ಕೋವಿಡ್-19 ಕೊರೊನಾದಿಂದ ದೇಶ ಲಾಕ್ ಡೌನ್ ಆದಾಗಿನಿಂದ ಉಚಿತ ಇಂಟರ್ನೆಟ್ ಕೊಡುತ್ತೇವೆ ಎನ್ನುವ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ವಾಟ್ಸ್ ಆ್ಯಪ್ ಗಳಲ್ಲಿ ಬರುವ ಇಂಥ ಫ್ರಿ ಇಂಟರ್ನೆಟ್ ಸಂದೇಶದ ಲಿಂಕ್ ಓಪನ್ ಮಾಡಿ ಅನೇಕರು ನಿರಾಶೆಯಾಗಿದ್ದಾರೆ.

ಆದರೂ ಬೇರೆಯವರಿಗೆ ಮೆಸೇಜ್ ಪಾರ್ವರ್ಡ್ ಮಾಡುವುದು ಮಾತ್ರ ನಿಲ್ಲುತ್ತಿಲ್ಲ. ಹೀಗೆ ಪಾರ್ವರ್ಡ್ ಆದ ಮೆಸೇಜ್ ಗಳಲ್ಲಿ ಹೆಚ್ಚಿನ ಜನರು ಲಿಂಕ್ ಓಪನ್ ಮಾಡಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇಂಥ ಲಿಂಕ್ ಗಳು ಎಷ್ಟು ಅಪಾಯ ಎಂದು ತಿಳಿದರೆ ಬೆಚ್ಚಿ ಬೀಳುತ್ತೀರಿ.

ಲಾಕ್ ಡೌನ್ ನಿಂದ ಜಗತ್ತಿನ ಅರ್ಥ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗಿವೆ. ಇಂಥ ಸ್ಥಿತಿಯಲ್ಲಿ ಉಚಿತವಾಗಿ ಇಂಟರ್ನೆಟ್ ಕೊಡಲು ಸಾಧ್ಯವೇ. ಕೊಟ್ಟರೂ ಸಾವಿರಾರು ಕೋಟಿ ರೂ. ಹಣ ಬೇಕಾಗುತ್ತದೆ. ಇಂಥ ಸಾಮಾನ್ಯ ಯೋಚನೆಯನ್ನೂ ಮಾಡದೆ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುತ್ತಿದ್ದಾರೆ.

ಇಂಟರ್ನೆಟ್ ಕೊಡುವುದಿಲ್ಲ ಎಂದ ಮೇಲೆ ಮತ್ಯಾಕೆ ಅಂಥ ಲಿಂಕ್ ಗಳು ಶೇರ್ ಆಗುತ್ತವೆ. ಅಂಥ ವೆಬ್ ಸೈಟ್ ಗಳು ಯಾಕೆ ರಚನೆಯಾಗುತ್ತವೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಯಾಕೆಂದರೆ ಅದೊಂದು ಆನ್ ಲೈನ್ ಮಾರುಕಟ್ಟೆಯ ಮಾಯಾ ಜಾಲ.

ಉಚಿತ ಇಂಟರ್ನೆಟ್ ಕೊಡುತ್ತೇವೆ ಎಂದು ನಿಮ್ಮ ಮೊಬೈಲ್ ಗಳಿಗೆ ಬಂದಿರುವ ಮೆಸೇಜ್ ಗಳನ್ನು ಒಮ್ಮೆ ಸರಿಯಾಗಿ ನೋಡಿ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಸಾಮಾನ್ಯವಾಗಿ ಒಂದೆರಡು ಪ್ರಶ್ನೆಗಳು ಇರುತ್ತವೆ. ಯಸ್ ಅಥವಾ ನೋ ಎನ್ನುವ ಉತ್ತರ ಕೊಟ್ಟ ಬಳಿಕ ಮೊಬೈಲ್ ಸಂಖ್ಯೆ ಮತ್ತು ಕೆಲವೊಮ್ಮೆ ರಾಜ್ಯ, ಊರಿನ ಮಾಹಿತಿ ಕೇಳುತ್ತದೆ.

ಎಲ್ಲ ಮಾಹಿತಿ ಭರ್ತಿಯಾದ ಬಳಿಕ ಈ ಸಂದೇಶವನ್ನು 5 ಅಥವಾ 10 ಗ್ರೂಪ್ ಗಳಿಗೆ ಪಾರ್ವರ್ಡ್ ಮಾಡಿ. ನಂತರ ಇಂಟರ್ನೆಟ್ ಸಿಗುತ್ತದೆ ಎನ್ನುವ ಮೆಸೇಜ್ ಬರುತ್ತದೆ. ಕೆಲವೊಮ್ಮೆ ಮೊಬೈಲ್ ಸಂಖ್ಯೆ ನಮೂದಿಸಿದ ತಕ್ಷಣ ಪ್ರೊಸೆಸ್ಸಿಂಗ್ ಎಂದು ಒಂದು ಉದ್ದ ಗೆರೆ ಬಂದು ಅರ್ಧ ಗಂಟೆಯಾದರೂ ಪ್ರೊಸೆಸ್ಸಿಂಗ್ ಮುಗಿಯುವುದಿಲ್ಲ.

ಉಚಿತ ಇಂಟರ್ನೆಟ್ ಪಡೆಯುವ ಆತುರದಲ್ಲಿ ಹೆಚ್ಚಿನವರು ಮೊಬೈಲ್ ನಂಬರ್ ಜತೆಗೆ ಎಲ್ಲ ಮಾಹಿತಿ ಪಾವತಿಸಿಬಿಟ್ಟಿರುತ್ತೇವೆ. ಈ ರೀತಿ ಮೊಬೈಲ್ ಸಂಖ್ಯೆಗಳ ಮಾಹಿತಿ ಸೋರಿಕೆಯೇ ಆನ್ ಲೈನ್ ನಲ್ಲಿ ನಡೆಯುತ್ತಿರುವ ದೊಡ್ಡ ದಂದೆ ಅದು.

ನೀವು ದಾಖಲಿಸಿರುವ ಮೊಬೈಲ್ ಸಂಖ್ಯೆಗಳನ್ನು ಆನ್ ಲೈನ್ ಮಾರುಕಟ್ಟೆ ಇತರ ಕಂಪೆನಿಗಳಿಗೆ ಮಾರಾಟವಾಗುತ್ತವೆ. ಅದರಿಂದ ಕೋಟ್ಯಂತರ ಹಣ ವ್ಯವಹಾರ ನಡೆಯುತ್ತವೆ. ನಿಮ್ಮ ಮೊಬೈಲ್ ಗಳಿಗೆ ಬರುತ್ತಿರುವ 10 ಕೋಟಿ ರೂ. ಗೆದ್ದಿದ್ದಾರೆ ಎನ್ನುವ ಲಾಟರಿ ಮೆಸೇಜ್, ಪ್ಲಾಟ್ ಖರೀದಿಸಿ, ಜೋತಿಷಿ ಕಾಲ್ ಮಾಡಿ, ಬೇಜಾರಾಗಿದ್ದರೆ ಕಾಲ್ ಮಾಡಿ ಎಲ್ಲವೂ ಇದೇ ಜಾಲದ ಫಲಗಳು.

ಇಷ್ಟೇ ಅಲ್ಲ. ನೀವು ದಾಖಲಿಸಿದ್ದ ಮೊಬೈಲ್ ಸಂಖ್ಯೆಗಳನ್ನು ಅನೇಕ ವ್ಯವಹಾರಗಳಿಗೆ ಬಳಕೆಯಾಗಿರುತ್ತವೆ. ಮೊಬೈಲ್ ನಲ್ಲಿರುವ ಡಾಟಾ ಕದಿಯುವುದಕ್ಕೂ ಇದು ದಾರಿ ಮಾಡಿಕೊಡಬಹುದು. 10 ಕೋಟಿ ರೂ. ಲಾಟರಿ ಬಂದಿದೆ ಎಂದು ಎಷ್ಟೋ ಜನ ತಮ್ಮದೇ ಹಣ ಕಳೆದುಕೊಂಡವರಿದ್ದಾರೆ. ಇವೆಲ್ಲ ಸೈಬರ್ ಕ್ರೈಂ ಮುಖಗಳು.

ಉಚಿತ ಇಂಟರ್ನೆಟ್ ಕೊಡುತ್ತೇವೆ ಎನ್ನುವ ಲಿಂಕ್ ಗಳಿಂದ ಇನ್ನೂ ಅನೇಕ ರೀತಿಯಲ್ಲಿ ಸೈಬರ್ ದಾಳಿ ನಡೆಯಬಹುದು. ಇತ್ತೀಚೆಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಇಂಟರ್ನೆಟ್ ಕೊಡುತ್ತದೆ ಎಂದೂ ಸುದ್ದಿ ಹಬ್ಬಿಸಿದ್ದಾರೆ. ಅದು ಸುಳ್ಳು ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ.