ಹುಡುಗಿ ನೋಡಲು ಬಂದಿದ್ದ ಮೋಹನನೊಂದಿಗೆ ಮಾತನಾಡಿದ ಮೇಲೆ ಕಾವ್ಯಾ ಗೊಂದಲಕ್ಕೆ ಸಿಲುಕಿದ್ದಳು. ಟೆರೇಸ್ ಗಾರ್ಡ್ ನಲ್ಲಿ ಇಬ್ಬರೂ ಸುತ್ತಾಡಿ ಮಾತನಾಡಿದ್ದು, ಟೆರೇಸ್ ಗೆ ಹೊಂದಿಕೊಂಡು ಬೆಳೆದಿದ್ದ ಮಾವಿನ ನೆರಳಲ್ಲಿ ಮೋಹನ ನಾಚಿ ಹೆದರಿದ್ದು ಎಲ್ಲವೂ ಕಾವ್ಯಾಳಿಗೆ ಬಿಟ್ಟು ಬಿಡದೆ ಕಾಡುತ್ತಿತ್ತು.

ಹಿಂದಿನ ವಾರದ ಪ್ರೇಮ ಕತೆ
ಭಾಗ-1 ಪತ್ರದಲ್ಲಿ ಬೆಸೆದ ಪ್ರೀತಿಗೆ ಮೊಬೈಲ್ ಅಂತರ
ಭಾಗ-2 ಪೊಲೀಸ್ ಕೇಸಿನಿಂದ ಸಿಕ್ಕ ಪ್ರೇಯಸಿ

ಒಪ್ಪಿ ಮದುವೆ ನಿಶ್ಚಯಿಸಲು ಬಂದಿದ್ದ ಎರಡೂ ಕುಟುಂಬಗಳ ನಡುವೆ ಅದೇನಾಯಿತೋ ಕಾವ್ಯ ಮತ್ತು ಮೋಹನ ಟೆರೇಸ್ ಇಳಿದು ಕೆಳಗೆ ಬರುವಷ್ಟರಲ್ಲಿ ದೊಡ್ಡ ಜಗಳವೇ ನಡೆದಿತ್ತು. ಬಂದುಗಳಾಗಲು ಬಂದಿದ್ದ ಎರಡೂ ಕುಟುಂಬಗಳು ಶತ್ರುಗಳಾಗಿ ಬಿಟ್ಟಿದ್ದರು. ಯಾಕೆ ಜಗಳ ನಡೆಯಿತು ಎನ್ನುವುದನ್ನೂ ಕಾವ್ಯಳಿಗೆ ಯಾರೂ ಹೇಳಿರಲಿಲ್ಲ.

ಆದರೆ, ಮೋಹನನೊಂದಿಗೆ ಮಾತನಾಡಿದ ಆ ಅರ್ಧ ಗಂಟೆ ಕಾವ್ಯಾಳನ್ನು ಮತ್ತೆ ಮತ್ತೆ ಕಾಡುತ್ತಿತ್ತು. ಅವನ ಸರಳತೆ, ಮುಗ್ದ ನುಡಿಗಳು, ಹೆಣ್ಣನ್ನು ಗೌರವಿಸುವ ರೀತಿ ಎಲ್ಲವೂ ಕಾವ್ಯಳಿಗೆ ಬಲು ಮೆಚ್ಚುಗೆಯಾಗಿತ್ತು. ಎಷ್ಟೋ ಹುಡುಗರು ಕಾವ್ಯಳನ್ನು ನೋಡಿ ಹೋಗಿದ್ದಾರೆ. ಆದರೆ, ಮೋಹನ ಮಾತ್ರ ಕಾವ್ಯಳ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದ.

ಮತ್ತೆ ಮತ್ತೆ ಅವನ್ನನ್ನು ನೋಡಬೇಕು ಎಂದು ಕಾವ್ಯಳ ಮನಸ್ಸು ಚಡಪಡಿಸುತ್ತಿತ್ತು. ಅವನ ಮೊಬೈಲ್ ನಂಬರ್ ಕಾಲ್ ಮಾಡಲು ಮೊಬೈಲ್ ಎತ್ತಿದಾಗಲೆಲ್ಲ. ಅವರ ಮನೆಯವರ ಜಗಳ ಕಣ್ಣೆದುರು ಬಂದು ಕುಟುಂಬದ ಸ್ವಾಭಿಮಾನ ಎದುರಾಗುತ್ತಿತ್ತು. ಅರಿವಿಲ್ಲದೆ ಪ್ರೀತಿಯಲ್ಲಿ ಕೊಚ್ಚಿ ಹೋಗಿದ್ದ ಕಾವ್ಯ ಮೋಹನ ನನ್ನೇ ಮದುವೆಗಾಲು ನಿರ್ಧರಿಸಿದ್ದಳು.

ವಿಷಯ ಕಿವಿಗೆ ಬಿದ್ದಿದ್ದೇ ಕಾವ್ಯಳ ಮನೆಯವರು ಕೆಂಡಾ ಮಂಡಲವಾದರು. ಮನೆಗೆ ಬಂದು ರಾಕ್ಷಸರ ರೀತಿ ಜಗಳ ಮಾಡಿ ಹೋದ ಕುಟುಂಬದೊಂದಿಗೆ ಹೇಗೆ ಸಂಬಂಧ ಬೆಳೆಸುವುದು. ಅಂಥ ಮನೆಯಲ್ಲಿ ನೀನು ಹೇಗೆ ಬಾಳುತ್ತೀಯ. ನಮ್ಮ ಸ್ವಾಭಿಮಾನಕ್ಕೆ ಬೆಲೆ ಇಲ್ಲವೇ ಎಂದು ಜೋರಾದ ಕೂಗಾಟ, ಸಿಟ್ಟು, ಸಿಡುಕುಗಳನ್ನು ಕಾವ್ಯ ಎದುರಿಸಬೇಕಾಯಿತು. ಕಾವ್ಯಏನೂ ಮಾತನಾಡಲಾಗದೆ ಸುಮ್ಮನೆ ಕೋಣೆ ಸೇರಿಕೊಂಡಳು.

****

ಎರಡು ದಿನಗಳ ಹಿಂದೆ ಅದೇನಾಗಿತ್ತೆಂದರೆ, ಪಕ್ಕದ ಊರಿನ ಮೋಹನ ಮತ್ತು ಅವರ ಕುಟುಂಬದವರು ಹುಡುಗಿ ನೋಡಲು ಕಾವ್ಯಳ ಮನೆಗೆ ಬಂದಿದ್ದರು. ಕಾಲೇಜು ಮುಗಿಯುವವರೆಗೆ ಯಾವ ಹುಡುಗರಿಗೂ ಸೊಪ್ಪು ಹಾಕದ ಕಾವ್ಯ ಮದುವೆಗೆ ನಾಚಿಕೆಯಿಂದಲೇ ಒಪ್ಪಿದ್ದಳು. ಆ ದಿನ ಸಂಪ್ರದಾಯದಂತೆ ಮೋಹನ ಮತ್ತು ಅವರ ಕುಟುಂಬಸ್ಥರಿಗೆ ಕಾವ್ಯ ಚಹಾ ಕೊಟ್ಟಳು. ಎಲ್ಲರೂ ಕಾವ್ಯಳನ್ನು ನೋಡಿದರು. ಮದುವೆ ಗಂಡು ಮೋಹನ ನಾಚುತ್ತಲೇ ತಲೆ ಎತ್ತಿದ. ದುಂಡು ಮುಖದ ಕಾವ್ಯ ಬೆಳದಿಂಗಳಂತೆ ಹೊಳೆಯುತ್ತಿದ್ದಳು.

ಇನ್ನೇನು ಮದುವೆ ಮಾತುಕತೆ ನಡೆಸಬೇಕು ಎನ್ನುವಷ್ಟರಲ್ಲಿ. ಪುಟಾಣಿ ಮಗುವೊಬ್ಬಳು ಕೋಣೆಯಿಂದ ಹೊರಬಂದು ಅಕ್ಕ, ಅಣ್ಣನ ಜತೆ ಮಾತನಾಡಬೇಕಂತೆ ಎಂದಳು. ಮೋಹನ ಹಿಂಜರಿಕೆಯಿಂದಲೇ ಕಾವ್ಯಳನ್ನು ಹಿಂಬಾಲಿಸಿ ಟೆರೇಸ್ ಗೆ ಹೋದ. ಮನೆಗೆ ಹೊಂದಿಕೊಂಡು ದೊಡ್ಡದಾದ ಮಾವಿನ ಮರವಿತ್ತು. ಟೆರೇಸ್ ಮೇಲೆಯೇ ಸುತ್ತಲೂ ಹೂ ಗಿಡಗಳನ್ನು ಬೆಳೆಸಿದ್ದರು. ಹಾಗಾಗಿ ಅಲ್ಲಿನ ಚಟುವಟಿಕೆಗಳು ಹೊರಗಿನ ಜನರಿಗೆ ಅಷ್ಟಾಗಿ ಕಾಣುತ್ತಿರಲಿಲ್ಲ. ಇಬ್ಬರೂ ಪರಸ್ಪರ ನಾಚುತ್ತ ಆಕಡೆ ಈ ಕಡೆ ನೋಡುತ್ತ ನಿಂತಿದ್ದರು.

ಮೋಹನನ ನಾಚಿಕೆ ಸ್ವಭಾವ ಕಂಡು ತಾನೇ ಮಾತು ಮುಂದುವಿರಿಸಿದ ಕಾವ್ಯ, ನಿಮಗೆ ಲವ್ವರ್ ಇದೆಯಾ? ಡ್ರಿಕ್ಸ್?, ಸಿಗರೇಟ್? ಅಭ್ಯಾಸ ಉಂಟೆ ಎಂದಳು. ಎಲ್ಲದಕ್ಕೂ ಮೋಹನನ ನೋ ಎಂದಿದ್ದ. ಮೋಹನ ಸಭ್ಯತೆ ಬಗ್ಗೆ ಮೊದಲೇ ಕೇಳಿ ತಿಳಿದುಕೊಂಡಿದ್ದ ಕಾವ್ಯ ನೀವು ನನಗೆ ಇಷ್ಟ  ಆಗಿದ್ದೀರಿ ಎಂದು ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ಕಾವ್ಯಳ ಮಾತು ಕೇಳಿ ಮೋಹನ ಕೂಡ ಪುಳಕಗೊಂಡಿದ್ದ.

****
ಮನೆಯ ಹಾಲ್ ನಲ್ಲಿ ಎರಡೂ ಕುಟುಂಬಗಳು ಖುಷಿ ಖುಷಿಯಲ್ಲಿಯೇ ಮಾತನಾಡುತ್ತಿದ್ದರು. ಮೋಹನನ ದೂರದ ಸಂಬಂಧಿವೊಬ್ಬಳು ಮಧ್ಯ ಬಾಯಿ ಹಾಕಿ ಕಾವ್ಯ ಯಾರನ್ನಾದರೂ ಲವ್ ಮಾಡಿದ್ದಳೆಯೇ ಎಂದು ಕೇಳಿದಳು. ಮುಜುಗುರಗೊಂಡ ಕಾವ್ಯಳ ತಂದೆ, ಇಲ್ಲ ಅವಳು ಇದು ವರೆಗೂ ಯಾವ ಹುಡುಗರನ್ನೂ ಸಲಿಗೆಯಿಂದ ಮಾತನಾಡಿಸಿಲ್ಲ ಎಂದರು.

“ಯಾರಿಗೆ ಗೊತ್ತು ಮಕ್ಕಳು ಅಪ್ಪ, ಅಮ್ಮ ಕಣ್ತಪ್ಪಿಸಿ ಏನೇನೊ ಮಾಡ್ತಾರೆ. ಮದುವೆ ಆದ ಮೇಲೆ ಸಮಸ್ಯೆ ಆಗಬಾರದು ನೋಡಿ ಅದಕ್ಕೆ ಕೇಳಿದೆ’ ಎಂದಳು. ಮಗಳ ಬಗ್ಗೆ ಅತಿಯಾದ ಪ್ರೀತಿ ಹೊಂದಿದ್ದ ಕಾವ್ಯಳ ತಂದೆಗೆ ಸಿಟ್ಟು ಬಂದಿತು. ಹೀಗೆಲ್ಲ ಕೇಳುವುದು ಸರಿಯಲ್ಲ ಎಂದು ರೇಗಿದರು. “ನಮ್ಮ ಹೆಣ್ಣನ್ನು ಮಾರಾಟಕ್ಕೆ ಇಟ್ಟಿಲ್ಲ. ಇಷ್ಟ ಇದ್ದರೆ ಒಪ್ಪಿ, ಇಲ್ಲದಿದ್ದರೆ ಇಲ್ಲ’ ಎಂದು ಕಾವ್ಯಾಳ ಚಿಕ್ಕಮ್ಮ ಡೈಲಾಗ್ ಎಸೆದೇ ಬಿಟ್ಟಳು.

ಅಷ್ಟಕ್ಕೇ ಎರಡೂ ಕುಟುಂಬಗಳ ನಡುವೆ ಜಗಳ ನಡೆದು ಪರಸ್ಪರರನ್ನು ಬಾಯಿಗೆ ಬಂದಂತೆ ಬೈದಾಡಿಕೊಂಡರು. ಟೆರೇಸ್ ಮೇಲೆ ಪ್ರೀತಿಯ ಪಿಸುಮಾತುಗಳು ಹೊರ ಬೀಳುತ್ತಿದ್ದರೆ, ಕೆಳಗಡೆ ಡ್ಯಾಶ್ ಡ್ಯಾಶ್ ಬೈಗುಳಗಳು ಬರುತ್ತಿದ್ದವು. ಕ್ಷುಲ್ಲಕ ಮಾತಿಗೆ ಎರಡೂ ಕುಟುಂಬಗಳು ಶತ್ರುಗಳಾದವು. ಆಗಷ್ಟೇ ಇಷ್ಟವಾಗಿದ್ದ ಎರಡು ಹೃದಯಗಳ ಮಧ್ಯೆ ಅಂತರ ಸೃಷ್ಟಿಯಾಗಿ ಬಿಟ್ಟಿತ್ತು.

ಆದರೂ ಕಾವ್ಯ, ಮೋಹನ್ ಪ್ರೀತಿಯಲ್ಲಿ ಬೀಳುತ್ತಾರೆ. ಅದು ಹೇಗೆ ಮುಂದಾಯಿತು…. 17-5-2020 ಸಂಚಿಕೆ ನೋಡಿ.

ಹಿಂದಿನ ವಾರದ ಪ್ರೇಮ ಕತೆ
ಭಾಗ-1 ಪತ್ರದಲ್ಲಿ ಬೆಸೆದ ಪ್ರೀತಿಗೆ ಮೊಬೈಲ್ ಅಂತರ
ಭಾಗ-2 ಪೊಲೀಸ್ ಕೇಸಿನಿಂದ ಸಿಕ್ಕ ಪ್ರೇಯಸಿ