ಮಧ್ಯಾಹ್ನದ ಬಿಸಿಲು ಜೋರಾಗಿತ್ತು. ಗುಂಪು ಗಟ್ಟಿ ನಿಂತಿದ್ದ ಜನರ ಪಕ್ಕದಲ್ಲಿ ಇದ್ದ ಆ ನಾಯಿ ಹಸಿವಿನಿಂದ ಬಾಯ್ತೆರೆದುಕೊಂಡಿತ್ತು. ಮೂಕ ಪ್ರಾಣಿಯನ್ನು ಗಮನಿಸದ ಜನರ ಮಧ್ಯೆ ಜಾಗ ಮಾಡಿಕೊಂಡು ಬಂದ ದಡೂತಿ ವ್ಯಕ್ತಿ ನನಗೂ ಒಂದು ಕೆಜಿ ಅಕ್ಕಿ ಬೇಕು ಎಂದು ಚೀಲ ಚಾಚಿದ.

ತಕ್ಷಣ ಎಲ್ಲರೂ ನೂಕಾಡುತ್ತ ತಮ್ಮ ಚೀಲಗಳನ್ನು ಮುಂದೆ ಹಿಡಿದರು. ನಾಯಿ ನಾಲಗೆ ಹೊರಹಾಕಿ ಯಾರನ್ನೋ ಕಾಯುತ್ತಿತ್ತು. ಆದರೆ, ಅಸಜವಾಗಿದ್ದ ಆ ದಿನ ನಾಯಿಗೆ ಏನೂ ಸಿಗಲೇ ಇಲ್ಲ. ಅಂಗಡಿ ಬಾಗಲಿಲ್ಲಿ ಇದ್ದವರು ತಮ್ಮ ಮಕ್ಕಳಿಗೆ, ಅಕ್ಕ, ತಂಗಿಗೆ ಎಂದು ಏನೇನೋ ತಿಂಡಿಗಳನ್ನು ಖರೀದಿಸುತ್ತಿದ್ದರು. ಕೆಲವರು ಅಲ್ಲಿಯೇ ಬಾಯಿ ಚಪ್ಪರಿಸುತ್ತಿದ್ದರು.

ಮಾತನಾಡಲಾಗದ ನಾಯಿ ಅಂಗಡಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಬಂದಿತು. ಅಲ್ಲಿಯೂ ಅಂಗಡಿಯ ಯಜಮಾನ ಕಾಣಲೇ ಇಲ್ಲ. ನಿರಾಶೆಯಿಂದ ಹೊರಟಿತು. ಆ ಅಂಗಡಿಯ ಮಾಲೀಕ ಪ್ರತಿ ದಿನವೂ ಆ ನಾಯಿಗೆ ಬಿಸ್ಕಿಟ್ ಕೊಡುತ್ತಿದ್ದ. ಅದು ನಿತ್ಯದ ರೂಢಿಯಾಗಿತ್ತು. ಬೀದಿ ನಾಯಿ ಆಗಿದ್ದರೂ ಅದನ್ನು ರೂಢಿಸಿಕೊಂಡಿಯೇ ಬದುಕಿತ್ತು.

ಕೊರೊನಾ ಭೀತಿಯಲ್ಲಿ ಜನರು ಅಂಗಡಿಗೆ ಮುಗಿ ಬಿದ್ದಿದ್ದರಿಂದ ಮಾಲೀಕ ವ್ಯಾಪಾರದಲ್ಲಿ ಬ್ಯೂಸಿಯಾಗಿದ್ದ. ನಾಯಿ ಅತ್ತಿಂದಿತ್ತ ಸುಳಿದಾಡಿದರೂ ಜನರ ಮಧ್ಯೆ ಮಾಲೀಕನ ಕಣ್ಣಿಗೆ ಬೀಳಲೇ ಇಲ್ಲ. ನಿರಾಶೆಯಿಂದ ಹೊರಟ ನಾಯಿ ಪಕ್ಕದ ಬೀದಿಯ ಹೋಟೆಲ್ ವೊಂದರ ಬಳಿ ಹೋಯಿತು.

ಅಲ್ಲಿಯೂ ಬಾಗಿಲು ಹಾಕಿತ್ತು. ಚಿಕನ್ ಸೆಂಟರ್ ಬಳಿ ಹೋದರೂ ಅದೇ ಸ್ಥಿತಿ. ದಿಕ್ಕು ತೋಚದ ನಾಯಿಗೆ ತಕ್ಷಣ ಹೊಳೆದದ್ದು ಕಸದ ತೊಟ್ಟಿ. ಹೊಟ್ಟೆ ತುಂಬಿಸಿಕೊಳ್ಳಲು ಅದೊಂದೇ ದಾರಿ ಎಂದೆನೆಸಿ ನಾಯಿ ಕಸದ ತೊಟ್ಟಿ ಹುಡುಕುತ್ತ ಓಣಿಗಳಲ್ಲೆಲ್ಲ ತಿರುಗಿತು. ಕಸದ ತೊಟ್ಟಿಗಳು ಸಿಕ್ಕವು ಆದರೆ, ಅಲ್ಲಿ ಕಸವೇ ಇರಲಿಲ್ಲ.

ಜನರೆಲ್ಲ ಕೊರೊನಾ ಭಯದಲ್ಲಿ ಮನೆ ತುಂಬ ದಿನಸಿ ತುಂಬಿಕೊಳ್ಳುತ್ತಿದ್ದರೆ, ನಾಯಿ ತುತ್ತು ಕೂಳಿಗಾಗಿ ಊರೆಲ್ಲ ಅಲೆಯುತ್ತಿತ್ತು. ದೂರದಲ್ಲೊಂದು ಕಾಗೆ ಒಂಟಿಯಾಗಿರುವುದು ಕಾಣಿಸಿತು. ಕಾಗೆ ಇದ್ದಲ್ಲಿ ಏನಾದರು ತಿಂಡಿ ಇರಲೇ ಬೇಕು ಎಂದು ಅಲ್ಲಿಗೆ ಓಡಿತು. ಆ ಮನೆ ಪುಟ್ಟ ಮಗುವೊಂದು ಎಸೆಯುವ ಬ್ರೆಡ್ ಚೂರಿಗಾಗಿ ಕಾಗೆ ಕಾಯುತ್ತಿತ್ತು. ಮಗು ಬ್ರೆಡ್ ಎಸೆಯಲೇ ಇಲ್ಲ. ಅಲ್ಲಿ ನಾಯಿಗೂ ಏನು ಸಿಗಲಿಲ್ಲ. ಕಾಗೆಗೂ ಬ್ರೆಡ್ ಚೂರು ದಕ್ಕಲಿಲ್ಲ.

ದೂರದಲ್ಲಿ ನಾಯಿಗಳ ಗದ್ದಲವೊಂದು ಕಿವಿಗಪ್ಪಳಿಸಿತು. ಅಲ್ಲಾಡುವ ಬಾಲ ನಿಲ್ಲಿಸಿ ವೇಗವಾಗಿ ಅಲ್ಲಿಗೆ ಓಡಿದ ನಾಯಿಗೆ ನಾಲ್ಕಾರು ನಾಯಿಗಳು ಗುಂಪು ಕಟ್ಟಿದ್ದು ಕಾಣಿಸಿತು. ಎಚ್ಚರಿಕೆಯಿಂದ ಕಣ್ಣು ಹಾಯಿಸಿದಾಗ ಅಲ್ಲೊಂದು ಹೆಗ್ಗಣ ಬಿಲದಲ್ಲಿತ್ತು. ಅದು ಹೊರ ಬರುವುದನ್ನೇ ನಾಯಿಗಳು ಕಾಯುತ್ತಿದ್ದವು.

ಇದನ್ನೂ ಓದಿ: ಗೌಡಶ್ಯಾನಿ ಹಿರೇತನ; ಬಡೇಸಾಬರ ಗಡಿಬಿಡಿ

ಅಲ್ಲಿಗೆ ಹೋದರೆ ಹೆಗ್ಗಣವನ್ನು ತಿನ್ನುವುದಕ್ಕಿಂತ ನಾಯಿಗಳ ಗುಂಪಲ್ಲಿ ತಾನೇ ಹೆಣವಾಗುವ ಅಪಾಯ ಅರಿತು ದೂರದಿಂದಲೇ ಕಾಲ್ಕಿತ್ತಿತು. ಮನೆಗಳು, ಹಾಸ್ಟೆಲ್, ಅಂಗಡಿಗಳ ಸಾಲು, ಆಸ್ಪತ್ರೆ ಎಲ್ಲಿಯೇ ಅಲೆದರೂ ನಾಯಿಗೆ ಒಂದು ಕೂಳು ಸಹ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಹಗಲು ರಾತ್ರಿ ಆವರಿಸಿತ್ತು. ದೇಹವೂ ನಿತ್ರಾಣವಾಗಿತ್ತು. ಇನ್ನೇನು ಹೊಟ್ಟೆಗೆ ಏನೂ ಸಿಗುವುದೇ ಇಲ್ಲ ಎಂದರಿತು ರಸ್ತೆ ಪಕ್ಕದಲ್ಲಿ ಆಶ್ರಯ ಹುಡಕಿ ಹೊರಟಿತ್ತು. ಅದೇ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಎದುರಾದರು. ಅವರ ಕೈಯಲ್ಲಿದ್ದ ಬೆತ್ತ ನೋಡಿ ನಾಯಿ ಹೆದರಿತು. ಆದರೆ, ನಾಯಿಗೆ ಬಿಸ್ಕಿಟ್ ಎಸೆದು ಪೊಲೀಸರ ಗಾಡಿ ಮುಂದೆ ಸಾಗಿತು.