ಮಾರಣಾಂತಿಕ ಕೊರೊನಾ ಮಹಾ ಮಾರಿ ಹೇಗೆ ಹರಡುತ್ತದೆ. ಸಾಮಾಜಿಕ ಅಂತರದಿಂದ ಏನು ಪ್ರಯೋಜನ? ಜನರು ಯಾವರೀತಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಹೇಳುತ್ತಲೇ ಬಂದಿದೆ. ಆದರೂ ಕೊರೊನಾ ಸವಾಲು ಬಿಗಿಯಾಗುತ್ತಲೇ ಇದೆ.

ಇಂಥದ್ದೇ ವಿಷಯಗಳ ಬಗ್ಗೆ ಹಳ್ಳಿಯೊಂದರ ಪುಟ್ಟ ಬಾಲಕರು ಹೇಳಿದ ಸರಳ ಪಾಠ ಈಗ ಇಡೀ ದೇಶದ ಗಮನ ಸೆಳೆದಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ನಲ್ಲಿ ಆ ಮಕ್ಕಳ ವಿಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಮಕ್ಕಳ ಅರಿವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್.
ವರದಿಯ ಕೊನೆಯಲ್ಲಿ ವಿಡಿಯೊ ನೋಡಬಹುದು.

Twitter Link

ಇಡೀ ಜಗತ್ತನ್ನೇ ಕಾಡುತ್ತಿರುವ ಕೋವಿಡ್ 19 ಕೊರೊನಾ ಹೇಗೆ ಹರಡುತ್ತದೆ ಎನ್ನುವುದನ್ನು ಮಕ್ಕಳು ಕೇವಲ 59 ಸೆಕೆಂಡುಗಳಲ್ಲಿ ಹೇಳಿದ್ದಾರೆ. ಅದೊಂದು ಆಟದ ರೂಪದಲ್ಲಿ ಹಳ್ಳಿ ಮಕ್ಕಳು ಇಟ್ಟಿಗೆ ಬಳಸಿ ಕೊರೊನಾ ಸೋಂಕು ಹರಡುವ ಪರಿಯನ್ನು ಬಹಳ ಸರಳವಾಗಿ ತಿಳಿಸಿದ್ದಾರೆ.

ಐದು ಜನ ಮಕ್ಕಳು ಸೇರಿಕೊಂಡು ಈ ವಿಡಿಯೊ ಮಾಡಿದ್ದಾರೆ. ಅದರಲ್ಲಿ ಒಬ್ಬ ಬಾಲಕ ಕೊರೊನಾ ಹೇಗೆ ಹರಡುತ್ತದೆ ಎನ್ನುವುದನ್ನು ಉಳಿದ ಮಕ್ಕಳಿಗೆ ವಿವರಿಸುತ್ತಾರೆ. ಅವರ ವಿವರಣೆ ಹೇಗೆ ಎಂದರೆ, ಒಂದು ಬಿದ್ದರೆ ಮತ್ತೊಂದು ಬೀಳುವಂತೆ ವೃತ್ತಾಕಾರದಲ್ಲಿ ಇಟ್ಟಿಗೆಗಳನ್ನು ಜೋಡಿಸಿದ್ದಾರೆ.

ಒಂದು ಇಟ್ಟಿಗೆ ಇನ್ನೊಂದರ ಮೇಲೆ ಬಿದ್ದು ಮುಂದಿನ ಎಲ್ಲ ಇಟ್ಟಿಗೆಗಳು ಹೇಗೆ ಒಂದಾಗಿ ಬೀಳುತ್ತಿದೆಯೋ ಅದೇ ರೀತಿ ಒಬ್ಬರ ಸಂಪರ್ಕದಿಂದ ಮತ್ತೊಬ್ಬರಿಗೆ ಕೊರೊನಾ ಸೋಂಕು ಹರಡುತ್ತ ಹೋಗುತ್ತದೆ. ಒಂದು ವೇಳೆ ಸಾಲಿನಲ್ಲಿರುವ ಒಂದು ಇಟ್ಟಿಗೆಯನ್ನು ತೆಗೆದರೆ ಮುಂದಿನ ಇಟ್ಟಿಗೆಯು ಬೀಳುವುದಿಲ್ಲ. ಹಾಗೆಯೇ ಒಬ್ಬ ವ್ಯಕ್ತಿ ಜನರ ಸಂಪರ್ಕದಿಂದ ದೂರಾದರೆ ಅವನ ಸಮೀಪದವರಿಗೆ ಕೊರೊನಾ ಸೋಂಕು ಹರಡುವುದು ನಿಲ್ಲುತ್ತದೆ ಎಂದು ಬಾಲಕ ವಿವರಿಸಿದ್ದಾರೆ.

ಇದೇ ವಿಡಿಯೊವನ್ನು ಪ್ರಧಾನ ಮಂತ್ರಿ ಅವರು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ತಮ್ಮ ಅಭಿಪ್ರಾಯವನ್ನೂ ಬರೆದಿದ್ದಾರೆ. “ಮಕ್ಕಳು ಆಟ ಆಡುತ್ತಲೇ ಏನು ಹೇಳಿದ್ದಾರೋ, ಅದರಲ್ಲಿ ಕೊರೊನಾ ಮಹಾಮಾರಿಯಿಂದ ಬಜಾಚಾವಾಗುವ ದೊಡ್ಡ ಕಲಿಕೆ ಇದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಆದರೆ, ಆ ಬಾಲಕರು ಎಲ್ಲಿಯವರು ಎನ್ನುವುದು ಸ್ಪಷ್ಟವಾಗಿಲ್ಲ. ನಾಲ್ಕು ದಿನಗಳ ಹಿಂದೆ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗಿದೆ.