲ್ಲಿ ಗೌಡಶಾನಿ ಇಲ್ಲದ್ದನ್ನು ಕಂಡು “ಅಲ ಇಕಿನಾ ಬಸ್ಸ ಹತ್ತಲಿಲ್ಲೇನಪಾ…!’ ಎಂದು ಉದ್ಗರಿಸಿಕೊಂಡ ಗೌಡರು, ಗುಟುಕು ಎಂಜಲು ನುಂಗಿದರು. ಗೌಡಶಾನಿಯನ್ನು ಬಿಟ್ಟು ಬಸ್ ಹತ್ತಿದ್ದು ಗೌಡರಿಗೆ ಆಗ ಅರಿವಾಗಿತ್ತು.
ಅಲ್ಲೇ ಕುಳಿತ ಸಹ ಪ್ರಯಾಣಿಕ ನಾನು ಟಿಕೆಟ್ ತಗಸಲೇನ್ರೀ ಗೌಡ್ರ ಅಂದರು. ಬ್ಯಾಡ ಅಕಿಗ ಒಂದು ಪೋನ ಮಾಡಿ ಮುಂದಿನ ಊರಿನ ಬಸ್ ನಿಲ್ದಾಣ ಹಂತೇಕ ನಿಲ್ಲತೇನ ಅಂತಾ ಹೇಳು ಅಂದು ಮನೆಯಾಕೆಯನ್ನು ಶಪಿಸುತ್ತಾ ಬಸ್ಸು ಇಳಿದರು. ಅವರ ಮುಖ ನೋಡಿ ಪ್ರಯಾಣಿಕರು ಮುಸಿ ಮುಸಿ ನಗುತ್ತಾ ತಮ್ಮ ಜೇಬು ನೋಡಿಕೊಳ್ಳತೊಡಗಿದರು.

ಬಡೇಸಾಬರ ಗಡಿಬಿಡಿ
ಬಡೇಸಾಬರು ತಮ್ಮ ಹಳೆಯ ಎಂಎಟಿ (ಎಂ-80) ವಾಹನದ ಮೇಲೆ ತಮ್ಮ ಪತ್ನಿಯನ್ನು ಅದೇ ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಎಂಎಟಿಗೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕಿಗೆ ಬಂದಿದ್ದರು. ಏನೋ ಒತ್ತಡದ ಮುಖಭಾವದಲ್ಲಿದ್ದರು. ಪತ್ನಿಯನ್ನು ಪಕ್ಕದಲ್ಲಿ ನಿಲ್ಲಿಸಿ ಪೆಟ್ರೋಲ್ ಭರಿಸಿಕೊಂಡವರು ಮುಂದೆ ಸಾಗಿ ಗಾಡಿ ಚಾಲೂ ಮಾಡಿದರು. ಇನ್ನೇನು ಪತ್ನಿ ವಾಹನ ಹತ್ತಿರ ಬಂದು ಹತ್ತಬೇಕು ಎನ್ನುವಷ್ಟರಲ್ಲಿ ಹಾಗೆಯೇ ಎಂಎಟಿ ಓಡಿಸಿಕೊಂಡು ಹೊರಟೇ ಬಿಟ್ಟರು. ನಿಲ್ಲಿ ನಿಲ್ಲಿ ಎಂದು ಅರಚಿದರೂ, ಬಂಕ್‍ಲ್ಲಿದ್ದ ಜನ ಕೂಗಿದರೂ ಕೇಳದೆ ಮುಂದೆ ಸಾಗಿದ್ದರು. ಪತ್ನಿ ಮತ್ತು ಅಲ್ಲಿದ್ದ ಜನ ಮುಸಿ ಮುಸಿ ನಗುತ್ತಾ ಬಡೇಸಾಬರ ಪತ್ನಿಯನ್ನು ಒಂದು ಕಡೆ ಕೂರಿಸಿದರು. ಸುಮಾರು 5 ಕೀ.ಮೀ ದೂರ ಹೋದ ಬಳಿಕ ಬಡೇಸಾಬರಿಗೆ ಪತ್ನಿಯ ನೆನಪಾಗಿದೆ. ಮತ್ತೆ ತಿರುಗಿ ಬಂದಾಗ ಎಲ್ಲರು ಬಡೆಸಾಬರ ಮರೆವನ್ನು ಶಪಿಸಿ ಅವರ ಪತ್ನಿಯನ್ನು ಕಳುಹಿಸಿದರು.

ಲೇಖನ: ವಿನೋದ ಪಾಟೀಲ್, ಚಿಕ್ಕಬಾಗೇವಾಡಿ.