ಅದು ದೊಡ್ಡ ಊರಿನ ಪಕ್ಕದ ಚಿಕ್ಕೂರು. ಎಲ್ಲ ಊರಿನಲ್ಲಿ ಇರುವಂತೆಯೇ ಇಲ್ಲಿಯೂ ಆಲದಮರ, ಅರಳಿಮರದ ಕಟ್ಟೆಯ ಜಾಗೆಗಳು ಹರಟೆ ತಾಣಗಳಾಗಿದ್ದವು. ಅಲ್ಲಿ ಎಲೆ ಅಡಿಕೆ ಹಾಕಿ ಮಾತಿಗೆ ಕುಳಿತರೆಂದರೆ ಊರಿನ ಎಲ್ಲಮನೆಯ ಸುದ್ದಿಯನ್ನೂ ಒಮ್ಮೆ ಕಣ್ಣಾಡಿಸಿ ಬಿಡುವ ಚಾಳಿ ನಿರಂತರವಾಗಿ ನಡೆಯುತ್ತ ಬಂದಿತ್ತು. ಮನೆ ಕಡೆಗಿನ ಖಬರ ಇಲ್ಲದ ಸಂಗಪ್ಪ, ನಾಗಪ್ಪ, ಯಲ್ಲಪ್ಪಇಲ್ಲಿ ನಿತ್ಯದ ಸದಸ್ಯರಾಗಿದ್ದರು.

ಆ ಊರಿಗೆ ಪಕ್ಕದ ಗುಡ್ಡಾಪುರದ ಗಡ್ಡದಾರಿ ಸ್ವಾಮಿ ಒಬ್ಬ ಖಾಯಂ ಬಿಕ್ಷುಕ. ಬಿಕ್ಷುಕ ಅಂದರೆ ಸರಿಯಾಗಲಿಕ್ಕಿಲ್ಲ. ಊರಲ್ಲಿ ಆತ ಅಂತಹದ್ದೊಂದು ಹವಾ ಕಾಯ್ದುಕೊಂಡಿದ್ದ. ಪರಿಚಿತ ಮುಖವಾದ ಕಾರಣ ಊರಿನ ಜನತೆಯ ಜೊತೆ ಕೊಂಚ ಹೆಚ್ಚಿಗೆಯೇ ಒಡನಾಟದಿಂದಿದ್ದ. ತನ್ನ ಹಾವಭಾವದ ಹಾಡುಗಳ ಮೂಲಕ ಜನರನ್ನು ರಂಜಿಸುತ್ತಿದ್ದ. ಈತ ಯಾವತ್ತೂ ಬಾಯಿ ಮುಚ್ಚಿಕೊಂಡು ಬಂದವನಲ್ಲ. ಬೀದಿಗಳಲ್ಲಿ ಬರುವಾಗ ಭಜನೆ, ದಾಸರ ಹಾಡು, ಕೈವಲ್ಯ ಪದಗಳನ್ನು ಹಾಡುತ್ತಲೇ ಬರುತ್ತಿದ್ದ.

ಈಗೀಗ ವಯಸ್ಸಾದ ಕಾರಣ ಹಾಡುವುದನ್ನು ನಿಲ್ಲಿಸಿದ್ದ. ಆದರೆ ತನ್ನ ಬಾಯಿಗೆ ಯಾವುದೇ ಬ್ರೇಕ್ ಇರಲಿಲ್ಲ, ಹಾಗಾಗಿ ಆಗಾಗ ಅವಾಚ್ಯ ಪದಗಳನ್ನು ಉದುರಿಸುತ್ತಿದ್ದ. ಚಿಕ್ಕ ಹುಡುಗರನ್ನು ತುಂಬಾ ಗದರಿಸುತ್ತಿದ್ದ. ಮಕ್ಕಳು ಹಠ ಹಿಡಿದರೆ ಅಮ್ಮಂದಿರು ಸ್ವಾಮೀನ ಕರೀತೇನ ನೋಡಾ… ಎಂದರೆ ಮಕ್ಕಳು ಊಟ ಮಾಡಲು ಶುರುಮಾಡುತ್ತಿದ್ದರು.

ಬೀದಿ ನಾಯಿಗಳು ಕೂಡ ಈತ ಅಂಗಡಿಯಿಂದ ಬಟರ್ ತಂದು ಹಾಕುತ್ತಿದ್ದ ಬಿಡೆಗೆ ಗಪ್ ಚುಪ್ ಇರುತ್ತಿದ್ದವು. ಮನೆ ಬಾಗಿಲ ಬಳಿ ಬಂದು ಯಾರ ಅದರಿ? ಅನ್ನುತ್ತಿದ್ದ. ಯಾರು ಸುಳಿಯದಿದ್ದರೆ ನಿಮೌವ್ವರ್ ಯಾರ ಅದರಿ ಒಳಗ? ಎಂದು ತುಸು ದರ್ಪವನ್ನೂ ಹೊರಹಾಕುತ್ತಿದ್ದ. ಆದರೆ ಬೈಗುಳನ್ನು ಊರಿನ ಕೆಲ ಯುವಕರು ಮಾತ್ರ ಕೇಳಿಸಿಕೊಂಡಿದ್ದರು.

ಕೆಲ ಮುದುಕರಿಗೆ ಆತ ಕೊಂಚ ಆಪ್ತ. ಅಂದು ಚಿಕ್ಕೂರಿನಲ್ಲಿ ನಡೆಯುವ ರಾತ್ರಿ ಸಂಗ್ಯಾ-ಬಾಳ್ಯಾ ದೊಡ್ಡಾಟವಿತ್ತು. ಹೀಗಾಗಿ ಆಪ್ತರು ಸ್ವಾಮಿಗೆ ಆಮಂತ್ರಣ ನೀಡಿದ್ದರು. ಅಂದು ರಾತ್ರಿಯ ಆಟವನ್ನು ನೋಡಿದ್ದರಿಂದ ಮರುದಿನ ಅದೇ ಗುಂಗಿನಲ್ಲಿ ಚಿಕ್ಕೂರಿಗೆ ಆಗಮಿಸಿದ್ದ. ಅದೇ ಆಲದ ಮರದ ಕೆಳಗಡೆ ಎಂದಿನಂತೆ ಯಲ್ಲಪ್ಪ, ನಾಗಪ್ಪಕುಳಿತಿದ್ದರು.

ಅಣತಿ ದೂರದಲ್ಲಿದ್ದ ಸಂಗಪ್ಪ ತನ್ನ ಮನೆಯಿಂದ ಊಟ ಮಾಡಿ ಹರಟೆ ಕಟ್ಟೆಗೆ ಹಾಜರಾಗಲು ತಯಾರಾಗುತ್ತಿದ್ದ. ಸಂಗಪ್ಪನ ಹೆಂಡತಿ ಗಂಗವ್ವಾ ಜೋಳ ಬೀಸಲು ಗಿರಣಿಗೆ ಹೊರಡಲು ಸಿದ್ದಳಾಗುತ್ತಿದ್ದಳು. ಅಷ್ಟರಲ್ಲಿ ಸ್ವಾಮಿ ಬಾಗಿಲ ಬಳಿ ಬಂದು ಹಿಂದಿನ ದಿನದ ರಾತ್ರಿಯ ಸಂಗ್ಯಾ-ಬಾಳ್ಯಾ ಆಟದ ಪದ ‘ಏನ್ ಮಾಡತಾಳ ಎವ್ವ… ಗಂಗಿ ಒಳಗ?’ ಅಂತ ಹಾಡುತ್ತಾ ಬಂದ.

ಆ ಹಾಡಿನ ಸಾಲು ಸಂಗಪ್ಪನ ಕಿವಿಗೆ ಬಿತ್ತು. ಆ ಕೂಡಲೇ ಸಂಗಪ್ಪ ‘ಯಲಾ ಕಳ್ಳ ಸ್ವಾಮಿ… ನನ್ನ ಹೆಂಡತಿನ ಹಿಂಗ ಕೆರೆಯುವಷ್ಟ ಧೈರ್ಯ ಬಂತೆನಲೆ ನಿನಗ?’ ಎನ್ನುತ್ತಾ ಕೈಯಾಗ ಕಬ್ಬಿನ ಗಳಾ ಹಿಡಿದ ಹೊರಗ ಬಂದಾ. ಸ್ವಾಮಿಗೆ ಇಲ್ಲಿ ಏನ ಆಗತೈತಿ ಅನ್ನೋದ ಗೊತ್ತಾಗದಾಯಿತು.

ಒಂದ ಅಂದ್ರ ಒಂಬತ್ ತಿಳ್ಯಾಕತ್ತು. ನಿನ್ನೆ ನಾ ಮುದಕರ ಜೊತೆ ಗಾಂಜಾ ಸೇದೂದ ಇಂವಾ ನೋಡಿದಾನ ಅನ್ನಿಸ್ತೈತಿ, ಅದಕ್ಕ ಹಿಂಗ ಬೈಯಾತಾನು ಅಂತ ಇವಂದ ಇವಂಗ ಹತ್ತಿತ್ತ. ಇನ್ನೇನ ಸ್ವಾಮೀನ ದುಬ್ಬಾ ಮುರಿಬೇಕು ಅನ್ನುವಷ್ಟರಾಗ, ಇವರ ಗದ್ದಲ ಕೇಳಿ ಅಳ್ಳಿಕಟ್ಟೆಯ ನಾಗಪ್ಪ, ಯಲ್ಲಪ್ಪ ಬಂದು ತಡೆದು ಯಾಕೋ ಸಂಗಾ ಏನಾತು? ಅಂದ್ರು. ಆಗ ಸಂಗನ ಮುಖ ಕೆಂಪಗ ಕಾದ ಕೆಂಡ ಆಗಿತ್ತು. ‘ಲೋ ಯಲ್ಲಾ (ಯಲ್ಲಪ್ಪ) ಮೊನ್ನೆ ನಿನಗ ಈ ಕಳ್ ಮಗನ ಅಡ್ನಾಡ ಚಾಳಿ ಹೇಳಿರಲಿಲ್ಲಾ?, ನೋಡ ಇವತ್ತ ನನ್ನ ಹೆಂಡತಿಗ ಗಂಟ ಬಿದ್ದಾನ ಮಗಾ. ಏನ್ ಮಾಡಾತಾಳ ಎವ್ವ ಗಂಗಿ ಒಳಗ್… ಅನ್ನಾತಾನ. ಪುಣ್ಯಕ ಇವತ್ತ ನಾ ಹೊಲಕ ಹೋಗಿರಲಿಲ್ಲ ಪಾಡ ಆತು’.

ಇದನ್ನೆಲ್ಲ ಕೇಳತ ನಿಂತ ಸ್ವಾಮಿಗ ತನ್ನ ಅವಾಂತರ ನೆನಪಾಯಿತು. ಯಲ್ಲಪ್ಪ ನಾ ಹಂಗ ಅವ್ನ ಹೆಂಡತಿಗ ಕರೆದಿಲ್ಲಪಾ, ಅಕಿ ನಮೌವ್ವನ ಸಮಾನ ಅದಾಳಪಾ. ಏನೂ ತಿಳಿಲಾರದ ಹಂಗ ಬಡ್ಯಾಕ ಬಂದಾನ. ನಾ ನಿನ್ನೆ ರಾತ್ರಿ ಸಂಗ್ಯಾ-ಬಾಳ್ಯಾ ಆಟ ನೋಡೀನ್ಯ. ಅದಕ ಅದರಾಗಿನ ಹಾಡು ಏನ್ ಮಾಡತಾಳ ಗಂಗಿ ಒಳಗ್? ಅಂತಾ ಹಾಡಕೋತ ಬರತಾ ಇದ್ದೆ. ಅಷ್ಟರೊಳಗ ನಾಗರ ಹಾವಿನಾಂಗ ಬುಸ್ ಬುಸ್ ಅಂತ ನನ್ನ ಮ್ಯಾಲ ಬಂದಾನ. ಏನೋ ಚಟಕ್ಕೆ ವಾರಕ್ಕೆ ಒಮ್ಮೆ ಬೀಡಿ ಸೇದ್ತೀನಿ ಹೊರತ ಇಂತಾ ಹೆಣ್ಮಕ್ಕಳ ಬಗ್ಗೆ ಬಾಳ ಮರಿಯಾದೀಲೆ ಮಾತಾಡತೀನಿಪಾ, ಇಷ್ಟರೊಳಗ ನೆರೆದ ಜನ ಮುಸಿ ಮುಸಿ ನಗುತ್ತಾ ನಿಂತಿದ್ದರು.

ಇದನ್ನೂ ಓದಿ: ಗೌಡಶ್ಯಾನಿ ಹಿರೇತನ; ಬಡೇಸಾಬರ ಗಡಿಬಿಡಿ

ಸುತ್ತ ನೆರೆದ ಜನ ಮರಳಿದ ಬಳಿಕ ಸ್ವಾಮಿನ ಕುಂದ್ರಿಸಿಗೊಂಡ ‘ನೋಡಪಾ ಗಡ್ಡದ ಸ್ವಾಮಿ, ಈಗ ಸುಗ್ಗಿ ದಿನ ಅದಾವ. ಮನೆಯಾಗ ಹೆಣ್ಮಕ್ಕಳ ಮಾತ್ರ ಇರಾತಾರ. ಅದಕ ನೀನು ಸ್ವಲ್ಪ ಜಾಗರೂಕನಾಗಿ ತಗ್ಗಿ-ಬಗ್ಗಿ ಇರಬೇಕು. ಚಿಕ್ಕೂರು ನಿನ್ನ ಬೇರೆ ಊರಾಂವ ಅಂತಾ ತಿಳಿದಿಲ್ಲ. ನಮ್ಮಲ್ಲೇ ನಮ್ಮೂರಾಗನ ನೀನೂ ಒಬ್ಬ ಅದಿ ತಿಳೀತಿಲ್ಲ. ಅದಕ ಅದನ್ನ ಕಾಪಾಡಿಕೊಂಡು ಹೋಗು ಅಂತಾ ಬುದ್ದಿವಾದ ಹೇಳಿ ಮನೆಗೆ ಕಳಿಸಿದರು. ಸ್ವಾಮಿ ಗಡ್ಡ ಕೆರೆಯುತ್ತಲೇ ಗುಡ್ಡಾಪೂರದ ಹಾದಿ ಹಿಡಿದ.

ಇದನ್ನೂ ಓದಿ: ಕೊರೊನಾ ಲಾಕ್ ಡೌನ್ ನಲ್ಲಿ ತುತ್ತಿಗಾಗಿ ಅಲೆದಾಡಿದ ನಾಯಿ ಕತೆ

ಬರಹ: ವಿನೋದ ರಾ. ಪಾಟೀಲ, ಚಿಕ್ಕಬಾಗೇವಾಡಿ, ಬೈಲಹೊಂಗಲ.