ಕೆಲ ದಿನಗಳ ಹಿಂದೆ ಕೊರೊನಾ ಲಾಕ್ ಡೌನ್ ಉಲ್ಲಂಘಿಸಿದವರನ್ನು ಬೆಂಡೆತ್ತಿದ್ದ ಪೊಲೀಸರ ಬಗ್ಗೆ ಪರ, ವಿರೋಧ ಮಾತುಗಳು ಹರಿದಾಡಿದ್ದವು. ಮಾನವೀಯತೆ ಇಲ್ಲದ ಕ್ರೂರಿಗಳು ಎಂದೆಲ್ಲ ಜರಿದಿದ್ದರು. ಇದೆಲ್ಲದರ ನಡುವೆಯೂ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಲೇ ಇದ್ದಾರೆ.

ಲಾಕ್ ಡೌನ್ ಪರಿಸ್ಥಿತಿಯಲ್ಲಿ ಅನೇಕ ಸಂಘ, ಸಂಸ್ಥೆಗಳು ನಿರ್ಗತಿಕರು, ಬಡವರ ಬಗ್ಗೆ ಖಾಳಜಿ ವಹಿಸಿ ಅನ್ನ, ನೀರು, ದಿನಸಿ ಸಾಮಗ್ರಿಗಳನ್ನು ಹಂಚುತ್ತಿವೆ. ಆದರೆ, ಪೊಲೀಸರು ಬೀದಿ ಬದಿಯಲ್ಲಿ ಹಸಿವಿನಿಂದ ಬಳಲುತ್ತಿದ್ದ ಗೋವುಗಳಿಗೆ ಮೇವು ಪೂರೈಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಪೊಲೀಸರು ಗೋವುಗಳಿಗೆ ಮೇವು ಪೂರೈಸುತ್ತಿರುವ ವಿಡಿಯೊವೊಂದು ಬಾರೀ ವೈರಲ್ ಆಗುತ್ತಿದೆ. ಪೊಲೀಸ್ ಕರ್ತವ್ಯದ ನಡುವೆಯೂ ಗೋವುಗಳ ರಕ್ಷಣೆಗೆ ನಿಂತಿರುವ ಪೊಲೀಸರ ಬಗ್ಗೆ ಈಗ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿವೆ. ಆ ವಿಡಿಯೊ ನೋಡಿದರೆ ನೀವೂ ಹೆಮ್ಮೆ ಪಡುತ್ತೀರಿ.

ಅಸಲಿಗೆ ಇದೆಲ್ಲ ನಡೆಯುತ್ತಿರುವುದು ಉತ್ತರ ಪ್ರದೇಶದಲ್ಲಿ. ಯೋಗಿ ಆದಿತ್ಯನಾಥ ಸಿಎಂ ಆಗಿರುವ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಕೋತವಾಳಿ ನಗರ ಠಾಣೆಯ ಪೊಲೀಸರು ಕೆಲ ದಿನಗಳ ಹಿಂದೆ ಆಟೊ ರಿಕ್ಷಾದಲ್ಲಿ ಮೇವು ತುಂಬಿಕೊಂಡು ಬೀದಿಯಲ್ಲಿ ವಾಸಿಸುತ್ತಿರುವ ಗೋವುಗಳಿಗೆ ಮೇವು ಪೂರೈಸಿದ್ದಾರೆ.

ಹಸಿ ಮೇವು, ಒಣ ಮೇವು ಎರಡನ್ನೂ ದನಗಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಜಗತ್ತಿನ ಬಹುತೇಕರೆಲ್ಲರೂ ಮನುಷ್ಯ ಜೀವಿಗಳ ಬಗ್ಗೆಯೇ ತಲೆ ಕೆಡಿಸಿಕೊಂಡು ಅವರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ತೊಡಗಿದ್ದರೆ, ಪೊಲೀಸರು ಗೋವುಗಳ ರಕ್ಷಣೆಗೆ ಮುಂದಾಗಿರುವುದು ದೇಶದ ಗಮನಸೆಳೆದಿದೆ.

ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಿಂದಲೇ ಮೇವು ಸಂಗ್ರಹಿಸಿ ಬೀದಿಯಲ್ಲಿ ವಾಸಿಸುವ ಗೋವುಗಳಿಗೆ ಮೇವು ವಿತರಿಸಿದ್ದೇವೆ. ಸಿಬ್ಬಂದಿಯೇ ಆಸಕ್ತಿ ವಹಿಸಿ ಈ ಕೆಲಸ ಮಾಡಿದ್ದೇವೆ ಎಂದು ಕೋತವಾಳಿ ನಗರ ಠಾಣೆ ಪೊಲೀಸರು ದಿ ಸ್ಟೇಟ್ ನೆಟ್ವರ್ಕ್ ವೈರಲ್ ಚೆಕ್ ತಂಡಕ್ಕೆ ಖಚಿತಪಡಿಸಿದ್ದಾರೆ.