ಇಟಲಿಯಲ್ಲಿ ಕೋವಿಡ್ 19 ಕೊರೊನಾದಿಂದ ಸಾಯುತ್ತಿರುವವರ ಸಂಖ್ಯೆ ದಿನದಿಂದಿ ದಿನಕ್ಕೆ ಹೆಚ್ಚುತ್ತಲೇ ಇದೆ. ಕೋವಿಡ್ 19 ಚೀನಾದಿಂದಲೇ ಹರಡಿದ್ದರೂ ಸಾವಿನ ಸಂಖ್ಯೆಯಲ್ಲಿ ಇಟಲಿ ಚೀನಾ ದೇಶವನ್ನೇ ಮೀರಿಸಿದೆ. ಅಷ್ಟರ ಮಟ್ಟಿಗೆ ಇಟಲಿಯಲ್ಲಿ ಕೊರೊಣಾ ಮರಣ ಮೃದಂಗ ಬಾರಿಸಿದೆ.

ಅದೇ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಇಟಲಿ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಈ ವಿಡಿಯೊ ಸಹ ಒಂದು. ದೊಡ್ಡ ಸಭಾಂಗಣದಲ್ಲಿ ಶವಗಳ ರಾಶಿ ಬಿದ್ದಿದೆ ಮತ್ತು ಪ್ಲಾಸ್ಟಿಕ್ ನಲ್ಲಿ ಸುತ್ತಿದ ಶವಗಳ ರಾಶಿಯನ್ನು ಟಿಪ್ಪರ್ ಗಳಲ್ಲಿತಂದು ಒಂದು ಕಡೆ ಸುರಿದು ಸಾಮೂಹಿಕ ಸಮಾಧಿ ಮಾಡುತ್ತಿರುವ 20 ಸೆಕೆಂಡುಗಳ ವಿಡಿಯೊ ಅದು.

ಕೊರೊನಾದಿಂದ ಇಟಲಿಯಲ್ಲಿ ಸೃಷ್ಟಿಯಾದ ಪರಿಸ್ಥಿತಿ ಎಂದು ಆ ವಿಡಿಯೊವನ್ನು ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ. ವಾಟ್ಸ ಆ್ಯಪ್ ಸ್ಟೇಟಸ್ ಗಳಲ್ಲಿ ವಿಡಿಯೊದೇ ಸದ್ದು ಜೋರಾಗಿದೆ. ಅಸಲಿಗೆ ಅದೊಂದು ಮಿನಿ ಸಿನಿಮಾದ ದೃಶ್ಯ. ಪತ್ತೆಯಾಗಿದ್ದು ಹೇಗೆ?, ಆ ಸಿನಿಮಾ ಯಾವುದು ಎನ್ನುವುದನ್ನು ಮುಂದೆ ಓದಿ.

ಸತ್ಯ ಶೋಧನೆ:
ಆ ವಿಡಿಯೊವನ್ನು ಸರಿಯಾಗಿ ಗಮನಿಸಿ. ವಿಡಿಯೊದಲ್ಲಿ ಕರ್ಕಷ ಸದ್ದುಗಳು ಇಲ್ಲ. ದೃಶ್ಯದ ಹಿಂದೆ ಗಂಭೀರವಾದ ಮ್ಯೂಸಿಕ್ ಕೇಳಿಸುತ್ತದೆ. ಒಟ್ಟು ಮುರು ದೃಶ್ಯಗಳು ಅದರಲ್ಲಿದೆ. ಇಂಥ ಮ್ಯೂಸಿಕ್ ಗಳು ಸಿನಿಮಾ ಅಥವಾ ದಾರವಾಹಿ ದೃಶ್ಯಗಳಲ್ಲಿ ಮಾತ್ರ ಕಾಣಲು ಸಾಧ್ಯ. ಅಲ್ಲದೆ, ಅದರಲ್ಲಿ ವಿವರಣೆ ನೀಡುತ್ತಿರುವ ಆ್ಯಂಕರ್ ವಿವರಣೆ ಮಧ್ಯೆ “ರಿಪ್ಟೈಡ್ ವೈರಸ್ ನಿಂದ ಸತ್ತವರ ಸಂಖ್ಯೆ ಸಾವಿರಾರು ಸಂಖ್ಯೆ ಮೀರಿದೆ’ ಎಂದಿದೆ.

ಗೂಗಲ್ ಸರ್ಚ್ ಇಂಜಿನ್ ನಲ್ಲಿ ರಿಪ್ಟೈಡ್ ವೈರಸ್ ಕೀ ವರ್ಡ್ ಸರ್ಚ್ ಮಾಡಿದಾಗ 2007ರಲ್ಲಿ ಪ್ರಸಾರವಾದ ಪೆಂಡಮಿಕ್ ಎನ್ನುವ ಸಿನಿಮಾದ ದೃಶ್ಯ ಎನ್ನುವುದು ಗೊತ್ತಾಯಿತು. 2007 ರಲ್ಲಿ ಅಮೆರಿಕದ ಪೇ-ಟೆಲಿವಿಷನ್ ಕೇಬಲ್ ಚಾನೆಲ್ ಹಾಲ್ಮಾರ್ಕ್ ಚಾನೆಲ್‌ನಲ್ಲಿ ಪ್ರಸಾರವಾದ ಕಾಲ್ಪನಿಕ ರಿಪ್ಟೈಡ್ ವೈರಸ್ ಆಧಾರಿತ ಚಿತ್ರ ಅದು. ಅದೇ ಚಿತ್ರದ ದೃಶ್ಯವನ್ನು ಇಟಲಿ, ಸ್ಪೇನ್ ನಲ್ಲಿ ಕೊರೊನಾದಿಂದ ಸತ್ತವರ ಶವಗಳ ಸಾಮೂಹಿಕ ಸಮಾಧಿ ಎನ್ನುವ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಇದನ್ನೂ ಓದಿ: ಬದುಕಿರುವ ವೈದ್ಯನಿಗೆ ಕೊರೊನಾ ಸಾವಿನ ಸುಳ್ಳು ಕತೆ ಹಣೆದರು

ಆ ಚಿತ್ರ ಇಲ್ಲದೆ ನೋಡಿ. ಚಿತ್ರದ ನಡುವೆ 1 ಗಂಟೆ, ಒಂದು ನಿಮಿಷ 56 ಸೆಕೆಂಡ್ ನಲ್ಲಿ (01.01.56) ಆ ವೈರಲ್ ದೃಶ್ಯ ಇದೆ.