ಲಾಕ್ ಡೌನ್ ನಲ್ಲಿ ಎಲ್ಲರೂ ಮನೆಯಲ್ಲಿ ಬೆಚ್ಚಗಿದ್ದರೆ ಈ ಬಾಲಕ ಬಂದೂಕುದಾರಿ ಬೇಟೆಗಾರರ ಗುಂಪನ್ನೇ ಬೆದರಿಸಿ ರಾತ್ರೋ ರಾತ್ರಿ ಹೀರೊ ಆಗಿದ್ದಾರೆ. ಹತ್ತನೇ ತರಗತಿ ಓದುವ ಹಳ್ಳಿ ನಾಡಿನ ಈ ಬಾಲಕ ಭಾರತೀಯರ ಪಾಲಿಗೆ ವನ್ಯ ಜೀವಿ ರಕ್ಷಕನಾಗಿ ಮೆಚ್ಚುಗೆ ಗಳಿಸಿದ್ದಾನೆ. ಎಲ್ಲೆಡೆ ಈ ಹಳ್ಳಿ ಹುಡುಗನ ಸಾಹಸವೇ ಅನುರಣಿಸುತ್ತಿವೆ.

ಅಸಲಿಗೆ ಇದು ರಾಜಸ್ಥಾನದ ಜೋದಪುರ ಜಿಲ್ಲೆಯ ಬಾಲು ರಾಜ್ವಾ (ಕೇತು) ಎನ್ನುವ ಪುಟ್ಟ ಹಳ್ಳಿಯ 15 ವರ್ಷದ ಬಾಲಕ ಮುಖೇಶ ಬಿಷ್ಣೊಯಿ ಕತೆ. ಈ ಬಾಲ ತನ್ನ ಸ್ನೇಹಿತನೊಂದಿಗೆ ಸೇರಿ ಮಧ್ಯ ರಾತ್ರಿ ಬಂದೂಕುದಾರಿ ಬೇಟೆಗಾರರನ್ನು ಎದುರಿಸಿದ್ದಲ್ಲದೆ, ಅವರ ಬಂದೂಕು ಕಸಿದುಕೊಂಡು ಓಡಿಸಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿ ಮುಖೇಶ ಮತ್ತು ಆತನ ಸ್ನೇಹಿತ ಪುಖ್ರಾಜ ಮೇ 10, 2020ರ ರಾತ್ರಿ ಮೋಟಾರ್ ಸೈಕಲ್ ನಲ್ಲಿ ಊರಿನ ಹೊರಗೆ ಗಸ್ತು ತಿರುಗುತ್ತಿದ್ದರು. ಲಾಕ್ ಡೌನ್ ಘೋಷಣೆಯಾದಾಗಿನಿಂದ ಪ್ರಾಣಿಗಳು ಸುರಕ್ಷಿತವಾಗಿದೆಯೇ ಎಂದು ತಿಳಿದುಕೊಳ್ಳಲು ಪ್ರತಿ ದಿನ ರಾತ್ರಿ 8ರಿಂದ ಮುಂಜಾನೆ 2 ಗಂಟೆ ವರೆಗೆ ಗಸ್ತು ತಿರುಗುತ್ತೇವೆ ಎಂದು ಮುಖೇಶ ಹೇಳಿದ್ದಾನೆ.

ವೈರಲ್ ವಿಡಿಯೊ: ಪಂಜರ ಇಟ್ಟವರಿಗೇ ಚಳ್ಳೆಹಣ್ಣು ತಿನ್ನಿಸಿದ ಚತುರ ಚಿರತೆ

ಅದೇ ರೀತಿ ಮೇ 10 ರ ರಾತ್ರಿ ಇವರು ಗಸ್ತು ತಿರುಗುತ್ತಿದ್ದಾಗ. ಮುಖೇಶನಿಗೆ ಬಂದೂಕಿನ ಸದ್ದು ಕೇಳಿಸಿತು. ತಕ್ಷಣ ಇಬ್ಬರೂ ಸದ್ದು ಬಂದ ಕಡೆಗೆ ಬೈಕ್ ಓಡಿಸಿದರು. ಅಲ್ಲಿ ನಾಲ್ವರು ಜಿಂಕೆಯನ್ನು ಬೇಟೆಯಾಡಿದ್ದರು. ಆ ಕಳ್ಳ ಬೇಟೆಗಾರರು ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು.

ಕಳ್ಳರು ವಯಸ್ಕರಾಗಿದ್ದು ಬಾಲಕರಿಗಿಂತ ದಷ್ಟಪುಷ್ಟವಾಗಿದ್ದರು. ಅಲ್ಲದೆ, ಆ ಕಳ್ಳರು ನಾಲ್ವರಿದ್ದರು. ಇಬ್ಬರು ಇಬ್ಬರು. ಆದರೂ ಮುಖೇಶ ಅವರನ್ನು ಎದುರಿಸಿದರು. ಜಗಳ, ಕಿತ್ತಾಟ ನಡೆಯಿತು. ಕಳ್ಳರು ಬಂದೂಕುಗಳನ್ನು ಅಲ್ಲಿಯೇ ಎಸೆದು ಚಿಂಕೆಯ ದೇಹದೊಂದಿಗೆ ಪರಾರಿಯಾದರು.

ಓದಿ: ಪ್ರಧಾನಿ ಮೋದಿ ಮೆಚ್ಚಿದ ಹಳ್ಳಿ ಮಕ್ಕಳ ಕೊರೊನಾ ಪಾಠ: ವಿಡಿಯೊದಲ್ಲೇನಿದೆ?

ಅಷ್ಟಕ್ಕೆ ಬಿಡದ ಮುಖೇಶ ಮತ್ತು ಆತನ ಸ್ನೇಹಿತ ಸುಮಾರು ಒಂದು ತಾಸು ಕಳ್ಳರನ್ನು ಹುಡುಕಾಡಿದರು. ಆದರೆ, ಅವರು ತಪ್ಪಿಸಿಕೊಂಡಿದ್ದರು. ಈ ವಿಷಯ ಹೊರಬೀಳುತ್ತಿದ್ದಂತೆಯ ಮುಖೇಶನ ಸಾಹಸ ಎಲ್ಲೆಡೆ ಹಬ್ಬಿತು. ಸಾಮಾಜಿಕ ಜಾಲತಾಣದಲ್ಲಿ ಮುಖೇಶ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈತನ ಸಾಹಸವನ್ನು ಅರಣ್ಯಾಧಿಕಾರಿಗಳೂ ಮೆಚ್ಚಿದ್ದಾರೆ.

ವೈರಲ್ ವಿಡಿಯೊ: ದೇಶವನ್ನೇ ನಿಬ್ಬೆರಗಾಗಿಸಿದ ನವಿಲುಗಳ ಸಾಮಾಜಿಕ ಅಂತರ

ಕಳ್ಳ ಬೇಟೆಗಾರರು ನಾಲ್ವರಿದ್ದರು. ಅವರ ಬಳಿ ಬಂದೂಕುಗಳು ಇದ್ದವು. ಬಂದೂಕನ್ನು ನನ್ನ ಕಡೆ ಹಿಡಿದರು. ತಕ್ಷಣ ನಾನು ಬಂದೂಕುಗಳನ್ನು ಎಳೆದು ಹಿಡಿದುಕೊಂಡೆ. ಅವರೂ ಎಳೆದರು. ಬಳಿಕ ನನ್ನನ್ನು ನೆಲಕ್ಕೆ ತಳ್ಳಿದರು. ಅಷ್ಟೊತ್ತಿಗೆ ಬೆಳಕು ಕಂಡಿತು. ಅವರು ಪರಾರಿಯಾದರು. ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಊರಿನವರು ಬಂದರು ಎಂದು ಮುಖೇಶ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾನೆ.