ಬೆಂಗಳೂರು: ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಸಿಹಿ ಸುದ್ದಿ ನೀಡಿದ್ದು, ಕನ್ನಡದ ಭಾಷಾ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನದ ಕೆಲ ಭಾಗಗಳನ್ನು ಅಳವಡಿಸಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಮ್ಮನ್ನಗಲಿ ಈಗಾಗಲೇ 1ವರ್ಷ ಕಳೆದಿದೆ. ಇದೀಗ ಬೆಂಗಳೂರು ವಿಶ್ವವಿದ್ಯಾಲಯವು ತನ್ನ ಬಿಕಾಂ ಪದವಿ 3ನೇ ಸೆಮಿಸ್ಟರ್ ಕನ್ನಡ ಭಾಷಾ ಪಠ್ಯ ವಾಣಿಜ್ಯ ಕನ್ನಡ 3 ರಲ್ಲಿ ಪುನೀತ್ ಅವರ ಜೀವನದ ಆಯ್ದ ಭಾಗವನ್ನು ಪಠ್ಯಕ್ಕೆ ಅಳವಡಿಸಿಕೊಂಡಿದ್ದು, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿದೆ.

ಅಪ್ಪು ಜೀವನದ ವಿವರವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು ಅನ್ನೋದು ಅವರ ಅಭಿಮಾನಿಗಳ ಆಸೆಯಾಗಿತ್ತು. ಈ ಸಂಬಂಧ ಪುನೀತ್ ಅಭಿಮಾನಿ ಸಂಘಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದವು. ಅಲ್ಲದೆ ಶಿಕ್ಷಣ ಮಂತ್ರಿಗಳನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದರು. ಇದೀಗ ಅಪ್ಪು ಅಭಿಮಾನಿಗಳ ಆಸೆ ಈಡೇರಿದೆ.

ಡಾ. ಮುನಿಯಪ್ಪ ಎಂಬುವವರು ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾಗಿದ್ದು, ಡಾ. ಅಮರೇಂದ್ರ ಶೆಟ್ಟಿ ಆರ್, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ. ಶಿವರಾಜ ಬಿ.ಇ ಮತ್ತು ಡಾ.ಬಿ.ಆರ್. ರಘುನಂದನ್ ಪಠ್ಯದ ಸಂಪಾದಕರಾಗಿದ್ದಾರೆ. ಪ್ರಸಕ್ತ ವರ್ಷದ ಬಿಕಾಂ ಪದವಿ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕನ್ನಡ ಭಾಷಾ ಪಠ್ಯದಲ್ಲಿ ಪುನೀತ್ ಅವರ ಬಾಲ್ಯವನ್ನು ಅಧ್ಯಯನ ಮಾಡಲಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ 4ನೇ ಆವೃತ್ತಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದು, ಅದು ಕನ್ನಡದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಬಯೋಗ್ರಫಿ ಎನ್ನುವ ದಾಖಲೆಗೂ ಪಾತ್ರವಾಗಿದೆ.