ವಾಟ್ಸಾಪ್ ಚಾಟಿಂಗ್, ಫೇಸ್ ಬುಕ್ ಗಳಲ್ಲಿ ಹುಟ್ಟಿಕೊಳ್ಳುತ್ತಿದ್ದ ಕಾಲದಲ್ಲಿಯೂ ಅನಾಮಿಕ ಪತ್ರವೊಂದು ಅವರಿಬ್ಬರಲ್ಲಿ ಪ್ರೀತಿ ಅರಳಿಸಿತ್ತು. ಪ್ರೀತಿ ಹೇಳಿಕೊಳ್ಳುವ ಮೊದಲೇ ವಿಧಿಯಾಟಕ್ಕೆ ಸಂಪರ್ಕಕಳೆದುಕೊಂಡಿದ್ದರಿಂದ ಮತ್ತೆ ಆಕೆ ತನಗೆ ಸಿಗುವುದೇ ಇಲ್ಲವೇನೊ ಎಂದು ಮಹೇಶ ಅಳುಕಿನಲ್ಲೇ ಇದ್ದ.
ಆ ದಿನ ಹೊರಗಡೆ ಸುರಿಯುತ್ತಿದ್ದ ಮಳೆ ಸಹ ಮೊದಲಿಗೆ ಪತ್ರ ಓದಿದ ದಿನಗಳ ನೆನಪು ತರಿಸಿ ಕರಳು ಹಿಂಡುತ್ತಿತ್ತು. ಆ ಒಂದು ಪತ್ರ ಕೈ ಸೇರಿದ್ದರೆ ಅವಳ ಮೊಬೈಲ್ ನಂಬರ್ ದಕ್ಕಿ ಬಿಡುತ್ತಿತ್ತು. ನಮ್ಮನ್ನು ದೂರ ಮಾಡಲೆಂದೇ ವಿಧಿ ಆ ಪತ್ರ ಕೈಗೆ ಸಿಗದೆ ಹಾಗೆ ಮಾಡಿತು ಎಂಬ ಮನಸ್ಸೊಳಗಿನ ದುಗುಡ ಕಣ್ಣೀರಾಗಿ ಹೊರಬರುತ್ತಿತ್ತು.

ಪಟ್ಟಣವೊಂದರ ಪ್ರಸಿದ್ಧ ದೇವಸ್ಥಾನದ ಗುಮಾಸ್ತರ ಸಹಾಯಕನಾಗಿದ್ದ ಮಹೇಶ ದೇವಸ್ಥಾನಕ್ಕೆ ಬರುವ ಪತ್ರಗಳನ್ನು ಆಯಾ ವಿಭಾಗಕ್ಕೆ ತಲುಪಿಸುತ್ತಿದ್ದ. ದೇವಸ್ಥಾನದ ಧರ್ಮಾಧಿಕಾರಿ, ಪಂಚರು ಹೀಗೆ ಪ್ರಮುಖರಿಗೆ ಎಲ್ಲೆಲ್ಲಿಂದಲೋ ಪತ್ರಗಳು ಬರುತ್ತಿದ್ದವು.

ಮುಂಗಾರು ಮಳೆಯ ರಭಸದ ಕಾಲದಲ್ಲಿ ದೇವರ ಹೆಸರಿನಲ್ಲಿ ಪತ್ರ ಬರಲು ಶುರುವಾಗಿತ್ತು. ಎಂದೂ ಇಂಥ ಪತ್ರಗಳು ಬಂದಿರಲಿಲ್ಲ. ಮುಖ್ಯಸ್ಥರ ಗಮನಕ್ಕೆ ತಂದಾಗ ಯಾರೋ ಗೋಳು ಹೇಳಿಕೊಂಡು ಪತ್ರ ಬರೆದಿದ್ದಾರೆ ಎಂದು ನಿರ್ಲಕ್ಷ್ಯ ಮಾಡಿದರು. ಆದರೆ, ಆ ಪತ್ರದಲ್ಲಿ ಏನಿದೆ ಎಂದು ಹರಯದ ವಯಸ್ಸಿನ ಮಹೇಶ ಕುತೂಹಲಗೊಂಡಿದ್ದ.

ಹಲವು ಪತ್ರಗಳು ಬಂದ ಬಳಿಕ ಯಾರೂ ಓದಲು ಇಷ್ಟ ಪಡದ ಆ ಪತ್ರಗಳನ್ನು ಮಹೇಶ ಒಮ್ಮೆ ಓದಿದ. ಹೆಣ್ಣು ಮಗಳೊಬ್ಬಳು ತನ್ನ ಕಷ್ಟಗಳನ್ನು ಆ ಪತ್ರದಲ್ಲಿ ಬರೆದಿದ್ದಳು. ಕುಲದೇವತೆ ನನ್ನ ಗೋಳು ನಿನಗೆ ಕೇಳಿಸುವುದಿಲ್ಲವೆ. ಬುದಕುವ ಆಸೆ ಇನ್ನು ಉಳಿದಿಲ್ಲ ಎಂದು ಪತ್ರದಲ್ಲಿತ್ತು.

ಇದನ್ನೂ ಓದಿ: ಡಾಕ್ಟರ್ ಆದಳು ಪಾನಿಪುರಿ ಚಾಂದನಿ

ಕನಿಕರಗೊಂಡ ಮಹೇಶ ಆ ಪತ್ರಕ್ಕೆ ಪ್ರತಿಯಾಗಿ ಸಾಂತ್ವನ ಹೇಳಿ ಉತ್ತರ ಬರೆದ. ವಾರಕ್ಕೆ ಒಂದು ಬರುತ್ತಿದ್ದ ಪತ್ರ ಆ ಬಳಿಕ ಮೂರು ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ ಬರಲು ಶುರುವಾಯಿತು. ನಾಲ್ಕು ಸಾಲುಗಳಲ್ಲಿ ಬರೆಯುತ್ತಿದ್ದ ಮಹೇಶನ ಪತ್ರ ನಾಲ್ಕು ಪ್ಯಾರಾಗಳಿಗೆ ಹೆಚ್ಚಿತು. ಮತ್ತೆ ಪತ್ರವನ್ನು ಎದುರು ನೋಡುವುದೇ ಆಗಿತ್ತು.

****

ಸಹಜ ಸುಂದರಿಯಾಗಿದ್ದ ಕುಸುಮಾಳಿಗೆ ತನ್ನ ಚಿಕ್ಕಮ್ಮನ ಹಿಂಸೆ ಸಹಿಸಲು ಕಷ್ಟವಾಗುತ್ತಿತ್ತು. ಕುಸುಮಾ ಹುಟ್ಟಿದ ಬಳಿಕ ಆಕೆಯ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಜೀವ ಬಿಟ್ಟಿದ್ದಳು. ಹಾಗಾಗಿ ಕುಸುಮಾ ತಂದೆ ಎರಡನೇ ಮದುವೆಯಾಗಿದ್ದ. ಚಿಕ್ಕಮ್ಮನ ಕಿರಕುಳ ತಾಳಲಾರದೆ ಕುಸುಮಾ ತನ್ನ ಕುಲದೇವರ ಹೆಸರಿನಲ್ಲಿ ದೇವಸ್ಥಾನಕ್ಕೆ ಪತ್ರ ಬರೆದು ತನ್ನ ಗೋಳು ತೋಡಿಕೊಳ್ಳುತ್ತಿದ್ದಳು. ಅದು ಅವಳಿಗೆ ಸ್ವಲ್ಪ ಸಾಮಾಧಾನ ಕೊಡುತ್ತಿತ್ತು.

ಆ ಪತ್ರವೇ ಮಹೇಶ ಮತ್ತು ಕುಸುಮಾ ಅವರಲ್ಲಿ ಸ್ನೇಹ ಬೆಳೆಸಿತ್ತು. ಆರಂಭದಲ್ಲಿ ಇಬ್ಬರೂ ಪರಸ್ಪರರ ಹೆಸರು ಹೇಳಿಕೊಂಡಿರಲಿಲ್ಲ. ಆದರೆ, ನೋವಿಗೆ ಸಿಗುತ್ತಿದ್ದ ಸಾಂತ್ವನ ಕುಸುಮಾಳ ದಿನಗಳಿಗೆ ಚೈತನ್ಯ ತುಂಬುತ್ತಿತ್ತು. ಹೀಗೆ ಮುಂದುವರೆದ ಪತ್ರ ವ್ಯವಹಾರಲ್ಲಿ ಆವತ್ತು ಬಂದ ಪತ್ರ ಕುಸುಮಾಳ ಪೂರ್ಣ ಪರಿಚಯ ಕೇಳುವ ರೀತಿಯಲ್ಲಿ ಇತ್ತು. ಕುಸುಮಾ ಆಶ್ಚರ್ಯಗೊಂಡಳು. ಜತೆಗೆ ಕುತೂಹಲವೂ ಹೆಚ್ಚಿತು.

20 ವರ್ಷಗಳಿಂದ ಚಿಕ್ಕಮ್ಮನ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಕುಸುಮಾ ಹಿಂದಿನ ಪತ್ರವೊಂದರಲ್ಲಿ ಬರೆದಿದ್ದಳು. ಆ ಮಾಹಿತಿ ಆಧಾರದ ಮೇಲೆ ಕುಸುಮಾ ವಿವಾಹವಾಗದ ತರುಣಿ ಎಂದು ಅಂದಾಜಿಸಿ ಮಹೇಶನಿಂದ ಪರಿಚಯ ಕೇಳುವ ಪತ್ರ ಬಂದಿತ್ತು. ಕುಸುಮಾಳಿಗೆ ಮನಸ್ಸಿನಲ್ಲಿ ಸಣ್ಣ ಭಯ ಸೃಷ್ಟಿಸಿದರೂ ಯಾರ ಪ್ರೀತಿಯೂ ಸಿಗದೆ ಬರಡಾಗಿದ್ದ ಮನಸ್ಸಿನ ಮೇಲೆ ತುಂತುರು ಜಿನುಗಿದಂತಾಗಿತ್ತು.

ಇದನ್ನೂ ಓದಿ: ಬಿಟ್ಟು ಹೋಗಬೇಡ ಅಪ್ಪ

ಮಾರನೆ ದಿನ ಅಂಚೆ ಪೆಟ್ಟಿಗೆ ಸೇರಿದ ಎರಡೂ ಪತ್ರದಲ್ಲಿ ಪರಸ್ಪರರ ಪರಿಚಯ ಇತ್ತು. ಪರಿಚಯ ಅಕ್ಷರಗಳ ನಡುವೆ ಪ್ರೀತಿಯ ಗಂಧವೂ ಅಂಟಿತ್ತು. ಪತ್ರ ಕೈ ಸೇರಿದಾಗ ಇಬ್ಬರಲ್ಲಿಯೂ ಪುಳಕ, ವಿಶೇಷ ಅನುಭಾವ ಬೆಸೆಯಿತು. ಇನ್ನೇನು ಇಷ್ಟು ಹತ್ತಿರವಾದ ಮೇಲೆ ನೇರವಾಗಿ ಮೊಬೈಲ್ ನಂಬರ್ ಪಡೆದು ಫೋನ್ ಮಾಡಬಹುದಲ್ಲವೆ ಎಂದು ಇಬ್ಬರೂ ತಮ್ಮ ತಮ್ಮ ಮೊಬೈಲ್ ನಂಬರ್ ಬರೆದು ಪತ್ರವನ್ನು ಅಂಚೆ ಪೆಟ್ಟಿಗೆ ಹಾಕಿದರು.

****

ಪತ್ರ ಇಬ್ಬರ ಕೈ ಸೇರುವ ಮೊದಲೇ ಆಘಾತವೊಂದು ಘಟಿಸಿತು. ಕುಸುಮಾಳಿಗೆ ಪತ್ರ ಬರೆಯುವುದರಲ್ಲಿಯೇ ಮೈಮರೆತಿದ್ದ ಮಹೇಶ ದೇವಸ್ಥಾನದಲ್ಲಿ ಒಂದು ತಿಂಗಳಿಂದ ಸರಿಯಾಗಿ ಕೆಲಸ ಮಾಡಿರಲಿಲ್ಲ. ಅದಕ್ಕೆ ಅವನನ್ನು ದೇವಸ್ಥಾನದಿಂದ ಹೊರಹಾಕಿದರು. ದೇವಸ್ಥಾನದ ಎಲ್ಲ ಸಿಬ್ಬಂದಿಯೂ ಮಹೇಶನ ಬಗ್ಗೆ ಬೇಸರಗೊಂಡಿದ್ದರು.

ಇನ್ನೊಂದೆಡೆ ಕುಸುಮಾಳ ತಂದೆಗೆ ಬೇರೆ ಜಿಲ್ಲೆಗೆ ವರ್ಗಾವಣೆ ಆದೇಶ ಬಂದು ಒಂದು ವಾರ ಆಗಿತ್ತು. ಮಗಳಿಗೆ ಹೇಳಿರಲಿಲ್ಲ. ಆ ದಿನ ಏಕಾಏಕಿ ಮನೆ ಖಾಲಿ ಮಾಡಿ ಬೇರೆ ಊರಿಗೆ ಹೋದರು. ಕುಸುಮಾ ಬರೆದ ಪತ್ರ ದೇವಸ್ಥಾನದಲ್ಲಿ, ಮಹೇಶ ಬರೆದ ಪತ್ರ ಕುಸುಮಾಳ ಮನೆಯ ಗೇಟಿನ ಡಬ್ಬಿಯಲ್ಲಿ ಅನಾಥವಾಗಿ ಬಿದ್ದಿತ್ತು.

…. ಮುಂದುವರೆಯುತ್ತದೆ

**** ದೂರಾದ ಮಹೇಶ, ಕುಸುಮಾ ಒಂದಾಗುವರೇ….. ಪ್ರೇಮ ಕತೆ: ಪೊಲೀಸ್ ಕೇಸಿನಿಂದ ಸಿಕ್ಕ ಪ್ರೇಯಸಿ

ಮತ್ತಷ್ಟು ಕತೆಗಳನ್ನು ಓದಲು ಕ್ಲಿಕ್ ಮಾಡಿ