ಸಾವಿರಾರು ದೇವರುಗಳನ್ನು ಪೂಜಿಸುವ ಭಾರತೀಯರಿಗೆ ದೇಶವೇ ಮೊದಲ ಆಧ್ಯತೆ. ಅದೆಷ್ಟೇ ಬಡವನಿರಲಿ ದೇಶಕ್ಕಾಗಿ ಒಂದು ದಿನವಾದರೂ ಸೈನಿಕನಾಗಿ ಸೇವೆ ಮಾಡಬೇಕು ಎಂದು ಬಯಸುತ್ತಾರೆ. ಅಷ್ಟರ ಮಟ್ಟಿಗೆ ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ, ಆರಾಧಿಸುತ್ತೇವೆ.

ದೇಶಕ್ಕೋಸ್ಕರ ಪ್ರಾಣವನ್ನೂ ಲೆಕ್ಕಿಸದೆ ಶತ್ರುಗಳ ಎದೆ ಸೀಳುವ, ಉಗ್ರರ ರಕ್ತ ಹರಿಸುವ ಸೈನಿಕರನ್ನೂ ನಾವು ಅಷ್ಟೇ ಪೂಜ್ಯ ಭಾವನೆಯಿಂದ ನೋಡುತ್ತೇವೆ. ಅಂಥದ್ದೇ ಯೋಧನೊಬ್ಬ ದೇವರನ್ನೇ ಪೂಜಿಸುವ ನಾಡಿನಲ್ಲಿ ದೇವರಾಗಿ ನೆಲೆಸಿದ ಸೈನಿಕನ ನೈಜ ಕತೆ ಇಲ್ಲಿದೆ.

ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದ ಮಣ್ಣಿನ ಮಗನಾಗಿ ದೇಶಕ್ಕಾಗಿ ಪ್ರಾಣ ಬಿಟ್ಟ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ಮೂಲದ ವೀರ ಯೋಧನನ ಕತೆ.  ಸೈನ್ಯದಲ್ಲಿದ್ದಾಗಲೇ ನಿಧನರಾದ ಆ ಯೋಧನಿಗೆ ಡಾರ್ಜಿಲಿಂಗ್‌ನ ಬಾಗ್ರಕೋಟೆ ಎಂಬಲ್ಲಿ ದೇವಾಲಯ ನಿರ್ಮಿಸಿ ಪೂಜಿಸಲಾಗುತ್ತಿದೆ.

ಮನೆಯಲ್ಲಿ ಭಗವತ್ ಗೀತಾ ಓದುವ ಮೂಲಕ ಸಮಯ ಕಳೆಯುತ್ತಿರುವ ಪರಶುರಾಮ್ ಅವರ ಪತ್ನಿ ತುಳ್ಸಾ.

ಯಾರು ಆ ಮಹಾ ಸೈನಿಕ?
ನಾವು ಹೇಳಲು ಹೊರಟಿರುವ ಸೈನಿಕನ ಹೆಸರು. ಪರಶುರಾಮ್ ದತ್ತು ಲೊಂಡೆ. ಮಹಾರಾಷ್ಟ್ರದ ಚಾಂದಗಡ ತಾಲೂಕಿನ ನಿಟ್ಟೂರು-ಕೊವಾಡ್ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಪರಶುರಾಮ್ ಮೂವರು ಸಹೋದರ ಪೈಕಿ ಕಿರಿಯರು. ಇಬ್ಬರು ಸಹೋದರರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರಿಂದ ಪರಶುರಾಮ್ ಕೃಷಿ ಮಾಡಬೇಕು ಎಂದು ಪೋಷಕರು ಬಯಸಿದ್ದರು.
ಆದರೆ ಪರಶುರಾಮ್ ಸೈನ್ಯಕ್ಕೆ ಸೇರುವ ಹಂಬಲದಲ್ಲಿದ್ದರು. ಕೇವಲ 7 ನೇ ತರಗತಿ ಶಿಕ್ಷಣ ಹೊಂದಿದ್ದ ಪರಶುರಾಮ್ ಬೆಳಗಾವಿಯ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಸೆಂಟರ್ ನಡೆಸಿದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಂಡರು. ಆದರೆ, ಮೊದಲು ಅವರನ್ನು ತಿರಸ್ಕರಿಸಲಾಯಿತು.

ಆದರೂ ತಾಯಿನಾಡಿಗೆ ಸೇವೆ ಸಲ್ಲಿಸಬೇಕು ಎಂಬ ಮಹಾದಾಸೆಯಲ್ಲಿ ಸೈನ್ಯಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಅದರಂತೆಯೇ ತಿರಸ್ಕರಿಸಿದ ಅಭ್ಯರ್ಥಿಗಳ ಸಾಲಿನಿಂದ ಆಯ್ದ ಕೆಲವೇ ಅಭ್ಯರ್ಥಿಗಳ ಪೈಕಿ ಪರಶುರಾಮ್ ಸಹ ಆಯ್ಕೆಯಾಗಿ 1981 ರ ಸೆಪ್ಟೆಂಬರ್ 15 ರಂದು ಭಾರತೀಯ ಸೈನ್ಯಕ್ಕೆ ಸೇರಿದರು.

ಪರಶುರಾಮ್ 25 ವರ್ಷಗಳ ಕಾಲ ಸೈನಿಕನಾಗಿ ಭಾರತಾಂಬೆಯ ಸೇವೆ ಮಾಡಿದರು. ಸುಬೇದಾರ್ ಆದ ಪರಶುರಾಮ್ ಶ್ರೀನಗರ, ಜಮ್ಮು ಮತ್ತು ಕಾಶ್ಮೀರದ ಸಾಂಬಾಗಳಲ್ಲಿ ಹೆಚ್ಚಿನ ಸಮಯ ಸೇವೆ ಸಲ್ಲಿಸಿದರು. ದೆಹಲಿ, ಅಮೃತಸರ, ಡಾರ್ಜಿಲಿಂಗ್ ಮತ್ತು ಬೆಳಗಾವಿಯ ಎಂಎಲ್‌ಐಆರ್‌ಸಿಯಲ್ಲೂ ಕೆಲಸ ಮಾಡಿದ್ದರು.

ಸುಬೇದಾರ್ ಪರಶುರಾಮ್ ಲೊಂಡೆ.

ಆದರೆ 2007 ರ ಆಗಸ್ಟ್ 22 ಪರಶುರಾಮ ಅವರಿಗೆ ಅತ್ಯಂತ ಕೆಟ್ಟ ದಿನವಾಯಿತು. ಡಾರ್ಜಿಲಿಂಗ್ ಜಿಲ್ಲೆಯ ಬಾಗ್ರಕೋಟೆಯಲ್ಲಿ ಏಳು ದಿನಗಳ ಗುಂಡಿನ ಅಭ್ಯಾಸದಿಂದ ಹಿಂದಿರುಗುತ್ತಿದ್ದರು. 16 ಸೈನಿಕರನ್ನು ಹೊತ್ತ ವಾಹನವು ಆಳವಾದ ಕಂದಕ್ಕೆ ಬಿದ್ದಿತು. ಆ ಭಯಾನಕ ಘಟನೆಯಲ್ಲಿ ಸಾವನ್ನಪ್ಪಿದ ಒಂಬತ್ತು ಜನರಲ್ಲಿ ಸುಬೇದಾರ್ ಪರಶುರಾಮ್ ಸಹ ಇದ್ದರು.

ಈ ಘಟನೆಗೆ ತವರೂರು ನಿಟ್ಟೂರು ಮಾತ್ರವಲ್ಲದೆ ಬೆಳಗಾವಿ ಜಿಲ್ಲೆ ಸಹ ಸೈನಿಕ ಪರಶುರಾಮ್ ಲೊಂಡೆ ಸಾವಿಗೆ ಮರುಗಿತು. ಆರನೇ ದಿನ ಮೃತ ದೇಹವು ಮನೆಗೆ ಬಂದಾಗ ಪರಶುರಾಮ್ ಅವರ ಪತ್ನಿ ತುಳ್ಸಾ ಅವರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಪತ್ನಿ ತುಳ್ಸಾ ಮತ್ತು ಅವರ ಮೂವರು ಮಕ್ಕಳು ಮಾನಸಿಕ ಆಘಾತಕ್ಕೆ ಸಿಲುಕಿದರು. ಪರಶುರಾಮ್ ಅವರ ಸ್ನೇಹಿತರು ಮತ್ತು ಸಂಬಂಧಿಕರು ಕುಟುಂಬಕ್ಕೆ ಬೆಂಬಲವಾಗಿ ನಿಂತರು.

ಪರಶುರಾಮ್ ಅವರಿಗೆ ಕಪೀಲ್, ಅಶ್ವಿನಿ ಮತ್ತು ನೂತನ್ ಎಂಬ ಮೂವರು ಮಕ್ಕಳಿದ್ದಾರೆ. ಅದರಲ್ಲಿ ತಂದೆಯಿಂದ ಪ್ರೇರಿತನಾದ ಮಗ ಭಾರತೀಯ ಸೇನೆ ಸೇರಿ ಈಗ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪರಶುರಾಮ್ ಅವರ ಪತ್ನಿ ಹೆಣ್ಣು ಮಕ್ಕಳ ಮದುವೆ ಮಾಡಿ ಮನೆಯಲ್ಲಿ ಒಬ್ಬರೇ ದಿನ ಕಳೆಯುತ್ತಿದ್ದಾರೆ.

ಗುಡಿಯಲ್ಲಿ ನೆಲೆಸಿದ ಪರಶುರಾಮ್
ಪರಶುರಾಮ್ ಅವರ ನಿಧನವಾದ ಮೂರು ವರ್ಷಗಳ ಬಳಿಕ ಡಾರ್ಜಲಿಂಗ್ ನಿಂದ ಫೋಟೊದೊಂದಿಗೆ ಬಂದ ಸೈನಿಕರು ತುಳ್ಸಾ ಅವರಿಗೆ ಸಂದೇಶವೊಂದನ್ನು ಮುಟ್ಟಿಸುತ್ತಾರೆ. ಡಾರ್ಜಿಲಿಂಗ್ ಜಿಲ್ಲೆಯ ಬಾಗ್ರಕೋಟೆ ಸಾಮ್ಸಾ ನದಿಯ ದಡದಲ್ಲಿ ಪರಶುರಾಮ್ ಸೇರಿ ಒಂಬತ್ತು ಹುತಾತ್ಮ ಸೈನಿಕರ ದೇವಾಲಯ ನಿರ್ಮಿಸಿರುವ ಬಗ್ಗೆ ತಿಳಿಸುತ್ತಾರೆ. ಅದರ ಫೋಟೊವನ್ನೂ ಕೊಟ್ಟಿದ್ದಾರೆ ಎಂದು ತುಳ್ಸಾ ಅವರು ತಿಳಿಸಿದ್ದಾರೆ.

ಡಾರ್ಜಿಲಿಂಗ್‌ನ ಬಾಗ್ರಾಕೋಟ್‌ನಲ್ಲಿ ಸೇನಾ ಸಿಬ್ಬಂದಿ ನಿರ್ಮಿಸಿದ ಒಂಬತ್ತು ಹುತಾತ್ಮ ಸೈನಿಕರ ದೇವಾಲಯ.

ಇದನ್ನೂ ಓದಿ: ಸರಕಾರಿ ಕನ್ನಡ ಶಾಲೆಯಲ್ಲಿ ಸೈನಿಕ ತರಬೇತಿ, ದೆಹಲಿ ಮಾದರಿ ಕವಾಯತ್

ಪರಶುರಾಮ್ ಅವರು ಹುತಾತ್ಮರಾದ ರಸ್ತೆಯಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿದ್ದವಂತೆ. ಅದಕ್ಕೆ ಪರಶುರಾಮ್ ಸೇರಿ ಹುತಾತ್ಮರಾದ ಒಂಬತ್ತು ಸೈನಿಕರ ದೇವಸ್ಥಾನವನ್ನು ಅದೇ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗಿದೆ. ಸೇನಾ ಸಿಬ್ಬಂದಿ ಅಲ್ಲಿ ನಿತ್ಯವೂ ಪೂಜಿಸುತ್ತಾರೆ. ಆ ರಸ್ತೆಯಿಂದ ದಾಟುವಾಗ ತಪ್ಪದೆ ದೇವಾಲಯವನ್ನು ನೋಡಿ ನಮಸ್ಕರಿಸುತ್ತಾರೆ. ಈ ಹುತಾತ್ಮರು ಸೈನಿಕರನ್ನು ಅಪಘಾತಗಳಿಂದ ರಕ್ಷಿಸುತ್ತಾರೆ ಎಂದು ಅಲ್ಲಿನ ಜನರು ನಂಬುತ್ತಾರೆ’ ಎಂದು ಸೈನಿಕರು ಹೇಳಿದ ವಿಷಯಗಳನ್ನು ತುಳ್ಸಾ ಅವರು ಹಂಚಿಕೊಂಡರು.

ಇದನ್ನೂ ಓದಿ: ಸರಕಾರಿ ಕನ್ನಡ ಶಾಲೆಯಲ್ಲಿ ಸೈನಿಕ ತರಬೇತಿ, ದೆಹಲಿ ಮಾದರಿ ಕವಾಯತ್